ಪ್ರಭಾಸ್ Kalki 2898 AD ಚಿತ್ರದ ಒಟಿಟಿ ಬಿಡುಗಡೆ ಯಾವಾಗ, ಎಲ್ಲಿ? ಈ ಸಿನಿಮಾಕ್ಕಾಗಿ ಇನ್ನೂ ಎಷ್ಟು ದಿನ ಕಾಯಬೇಕು?
ಪ್ರಭಾಸ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಸೇರಿ ಸ್ಟಾರ್ ತಾರಾಬಳಗ ಇರುವ ಕಲ್ಕಿ 2898 ಎಡಿ ಒಟಿಟಿ ಬಿಡುಗಡೆಯ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದೇ ತಿಂಗಳಲ್ಲಿ ಈ ಎರಡೆರಡು ಒಟಿಟಿಗಳಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ.
Kalki 2898 AD OTT Release Date: ಟಾಲಿವುಡ್ ನಟ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಅವರಂತಹ ಸ್ಟಾರ್ ಕಲಾವಿದರು ನಟಿಸಿರುವ ಕಲ್ಕಿ 2898 AD ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದೆ. ಇಂದಿಗೂ ಆ ಗಳಿಕೆಯ ಓಟ ಮುಂದುವರಿದಿದೆ. ಈ ಸಿನಿಮಾ ಜೂನ್ 27ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ 1100 ಕೋಟಿ ಕಮಾಯಿ ಮಾಡಿ ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ ಕಲ್ಕಿ ಸಿನಿಮಾ. ಇದೀಗ ಇದೇ ಸಿನಿಮಾದ ಒಟಿಟಿ ಬಿಡುಗಡೆ ಯಾವಾಗ ಎಂದು ಕಾಯುತ್ತಿದ್ದಾರೆ ಒಟಿಟಿ ಪ್ರಿಯರು.
ಸೌತ್‌ನ ಬಹುತೇಕ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೂರರಿಂದ ನಾಲ್ಕು ವಾರಗಳ ನಂತರ ಒಟಿಟಿ ಪ್ಲಾಟ್‌ಫಾರ್ಮ್‌ಗೆ ಆಗಮಿಸುತ್ತವೆ. ಆದರೆ, ಕಲ್ಕಿ 2898 ಎಡಿ ವಿಚಾರದಲ್ಲಿ ಮಾತ್ರ ಹಾಗಾಗಿಲ್ಲ. ಈಗಾಗಲೇ ಅಮೆಜಾನ್ ಪ್ರೈಂ ವಿಡಿಯೋ ಸಂಸ್ಥೆ ಕಲ್ಕಿ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದ್ದು, ಸಿನಿಮಾ ಬಿಡುಗಡೆಯಾದ ಎಂಟು ವಾರಗಳ ಬಳಿಕ ಒಟಿಟಿಗೆ ಬರುವ ಒಪ್ಪಂದ ಮಾಡಿಕೊಂಡಿವೆ. ಅಂದರೆ, ಜೂನ್ 17ರಂದು ತೆರೆಕಂಡ ಕಲ್ಕಿ ಸಿನಿಮಾ ಯಾವಾಗ ಒಟಿಟಿಗೆ ಬರಬಹುದೆಂದು ನೀವೇ ಊಹಿಸಿ.
ಕಲ್ಕಿ 2898 AD OTT ಬಿಡುಗಡೆ ದಿನಾಂಕ
ತೆಲುಗಿನ ಕೆಲ ವೆಬ್‌ಸೈಟ್‌ಗಳ ವರದಿಗಳ ಪ್ರಕಾರ, ಕಲ್ಕಿ 2898 AD ಸಿನಿಮಾ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಆಗಸ್ಟ್ 23 ರಿಂದ ಸ್ಟ್ರೀಮಿಂಗ್ ಆರಂಭಿಸಲಿದೆ. ಈ ಚಿತ್ರದ ಹಕ್ಕಿಗಾಗಿ ದೊಡ್ಡ ಮೊತ್ತ ಅಂದರೆ 200 ಕೋಟಿ ರೂ. ಮೊತ್ತವನ್ನು ಪ್ರೈಮ್ ಸಂಸ್ಥೆ ನಿರ್ಮಾಪಕರಿಗೆ ನೀಡಿದೆಯಂತೆ. ತೆಲುಗು ಜತೆಗೆ ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಯ ಹಕ್ಕನ್ನು ಖರೀಸಿದೆ. ಇನ್ನೇನು ಒಪ್ಪಂದದ ಅವಧಿ ಮುಗಿಯುತ್ತಿದ್ದಂತೆ, ಅಮೆಜಾನ್ ಪ್ರೈಂನಲ್ಲಿ ಆಗಸ್ಟ್ 23ರಿಂದ ಕಲ್ಕಿ ಸಿನಿಮಾ ಪ್ರಸಾರ ಕಾಣಲಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ.
ನೆಟ್‌ಫ್ಲಿಕ್ಸ್‌ನಲ್ಲೂ ಕಲ್ಕಿ
ಕಲ್ಕಿ 2898 AD ಚಿತ್ರದ ಹಿಂದಿ ಅವತರಣಿಕೆಯ ಹಕ್ಕುಗಳನ್ನು ದೈತ್ಯ ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ. ಕಲ್ಕಿ 2898 ಎಡಿ ತಯಾರಕರಿಗೆ ನೆಟ್‌ಫ್ಲಿಕ್ಸ್ ಬರೋಬ್ಬರಿ 175 ಕೋಟಿ ರೂಪಾಯಿಗಳನ್ನು ಪಾವತಿಸಿದೆ. ಈ ಮೂಲಕ ಪ್ರೈಮ್‌ನಿಂದ 200 ಕೋಟಿ, ನೆಟ್‌ಫ್ಲಿಕ್ಸ್‌ನಿಂದ 175 ಕೋಟಿ ಪಡೆದಿದ್ದು, ಡಿಜಿಟಲ್ ವೇದಿಕೆಯಿಂದಲೇ 375 ಕೋಟಿ ಬಾಚಿಕೊಂಡಿದೆ ಈ ಸಿನಿಮಾ. ನೆಟ್‌ಫ್ಲಿಕ್ಸ್ ಕಡೆಯಿಂದಲೂ ಅಧಿಕೃತ ಬಿಡುಗಡೆ ದಿನಾಂಕ ಹೊರಬಿದ್ದಿಲ್ಲ.
ಭಾರತದಲ್ಲಿ 634 ಕೋಟಿ ಗಳಿಕೆ
ನಾಗ್ ಅಶ್ವಿನ್ ನಿರ್ದೇಶನದಲ್ಲಿ ಕಲ್ಕಿ 2898 ಎಡಿ ಸಿನಿಮಾ ಮೂಡಿಬಂದಿದೆ. ನಿರ್ದೇಶನದ ಜತೆಗೆ ಚಿತ್ರಕ್ಕೂ ಕಥೆ ಬರೆದಿದ್ದಾರೆ ನಾಗ್ ಅಶ್ವಿನ್. ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ಬರೋಬ್ಬರಿ 600 ಕೋಟಿ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಇಲ್ಲಿಯವರೆಗೂ ಅಂದರೆ 35 ದಿನಗಳಲ್ಲಿ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 634 ಕೋಟಿ ರೂಪಾಯಿ ಗಳಿಕೆ ಕಂಡರೆ, ಇದರಲ್ಲಿ ತೆಲುಗು 282.74 ಕೋಟಿ, ಹಿಂದಿ ಆವೃತ್ತಿ ರೂ 285.7 ಕೋಟಿ, ತಮಿಳು ಆವೃತ್ತಿ ರೂ 35.83 ಕೋಟಿ, ಕನ್ನಡ ಆವೃತ್ತಿ ರೂ 5.72 ಕೋಟಿ ಮತ್ತು ಮಲಯಾಳಂ ಆವೃತ್ತಿ ರೂ 24.01 ಕೋಟಿ ಗಳಿಸಿದೆ.