ಕಂಡೋರ್ ಮನೆ ಕಥೆ ಒಟಿಟಿ ಬಿಡುಗಡೆ ದಿನಾಂಕ: ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಕುಮಾರ್ ಸಿನಿಮಾ ಮನೆಯಲ್ಲೇ ನೋಡಿ
ಕಂಡೋರ್ ಮನೆ ಕಥೆ ಒಟಿಟಿ ಬಿಡುಗಡೆ ದಿನಾಂಕ: ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಈತ ಸೋಮಾರಿ ವ್ಯಕ್ತಿಯಾಗಿ ನಟಿಸಿದ್ದು, ಕೆಲಸ ಮತ್ತು ಹಣ ಗಳಿಕೆ ಕುರಿತು ಆಸಕ್ತಿಯೇ ಹೊಂದಿರುವುದಿಲ್ಲ. ಅನಿರೀಕ್ಷಿತ ಸಂದರ್ಭವೊಂದು ಈತ ಕೆಲಸ ಮಾಡುವಂತೆ ಮಾಡುತ್ತದೆ.
ಕಂಡೋರ್ ಮನೆ ಕಥೆ ಒಟಿಟಿ ಬಿಡುಗಡೆ ದಿನಾಂಕ: ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಂಡೋರ್ ಮನೆ ಕಥೆ ಚಿತ್ರಮಂದಿರಗಳಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿರಲಿಲ್ಲ. ಇದೀಗ ಈ ಹಾಸ್ಯ ಸಿನಿಮಾ ಒಟಿಟಿಯತ್ತ ಮುಖ ಮಾಡುತ್ತಿದೆ. ಪ್ರಣವ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಜೂನ್ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇದೀಗ ಈ ಚಿತ್ರದ ಡಿಜಿಟಲ್ ಬಿಡುಗಡೆಗಾಗಿ ಚಿತ್ರತಂಡವು ಸಿನಿಬಜಾರ್ ಒಟಿಟಿ ಜತೆ ಒಪ್ಪಂದಕ್ಕೆ ಸಹಿ ಹಾಕಿದೆ.
ಸಿನಿಬಜಾರ್‌ನಲ್ಲಿ ಕಂಡೋರ್ ಮನೆ ಕಥೆ
"ಸೆಪ್ಟೆಂಬರ್ 27ರಿಂದ ಕಂಡೋರ್ ಮನೆ ಕಥೆ ಸಿನಿಮಾವು ಸಿನಿಬಜಾರ್ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಸಿನಿಬಜಾರ್ ಒಟಿಟಿಯು ಟ್ರಾನ್ಸಕ್ಷಿನಲ್ ವಿಡಿಯೋ ಆನ್ ಡಿಮಾಂಡ್ ಅಥವಾ ರೆಂಟಲ್ ಆಧಾರದಲ್ಲಿ ಈ ಸಿನಿಮಾ ರಿಲೀಸ್ ಮಾಡುತ್ತದೆ. ಕಂಡೋರ್ ಮನೆ ಕಥೆ ಸಿನಿಮಾಕ್ಕೆ 49 ರೂಪಾಯಿ ಬಾಡಿಗೆ ದರ ನಿಗದಿಪಡಿಸಲಾಗಿದೆ" ಎಂದು ಸಿನಿಬಜಾರ್‌ನ ಸಿಇಒ ರತ್ನಪುರಿ ವಿ ಭಾಸ್ಕರ್ ಹೇಳಿದ್ದಾರೆ.
ಈ ಸಿನಿಮಾದಲ್ಲಿ ಸೋಮಾರಿ ಮತ್ತು ಜವಾಬ್ದಾರಿ ರಹಿತ ಯುವಕನ ಪಾತ್ರದಲ್ಲಿ ಸೂರಜ್ ನಟಿಸಿದ್ದಾರೆ. ಧೂಮಪಾನ, ಕುಡಿತ, ಸ್ನೇಹಿತರ ಜತೆ ಸಮಯ ವ್ಯರ್ಥಗೊಳಿಸುವಂತಹ ಚಟುವಟಿಕೆಗಳಲ್ಲಿ ಈತ ತೊಡಗಿರುತ್ತಾನೆ. ಮದುವೆಯಾಗುವ ತನಕ ಈ ರೀತಿ ಇರುವ ನಾಯಕನ ಬದುಕಿನಲ್ಲಿ ಮತ್ತೆ ಬದಲಾವಣೆಯಾಗುತ್ತದೆ. ಈತನ ಈ ಬುದ್ದಿಯನ್ನು ಬದಲಾಯಿಸಬೇಕೆಂದು ಕುಟುಂಬ ನಿರ್ಧರಿಸುತ್ತದೆ. ಈತನಿಗೂ ಮನೆಯ ಜವಾಬ್ದಾರಿ ಬರುವಂತೆ ಮಾಡಲು ಪ್ರಯತ್ನಿಸುತ್ತಾರೆ. ಇದರಲ್ಲಿ ಯಶಸ್ಸು ದೊರಕುವುದೇ? ಈತನ ಬುದ್ಧಿ ಸರಿಯಾಗುವುದೇ? ಎಂದು ತಿಳಿಯಲು ಕಂಡೋರ್ ಮನೆ ಕಥೆ ಸಿನಿಮಾ ನೋಡಬಹುದು.
ಕಂಡೋರ್ ಮನೆ ಕಥೆ ಪಾತ್ರವರ್ಗ
ಮಂಜುಳಾ ಎಸ್ ನಿರ್ಮಾಣದ ಕಂಡೋರ್ ಮನೆ ಕಥೆಯಲ್ಲಿ ಅಪೂರ್ವ ಶ್ರೀ, ರಕ್ಷಿತಾ ಕೆರೆಮನೆ, ರಮಿತ್ ಏಲಕ್ಕಿ, ದೀರವ್ ಶ್ರೀವತ್ಸ, ಡಿಂಗ್ರಿ ನಾಗರಾಜ್, ರಾಜ್ ಸೂರ್ಯ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಈ ಸಿನಿಮಾದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಸಿನಿಬಜಾರ್ ಪಡೆದುಕೊಂಡಿದೆ.
ಸಿನಿಬಜಾರ್‌ನಲ್ಲಿ ದಾಸಪ್ಪ, ಆರ್ಕೆಸ್ಟ್ರಾ ಮೈಸೂರು, ಟಗರುಪಲ್ಯ, ಆರಾಟ, 1988, ಚಾಂದಿನಿ ಬಾರ್, ಉಸಿರೇ ಉಸಿರೇ, ಚೌಚೌ ಬಾತ್ ಮುಂತಾದ ಸಿನಿಮಾಗಳಿವೆ. ಸೆಪ್ಟೆಂಬರ್ 20 ಅಂದರೆ ಇಂದು ಪೃಥ್ವಿ ಅಂಬಾರ್ ನಟನೆಯ ಖಾಕಿ ಖದರ್‌ನ ಥ್ರಿಲ್ಲರ್ ಸಿನಿಮಾ ಮತ್ಸ್ಯಗಂಧ ಕೂಡ ಸಿನಿಬಜಾರ್‌ನಲ್ಲಿ ಬಿಡುಗಡೆಯಾಗುತ್ತದೆ. ಮುಂದಿನ ವಾರ ಸಿನಿಬಜಾರ್‌ನಲ್ಲಿ ಕಂಡೋರ್ ಮನೆ ಕಥೆ ರಿಲೀಸ್ ಆಗುತ್ತಿದೆ.
ಈ ವಾರ ಒಟಿಟಿಯಲ್ಲಿ ಹಲವು ಸಿನಿಮಾಗಳು, ವೆಬ್ ಸರಣಿಗಳು ಬಿಡುಗಡೆಯಾಗಲಿವೆ. ನೆಟ್‌ಫ್ಲಿಕ್ಸ್‌ನಲ್ಲಿ ತಂಗಲಾನ್ ರಿಲೀಸ್ ಆಗಲಿದೆ. ಅಗಥಾ ಆಲ್ ಅಲಾಂಗ್ ಎಂಬ ವೆಬ್ ಸರಣಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ರಿಲೀಸ್ ಆಗಲಿದೆ. ಜಿಯೋ ಸಿನಿಮಾದಲ್ಲಿ ಜೋ ತೇರಾ ಹೈ ವೋ ಮೇರಾ ಹೈ ರಿಲೀಸ್ ಆಗಲಿದೆ. ನೆಟ್‌ಫ್ಲಿಕ್ಸ್‌ನಲ್ಲಿ ದಿ ಕಪಿಲ್ ಶರ್ಮಾ ಶೋ ಕೂಡ ನಡೆಯಲಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಮಾನ್‌ಸ್ಟರ್ ದಿ ಲೈಲಿ ಆಂಡ್ ಎರಿಕ್ ಮನೆಂದೆಜ್ ಸ್ಟೋರಿ ಕೂಡ ರಿಲೀಸ್ ಆಗಲಿದೆ.