Premalu OTT: ಒಟಿಟಿಯಲ್ಲಿ ಪ್ರೇಮಲು ಸಿನಿಮಾ ರಿಲೀಸ್; ಆದ್ರೆ, ಕನ್ನಡ ವರ್ಷನ್ ಯಾಕಿಲ್ಲ ಗುರು? ನೆಟ್ಟಿಗರಿಂದ ತರಾಟೆ
ಮಲಯಾಳಂನ ಸೂಪರ್‌ಹಿಟ್ ಸಿನಿಮಾ ಪ್ರೇಮಲು ಇದೀಗ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ವಿವಿಧ ಆಡಿಯೋ ಲ್ಯಾಂಗ್ವೇಜ್‌ನಲ್ಲಿ ಒಟಿಟಿಯಲ್ಲಿ ಈ ಸಿನಿಮಾ ನೋಡಬಹುದು. ಆದ್ರೆ, ಪ್ರೇಮಲು ಸಿನಿಮಾ ಕನ್ನಡ ಆಡಿಯೋದಲ್ಲಿ ಲಭ್ಯವಿಲ್ಲ. ಇದು ಕನ್ನಡಿಗರಿಗೆ ನಿರಾಸೆ ಉಂಟುಮಾಡಿದೆ.
ಬೆಂಗಳೂರು: ಮಲಯಾಳಂನ ಪ್ರೇಮಲು ಸಿನಿಮಾ ಇತ್ತೀಚೆಗೆ ಸಾಕಷ್ಟು ಚರ್ಚೆ ಉಂಟುಮಾಡಿತ್ತು. ಕಡಿಮೆ ಬಜೆಟ್‌ನ ಈ ಸಿನಿಮಾ 100 ಕೋಟಿಗೂ ಅಧಿಕ ಗಳಿಕೆ ಮಾಡಿತ್ತು. ನೆಲ್ಸನ್ ಕೆ ಗಫೂರ್ ಮತ್ತು ಮಮಿತಾ ಬೈಜು ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾವು ಚಿತ್ರಮಂದಿರಗಳಲ್ಲಿ ಭರ್ಜರಿ ಫಸಲು ತೆಗೆದಿತ್ತು. 2024ರಲ್ಲಿ ಅತ್ಯಧಿಕ ಗಳಿಕೆಯ ಮಲಯಾಳಂ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಈ ಸಿನಿಮಾ ಇದೀಗ ಒಟಿಟಿಗೆ ಆಗಮಿಸಿದೆ.
ಕನ್ನಡದಲ್ಲಿ ಯಾಕಿಲ್ಲ ಗುರೂ?
ಪ್ರೇಮಲು ಸಿನಿಮಾ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಮಲಯಾಳಂ ಒರಿಜಿನಲ್ ವರ್ಷನ್ ಸ್ಟ್ರೀಮಿಂಗ್ ಆಗುತ್ತಿದೆ. ಹಿಂದಿ ಮತ್ತು ತಮಿಳು ಆಡಿಯೋದಲ್ಲೂ ಪ್ರೇಮಲು ಲಭ್ಯವಿದೆ. ಒಟಿಟಿಯಲ್ಲಿ ವಿವಿಧ ಭಾಷೆಯ ಸಿನಿಮಾಗಳನ್ನು ತಮ್ಮದೇ ಭಾಷೆಯಲ್ಲಿ ವೀಕ್ಷಿಸಲು ಈ ಆಡಿಯೋ ಸೇವೆಗಳು ನೆರವಾಗುತ್ತವೆ. ಆದರೆ, ಪ್ರೇಮಲು ಸಿನಿಮಾ ಕನ್ನಡ ಆಡಿಯೋ ಆಯ್ಕೆಯಲ್ಲಿ ಲಭ್ಯವಿಲ್ಲ. ಪ್ರೇಮಲು ಸಿನಿಮಾವನ್ನು ಕನ್ನಡಿಗರು ಬೇಕಿದ್ದರೆ ಮಲಯಾಳಂನಲ್ಲಿ ನೋಡಿ ಅಥವಾ ತಮಿಳು/ಹಿಂದಿಯಲ್ಲಿ ನೋಡಿ ಎಂಬಂತೆ ಇದೆ. ಒಟಿಟಿಯಲ್ಲಿ ಹಲವು ಸಿನಿಮಾಗಳಲ್ಲಿ "ಕನ್ನಡ ವೀಕ್ಷಕರಿಗೆ" ಇದೇ ರೀತಿಯ ಅನ್ಯಾಯ ಸತತವಾಗಿ ನಡೆಯುತ್ತಾ ಬಂದಿದೆ. ಕನ್ನಡಿಗರು ಯಾವುದೇ ಭಾಷೆಯಲ್ಲೂ ಬೇಕಾದರೂ ನೋಡುತ್ತಾರೆ ಎಂಬ ಮನೋಭಾವ ಒಟಿಟಿ ಕಂಪನಿಗಳಿಗೆ ಇರುವಂತೆ ಇದೆ. ಹನುಮಾನ್, 12ತ್ ಫೇಲ್‌ನಂತಹ ಸಿನಿಮಾಗಳನ್ನು ಒಟಿಟಿಯಲ್ಲಿ ಕನ್ನಡ ವರ್ಷನ್‌ನಲ್ಲೂ ನೋಡಬಹುದು.
ಪ್ರೇಮಲು ಸಿನಿಮಾ ಒಟಿಟಿಗೆ ಆಗಮಿಸಿರುವುದಕ್ಕೆ ಚಿತ್ರಪ್ರೇಮಿಗಳು ಖುಷಿಪಟ್ಟಿದ್ದಾರೆ. ಆದರೆ, ಈ ಸಿನಿಮಾ ಕನ್ನಡ ಆಡಿಯೋದಲ್ಲಿ ಲಭ್ಯವಿಲ್ಲದೆ ಇರುವುದು ಕನ್ನಡಿಗರಿಗೆ ನಿರಾಸೆ ಉಂಟು ಮಾಡಿದೆ. ಇದೇ ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ಗೆ "ಕನ್ನಡ ಆಡಿಯೋ ಯಾವಾಗ ಲಭ್ಯವಾಗುತ್ತಿದೆ?" ಎಂದು ನೆಟ್ಟಿಗರು ಕೇಳುತ್ತಿದ್ದಾರೆ. ಇದು ಹಾಸ್ಯ ಪ್ರಧಾನ ಸಿನಿಮಾವಾಗಿರುವುದರಿಂದ ಸಂಭಾಷಣೆಗಳು ಅರ್ಥವಾಗುವುದು ಅತ್ಯಂತ ಅಗತ್ಯ. ಕನ್ನಡದಲ್ಲಿಯೇ ಆಡಿಯೋ ಇದ್ದರೆ ಸಿನಿಮಾ ಸರಿಯಾಗಿ ಅರ್ಥವಾಗುತ್ತದೆ. ಕೆಲವರ ಪ್ರಕಾರ ಪ್ರೇಮಲು ಸಿನಿಮಾದ ಕನ್ನಡ ವರ್ಷನ್‌ನ ಹಕ್ಕನ್ನು ಜಿಯೋ ಸಿನಿಮಾ ಪಡೆದಿದೆಯಂತೆ.
ಸದ್ಯಕ್ಕೆ ಪ್ರೇಮಲು ಸಿನಿಮಾವನ್ನು ಕನ್ನಡ ವೀಕ್ಷಕರು ಬೇರೆ ಭಾಷೆಯಲ್ಲಿ ನೋಡುವುದು ಅನಿವಾರ್ಯ. ಕನ್ನಡ ಆಡಿಯೋ ವರ್ಷನ್ ಯಾವಾಗ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಇನ್ನೂ ಮಾಹಿತಿ ನೀಡಿಲ್ಲ. ಗಿರೀಶ್ ನಿರ್ದೇಶನದಲ್ಲಿ ಮೂಡಿಬಂದ ಪ್ರೇಮಲು ಸಿನಿಮಾದಲ್ಲಿ ನಸ್ಲಾನ್ ಕೆ ಗಫೂರ್ ಮತ್ತು ಮಮಿತಾ ಬೈಜು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಶೈಲಿಯ ಪ್ರೇಮಲು ಸಿನಿಮಾವನ್ನು ಕೇವಲ 10 ಕೋಟಿಗೂ ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು. ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿಗೂ ಅಧಿಕ ಗಳಿಕೆ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಮಲಯಾಳಂನ ಸಾಲು ಸಾಲು ಸಿನಿಮಾಗಳು ಸೂಪರ್ ಹಿಟ್ ಲಿಸ್ಟ್‌ಗೆ ಸೇರುತ್ತಿವೆ. ಆ ಪೈಕಿ ಪ್ರೇಮಲು ಸಿನಿಮಾ ಸಹ ಒಂದಾಗಿದೆ. ತಮಿಳು ತೆಲುಗಿನಲ್ಲೂ ಈ ಸಿನಿಮಾ ಡಬ್ ಆಗಿ ಅಲ್ಲಿನ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಸ್ವತಃ ರಾಜಮೌಳಿ ಈ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕನ್ನಡದಲ್ಲಿ ಈ ಸಿನಿಮಾ ಡಬ್ ಆಗಿಲ್ಲ.