Manjummel Boys OTT: ಕನ್ನಡದಲ್ಲೇ ನೋಡಿ ಮಂಜುಮ್ಮೆಲ್ ಬಾಯ್ಸ್; ಹಿಂದಿ, ಕನ್ನಡದಲ್ಲೂ ಒಟಿಟಿಯಲ್ಲಿ ಈ ಸರ್ವೈವಲ್ ಸಿನಿಮಾ ರಿಲೀಸ್
Manjummel Boys Kannada OTT Release Date: ಮುಂಜುಮ್ಮೆಲ್ ಬಾಯ್ಸ್ ಮಲಯಾಳಂ ಸಿನಿಮಾವು ಒಟಿಟಿಯಲ್ಲಿ ಮೇ 5ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ಸರ್ವೈವಲ್ ಥ್ರಿಲ್ಲರ್ ಸಿನಿಮಾವು ಕನ್ನಡ, ತೆಲುಗು, ಹಿಂದಿ ಭಾಷೆಗಳಲ್ಲಿಯೂ ರಿಲೀಸ್ ಆಗಲಿದೆ.
ಚಿದಂಬರಂ ನಿರ್ದೇಶನದ ಮುಂಜುಮ್ಮೆಲ್ ಬಾಯ್ಸ್ ಎಂಬ ಬ್ಲಾಕ್‌ಬಸ್ಟರ್ ಸರ್ವೈವಲ್ ಥ್ರಿಲ್ಲರ್ ಸಿನಿಮಾವು ಒಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ ಮತ್ತು ಇತರರು ನಟಿಸಿರುವ ಈ ಸಿನಿಮಾ ಮೊದಲು ಮಲಯಾಳಂನಲ್ಲಿ ಮಾತ್ರ ಥಿಯೇಟರ್‌ನಲ್ಲಿ ಬಿಡುಗಡೆಯಾಗಿತ್ತು. ಇದಾದ ಬಳಿಕ ತೆಲುಗು ಡಬ್ಬಿಂಗ್ ಆವೃತ್ತಿಯು ಥಿಯೇಟರ್‌ನಲ್ಲಿ ರಿಲೀಸ್ ಆಗಿತ್ತು. ತೆಲುಗು ಭಾಷೆಯಲ್ಲೂ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿತ್ತು. ಇದೀಗ ಮುಂಜುಮ್ಮೆಲ್ ಬಾಯ್ಸ್ ಸಿನಿಮಾವು ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಒಟಿಟಿಯಲ್ಲಿ ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಮುಂಜುಮ್ಮೆಲ್ ಬಾಯ್ಸ್ ಸಿನಿಮಾ ನೋಡಬಹುದಾಗಿದೆ.
ಮಂಜುಮ್ಮೆಲ್ ಬಾಯ್ಸ್ ಒಟಿಟಿಯಲ್ಲಿ ಬಿಡುಗಡೆ
ಮಂಜುಮ್ಮೆಲ್ ಬಾಯ್ಸ್ ಹಿಂದಿ ಮತ್ತು ಕನ್ನಡ ಆವೃತ್ತಿಗಳನ್ನು ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಮಾಡಲು ನಿರ್ಧರಿಸಲಾಗಿದೆ. ಈ ಎರಡು ಭಾಷೆಯ ಜತೆ ಮೂಲ ಮಲಯಾಳಂ ಭಾಷೆಯೊಂದಿಗೆ ಈ ಭಾನುವಾರ ಮೇ 5ರಂದು ರಿಲೀಸ್ ಆಗಲಿದೆ. ಅಂದು ಮಧ್ಯರಾತ್ರಿಯಿಂದಲೇ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಇದೇ ಸಮಯದಲ್ಲಿ ತೆಲುಗು ಭಾಷೆಯಲ್ಲೂ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ತಮಿಳು ಡಬ್ಬಿಂಗ್ ಆವೃತ್ತಿ ಕೂಡ ಅದೇ ದಿನ ಒಟಿಟಿಯಲ್ಲಿ ರಿಲೀಸ್ ಆಗಲಿದೆ.
ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದ ಮಂಜುಮ್ಮೆಲ್ ಬಾಯ್ಸ್
ಈ ಸರ್ವೈವಲ್ ಸಿನಿಮಾವು ಮಲಯಾಳಂ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಬಿಡುಗಡೆಯಾದ ಸಿನಿಮಾಗಳಲ್ಲಿಯೇ ಅತ್ಯಧಿಕ ಗಳಿಕೆಯ ಸಿನಿಮಾವಾಗಿ ಹೊರಹೊಮ್ಮಿತ್ತು. ಚಿತ್ರಮಂದಿರಗಳಲ್ಲಿ 60 ದಿನಗಳಲ್ಲಿ 235 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿತ್ತು. ಮಲಯಾಳಂನಲ್ಲಿ ಯಾವುದೇ ಸಿನಿಮಾ 200 ಕೋಟಿ ರೂಪಾಯಿಗಿಂತ ಹೆಚ್ಚು ಗಳಿಕೆ ಮಾಡಿರಲಿಲ್ಲ.
ಮಲಯಾಳಂನ ಸೂಪರ್‌ಹಿಟ್ ಸಿನಿಮಾ ಮಂಜುಮ್ಮೆಲ್ ಬಾಯ್ಸ್ ಸಿನಿಮಾವನ್ನು ಒಟಿಟಿಯಲ್ಲಿ ನೋಡಬೇಕೆಂದು ಸಾಕಷ್ಟು ಜನರು ಕಾಯುತ್ತಿದ್ದಾರೆ. ತಮ್ಮ ಹತ್ತಿರದ ಸಿನಿಮಾ ಮಂದಿರಗಳಲ್ಲಿ ರಿಲೀಸ್ ಆಗದೆ ಇರುವುದು ಅಥವಾ ಇನ್ನಿತರ ಕಾರಣಗಳಿಂದ ಸಾಕಷ್ಟು ಜನರು ಈ ಚಿತ್ರ ನೋಡಿರಲಿಲ್ಲ. ಇನ್ನು ಕೆಲವೇ ದಿನದಲ್ಲಿ ಅಂದರೆ ಮೇ 5ರಂದು ಒಟಿಟಿಯಲ್ಲಿ ನೋಡಬಹುದಾಗಿದೆ.
ಮಂಜುಮ್ಮೆಲ್ ಬಾಯ್ಸ್ ಎನ್ನುವುದು ಸತ್ಯ ಘಟನೆ ಆಧರಿತ ಸಿನಿಮಾವಾಗಿದೆ. ಕೇರಳದ ಸ್ನೇಹಿತರ ಗುಂಪು ತಮಿಳುನಾಡಿನ ಕೊಡೈಕೆನಾಲ್‌ಗೆ ಪ್ರವಾಸಕ್ಕೆ ಹೋದಾಗ ನಡೆದ ಘಟನೆಯನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ. ಈ ಗೆಳೆಯರಲ್ಲಿ ಒಬ್ಬನು ಆಳವಾದ ಕಂದಕಕ್ಕೆ ಬೀಳುತ್ತಾನೆ. ಆ ಕಂದಕಕ್ಕೆ ಬಿದ್ದವರು ಜೀವಂತವಾಗಿ ವಾಪಸ್ ಬಂದ ಉದಾಹರಣೆ ಇಲ್ಲ. ಆತನನ್ನು ಅಲ್ಲಿಂದ ತೆಗೆಯದೆ ವಾಪಸ್ ಹೋಗುವುದಿಲ್ಲ ಎಂದು ಹಠತೊಟ್ಟ ಸ್ನೇಹಿತರು ಮಾಡುವ ಸಾಹಸವೇ ಮಂಜುಮ್ಮೆಲ್ ಬಾಯ್ಸ್ ಸಿನಿಮಾದ ಕಥೆ. 2006 ರ ನೈಜ ಘಟನೆಯನ್ನು ಆಧರಿಸಿದ ಚಿತ್ರ ಇದಾಗಿದೆ. ಕೊಚ್ಚಿ ಬಳಿಯ ಮಂಜುಮ್ಮೆಲ್ ಎಂಬ ಸಣ್ಣ ಊರಿನ ಸ್ನೇಹಿತರ ಗುಂಪಿನ ಕಥೆಯನ್ನು ಹೊಂದಿದೆ.
ಮಂಜುಮ್ಮೇಲ್ ಬಾಯ್ಸ್ ಚಿದಂಬರಂ ರಚನೆ ಮತ್ತು ನಿರ್ದೇಶನದ ಚಲನಚಿತ್ರವಾಗಿದೆ. ಪರವ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಈ ಸಿನಿಮಾದಲ್ಲಿ ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್, ಗಣಪತಿ ಎಸ್. ಪೊದುವಾಲ್, ಲಾಲ್ ಜೂನಿಯರ್, ದೀಪಕ್ ಪರಂಬೋಲ್, ಅಭಿರಾಮ್ ರಾಧಾಕೃಷ್ಣನ್, ಅರುಣ್ ಕುರಿಯನ್, ಖಾಲಿದ್ ರೆಹಮಾನ್, ಚಂದು ಸಲೀಂಕುಮಾರ್, ಶೆಬಿನ್ ಬೆನ್ಸನ್, ಮತ್ತು ವಿಷ್ಣು ರೇಘು ಮುಂತಾದವರು ನಟಿಸಿದ್ದಾರೆ.