ಆರ್ಕೆಸ್ಟ್ರಾ ಮೈಸೂರು ಸಿನಿಮಾ ಒಟಿಟಿಗೆ ಆಗಮನ; ಡಾಲಿ ಧನಂಜಯ್ ಬೆಂಬಲಿಸಿದ ಈ ಚಿತ್ರವನ್ನು ಎಲ್ಲಿ, ಯಾವಾಗ ನೋಡಬಹುದು?
Orchestra Mysuru on OTT: ಆರ್ಕೆಸ್ಟ್ರಾದ ಕಥೆ ಹೊಂದಿರುವ ಕನ್ನಡ ಸಿನಿಮಾವೊಂದು ರಿಲೀಸ್ ಆಗಿ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿತ್ತು. ಆದರೆ, ಆರು ತಿಂಗಳ ಬಳಿಕ ಪ್ರೈಮ್ ವಿಡಿಯೋದಿಂದ ಡಿಲೀಟ್ ಆಗಿತ್ತು. ಈ ಸಿನಿಮಾ ಈಗ ಮತ್ತೊಂದು ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ.
ಬೆಂಗಳೂರು: ಮೈಸೂರು ಆರ್ಕೆಸ್ಟ್ರಾ ಎಂಬ ಕನ್ನಡ ಸಿನಿಮಾವೊಂದು ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಿದ್ದು ನೆನಪಿದೆಯಾ? ಗಣೇಶನ ಹಬ್ಬ, ರಾಜ್ಯೋತ್ಸವ ಮುಂತಾದ ಸಂದರ್ಭಗಳಲ್ಲಿ ಎಲ್ಲಾ ಕಡೆ ಆರ್ಕೆಸ್ಟ್ರಾ ಇದ್ರೆ ಅಲ್ಲೊಂದು ಸಂಭ್ರಮ. ಈ ಆರ್ಕೇಸ್ಟ್ರಾ ಆರಂಭವಾಗಿದ್ದು ಮೈಸೂರಿನಲ್ಲೇ ಎನ್ನುವವರಿದ್ದಾರೆ. ಇದೇ ಆರ್ಕೆಸ್ಟ್ರಾದ ಕುರಿತು ಸಿನಿಮಾವೊಂದು ಈ ವರ್ಷ ಜನವರಿ 12ರಂದು ರಿಲೀಸ್ ಆಗಿತ್ತು. ಇದಾದ ಬಳಿಕ ಕೆಲವು ತಿಂಗಳಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿತ್ತು. ಆದರೆ, ಈಗ ಈ ಸಿನಿಮಾ ಅಮೆಜಾನ್ ಪ್ರೈಮ್‌ನಲ್ಲಿ ಇಲ್ಲ. ಈ ಸಿನಿಮಾ ಮತ್ತೆ ನೋಡಬೇಕೆನ್ನುವವರಿಗೆ ಖುಷಿಯಾಗುವಂತೆ ಇದೀಗ ಮೈಸೂರು ಆರ್ಕೆಸ್ಟ್ರಾ ಬೇರೊಂದು ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ.
ಸಂಗೀತ ನಿರ್ದೇಶಕ ರಘು ದೀಕ್ಷಿತ್ ಸಹ ನಿರ್ಮಾಣದ ಈ ಸಿನಿಮಾಕ್ಕೆ ಡಾಲಿ ಧನಂಜಯ್ ಬೆಂಬಲ ನೀಡಿದ್ದರು. ಈ ಸಿನಿಮಾ ಸಾಕಷ್ಟು ಪ್ರಚಾರ ಪಡೆದಿತ್ತು. ಆದರೆ, ಬಾಕ್ಸ್ ಆಫೀಸ್‌ನಲ್ಲಿ ದೊಡ್ಡಮಟ್ಟದ ಯಶಸ್ಸು ಗಳಿಸಿರಲಿಲ್ಲ. ಪೂರ್ಣಚಂದ್ರ ಮೈಸೂರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾವು ಕೆಲವು ದಿನಗಳ ಬಳಿಕ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿತ್ತು. ಒಟಿಟಿಯಲ್ಲಿ ಈ ಸಿನಿಮಾ ಮೆಚ್ಚುಗೆ ಗಳಿಸಿತ್ತು. ಆದರೆ, ಅಮೆಜಾನ್ ಪ್ರೈಮ್ ವಿಡಿಯೋದ ಜತೆಗೆ ಡೀಲ್ ಅಲ್ಪಾವಧಿಯದ್ದಾಗಿತ್ತು. ಆರು ತಿಂಗಳಲ್ಲಿಯೇ ಆ ಸಿನಿಮಾವನ್ನು ಪ್ರೈಮ್‌ನಿಂದ ತೆಗೆಯಲಾಗಿತ್ತು.
ಆರ್ಕೆಸ್ಟ್ರಾ ಮೈಸೂರು ಸಿನಿಮಾವನ್ನು ಒಟಿಟಿಯಲ್ಲಿ ನೋಡಿ
ಆಗಸ್ಟ್ 16ರಂದು ಆರ್ಕೆಸ್ಟ್ರಾ ಮೈಸೂರು ಸಿನಿಮಾ ಮತ್ತೆ ಒಟಿಟಿಗೆ ಆಗಮಿಸಲಿದೆ. ಈ ಬಾರಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗೋದಲ್ಲ. ಸಿನಿಬಜಾರ್ ಒಟಿಟಿಯಲ್ಲಿ ಬಿಡುಗಡೆಯಾಗಲಿದ್ದು, ಸುಮಾರು 177 ದೇಶಗಳ ಜನರು ಟಿವಿಒಡಿ ಮೂಲಕ ನೋಡಬಹುದು. ಈ ಸಿನಿಮಾ ಟಿವಿಒಡಿಯಲ್ಲಿ ನೋಡಲು 49 ರೂಪಾಯಿ ನಿಗದಿಪಡಿಸಲಾಗಿದೆ. ಇಷ್ಟು ರೂಪಾಯಿ ನೀಡಿದ್ರೆ ಆರ್ಕೆಸ್ಟ್ರಾ ನೋಡಬಹುದು.
ಮೈಸೂರಿನವರಾದ ಡಾಲಿ ಧನಂಜಯ್ ಸ್ನೇಹಿತರೆಲ್ಲಾ ಸೇರಿ ಮಾಡಿರುವ ಸಿನಿಮಾ ಇದಾಗಿದೆ. ಡಾಲಿ ಧನಂಜಯ್ ಅವರೆ ಈ ಚಿತ್ರದ ಎಲ್ಲಾ ಹಾಡುಗಳನ್ನು ಬರೆದಿರುವುದು ವಿಶೇಷ. ಆರ್ಕೆಸ್ಟ್ರಾದಲ್ಲಿ ಹಾಡಬೇಕೆಂದು ಆಸೆ ಹೊತ್ತ ಹುಡುಗನ ಕನಸು ನನಸಾಗುವುದಾ? ಎಂಬುದೆ ಚಿತ್ರದ ಮೂಲ ಕಥೆ. ಬೆಂಗಳೂರಿನ ಹಾಗೆ ಮೈಸೂರಿನಲ್ಲೂ ಒಂದು ಗಾಂಧಿನಗರವಿದೆ. ಅಲ್ಲಿ ಸಾಕಷ್ಟು ಆರ್ಕೆಸ್ಟ್ರಾ ಕಂಪನಿಗಳೂ ಇದೆ. ಈ ರೀತಿ ಆರ್ಕೆಸ್ಟ್ರಾದೊಂದಿಗೆ ನಮ್ಮ ಚಿತ್ರದ ಕಥೆ ಸಾಗುತ್ತದೆ. ರಘು ದೀಕ್ಷಿತ್ ಸಂಗೀತ ನೀಡಿರುವ ಎಂಟು ಹಾಡುಗಳು ನಮ್ಮ ಚಿತ್ರದಲ್ಲಿದೆ. ಅಷ್ಟು ಹಾಡುಗಳನ್ನು ಡಾಲಿ ಅವರೆ ಬರೆದಿದ್ದಾರೆ ಎಂದು ಚಿತ್ರದ ನಿರ್ದೇಶಕ ಸುನಿಲ್ ಈ ಹಿಂದೆ ಮಾಹಿತಿ ನೀಡಿದ್ದರು.
ಚಿತ್ರದ ನಿರ್ಮಾಪಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್, ನಿರ್ಮಾಪಕ ಅಶ್ವಿನ್ ವಿಜಯ್ ಕುಮಾರ್, ಸಹ ನಿರ್ದೇಶಕ ಮಹದೇವ್, ಛಾಯಾಗ್ರಾಹಕ ಹಾಗೂ ಸಂಕಲನಕಾರ ಜೋಸೆಫ್ ಕೆ ರಾಜ, ನಟ ನಾಗಭೂಷಣ ಸೇರಿದಂತೆ ಅನೇಕ ಜನರು ಈ ಸಿನಿಮಾಕ್ಕಾಗಿ ಶ್ರಮಿಸಿದ್ದರು. ಈ ಚಿತ್ರದಲ್ಲಿ ನಾಯಕಿಯಾಗಿ ರಾಜಲಕ್ಷ್ಮಿ ನಟಿಸಿದ್ದರು.
ವಿಭಾಗ