Kalki 2898 AD OTT: ಕಾಯುವಿಕೆಗೆ ಬಿತ್ತು ತೆರೆ, ಕೊನೆಗೂ ಒಟಿಟಿ ರಿಲೀಸ್ ದಿನಾಂಕ ಘೋಷಿಸಿದ ಕಲ್ಕಿ 2898 ಎಡಿ ಸಿನಿಮಾ
ಕಲ್ಕಿ 2898 ಎಡಿ ಸಿನಿಮಾ ಕೊನೆಗೂ ಒಟಿಟಿಗೆ ಲಗ್ಗೆ ಇಡಲು ಸಿದ್ಧವಾಗಿದೆ. ಪ್ರಭಾಸ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ನಟಿಸಿದ ಈ ಸಿನಿಮಾ ಇನ್ನೇನು ಇದೇ ವಾರ ಅಮೆಜಾನ್ ಪ್ರೈಂ ಜತೆಗೆ ನೆಟ್‌ಫ್ಲಿಕ್ಸ್‌ನಲ್ಲಿಯೂ ಸ್ಟ್ರೀಮಿಂಗ್ ಆರಂಭಿಸಲಿದೆ.
Kalki 2898 AD OTT Release date: ಪ್ರಭಾಸ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ನಟಿಸಿದ ಕಲ್ಕಿ 2898 ಎಡಿ ಸಿನಿಮಾ ಕೊನೆಗೂ ಒಟಿಟಿಗೆ ಲಗ್ಗೆ ಇಡಲು ಸಿದ್ಧವಾಗಿದೆ. ಕಾಶಿ, ಕಾಂಪ್ಲೆಕ್ಸ್ ಮತ್ತು ಶಂಬಾಲ ಎಂಬ ಮೂರು ಕಾಲ್ಪನಿಕ ಪ್ರಪಂಚದ ಹಿನ್ನೆಲೆಯಲ್ಲಿ ನಿರ್ಮಿಸಲಾದ ವೈಜ್ಞಾನಿಕ ಆಕ್ಷನ್ ಎಂಟರ್‌ಟೈನರ್ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶಿಸಿದ್ದರು. ಸುಮಾರು ಆರು ನೂರು ಕೋಟಿ ಬಜೆಟ್‌ನಲ್ಲಿ ವೈಜಯಂತಿ ಮೂವೀಸ್‌ನ ಬ್ಯಾನರ್‌ನಡಿಯಲ್ಲಿ ನಿರ್ಮಾಣವಾದ ಈ ಸಿನಿಮಾ 1200 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ, ಭಾರತೀಯ ಚಲನಚಿತ್ರೋದ್ಯಮದಲ್ಲಿ ಈ ವರ್ಷ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂದೂ ಹೆಸರು ಮಾಡಿತು.
ಕಮಲ್ ಹಾಸನ್ ವಿಲನ್
ಕಲ್ಕಿ ಚಿತ್ರದಲ್ಲಿ ಪ್ರಭಾಸ್ ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಮಲ್ ಹಾಸನ್ ವಿಲನ್ ಸುಪ್ರೀಂ ಯಾಶ್ಕಿನ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್‌ಗೆ ದಿಶಾ ಪಟಾನಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಇನ್ನುಳಿದಂತೆ ವಿಜಯ್ ದೇವರಕೊಂಡ, ದುಲ್ಕರ್ ಸಲ್ಮಾನ್, ಮೃಣಾಲ್ ಠಾಕೂರ್, ರಾಮ್ ಗೋಪಾಲ್ ವರ್ಮಾ, ರಾಜಮೌಳಿ ಸೇರಿದಂತೆ ಅನೇಕ ನಟರು ಮತ್ತು ನಿರ್ದೇಶಕರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಚಿತ್ರಮಂದಿರದ ಓಟ ಮುಗಿಸಿರುವ ಕಲ್ಕಿ ಸಿನಿಮಾ ಒಟಿಟಿಗೆ ಆಗಮಿಸುವ ಸನಿಹದಲ್ಲಿದೆ. ಹಾಗಾದರೆ, ಯಾವಾಗ, ಯಾವ ಒಟಿಟಿಯಲ್ಲಿ ಈ ಚಿತ್ರ ರಿಲೀಸ್ ಆಗಲಿದೆ? ಮುಂದೆ ಓದಿ.
ಒಟಿಟಿಯಲ್ಲಿ ಯಾವಾಗ?
ಕಲ್ಕಿ ಚಿತ್ರ ಒಂದಲ್ಲ ಎರಡು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗಲಿದೆ. ಕಲ್ಕಿ ಸಿನಿಮಾ ಅಮೆಜಾನ್ ಪ್ರೈಮ್ ಮತ್ತು ನೆಟ್‌ಫ್ಲಿಕ್ಸ್‌ನಲ್ಲಿ ಆಗಸ್ಟ್ 22 ರಿಂದ ಸ್ಟ್ರೀಮ್ ಆಗಲಿದೆ. ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ತೆಲುಗು ಜೊತೆಗೆ ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗುತ್ತಿದ್ದರೆ, ಹಿಂದಿ ಆವೃತ್ತಿಯನ್ನು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿದೆ. ಕಲ್ಕಿ ಒಟಿಟಿ ಬಿಡುಗಡೆ ದಿನಾಂಕವನ್ನು ಈ ಎರಡು ಒಟಿಟಿ ಪ್ಲಾಟ್‌ಫಾರ್ಮ್‌ಗಳು ಅಧಿಕೃತವಾಗಿ ಘೋಷಿಸಿವೆ.
ಏನಿದು ಕಲ್ಕಿ ಕಥೆ..
ಕುರುಕ್ಷೇತ್ರ ಯುದ್ಧದ ಆರು ಸಾವಿರ ವರ್ಷಗಳ ನಂತರ, ಇಡೀ ಭೂಮಿಯು ನಾಶವಾಯಿತು. ಸುಪ್ರೀಂ ಯಶ್ಕಿನ್ (ಕಮಲ್ ಹಾಸನ್) ಕಾಂಪ್ಲೆಕ್ಸ್ ಎಂಬ ಹೊಸ ಪ್ರಪಂಚವನ್ನು ಸೃಷ್ಟಿಸುತ್ತಾನೆ. ನೈಸರ್ಗಿಕ ಸಂಪನ್ಮೂಲಗಳನ್ನು ಕಾಂಪ್ಲೆಕ್ಸ್‌ಗೆ ಮಾತ್ರ ಸೀಮಿತಗೊಳಿಸುತ್ತಾನೆ. ಕಾಶಿ ನಗರದಲ್ಲಿ ವಾಸವಿರುವ ಭೈರವನಿಗೆ (ಪ್ರಭಾಸ್) ಕಾಂಪ್ಲೆಕ್ಸ್‌ಗೆ ಹೋಗುವ ಕನಸು.
ಇತ್ತ ಗರ್ಭಿಣಿ ಸುಮತಿ (ದೀಪಿಕಾ ಪಡುಕೋಣೆ) ಕಾಂಪ್ಲೆಕ್ಸ್ ಪ್ರಪಂಚದಿಂದ ತಪ್ಪಿಸಿಕೊಳ್ಳುತ್ತಾಳೆ. ಕಮಾಂಡರ್ ಮಾನಸ್ (ಶಾಶ್ವತ ಚಟರ್ಜಿ) ಭೈರವನ ಜೊತೆಗೆ ಸುಮತಿಯನ್ನು ಹಸ್ತಾಂತರಿಸಿದರೆ ಕಾಂಪ್ಲೆಕ್ಸ್‌ಗೆ ಪ್ರವೇಶಿಸಲು ಅವಕಾಶ ನೀಡುವುದಾಗಿ ಒಪ್ಪಂದ ಮಾಡಿಕೊಳ್ಳುತ್ತಾನೆ. ಆದರೆ ಅಶ್ವತ್ಥಾಮ (ಅಮಿತಾಭ್ ಬಚ್ಚನ್) ಭೈರವ ಮತ್ತು ಕಮಾಂಡರ್ ಮಾನಸ್ ಹಿಡಿತದಿಂದ ಸುಮತಿಯನ್ನು ರಕ್ಷಿಸುತ್ತಾನೆ.
ಅಷ್ಟಕ್ಕೂ ಅಶ್ವತ್ಥಾಮ ಯಾರು? ಕೊನೇ ಕ್ಷಣದಲ್ಲಿ ಭೈರವ ಸುಮತಿಯನ್ನು ರಕ್ಷಿಸಿದ್ದು ಏಕೆ? ಅಶ್ವತ್ಥಾಮ ಸಾವಿರಾರು ವರ್ಷಗಳ ಕಾಲ ಬದುಕಲು ಕಾರಣವೇನು? ಮಹಾಭಾರತಕ್ಕೂ ಭೈರವನಿಗೂ ಏನು ಸಂಬಂಧ? ಹೀಗೆ ಕಲ್ಕಿ ಮೊದಲ ಭಾಗ ನೋಡಿಸಿಕೊಂಡು ಹೋಗುತ್ತದೆ. ಇದರ ಜತೆಗೆ ಎರಡನೇ ಭಾಗವೂ ಮುಂದಿನ ವರ್ಷ ತೆರೆಗೆ ಬರಲಿದೆ. ಈಗಾಗಲೇ ಶೇ. 30 ಭಾಗದಷ್ಟು ಚಿತ್ರದ ಶೂಟಿಂಗ್ ಸಹ ಮುಕ್ತಾಯವಾಗಿದೆ.