Tiger 3 OTT: ‘ಟೈಗರ್ 3’ ಒಟಿಟಿ ಎಂಟ್ರಿಗೆ ಮುಹೂರ್ತ; ಎಲ್ಲಿ, ಯಾವಾಗ? ಇಲ್ಲಿದೆ ಮಾಹಿತಿ
ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮುಖ್ಯಭೂಮಿಕೆಯಲ್ಲಿನ ಟೈಗರ್ 3 ಸಿನಿಮಾ ಒಟಿಟಿ ಆಗಮನಕ್ಕೆ ದಿನಾಂಕ ನಿಗದಿಯಾಗಿದೆ. ಕಳೆದ ದೀಪಾವಳಿ ಪ್ರಯುಕ್ತ ನ. 12ರಂದು ರಿಲೀಸ್ ಆಗಿದ್ದ ಈ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚು ಸದ್ದು ಮಾಡಿರಲಿಲ್ಲ.
Tiger 3 OTT release: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ನಟನೆಯ ಟೈಗರ್ 3 ಸಿನಿಮಾ ಕಳೆದ ವರ್ಷದ ದೀಪಾವಳಿ ಪ್ರಯುಕ್ತ ನ. 12ರಂದು ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ನೋಡುಗರಿಂದ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದ್ದ ಈ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಹೇಳಿಕೊಳ್ಳುವಂಥ ಕಲೆಕ್ಷನ್ ಮಾಡಿರಲಿಲ್ಲ. ಇದೀಗ ಈ ನಡುವೆ ಇದೇ ಟೈಗರ್ 3 ಸಿನಿಮಾ ಒಟಿಟಿ ಕಡೆಗೆ ಆಗಮಿಸುವ ಸುಳಿವು ನೀಡಿದೆ.
ಟೈಗರ್ 3 ಸಿನಿಮಾ ಬಿಡುಗಡೆಯಾದ ಎರಡೇ ದಿನಕ್ಕೆ ಶತಕೋಟಿ ಕಲೆಕ್ಷನ್ ಮಾಡಿದ್ದರೂ, ಮುಂಗಡ ಟಿಕೆಟ್ ಬುಕಿಂಗ್ ಮೂಲಕ ಹೌಸ್‌ಫುಲ್ ಆಗಿದ್ದರೂ, ಬಾಕ್ಸ್ ಆಫೀಸ್‌ನಲ್ಲಿ ಕುಸಿತ ಮುಂದುವರಿಸಿತ್ತು. ಅದೇ ವೇಳೆ ಕ್ರಿಕೆಟ್ ವಿಶ್ವಕಪ್ ಫೀವರ್ ಹೆಚ್ಚಿದ್ದಿದ್ದೂ ಸಿನಿಮಾ ಕಲೆಕ್ಷನ್ ಕುಸಿತಕ್ಕೆ ಕಾರಣವಾಗಿತ್ತು. 300 ಕೋಟಿ ಬಜೆಟ್‌ನಲ್ಲಿ ತಯಾರಾದ ಟೈಗರ್ 3 ಭಾರತದಲ್ಲಿ 335 ಕೋಟಿ ಒಟ್ಟು ಕಲೆಕ್ಷನ್ ಮಾಡಿದರೆ, ಆ ಪೈಕಿ ಹಿಂದಿ ಆವೃತ್ತಿಯೊಂದೇ 286 ಕೋಟಿ ಗಳಿಸಿತ್ತು.
ಇನ್ನು ವಿಶ್ವದಾದ್ಯಂತ ಈ ಸಿನಿಮಾ 120 ಕೋಟಿ ಕಲೆಕ್ಷನ್ ಮಾಡಿತ್ತು. ಭಾರತದ ಕಲೆಕ್ಷನ್ ಮತ್ತು ವಿದೇಶಿ ಗಳಿಕೆ ಎರಡೂ ಸೇರಿಸಿದರೆ, 450 ಕೋಟಿ ಪ್ಲಸ್ ಗಳಿಕೆ ಮಾಡಿತ್ತು. ಏತನ್ಮಧ್ಯೆ, ಈಗ ಟೈಗರ್ 3 ಒಟಿಟಿ ಬಿಡುಗಡೆ ದಿನಾಂಕದ ಕುರಿತ ಸುದ್ದಿಗಳು ಹರಿದಾಡುತ್ತಿದೆ. ಚಿತ್ರಮಂದಿರಗಳಲ್ಲಿ ನೋಡದ ಪ್ರೇಕ್ಷಕರು ಒಟಿಟಿಯಲ್ಲಿ ಟೈಗರ್ 3 ವೀಕ್ಷಿಸಲು ಕಾತುರರಾಗಿದ್ದಾರೆ. ಹಾಗಾದರೆ, ಯಾವ ಒಟಿಟಿ? ಬಿಡುಗಡೆ ಯಾವಾಗ? ಈ ಕುರಿತ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ.
ಸದ್ಯದ ಮಾಹಿತಿ ಪ್ರಕಾರ ಅಮೆಜಾನ್ ಪ್ರೈಮ್‌ನಲ್ಲಿ ಟೈಗರ್ 3 ಸಿನಿಮಾ ಸ್ಟ್ರೀಮ್ ಆಗಲಿದೆ. ಅಮೆಜಾನ್ ಪ್ರೈಮ್ ಜೊತೆ ಭಾರೀ ಮೊತ್ತಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಡಿಸೆಂಬರ್ ಮೂರನೇ ವಾರದಲ್ಲಿ ಅಥವಾ ಕ್ರಿಸ್ಮಸ್ 31 ರಂದು ಟೈಗರ್ 3 ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ, ಬಾಲಿವುಡ್‌ನಲ್ಲಿ ಯಾವುದೇ ಸಿನಿಮಾವನ್ನು ಒಟಿಟಿಯಲ್ಲಿ ಕನಿಷ್ಠ 8 ವಾರಗಳ ನಂತರ ಅಂದರೆ ಥಿಯೇಟರ್‌ನಲ್ಲಿ ಬಿಡುಗಡೆಯಾದ ಎರಡು ತಿಂಗಳ ನಂತರ ಬಿಡುಗಡೆ ಮಾಡಬೇಕೆಂಬ ನಿಯಮವಿದೆ. ಹಾಗಾಗಿ ಟೈಗರ್ ಒಟಿಟಿ ಎಂಟ್ರಿ ಡಿಲೇ ಆಗಿತ್ತು.
ಇದೀಗ ಟೈಗರ್ 3 ಒಟಿಟಿಯ ಹೊಸ ಬಿಡುಗಡೆ ದಿನಾಂಕ ಕುತೂಹಲ ಮೂಡಿಸಿದೆ. ಜನವರಿ 5 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಲಿದೆ ಎಂದು ಹೇಳಲಾಗುತ್ತಿದೆ. ಶುಕ್ರವಾರ ಸಂಜೆ ಅಥವಾ ಜನವರಿ 5 ರ ಮಧ್ಯರಾತ್ರಿಯಿಂದ ಸ್ಟ್ರೀಮ್ ಮಾಡುವ ಸಾಧ್ಯತೆಯಿದೆ. ಟೈಗರ್ 3 ಚಿತ್ರದಲ್ಲಿ ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮತ್ತು ವಿಲನ್ ಆಗಿ ಇಮ್ರಾನ್ ಹಶ್ಮಿ ನಟಿಸಿದ್ದಾರೆ. ಮನೀಶ್ ಶರ್ಮಾ ನಿರ್ದೇಶನದ ಟೈಗರ್ 3 ಚಿತ್ರವನ್ನು ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಆದಿತ್ಯ ಚೋಪ್ರಾ ನಿರ್ಮಿಸಿದ್ದಾರೆ.