OTT News: ಸಿಟಾಡೆಲ್ ಹನಿ ಬನ್ನಿ ವೆಬ್‌ಸಿರೀಸ್ ಟೀಸರ್‌ನಲ್ಲಿ ಸಮಂತಾ ಸಾಹಸ; ಯಾವಾಗ, ಯಾವ ಒಟಿಟಿಯಲ್ಲಿ ವೀಕ್ಷಣೆ? ಇಲ್ಲಿದೆ ವಿವರ
ಸಮಂತಾ ರುತ್ ಪ್ರಭು, ವರುಣ್ ಧವನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿಟಾಡೆಲ್; ಹನಿ ಬನ್ನಿ ವೆಬ್‌ಸಿರೀಸ್‌ನ ಟೀಸರ್ ಬಿಡುಗಡೆ ಆಗಿದೆ. ಆಕ್ಷನ್ ಶೈಲಿಯ ಈ ಸಿರೀಸ್ ಯಾವಾಗ ಒಟಿಟಿಗೆ ಬರಲಿದೆ ಎಂಬ ವಿಚಾರವೂ ಹೊರಬಿದ್ದಿದೆ.

Citadel Honey Bunny: ಆ್ಯಕ್ಷನ್ ಥ್ರಿಲ್ಲರ್ ವೆಬ್‌ಸಿರೀಸ್ ಸಿಟಾಡೆಲ್ ಹನಿ ಬನ್ನಿ ಇನ್ನೇನು ಶೀಘ್ರದಲ್ಲಿಯೇ ಒಟಿಟಿ ಅಂಗಳಕ್ಕೆ ಬರಲಿದೆ. ಸಿಟಾಡೆಲ್ ಯೂನಿವರ್ಸ್‌ನಿಂದ ಬಂದಿರುವ ಭಾರತೀಯ ಆವೃತ್ತಿಯ ಈ ವೆಬ್ ಸರಣಿಯನ್ನು ನಿರ್ದೇಶಕರಾದ ರಾಜ್ ಮತ್ತು ಡಿಕೆ ಆಕ್ಷನ್ ಕಟ್ ಹೇಳಿದ್ದಾರೆ. ನಟಿ ಸಮಂತಾ ಮತ್ತು ಬಾಲಿವುಡ್ ನಟ ವರುಣ್ ಧವನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದೀಗ ಸರಣಿಯ ಸ್ಟ್ರೀಮಿಂಗ್ ದಿನಾಂಕವನ್ನು ಘೋಷಿಸುವುದರ ಜತೆಗೆ, ಅತ್ಯಾಕರ್ಷಕ ಸಾಹಸ ದೃಶ್ಯಗಳ ಹೆಣಿಗೆಯ ಟೀಸರ್‌ಅನ್ನು ಬಿಡುಗಡೆ ಮಾಡಿದ್ದಾರೆ.
ಸಿಟಾಡೆಲ್ ಹನಿ ಬನ್ನಿ ಸ್ಟ್ರೀಮಿಂಗ್ ದಿನಾಂಕ
ಸಿಟಾಡೆಲ್ ವೆಬ್ ಸರಣಿಯ ಇಂಗ್ಲಿಷ್ ಆವೃತ್ತಿಯು ಈಗಾಗಲೇ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಿದೆ. ಆ ಸರಣಿಯಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದರು. ಈಗ ಸಿಟಾಡೆಲ್ ಹನಿ ಬನ್ನಿ ಸರಣಿಯ ಇಂಡಿಯನ್ ಆವೃತ್ತಿಯಲ್ಲಿ ಸಮಂತಾ ಮತ್ತು ವರುಣ್ ಧವನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಹೊಸ ಆಕ್ಷನ್ ಥ್ರಿಲ್ಲರ್ ವೆಬ್ ಸರಣಿಯು ನವೆಂಬರ್ 7 ರಿಂದ ಸ್ಟ್ರೀಮಿಂಗ್ ಆಗಲಿದೆ ಎಂದು ಪ್ರೈಮ್ ವಿಡಿಯೋ ಬಹಿರಂಗಪಡಿಸಿದೆ.
ಫ್ಯಾಮಿಲಿ ಮ್ಯಾನ್ ನಿರ್ದೇಶಕರ ಮತ್ತೊಂದು ಸಿರೀಸ್
ಮುಂಬೈನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಈ ಸಿರೀಸ್‌ನ ದಿನಾಂಕವನ್ನು ಘೋಷಿಸಲಾಯಿತು ಮತ್ತು ಟೀಸರ್‌ಅನ್ನು ಸಹ ಬಿಡುಗಡೆ ಮಾಡಲಾಯಿತು. ರೋಚಕ ಸಾಹಸ ದೃಶ್ಯಗಳಿಂದ ಈ ಟೀಸರ್ ಕುತೂಹಲ ಮೂಡಿಸಿದೆ. ಈ ಸರಣಿಗಾಗಿ ಸಮಂತಾ ಮತ್ತು ವರುಣ್ ಧವನ್ ಮಾಡಿರುವ ಸಾಹಸ ಮೈನವಿರೇಳಿಸುವಂತಿದೆ. ಇದಲ್ಲದೆ, ಟೀಸರ್ ಕೊನೆಯಲ್ಲಿ, ಈ ಇಬ್ಬರ ನಡುವೆ ಕೆಲವು ಆಪ್ತ ದೃಶ್ಯಗಳಿರುವುದೂ ಕಂಡಿದೆ. ಫ್ಯಾಮಿಲಿ ಮ್ಯಾನ್ ಮತ್ತು ಫರ್ಜಿಯಂತಹ ವೆಬ್ ಸೀರೀಸ್ ಮಾಡಿದ ನಿರ್ದೇಶಕರಾದ ರಾಜ್ ಮತ್ತು ಡಿಕೆ ಈ ಸರಣಿಯನ್ನೂ ನಿರ್ದೇಶಿಸಿದ್ದಾರೆ. ಒಂದೂವರೆ ನಿಮಿಷದ ಈ ಟೀಸರ್‌ನಲ್ಲಿ ವೆಬ್ ಸಿರೀಸ್ ಹೇಗಿರಬಹುದು ಎಂಬುದನ್ನು ತೋರಿಸಿದ್ದಾರೆ ನಿರ್ದೇಶಕರು.
ಸ್ಪೈ ಆಕ್ಷನ್ ಥ್ರಿಲ್ಲರ್ ಸಿಟಾಡೆಲ್
ಅಮೆಜಾನ್ ಪ್ರೈಮ್ ವಿಡಿಯೋ ಇತಿಹಾಸದಲ್ಲಿ ಇಂಗ್ಲಿಷ್‌ನಲ್ಲಿರುವ ಸಿಟಾಡೆಲ್ ಅತಿ ಹೆಚ್ಚು ಬಜೆಟ್‌ನ ವೆಬ್ ಸರಣಿಯಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಸರಣಿ ಯಶಸ್ವಿಯಾಗಲಿಲ್ಲ. ಆದರೆ ಈ ಭಾರತೀಯ ಆವೃತ್ತಿಯು ಸಹ ಅದೇ ಸ್ಪೈ ಆಕ್ಷನ್ ಥ್ರಿಲ್ಲರ್ ಎಂದು ತೋರುತ್ತದೆ. ಈ ಸರಣಿಯನ್ನು 1990ರ ದಶಕದ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾಗಿದೆ. ಇಡೀ ಟೀಸರ್ ಹಿನ್ನಲೆಯಲ್ಲಿ ರಾತ್ ಬಾಕಿ.. ಬಾತ್ ಬಾಕಿ ಹಾಡು ಪ್ಲೇ ಆಗುತ್ತಿದೆ. ಸ್ಪೈ ಆ್ಯಕ್ಷನ್ ಥ್ರಿಲ್ಲರ್‌ನಲ್ಲಿ ಇರಬೇಕಾದ ಎಲ್ಲಾ ಅಂಶಗಳು ಸದ್ಯದ ಟೀಸರ್‌ನಲ್ಲಿ ಕಾಣಿಸಿಕೊಂಡಿದೆ.
ಈಗಾಗಲೇ ರಾಜ್ ಮತ್ತು ಡಿಕೆ ಜೊತೆ ಫ್ಯಾಮಿಲಿ ಮ್ಯಾನ್ ಸೀಸನ್ 2ರಲ್ಲಿ ಸಮಂತಾ ನಟಿಸಿದ್ದರು. ಆ ಸಿರೀಸ್ ಸಮಂತಾಗೆ ಒಳ್ಳೆಯ ಹೆಸರನ್ನೂ ತಂದುಕೊಟ್ಟಿತ್ತು. ಇದೀಗ ಸಿಟಾಡೆಲ್ ಸಿರೀಸ್‌ನಲ್ಲಿಯೂ ನಟಿಸಿದ್ದಾರೆ. ಈ ಸಿಟಾಡೆಲ್ ಹನಿ ಬನ್ನಿ ಸರಣಿಯು ಇಟಾಲಿಯನ್ ಸರಣಿಯ ಸಿಟಾಡೆಲ್: ಡಯಾನಾ (ಅಕ್ಟೋಬರ್ 10 ರಿಂದ ಸ್ಟ್ರೀಮಿಂಗ್) ಬಳಿಕ ಸ್ಟ್ರೀಮಿಂಗ್ ಆರಂಭಿಸಲಿದೆ.
