Saripodhaa Sanivaaram OTT: ಸರಿಪೋಧಾ ಶನಿವಾರಂ ಒಟಿಟಿಗೆ; ನಾನಿ ನಟನೆಯ ಬ್ಲಾಕ್‌ಬಸ್ಟರ್ ಸಾಹಸ ಸಿನಿಮಾವನ್ನು ಮನೆಯಲ್ಲೇ ನೋಡಿ
Saripodhaa Sanivaaram OTT: ತೆಲುಗು ನಟ ನಾನಿ ನಟನೆಯ ಸರಿಪೋಧಾ ಶನಿವಾರಂ ಸಿನಿಮಾವು ಸೆಪ್ಟೆಂಬರ್ 26ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ. ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂಪಾಯಿಗಿಂತಲೂ ಹೆಚ್ಚು ಗಳಿಕೆ ಮಾಡಿರುವ ಈ ಚಿತ್ರದಲ್ಲಿ ನಾನಿಯು ಶನಿವಾರದಂದು ಭ್ರಷ್ಟರ ವಿರುದ್ಧ ಹೋರಾಡುತ್ತಾನೆ.
Saripodhaa Sanivaaram OTT: ಸರಿಪೋಧಾ ಶನಿವಾರಂ ಎಂದರೆ ಶನಿವಾರ ಸಾಕಾಗುವುದಿಲ್ಲವೇ ಎಂದರ್ಥ. ನಾನಿ ನಟನೆಯ ಈ ಸಿನಿಮಾ ಸೆಪ್ಟೆಂಬರ್ 26ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಒಂದು ತಿಂಗಳಲ್ಲಿ ಆನ್‌ಲೈನ್‌ನಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿತ್ತು. ಮುಖ್ಯವಾಗಿ ಉತ್ತರ ಅಮೆರಿಕದಲ್ಲಿ ಒಳ್ಳೆಯ ಗಳಿಕೆ ಮಾಡಿತ್ತು. ಇಲ್ಲಿ ಈ ಸಿನಿಮಾದ ಗ್ರಾಸ್ ಕಲೆಕ್ಷನ್ 2.5 ದಶಲಕ್ಷ ಡಾಲರ್ ಆಗಿತ್ತು. ಒಟ್ಟಾರೆ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈ ಮೂಲಕ ನಾನಿ ನಟನೆಯ ಈ ಸಿನಿಮಾ ಸೂಪರ್‌ಹಿಟ್ ಆಗಿತ್ತು.
ಸರಿಪೋಧಾ ಶನಿವಾರಂ ಒಟಿಟಿ ಬಿಡುಗಡೆ
ಇದೀಗ ನೆಟ್‌ಫ್ಲಿಕ್ಸ್ ಕಂಪನಿಯು ಭಾರತದಲ್ಲಿ ಈ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವ ಕುರಿತು ಮಾಹಿತಿ ಹಂಚಿಕೊಂಡಿದೆ. ಇಲ್ಲಿಯವರೆಗೆ ನೀವು ನಾನಿಯ ಎರಡು ಕಣ್ಣುಗಳನ್ನು ಮಾತ್ರ ನೋಡಿದ್ದೀರಿ. ಮೂರನೆಯ ಕಣ್ಣು ನೋಡಲು ತಯಾರಿದ್ದೀರಾ ಎಂದು ನೆಟ್‌ಫ್ಲಿಕ್ಸ್ ಈ ಸಿನಿಮಾದ ಒಟಿಟಿ ಬಿಡುಗಡೆಯ ಪೋಸ್ಟರ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಈ ಚಿತ್ರವನ್ನು ನೋಡಬಹುದು ಎಂದು ನೆಟ್‌ಫ್ಲಿಕ್ಸ್ ಮಾಹಿತಿ ನೀಡಿದೆ.
ಸರಿಪೋಧಾ ಶನಿವಾರಂ ಸಿನಿಮಾದ ಕುರಿತು
ಇದು ವಿವೇಕ್ ಅತ್ರೇಯಾ ನಿರ್ದೇಶನದ, ಡಿವಿವಿ ಎಂಟರ್‌ಟೇನ್‌ಮೆಂಟ್ ನಿರ್ಮಾಣದ ಸಿನಿಮಾವಾಗಿದೆ. ಈ ಸಿನಿಮಾದ ನಾಯಕನ ಹೆಸರು ಸೂರ್ಯ. ಈತನನ್ನು ಶಾರ್ಟ್ ಆಗಿ ನಾನಿ ಎಂದು ಕರೆಯಲಾಗುತ್ತದೆ. ಈತ ವಾರದ ಇತರೆ ದಿನಗಳಲ್ಲಿ ಒಳ್ಳೆಯ ವ್ಯಕ್ತಿತ್ವದ ವ್ಯಕ್ತಿ. ಆದರೆ, ಶನಿವಾರ ಬರುತ್ತಿದ್ದಂತೆ ಬೇರೆ ವ್ಯಕ್ತಿತ್ವ ತೋರುತ್ತಾನೆ. ಪ್ರತಿ ಶನಿವಾರ ಈತ ಭ್ರಷ್ಟಾಚಾರದ ವಿರುದ್ಧ ತನ್ನದೇ ಶೈಲಿಯಲ್ಲಿ ಹೋರಾಡುತ್ತಾನೆ. ಈತನ ಈ ಶನಿವಾರದ ಹೋರಾಟವು ಮುಂದುವರೆಯುತ್ತದೆ. ಭ್ರಷ್ಟ ಪೊಲೀಸ್ ಇನ್‌ಸ್ಪೆಕ್ಟರ್ ಆರ್ ದಯಾನಂದ್ (ಎಸ್‌ಜೆ ಸುರೇಶ್) ವಿರುದ್ಧದ ಹೋರಾಟ ಇನ್ನೊಂದು ಲೆವೆಲ್‌ಗೆ ಹೋಗುತ್ತದೆ. ಎಸ್‌ಜೆ ಸೂರ್ಯನ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಈ ಸಿನಿಮಾದ ಲವಲವಿಕೆಯ ಚಿತ್ರಕತೆ ಪ್ರೇಕ್ಷಕರಿಗೆ ಇಷ್ಟವಾಗಿದೆ. ಇದರೊಂದಿಗೆ ಚಿತ್ರದ ಕಲಾವಿದರ ನಟನೆಯೂ ಮೆಚ್ಚುಗೆ ಪಡೆದಿದೆ. ನಾಣಿ ಮತ್ತು ಎಸ್‌ಜೆ ಸೂರ್ಯರ ನಡುವಿನ ನಟನೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಮಾತ್ರ ದಾಖಲೆ ಬರೆದಿರುವುದಲ್ಲ. ಇದರ ಸಂಗೀತ ಮತ್ತು ನಿರ್ದೇಶನದ ಕುರಿತು ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಇದು 90 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾವಾಗಿದೆ. ನಾನಿಯ ದುಬಾರಿ ಪ್ರಾಜೆಕ್ಟ್ ಕೂಡ ಹೌದು. ನಾನಿ ಇಷ್ಟು ಬಜೆಟ್‌ನ ಸಿನಿಮಾದಲ್ಲಿ ಇಲ್ಲಿಯವರೆಗೆ ನಟಿಸಿರಲಿಲ್ಲ. ಜತೆಗೆ ,ನಾನಿಯ ಕರಿಯರ್‌ನಲ್ಲಿಯೇ 100 ಕೋಟಿ ರೂಪಾಯಿ ದಾಟಿದ ಎರಡನೇ ಸಿನಿಮಾವಾಗಿದೆ. ಈ ಹಿಂದಿನ ದಸರಾ ಸಿನಿಮಾದ ಗಳಿಕೆಯೂ 100 ಕೋಟಿ ರೂಪಾಯಿ ದಾಟಿತ್ತು.
ಸರಿಪೋಧಾ ಶನಿವಾರಂ ಸಿನಿಮಾದ ಒಟಿಟಿ ಬಿಡುಗಡೆ ಸಮಯದಲ್ಲಿಯೇ ಈ ಚಿತ್ರದ ಒರಿಜಿನಲ್ ಸೌಂಡ್ ಟ್ರ್ಯಾಕ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಜೇಕ್ಸ್ ಬಿಜೋಯ್ ಕಂಪೋಸ್ ಮಾಡಿರುವ ಈ ಸೌಂಡ್ ಟ್ರ್ಯಾಕ್ ಪ್ರೇಕ್ಷಕರನ್ನು ಸೆಳೆದಿತ್ತು. ವಿಶೇಷವಾಗಿ ಚಿತ್ರದ ಭಾವನಾತ್ಮಕ ಮತ್ತು ಥ್ರಿಲ್ಲಿಂಗ್ ದೃಶ್ಯಗಳ ಸಮಯದಲ್ಲಿ ಹೃದಯ ಟಚ್ ಮಾಡಿತ್ತು.
ಕನ್ನಡದಲ್ಲೂ ನೋಡಿ ಸರಿಪೋಧಾ ಶನಿವಾರಂ
ನಾನಿ ನಟನೆಯ ಈ ಸಿನಿಮಾ ಕನ್ನಡದಲ್ಲೂ ಡಬ್ಬಿಂಗ್ ಆಗಿ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡ ಭಾಷೆ ಆಯ್ಕೆ ಮಾಡಿಕೊಂಡು ಕನ್ನಡಿಗರು ಈ ಸಿನಿಮಾ ನೋಡಬಹುದು.