Stree 2 OTT release: ಬ್ಲಾಕ್‌ಬಸ್ಟರ್ ಸಿನಿಮಾ ಸ್ತ್ರೀ 2 ಒಟಿಟಿಯಲ್ಲಿ ಬಿಡುಗಡೆ ಯಾವಾಗ? ಶ್ರದ್ಧಾ ಕಪೂರ್, ರಾಜ್‌ಕುಮಾರ್ ರಾವ್ ಚಿತ್ರ
Stree 2 OTT release Date and platform: ಭಾರತದ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂಪಾಯಿಗಿಂತಲೂ ಹೆಚ್ಚು ಬಾಚಿಕೊಂಡಿರುವ ಸ್ತ್ರೀ 2 ಸಿನಿಮಾವು ಸದ್ಯದಲ್ಲಿಯೇ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಅಮೆಜಾನ್ ಪ್ರೈಮ್ ವಿಡಿಯೋ ಸ್ತ್ರೀ 2 ಒಟಿಟಿ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ.
Stree 2 OTT release Date: ಚಿತ್ರಮಂದಿರಗಳಲ್ಲಿ ಕಳೆದ ಕೆಲವು ವಾರಗಳಿಂದ ಸ್ತ್ರೀ 2 ಎಂಬ ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಕೋಟ್ಯಂತರ ರೂಪಾಯಿ ಬಾಚಿಕೊಳ್ಳುತ್ತಿದೆ. ಹಾಸ್ಯ ಮಿಶ್ರಿತ ಈ ಹಾರರ್ ಸಿನಿಮಾದ ಕುರಿತು ಎಲ್ಲೆಡೆ ಸಕಾರಾತ್ಮಕ ವಿಮರ್ಶೆಗಳು ಕೇಳಿಬಂದಿವೆ. ರಾಜ್‌ಕುಮಾರ್ ರಾವ್, ಶ್ರದ್ಧಾ ಕಪೂರ್, ಅಭಿಷೇಕ್ ಬ್ಯಾನರ್ಜಿ ಮತ್ತು ಅಪರ್ಷಕ್ತಿ ಖುರಾನಾ ನಟಿಸಿರುವ ಸಿನಿಮಾ ಯಾವಾಗ ಒಟಿಟಿಗೆ ಆಗಮಿಸಲಿದೆ? ಯಾವಾಗ ಈ ಸಿನಿಮಾವನ್ನು ಮನೆಯಲ್ಲಿಯೇ ಕುಳಿತು ನೋಡಬಹುದು ಎಂಬ ಪ್ರಶ್ನೆ ಒಟಿಟಿ ವೀಕ್ಷಕರನ್ನು ಕಾಡುತ್ತಿದೆ.
ಕಳೆದ 18 ದಿನಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 502 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಸಿನಿಮಾದ ಒಟಿಟಿ ಬಿಡುಗಡೆ ಕುರಿತು ಅಪ್‌ಡೇಟ್ ಬಂದಿದೆ. ಅಮೆಜಾನ್ ಪ್ರೈಮ್ ವಿಡಿಯೋ ಈ ಸಿನಿಮಾದ ಒಟಿಟಿ ಹಕ್ಕುಗಳನ್ನು ಬಾಚಿಕೊಂಡಿದೆ ಎಂದು ವರದಿಗಳು ತಿಳಿಸಿವೆ. ಆದರೆ, ಒಟಿಟಿಯಲ್ಲಿ ಯಾವ ದಿನಾಂಕದಂದು ಬಿಡುಗಡೆ ಮಾಡಲಾಗುವುದು ಎಂಬ ಅಪ್‌ಡೇಟ್ ದೊರಕಿಲ್ಲ. ಚಿತ್ರಮಂದಿರಗಳಲ್ಲಿ ಈಗಲೂ ಸಾಕಷ್ಟು ಜನರು ಈ ಸಿನಿಮಾ ನೋಡುತ್ತಿದ್ದಾರೆ. ಥಿಯೇಟರ್‌ಗಳಲ್ಲಿ ಕಲೆಕ್ಷನ್ ಕಡಿಮೆಯಾದ ಬಳಿಕ ಒಟಿಟಿಯಲ್ಲಿ ಪ್ರಸಾರಗೊಳ್ಳುವ ಸೂಚನೆಯಿದೆ. ಈ ಸಿನಿಮಾ ಸೆಪ್ಟೆಂಬರ್ ತಿಂಗಳ ಕೊನೆಗೆ ಅಥವಾ ಅಕ್ಟೋಬರ್ ಆರಂಭದಲ್ಲಿ ಒಟಿಟಿಯಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ.
ಮನೆಯಲ್ಲೇ ಕುಳಿತು ಹಾಸ್ಯ ಮತ್ತು ಹಾರರ್ ಸಿನಿಮಾ ನೋಡಲು ಬಯಸಿದರೆ ನಿಮಗೆ ಸ್ತ್ರೀ 2 ಇಷ್ಟವಾಗಬಹುದು. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ಸಿನಿಮಾ ಪ್ರಸಾರಗೊಳ್ಳಲಿದೆ.
ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಹಲವು ಸಿನಿಮಾಗಳು ಬಿಡುಗಡೆಯಾಗಿದ್ದವು. ಈ ಸಂದರ್ಭದಲ್ಲಿ ಶ್ರದ್ಧಾ ಕಪೂರ್ ಮತ್ತು ರಾಜ್ ಕುಮಾರ್ ರಾವ್ ಅಭಿನಯದ ಸ್ತ್ರೀ 2 ಚಿತ್ರ ಬಿಡುಗಡೆಯಾಗಿತ್ತು. ದಿನದಿಂದ ದಿನಕ್ಕೆ ಈ ಚಿತ್ರದ ಕಲೆಕ್ಷನ್ ಹೆಚ್ಚಾಗಿತ್ತು. ತಂಗಲಾನ್‌ನಂತಹ ಸಿನಿಮಾಗಳ ಗಳಿಕೆಯನ್ನು ಮೀರಿಸಿ ಸ್ತ್ರೀ 2 ಕಲೆಕ್ಷನ್ ಮಾಡಿತ್ತು. ಕನ್ನಡದಲ್ಲಿ ಅದೇ ಸಮಯದಲ್ಲಿ ಕೃಷ್ಣಂ ಪ್ರಣಯ ಸಖಿ ಸಿನಿಮಾ ಬಿಡುಗಡೆಯಾಗಿತ್ತು. ಕೇವಲ ಐದು ದಿನಗಳಲ್ಲಿ ಸ್ತ್ರೀ 2 ಸಿನಿಮಾ 228 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.
ಕೆಲವು ವರ್ಷಗಳ ಹಿಂದೆ ಬಾಲಿವುಡ್‌ನಲ್ಲಿ ಸ್ತ್ರೀ ಎಂಬ ಸಿನಿಮಾ ರಿಲೀಸ್ ಆಗಿತ್ತು. ಅದರ ಮುಂದುವರೆದ ಭಾಗವಾಗಿ ಸ್ತ್ರೀ 2 ಕೆಲವು ದಿನಗಳ ಹಿಂದೆ ರಿಲೀಸ್ ಆಗಿದೆ. ವಿಕ್ಕಿ ಟೈಲರ್ ಮತ್ತು ಸ್ನೇಹಿತರ ಸುತ್ತ ಈ ಸಿನಿಮಾದ ಕಥೆಯಿದೆ. ರಾಜ್‌ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಅಭಿಷೇಕ್ ಬ್ಯಾನರ್ಜಿ, ಅಪರ್ಶಕ್ತಿ ಖುರಾನ ಚಿತ್ರದಲ್ಲಿ ನಟಿಸಿದ್ದಾರೆ.