OTT Movie Review: ಕಿಡಾ ಸಿನಿಮಾ ನೋಡಿದ್ದೀರಾ? ಹಬ್ಬಕ್ಕೆ ಹೊಸ ಬಟ್ಟೆ ಬೇಕು ತಾತ, ಮೊಮ್ಮಗನ ಆಸೆ ಈಡೇರಿಸಲು ಮಲ್ಲಯ್ಯನ ಪರದಾಟ
ಕನ್ನಡ ಸುದ್ದಿ  /  ಮನರಂಜನೆ  /  Ott Movie Review: ಕಿಡಾ ಸಿನಿಮಾ ನೋಡಿದ್ದೀರಾ? ಹಬ್ಬಕ್ಕೆ ಹೊಸ ಬಟ್ಟೆ ಬೇಕು ತಾತ, ಮೊಮ್ಮಗನ ಆಸೆ ಈಡೇರಿಸಲು ಮಲ್ಲಯ್ಯನ ಪರದಾಟ

OTT Movie Review: ಕಿಡಾ ಸಿನಿಮಾ ನೋಡಿದ್ದೀರಾ? ಹಬ್ಬಕ್ಕೆ ಹೊಸ ಬಟ್ಟೆ ಬೇಕು ತಾತ, ಮೊಮ್ಮಗನ ಆಸೆ ಈಡೇರಿಸಲು ಮಲ್ಲಯ್ಯನ ಪರದಾಟ

OTT Movie KIDA Review: ಒಟಿಟಿಯಲ್ಲಿ ಫೀಲ್‌ ಗುಡ್‌ ಅಥವಾ ಖುಷಿ ನೀಡುವ ಸಿನಿಮಾ ನೋಡಲು ಬಯಸುವವರು ಕಿಡಾ ಎಂಬ ತಮಿಳು ಸಿನಿಮಾ ನೋಡಬಹುದು. ತನ್ನ ಪ್ರೀತಿಯ ಮೊಮ್ಮಗನಿಗೆ ದೀಪಾವಳಿಗೆ ದುಬಾರಿ ಹೊಸ ಬಟ್ಟೆ ಖರೀದಿಸಬೇಕೆಂದು ಆಡು ಮಾರಾಟ ಮಾಡಲು ಪ್ರಯತ್ನಿಸುವ ತಾತನೊಬ್ಬನ ಕಥೆ ಹೃದಯ ತಟ್ಟುತ್ತದೆ.

ಒಟಿಟಿ ಸಿನಿಮಾ- ಕಿಡಾ
ಒಟಿಟಿ ಸಿನಿಮಾ- ಕಿಡಾ

ತಮಿಳುನಾಡಿನ ಹಳ್ಳಿಯೊಂದರಲ್ಲಿ ಬಡ ಕುಟುಂಬ ಇರುತ್ತದೆ. ಬಡತನವೆಂದರೆ ಕಡುಬಡತನ. ದೀಪಾವಳಿ ಹಬ್ಬವನ್ನೂ ಸಂಭ್ರಮದಲ್ಲಿ ಆಚರಿಸಲು ಹಣ ಇರದೆ ಇರುವಂತಹ ಕಷ್ಟ. ಇದೇ ಸಮಯದಲ್ಲಿ ದೀಪಾವಳಿ ಹಬ್ಬದಂದು ಮೊಮ್ಮಗನಿಗೆ ಹೊಸ ಬಟ್ಟೆ ನೀಡುವ ವಾಗ್ದಾನ ತಾತಾ ನೀಡುತ್ತಾನೆ. ಆ ತಾತಾನ ಬಳಿಯಲ್ಲಿ ಒಂದು ಆಡು ಇರುತ್ತದೆ. ಆ ಆಡಿಗೂ ಮೊಮ್ಮಗನಿಗೂ ತುಂಬಾ ಆಪ್ತತೆ. ಮೊಮ್ಮಗ ಕರೆದರೆ ಸಾಕು, ಎಷ್ಟೇ ದೂರದಲ್ಲಿದ್ದರೂ ಈ ಆಡು ಓಡೋಡಿ ಬರುತ್ತದೆ. ಇಂತಹ ಪ್ರೀತಿಯ ಆಡನ್ನು ಮೊಮ್ಮಗನ ದುಬಾರಿ ಹೊಸ ಬಟ್ಟೆ ಖರೀದಿಸುವ ಸಲುವಾಗಿ ಮಾರಲು ತಾತಾ ಪ್ರಯತ್ನಿಸುತ್ತಾನೆ.

ಕೆಲವೊಂದು ಸಿನಿಮಾಗಳೇ ಹಾಗೆ. ಅವುಗಳಲ್ಲಿ ಹಲವು ದೋಷಗಳು, ತೊಂದರೆಗಳು ಇರಲಿ. ಆದರೆ, ಹೃದಯಕ್ಕೆ ಆಪ್ತವಾಗಿ ಬಿಡುತ್ತದೆ. ಕಿಡಾ ಈ ಸಾಲಿಗೆ ಸೇರುವ ಸಿನಿಮಾ. ಈ ಸಿನಿಮಾ 2022ರಲ್ಲಿ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ ಆಫ್‌ ಇಂಡಿಯಾದಲ್ಲಿ ಪ್ರದರ್ಶನಗೊಂಡಿತ್ತು. ಈ ಸಿನಿಮಾದಲ್ಲಿ ವಿಷಯ ಕಡಿಮೆ ಇದೆ. ಆದರೂ, ತುಂಬಾ ಇಷ್ಟವಾಗಿ ಬಿಡುತ್ತದೆ. ಎಂದಾದರೂ ಒಂದಿಷ್ಟು ಬಿಡುವಿದೆ, ಯಾವುದಾದರೂ ಕೂಲ್‌ ಅಥವಾ ಫೀಲ್‌ ಗುಡ್‌ ಮೂವಿ ನೋಡಬೇಕೆನಿಸಿದರೆ ಅಮೆಜಾನ್‌ ಪ್ರೈಮ್‌ನಲ್ಲಿ KIDA ಎಂದು ಹುಡುಕಿ ನೋಡಬಹುದು.

ಬಡತನದಲ್ಲಿರುವಾಗ ದೊಡ್ಡ ಕನಸು, ಆಸೆ ಇರಬಾರದೆಂದು ಇಲ್ಲ. ತನ್ನ ಕುಟುಂಬದ ಸಾಮರ್ಥ್ಯವನ್ನು ಮೀರಿದ ಯಾವುದಾದರೂ ವಿಷಯ, ವಸ್ತುವನ್ನು ಮಕ್ಕಳು ಬಯಸುವುದು ಸಹಜ. ಬಾಲ್ಯದಲ್ಲಿ ನಾನೂ ಕೂಡ ಸ್ಕೂಲ್‌ ಡೇಗೆ ಹೊಸ ಬಟ್ಟೆಗೆ ಇದೇ ರೀತಿ ಹಟ ಹಿಡಿದಿರುವುದು ಈ ಸಿನಿಮಾ ನೋಡಿದಾಗ ನೆನಪಾಯ್ತು. ಈ ಸಿನಿಮಾದಲ್ಲಿ ಮೊಮ್ಮಗನಿಗೆ ದುಬಾರಿ ಹೊಸ ಬಟ್ಟೆ ಖರೀದಿಸಬೇಕೆಂಬ ಆಸೆಯಾಗಿದೆ. ಈ ದೀಪಾವಳಿಗೆ ನನಗೆ ಈ ಬಟ್ಟೆ ಬೇಕು ಎಂದಿದ್ದಾನೆ. ಅದನ್ನು ಈಡೇರಿಸುವುದಾಗಿ ಭರವಸೆ ನೀಡಿರುವ ತಾತ ಹಣ ಹೊಂದಿಸಲು ಕಷ್ಟಪಡುತ್ತಾನೆ.

ಈ ಸಿನಿಮಾದಲ್ಲಿ ಕೆಲವು ವಿಭಿನ್ನ ಪಾತ್ರಗಳಿವೆ. ಗ್ರಾಮೀಣ ಬಡವರ ಕಷ್ಟಗಳಿಗೂ ಕನ್ನಡಿ ಹಿಡಿಯುವ ಪ್ರಯತ್ನ ಇದೆ. ಹಣವಂತರೂ ಸಂಭ್ರಮದಿಂದ ದೀಪಾವಳಿ ಆಚರಿಸುವಾಗ ಪಟಾಕಿ, ಬಟ್ಟೆಗೂ ಹಣ ಹೊಂದಿಸಲು ಕಷ್ಟಪಡುವ ಕುಟುಂಬಗಳ ವಾಸ್ತವವನ್ನೂ ಚಿತ್ರ ಬಿಚ್ಚಿಡುತ್ತದೆ.

ಈ ಚಿತ್ರದಲ್ಲಿ ಗ್ರಾಮದ ಹಿರಿಯ ಚೆಲ್ಲಯ್ಯನಾಗಿ ದಿವಂಗತ ಪೂ ರಾಮು ಮನೋಜ್ಞವಾಗಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆಯಾದ ಬಳಿಕ ಜೂನ್‌ ತಿಂಗಳಲ್ಲಿ ಇವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಚೆಲ್ಲಯ್ಯನಿಗೆ ಕತೀರ್‌ ಎಂಬ ಮೊಮ್ಮಗ ಇರುತ್ತಾನೆ. ಈ ಮೊಮ್ಮಗನಿಗೆ ಹೊಸ ಬಟ್ಟೆ ಖರೀದಿಸಲು ಹಣ ಹೊಂದಿಸಲು ತುಂಬಾ ಪ್ರಯತ್ನ ಮಾಡುತ್ತಾನೆ. ಆಸ್ತಿ ಮಾರಾಟ ಮಾಡಲು ಕೂಡ ಮುಂದಾಗುತ್ತಾನೆ. ಕೊನೆಗೆ ಮನೆಯಲ್ಲಿರುವ ಮೊಮ್ಮಗನ ಪ್ರೀತಿಯ ಆಡನ್ನೇ ಮಾರಾಟ ಮಾಡಲು ಮುಂದಾಗುತ್ತಾನೆ. ಈ ಆಡು, ಹೊಸ ಬಟ್ಟೆಯ ನಡುವೆ ಪ್ರೇಮಿಗಳಿಬ್ಬರು ದೀಪಾವಳಿ ಹಿಂದಿನ ದಿನ ಓಡಿ ಹೋಗಿ ಮದುವೆಯಾಗಲು ಪ್ರಯತ್ನಿಸುವ ಉಪಕಥೆಯೂ ಇದೆ. ಖಾಲಿ ವೆಂಕಟ್‌ ಎಂಬಾತ ದೀಪಾವಳಿ ಸಮಯದಲ್ಲಿ ಹೊಸ ಮಾಂಸದಂಗಡಿ ಆರಂಭಿಸುವ ಪ್ರಯತ್ನವೂ ಚಿತ್ರದಲ್ಲಿದೆ.

ನಿರ್ದೇಶಕ ಆರ್‌ ವೆಂಕಟ್‌ ಅವರು ಸರಳ ಕಥೆಯನ್ನು ಮನೋಜ್ಞವಾಗಿ, ಹೃದಯಕ್ಕೆ ಮುಟ್ಟುವಂತೆ ತೆರೆಗೆ ತಂದಿದ್ದಾರೆ. ಈ ಚಿತ್ರದಲ್ಲಿ ಪೋ ರಾಮು ಅವರು ಚಿತ್ರವನ್ನು ಆವರಿಸಿದ್ದು, ತನ್ನ ತಣ್ಣನೆಯ ನಟನೆಯಿಂದ ಬೆರಗು ಮೂಡಿಸುತ್ತಾರೆ. ಮೊಮ್ಮಗನಾಗಿ ಮಾಸ್ಟರ್‌ ದೀಪಂ ಕೂಡ ಇಷ್ಟವಾಗುತ್ತಾನೆ. ಸಿನಿಮಾದ ಥೀಮ್‌ಗೆ ತಕ್ಕಂತೆ ಹಿನ್ನೆಲೆ ಸಂಗೀತವೂ ಇದೆ. ಚಿತ್ರದ ಭಾವನೆಗೆ ತಕ್ಕಂತೆ ಜಯಪ್ರಕಾಶ್‌ ಕ್ಯಾಮೆರಾ ಹಿಡಿದಿದ್ದಾರೆ. ಒಟ್ಟಾರೆ ಒಂದು ಸಿಂಪಲ್‌ ಆದರೆ, ಹೃದಯಕ್ಕೆ ತಟ್ಟುವಂತಹ ಆಪ್ತ ಸಿನಿಮಾ ನೋಡಲು ಬಯಸುವವರು ಕಿಡಾ ನೋಡಬಹುದು.

Whats_app_banner