Lubber Pandhu on OTT: ಗಲ್ಲಿ ಕ್ರಿಕೆಟ್ ಕಥೆಯ ಲಬ್ಬರ್ ಪಾಂಡು ಸಿನಿಮಾ ಒಟಿಟಿಗೆ ಯಾವಾಗ? ಕೂಸು ಹುಟ್ಟುವ ಮುನ್ನವೇ ಕುಲಾವಿ
Lubber Pandhu on OTT: ಕಾಲಿವುಡ್‌ನ ಬಹುನಿರೀಕ್ಷಿತ ಲಬ್ಬರ್ ಪಾಂಡು ಸಿನಿಮಾ ಚಿತ್ರಮಂದಿರದಲ್ಲಿ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಇದೇ ಸಂದರ್ಭದಲ್ಲಿ ಕ್ರಿಕೆಟ್ ಹಿನ್ನೆಲೆಯ ಕಥೆಯನ್ನು ಹೊಂದಿರುವ ಲಬ್ಬರ್ ಪಾಂಡು ಸಿನಿಮಾದ ಒಟಿಟಿ ಬಿಡುಗಡೆ ಅಪ್‌ಡೇಟ್ ಕೂಡ ದೊರಕಿದೆ.
Lubber Pandhu Movie: ಇದು ತಮಿಳು ಸ್ಪೋರ್ಟ್ಸ್ ಕಾಮಿಡಿ ಸಿನಿಮಾ. ತಮಿಳರಸನ್ ಪಚಮುತ್ತು ನಿರ್ದೇಶನ ಮತ್ತು ರಚನೆಯ ಈ ಸಿನಿಮಾದಲ್ಲಿ ಹರೀಶ್ ಕಲ್ಯಾಣ್ ಮತ್ತು ಅಟ್ಟಕಾತಿ ದಿನೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಧನಾದಿ ಫೇಮ್‌ನ ಸಂಜನಾ, ಸ್ವಾಸಿಕಾ ವಿಜಯ್, ಬಾಲ ಸರವಣನ್, ಕಾಳಿ ವೆಂಕಟ್ ಮುಂತಾದವರೂ ತಾರಾಗಣದಲ್ಲಿದ್ದಾರೆ. ಈ ತಮಿಳು ಸಿನಿಮಾ ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲೆಸಿದರಂತೆ ಎಂಬಂತೆ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮುನ್ನವೇ ಒಟಿಟಿ ಬಿಡುಗಡೆ ಕುರಿತು ಅಪ್‌ಡೇಟ್ ದೊರಕಿದೆ.
ಲಬ್ಬರ್ ಪಾಂಡು ಒಟಿಟಿ ಸ್ಟ್ರೀಮಿಂಗ್ ವಿವರ
ತಮಿಳು ಚಿತ್ರರಂಗದ ಮುಂಬರುವ ಸಿನಿಮಾ ಲಬ್ಬರ್ ಸಿಂಗ್‌ನ ಒಟಿಟಿ ಹಕ್ಕುಗಳನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಪಡೆದುಕೊಂಡಿದೆ. ಈ ಸಿನಿಮಾವು ಸೆಪ್ಟೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಇದು ಕ್ರಿಕೆಟ್ ಆಧರಿತ ಸಿನಿಮಾವಾಗಿದೆ. ಬ್ಲೂಸ್ಟಾರ್, ಲಾಲ್ ಸಲಾಮ್ ಬಳಿಕ ಲಬ್ಬರ್ ಸಿಂಗ್ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಇದು ಕೂಡ ಗಲ್ಲಿ ಕ್ರಿಕೆಟ್ ಕಥೆಯನ್ನು ಹೊಂದಿದೆ. ಈ ಸಿನಿಮಾದ ಟ್ರೇಲರ್ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ.
ಈ ಸಿನಿಮಾ ಬಿಡುಗಡೆ ದಿನಾಂಕವು ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಹೊರಬೀಳಲಿದೆ. ಈ ಸಿನಿಮಾಕ್ಕೆ ಸಿಯನ್ ರೋಲ್ಡನ್ ಸಂಗೀತ ನಿರ್ದೇಶನವಿದೆ. ದಿನೇಶ್ ಪುರುಷೋತ್ತಮ್ಮನ್ ಕ್ಯಾಮೆರಾ ಮತ್ತು ಜಿ ಮದನ್ ಸಂಕಲನವಿದೆ. ಈ ಸಿನಿಮಾವನ್ನು ದಿವಂಗತ ನಟ, ರಾಜಕಾರಣಿ ವಿಜಯಕಾಂತ್‌ಗೆ ಸಮರ್ಪಿಸುವುದಾಗಿ ಇತ್ತೀಚೆಗೆ ನಿರ್ದೇಶಕರು ಹೇಳಿದ್ದರು.
ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿರುವ ತಮಿಳು ಸಿನಿಮಾಗಳು
ತಮಿಳು ಸಿನಿಮಾಗಳನ್ನು ಒಟಿಟಿಯಲ್ಲಿ ನೋಡಲು ಬಯಸುವವರಿಗೆ ಹಲವು ವೆಬ್ ಸರಣಿಗಳು ಇವೆ. ಉಪ್ಪು ಪುಳಿ ಖಾರಂ ಬಳಿಕ ಚಟ್ನಿ ಸಾಂಬಾರ್ ಮತ್ತು ಮೈಪರ್ಫೆಕ್ಟ್ ಹಸ್ಬೆಂಡ್ ಕೂಡ ಸ್ಟ್ರೀಮಿಂಗ್ ಆಗುತ್ತಿವೆ. ಈ ವೆಬ್ ಸರಣಿಗಳು ಕನ್ನಡದಲ್ಲೂ ಲಭ್ಯ ಇವೆ.
ಒಟಿಟಿಯಲ್ಲಿ ಕನ್ನಡ ಸಿನಿಮಾಗಳು
ಗೌಡ್ರು ಹೋಟೆಲ್: ಮಲಯಾಳಂನ ಉಸ್ತಾದ್ ಹೋಟೆಲ್‌ನ ಕನ್ನಡ ರಿಮೇಕ್ ಗೌಡ್ರು ಹೋಟೆಲ್ ಸಿನಿಮಾ ಇದೇ ಆಗಸ್ಟ್ 30ರಿಂದ ನಮ್ಮ ಫ್ಲಿಕ್ಸ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ಸಿನಿಮಾದಲ್ಲಿ ಪ್ರಕಾಶ್ ರಾಜ್, ಅನಂತ್ ನಾಗ್, ವೇದಿಕಾ ಮುಂತಾದವರು ನಟಿಸಿದ್ದಾರೆ. ಗೌಡ್ರು ಹೋಟೆಲ್ ಸಿನಿಮಾದಲ್ಲಿ ರಿಚಿಯಾಗಿ ರಚನ್ ಚಂದ್ರ, ರಿಷಿಯ ಗೆಳತಿಯಾಗಿ ವೇದಿಕಾ, ರಿಷಿಯ ತಾತನಾಗಿ ಪ್ರಕಾಶ್ ರಾಜ್ ನಟಿಸಿದ್ದಾರೆ. 2012ರಲ್ಲಿ ಮಲಯಾಳಂನಲ್ಲಿ ಉಸ್ತಾದ್ ಹೋಟೆಲ್ ಬಿಡುಗಡೆಯಾಗಿತ್ತು. ಇದನ್ನೇ ಕನ್ನಡಕ್ಕೆ ತರಲಾಗಿದೆ. ಮಲಯಾಳಂ ಸಿನಿಮಾಕ್ಕಿಂತ ಗ್ರೌಡ್ರು ಹೋಟೆಲ್ ಚಿಕ್ಕದಾಗಿದೆ. ಮಲಯಾಳಂನಲ್ಲಿ ಬಿರಿಯಾನಿ ಇದ್ದರೆ, ಈ ಚಿತ್ರದಲ್ಲಿ ಮುದ್ದೆ ಇದೆ. ಒಟಿಟಿಯಲ್ಲಿ ಕನ್ನಡ ಸಿನಿಮಾ ನೋಡಲು ಬಯಸುವವರು ಗ್ರೌಡ್ರು ಹೋಟೆಲ್‌ನ ಮುದ್ದೆ ಸವಿಯನ್ನು ಆನಂದಿಸಬಹುದು.