ಕನ್ನಡ ಸುದ್ದಿ  /  ಮನರಂಜನೆ  /  Article 370 Ott: ಒಟಿಟಿಯಲ್ಲಿದೆ ಯಾಮಿ ಗೌತಮ್‌ ನಟನೆಯ ಮಸ್ಟ್‌ ವಾಚ್‌ ಸಿನಿಮಾ, ಆರ್ಟಿಕಲ್‌ 370 ಏಕೆ ನೋಡಬೇಕು? ಇಲ್ಲಿದೆ 5 ಕಾರಣಗಳು

Article 370 ott: ಒಟಿಟಿಯಲ್ಲಿದೆ ಯಾಮಿ ಗೌತಮ್‌ ನಟನೆಯ ಮಸ್ಟ್‌ ವಾಚ್‌ ಸಿನಿಮಾ, ಆರ್ಟಿಕಲ್‌ 370 ಏಕೆ ನೋಡಬೇಕು? ಇಲ್ಲಿದೆ 5 ಕಾರಣಗಳು

ಆರ್ಟಿಕಲ್‌ 370 ಸಿನಿಮಾ ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಈ ಸಿನಿಮಾ ನೋಡಬೇಕೆ? ಇದು ಮಸ್ಟ್‌ ವಾಚ್‌ ಸಿನಿಮಾವೇ? ಇತ್ಯಾದಿ ಪ್ರಶ್ನೆಗಳು ಸಾಕಷ್ಟು ಜನರಲ್ಲಿದೆ. ಯಾಮಿ ಗೌತಮ್‌ ಮತ್ತು ಪ್ರಿಯಾಮಣಿ ನಟನೆಯ ಈ ಸಿನಿಮಾದ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಆರ್ಟಿಕಲ್‌ 370 ಏಕೆ ನೋಡಬೇಕು? ಇಲ್ಲಿದೆ 5 ಕಾರಣಗಳು
ಆರ್ಟಿಕಲ್‌ 370 ಏಕೆ ನೋಡಬೇಕು? ಇಲ್ಲಿದೆ 5 ಕಾರಣಗಳು

ಬೆಂಗಳೂರು: ಸಾಕಷ್ಟು ಸಿನಿಮಾ ಪ್ರೇಕ್ಷಕರ ಪ್ರಕಾರ ಆರ್ಟಿಕಲ್‌ 370 ಮಸ್ಟ್‌ ವಾಚ್‌ ಸಿನಿಮಾ. ದೇಶಭಕ್ತಿ, ರಾಜಕೀಯ, ಭ್ರಷ್ಟಾಚಾರ, ರಹಸ್ಯ ಕಾರ್ಯಾಚರಣೆ ಇತ್ಯಾದಿ ವಿಷಯಗಳ ಜತೆಗೆ ಕಲಾವಿದರ ಅತ್ಯುತ್ತಮ, ಅಮೋಘ ನಟನೆಯನ್ನು ಉಣಬಡಿಸುವಂತಹ ಸಿನಿಮಾ ಇದಾಗಿದೆ ಎಂದು ಸಾಕಷ್ಟು ಪ್ರೇಕ್ಷಕರು ಸೋಷಿಯಲ್‌ ಮೀಡಿಯಾದಲ್ಲಿ ರಿವ್ಯೂ ಬರೆದಿದ್ದಾರೆ. ಝೂನಿ ಹಸ್ಕರ್‌ (ಯಾಮಿ ಗೌತಮ್‌) ಎಂಬ ಪ್ರಾಮಾಣಿಕ, ತೀಕ್ಷ್ಣ ಫೀಲ್ಡ್‌ ಏಜೆಂಟ್‌ ತನ್ನ ತಂಡದ ಜತೆ ನಡೆಸುವ ರಹಸ್ಯ ಕಾರ್ಯಾಚರಣೆಯ ಕುರಿತಾದ ಕಥೆಯನ್ನು ಹೊಂದಿದೆ. ಪ್ರಾಮಾಣಿಕ ಮತ್ತು ಸರಿಯಾದ ಕೆಲಸ ಮಾಡಿದರೂ ಸೀನಿಯರ್‌ ಸಹೋದ್ಯೋಗಿಗಳ ಕುತಂತ್ರದಿಂದ ಕಾರ್ಯಾಚರಣೆಯಿಂದ ಹೊರಗಿರುವ ಈಕೆಗೆ ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ವಿಶೇಷ ಹೊಣೆ ದೊರಕುತ್ತದೆ. ಟಾಪ್‌ ಸೀಕ್ರೆಟ್‌ ಮಿಷನ್‌ ತಂಡಕ್ಕೆ ಈಕೆ ಆಯ್ಕೆಯಾಗುತ್ತಾರೆ. ಭವಿಷ್ಯದಲ್ಲಿ ಆರ್ಟಿಕಲ್‌ 370 ತೆಗೆದುಹಾಕುವ ಪ್ರಕ್ರಿಯೆಗೆ ಇದು ನಾಂದಿಯಾಗುತ್ತದೆ. ಸದ್ಯ ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಈ ಸಿನಿಮಾ ಸ್ಟ್ರೀಮಿಂಗ್‌ ಆಗುತ್ತಿದೆ. 

ಟ್ರೆಂಡಿಂಗ್​ ಸುದ್ದಿ

ಆರ್ಟಿಕಲ್‌ 370 ಸಿನಿಮಾ ಏಕೆ ನೋಡಬೇಕು?

1. ಮೊದಲನೆಯದಾಗಿ ಭಾರತ ಸರಕಾರವು ಆರ್ಟಿಕಲ್‌ 370 ಅನ್ನು ಏಕೆ ತೆಗೆದುಹಾಕಿತು ಎಂದು ತಿಳಿಯುವ ಸಲುವಾಗಿ ಈ ಸಿನಿಮಾ ನೋಡಬೇಕು. ಆರ್ಟಿಕಲ್‌ 370 ಅನ್ನು ಏಕೆ ರದ್ದು ಮಾಡಬೇಕಾಯಿತು, ಅದಕ್ಕೆ ಕಾರಣವಾದ ಘಟನೆಗಳು ಯಾವುವು ಇತ್ಯಾದಿ ವಿಷಯಗಳನ್ನು ಸುಲಭವಾಗಿ ಅರ್ಥವಾಗುವಂತೆ ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಆರ್ಟಿಕಲ್‌ 370 ಕುರಿತು ಸರಿಯಾದ ಮಾಹಿತಿ ಹೊಂದಿಲ್ಲದೆ ಇರುವವರಿಗೆ "ಶಿಕ್ಷಣ" ನೀಡುವಂತಹ ಕೆಲಸವನ್ನೂ ಈ ಚಿತ್ರ ಮಾಡುತ್ತದೆ. ಸುಮಾರು 2 ಗಂಟೆ 30 ನಿಮಿಷಗಳ ಈ ಸಿನಿಮಾವು ಕಾನೂನು ಮತ್ತು ರಾಜಕೀಯವನ್ನು ಸರಳವಾಗಿ ಅರ್ಥ ಮಾಡಿಸುತ್ತದೆ.

2. ಈ ಚಿತ್ರದಲ್ಲಿ ಯಾಮಿ ಗೌತಮ್‌ ಅದ್ಭುತವಾಗಿ ನಟಿಸಿದ್ದಾರೆ. ಅವರ ಕರಿಯರ್‌ನಲ್ಲಿಯೇ ಅಮೋಘ ನಟನೆ ಇದೆಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿ ಈ ಸಿನಿಮಾವನ್ನು ತಪ್ಪದೇ ನೋಡಬಹುದು. ಯಾಮಿ ಗೌತಮ್‌ ತನ್ನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದಾರೆ. ಆಕೆಯ ಆಕ್ಷನ್‌ ಮತ್ತು ಪವರ್‌ಫುಲ್‌ ಸಂಭಾಷಣೆಯೂ ಗಮನ ಸೆಳೆಯುತ್ತದೆ. ಸಮವಸ್ತ್ರದಲ್ಲಿ ಸಹವರ್ತಿ ಪುರುಷರಿಗೆ ಸರಿಸಮಾನಾಗಿ ನಿಲ್ಲುತ್ತಾಳೆ. ದಿಟ್ಟ ಹೆಣ್ಣಾಗಿ ಗಮನ ಸೆಳೆಯುತ್ತಾಳೆ.

3. ಈ ಸಿನಿಮಾ ಎಲ್ಲೂ ಬೋರ್‌ ಹೊಡೆಸುವುದಿಲ್ಲ. ಬಲವಂತವಾಗಿ ದೇಶಭಕ್ತಿಯ ಬೋಧನೆ ಮಾಡುವುದಿಲ್ಲ. ಇದು ಕಂಟೆಂಟ್‌ ಆಧರಿತ ಸಿನಿಮಾ. ರೊಮ್ಯಾಂಟಿಕ್‌ ಹಾಡುಗಳು, ಡ್ಯಾನ್ಸ್‌ಗಳು ಕಾಣಿಸುವುದಿಲ್ಲ.

4. ಆರ್ಟಿಕಲ್‌ 370 ಸಿನಿಮಾದಲ್ಲಿ ಹೃದಯ ಆದ್ರವಾಗಿಸುವ ಹಲವು ಅಂಶಗಳಿವೆ. ಇಂತಹ ಸಂಗತಿಗಳನ್ನು ನೋಡಲು ಮಿಸ್‌ ಮಾಡದೆ ಈ ಸಿನಿಮಾ ನೋಡಬಹುದು.

5. ಈ ಸಿನಿಮಾದ ಬರವಣಿಗೆ ಗಮನ ಸೆಳೆಯುತ್ತದೆ. ಚಿತ್ರಕಥೆ ಅದ್ಭುತ ಎನ್ನಬಹುದು. ಇದಕ್ಕಾಗಿ ಆದಿತ್ಯ ಧರ್, ಆದಿತ್ಯ ಸುಹಾಸ್ ಜಂಭಾಲೆ, ಅರ್ಜುನ್ ಧವನ್ ಮತ್ತು ಮೋನಾಲ್ ಥಾಕರ್‌ಗೆ ಥ್ಯಾಂಕ್ಸ್‌ ಹೇಳಬೇಕು. 370ನೇ ವಿಧಿ ರದ್ದುಗೊಳ್ಳುವ ತನಕ ಈ ಸಿನಿಮಾದ ಚಿತ್ರಕಥೆ ಬಿಗಿತಪ್ಪುವುದಿಲ್ಲ. ಶಿವಕುಮಾರ್ ವಿ.ಪಣಿಕ್ಕರ್ ಅವರ ಸಂಕಲನವೂ ಅತ್ಯುತ್ತಮವಾಗಿದೆ.

ಹೀರೋಗಳ ಸಿನಿಮಾಗಳೇ ಜಾಸ್ತಿ ಆಗಿರುವ ಈ ಸಂದರ್ಭದಲ್ಲಿ ನಾಯಕಿ ಪ್ರದಾನ ಅತ್ಯುತ್ತಮ ಸಿನಿಮಾ ಎಂಬ ಪ್ರಶಂಸೆಗೆ ಆರ್ಟಿಕಲ್‌ 370 ಪಾತ್ರವಾಗಿದೆ. ಇಂತಹ ಸಿನಿಮಾಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ನೋಡಬಹುದು.

ಆರ್ಟಿಕಲ್‌ 370 ಸಿನಿಮಾದ ಕುರಿತು

ರಾಷ್ಟ್ರಪ್ರಶಸ್ತಿ ವಿಜೇತ ಆದಿತ್ಯ ಸುಹಾಸ್ ಜಂಬಾಳೆ ನಿರ್ದೇಶನದ ಈ ಸಿನಿಮಾದಲ್ಲಿ ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದನೆ ಮತ್ತು ಭ್ರಷ್ಟಾಚಾರದ ವಿಷಯವಿದೆ. ಆರ್ಟಿಕಲ್‌ 370 ರದ್ದತಿಗೆ ಕಾರಣವಾದ ಅಂಶಗಳ ಕುರಿತು ಈ ಸಿನಿಮಾ ಮಾತನಾಡುತ್ತದೆ. ಕಾಶ್ಮೀರ ಮಿಷನ್‌ಗಾಗಿ ಎನ್‌ಐಎಗೆ ಯಾಮಿ ನೇಮಕವಾಗುತ್ತಾರೆ. ಯಾಮಿ ಮಾತ್ರವಲ್ಲದೆ ಪ್ರಿಯಾಮಣಿ, ಅರುಣ್‌ ಗೋವಿಲ್‌ ಮತ್ತು ಕಿರಣ್‌ ಕರ್ಮಾರ್ಕರ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆಗಸ್ಟ್ 5, 2019 ರಂದು ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ನೀಡಿದ್ದ 370 ನೇ ವಿಧಿಯನ್ನು ರದ್ದುಗೊಳಿಸಿತು. ಕೇಂದ್ರ ಸರಕಾರ ಏಕೆ ಈ ವಿಧಿಯನ್ನು ರದ್ದುಗೊಳಿಸಿತು ಎಂದು ತಿಳಿಯಬಯಸುವವರು ತಪ್ಪದೇ ಒಟಿಟಿಯಲ್ಲಿ ಆರ್ಟಿಕಲ್‌ 370 ನೋಡಬಹುದು.

IPL_Entry_Point