Malaika Arora: ರಿಯಾಲಿಟಿ ಶೋನಲ್ಲಿ ಚುಂಬಕ ವರ್ತನೆ ತೋರಿದ ಬಾಲಕನಿಗೆ ಕ್ಲಾಸ್; ತನ್ನ ನಡೆಗೆ ಸಮರ್ಥನೆ ನೀಡಿದ ಮಲೈಕಾ ಅರೋರಾ
Malaika Arora: ಹಿಪ್ ಹೊಪ್ ಇಂಡಿಯಾ ಎಂಬ ರಿಯಾಲಿಟಿ ಶೋನಲ್ಲಿ ಮಲೈಕಾ ಅರೋರಾ 16 ವರ್ಷ ವಯಸ್ಸಿನ ಸ್ಪರ್ಧಿಗೆ ವೇದಿಕೆಯ ಮೇಲೆಯೇ ಎಲ್ಲರೆದರೂ ಬೈದಿದ್ದರು. ಆತನ ಅಸೂಕ್ಷ್ಮ ನಡವಳಿಕೆ, ಕೆಟ್ಟ ಸನ್ಹೆಯು ನಟಿಗೆ ಇರಿಸುಮುರಿಸು ತಂದಿತ್ತು.

Malaika Arora: ಅಮೆಜಾನ್ ಎಂಎಕ್ಸ್ ಪ್ಲೇಯರ್‌ನಲ್ಲಿ ನಡೆಯುವ ಹಿಪ್ ಹೊಪ್ ಇಂಡಿಯಾ ರಿಯಾಲಿಟಿ ಶೋನಲ್ಲಿ ಜಡ್ಜ್ ಸ್ಥಾನದಲ್ಲಿದ್ದ ಮಲೈಕಾಆ ಅರೋರಾ ಇತ್ತೀಚೆಗೆ 16 ವರ್ಷ ವಯಸ್ಸಿನ ಸ್ಪರ್ಧಿಗೆ ಬೈದಿದ್ದರು. ಈಕೆಯತ್ತ ಆ ಬಾಲಕ ಕೆಟ್ಟದ್ದಾಗಿ ಸನ್ಹೆ ತೋರಿದ್ದು ನಟಿಗೆ ಕೋಪ ತಂದಿತ್ತು. ವಿದ್ಯಾರ್ಥಿಯಾಗಿರುವ ನೀನು ನನಗೆ ಈ ರೀತಿ ಫ್ಲೈಯಿಂಗ್ ಕಿಸ್ ನೀಡುವುದು ಎಷ್ಟು ಸರಿ ಎಂದು ಅವರು ವೇದಿಕೆಯಲ್ಲಿದ್ದ ಸ್ಪರ್ಧಿಗೆ ಕ್ಲಾಸ್ ತೆಗೆದುಕೊಂಡಿದ್ದರು.
ಆ ಬಾಲಕನ ಪರ್ಫಾಮನ್ಸ್ ಮುಗಿದ ತಕ್ಷಣ "ದಯವಿಟ್ಟು ನಿನ್ನ ತಾಯಿಯ ನಂಬರ್ ಕೊಡು. ನೀನು 16 ವರ್ಷದ ಮಗು. ನೀನು ನನ್ನ ಕಡೆಗೆ ಹಾಗೆ ನೋಡಬಹುದೇ" ಎಂದು ಕೇಳಿದ್ದರು. ಉತ್ತರ ಪ್ರದೇಶದ ನವೀನ್ ಶಾ ಎಂಬ ಯುವ ಸ್ಪರ್ಧಿ ಈ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದ. ಆದರೆ, ಆತನ ಪರ್ಫಾಮೆನ್ಸ್ ಸಮಯದಲ್ಲಿ ಮಲೈಕಾ ಅರೋರಾರಿಗೆ ಮುಜುಗರ ಉಂಟಾಗಿತ್ತು. ಮಲ್ಲಿಕಾರಿಗೆ ಈತ ಫ್ಲೈಯಿಂಗ್ ಕಿಸ್ ನೀಡಿದ್ದ. ಜತೆಗೆ ತುಟಿ ಕಚ್ಚಿ ಅಸೂಕ್ಷ್ಮವಾಗಿ ನೋಡಿದ್ದನು. ಈ ರಿಯಾಲಿಟಿ ಶೋನ ಈ ನಿರ್ದಿಷ್ಟ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದರು. ಕೆಲವರು ಸ್ಪರ್ಧಿಯ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದರು.
ಇದೀಗ ಸುದ್ದಿ ಸಂಸ್ಥೆ ಎಎನ್‌ಐಗೆ ಮಲೈಕಾ ಅರೋರಾ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಇದೇ ಸಮಯದಲ್ಲಿ ಆ ಬಾಲಕನ ಪ್ರತಿಭೆಯನ್ನು ಹೊಗಳಿದ್ದಾರೆ. "ನನಗೆ ಆ ಕ್ಷಣದವರೆಗೆ ಆತನಿಗೆ ಬಯ್ಯಬೇಕೆಂದು, ಆತ ಮಾಡಿದ್ದು ತಪ್ಪು ಎಂದು ಹೇಳಬೇಕೆಂದಿರಲಿಲ್ಲ. ಆತನಿಗೆ ಎಲ್ಲರೆದರು ಬಯ್ಯಬೇಕೆಂದುಕೊಂಡಿರಲಿಲ್ಲ. ನನ್ನ ಉದ್ದೇಶ ಅದಾಗಿರಲಿಲ್ಲ. ನೀನು ಅತಿಯಾಗಿ ಮಾಡುತ್ತಿದ್ದಿ ಎಂದು ಹೇಳುವುದಷ್ಟೇ ನನ್ನ ಉದ್ದೇಶವಾಗಿತ್ತು. ನಾವು ಇಲ್ಲಿ ಜಡ್ಜ್ ಆಗಿ ಕುಳಿತಿದ್ದೇವೆ. ನೀನು ಕೇವಲ 16 ವರ್ಷದ ಬಾಲಕ. ನಾವು ಕೂಡ ಹಾಡಬಲ್ಲೆವು. ನಾವು ಕೂಡ ಕಿಸ್ ಅನ್ನು ಗಾಳಿಯಲ್ಲಿ ಹಾರಿಸಬಲ್ಲೆವು. ನಾವು ಕೂಡ ನಮ್ಮ ತುಟಿಯನ್ನು ಕಚ್ಚಬಲ್ಲೆವು. ಇದೆಲ್ಲವೂ ನಮ್ಮ ಎಕ್ಸ್‌ಪ್ರೆಷನ್‌ನ ಭಾಗ. ಆದರೆ, ನನಗೆ ಆ ಕ್ಷಣ, ಆತ ಮಾಡಿದ್ದು ತುಸು ಹೆಚ್ಚಾಯಿತು ಎಂದೆನಿಸಿತು" ಎಂದು ಮಲೈಕಾ ಅರೋರಾ ಹೇಳಿದ್ದಾರೆ. "ಆತ ಅದ್ಭುತ ಡ್ಯಾನ್ಸರ್. ಒಳ್ಳೆಯ ಹುಡುಗ" ಎಂದು ಕೂಡ ಮಲೈಕಾ ಅರೋರಾ ಹೇಳಿದ್ದಾರೆ.
ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಗಳು ಜಡ್ಜ್‌ಗಳನ್ನು ಇಂಪ್ರೆಸ್ ಮಾಡಲು ಈ ರೀತಿ ತಪ್ಪು ಎಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಈಗ ಟಿವಿ, ಒಟಿಟಿಗಳಲ್ಲಿ ಇಂತಹದ್ದನ್ನೇ ಮನೆಮಂದಿಯ ಜತೆ ಕುಳಿತು ನೋಡುತ್ತೇವೆ. ಇವೆಲ್ಲ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಮ್ಮ ಮುಂದಿನ ಜನಾಂಗಕ್ಕೆ ಹೀಗೆ ಆಗಾಗ ಕಿವಿ ಹಿಂಡುವ ಪ್ರಯತ್ನ ನಡೆಯಬೇಕು ಎಂದು ಸಾಕಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.
ಹಿಪ್ ಹೊಪ್ ಇಂಡಿಯಾ ಸೀಸನ್ 2ನ ಈ ಶೋ ಎಂಎಕ್ಸ್ ಪ್ಲೇಯರ್‌ನಲ್ಲಿ ಮಾರ್ಚ್ 14ರಂದು ಪ್ರಸಾರವಾಗಿದೆ. ಈ ಶೋನಲ್ಲಿ ಮಲೈಕಾ ಅರೋರಾ ತನ್ನ ಕೋಪವನ್ನು ನಿಯಂತ್ರಿಸಿ ಸ್ಪರ್ಧಿಗೆ "ಇದು ಸರಿಯಾ" ಎಂದು ಕೇಳಿದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಟಿಯ ಮಾತಿಗೆ ಬಹುತೇಕರು ಸಹಮತ ತೋರಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಗಳು ಈ ರೀತಿ ಮಾಡಬಾರದು ಎಂದು ಸಾಕಷ್ಟು ಜನರು ಕಿವಿಮಾತು ಹೇಳಿದ್ದಾರೆ.
