ರೆಡ್‌ ಒನ್‌ ವಿಮರ್ಶೆ: ಸಾರೋಟು ಏರಿಬಂದ ಸಾಂತಾಕ್ಲಾಸ್‌ ಕಿಡ್ನ್ಯಾಪ್‌; ಕ್ರಿಸ್ಮಸ್‌ ಸಂಭ್ರಮ ಹೆಚ್ಚಿಸುವ ಡ್ವೇನ್ ಜಾನ್ಸನ್ ಫ್ಯಾಂಟಸಿ ಸಿನಿಮಾ
ಕನ್ನಡ ಸುದ್ದಿ  /  ಮನರಂಜನೆ  /  ರೆಡ್‌ ಒನ್‌ ವಿಮರ್ಶೆ: ಸಾರೋಟು ಏರಿಬಂದ ಸಾಂತಾಕ್ಲಾಸ್‌ ಕಿಡ್ನ್ಯಾಪ್‌; ಕ್ರಿಸ್ಮಸ್‌ ಸಂಭ್ರಮ ಹೆಚ್ಚಿಸುವ ಡ್ವೇನ್ ಜಾನ್ಸನ್ ಫ್ಯಾಂಟಸಿ ಸಿನಿಮಾ

ರೆಡ್‌ ಒನ್‌ ವಿಮರ್ಶೆ: ಸಾರೋಟು ಏರಿಬಂದ ಸಾಂತಾಕ್ಲಾಸ್‌ ಕಿಡ್ನ್ಯಾಪ್‌; ಕ್ರಿಸ್ಮಸ್‌ ಸಂಭ್ರಮ ಹೆಚ್ಚಿಸುವ ಡ್ವೇನ್ ಜಾನ್ಸನ್ ಫ್ಯಾಂಟಸಿ ಸಿನಿಮಾ

Red One Movie Review: ಕ್ರಿಸ್ಮಸ್‌ ಹಬ್ಬ ಹತ್ತಿರದಲ್ಲಿದೆ. ಇದೇ ಸಮಯದಲ್ಲಿ ಅಮೆಜಾನ್‌ ಪ್ರೈಮ್‌ ವಿಡಿಯೋ ಒಟಿಟಿಯಲ್ಲಿ ರೆಡ್‌ ಒನ್‌ ಎಂಬ ಕ್ರಿಸ್ಮಸ್‌ ಸಂಭ್ರಮಕ್ಕೆ ಸೂಕ್ತವಾದ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾದ ಅದ್ಧೂರಿ ದೃಶ್ಯವೈಭವ, ಸಾಹಸ, ಹಾಸ್ಯ ಮಕ್ಕಳು ಮಾತ್ರವಲ್ಲದೆ ದೊಡ್ಡವರಿಗೂ ಇಷ್ಟವಾಗಬಹುದು.

ರೆಡ್‌ ಒನ್‌ ವಿಮರ್ಶೆ:  ಕ್ರಿಸ್ಮಸ್‌ ಸಂಭ್ರಮ ಹೆಚ್ಚಿಸುವ ಡ್ವೇನ್ ಜಾನ್ಸನ್ ಫ್ಯಾಂಟಸಿ ಸಿನಿಮಾ
ರೆಡ್‌ ಒನ್‌ ವಿಮರ್ಶೆ: ಕ್ರಿಸ್ಮಸ್‌ ಸಂಭ್ರಮ ಹೆಚ್ಚಿಸುವ ಡ್ವೇನ್ ಜಾನ್ಸನ್ ಫ್ಯಾಂಟಸಿ ಸಿನಿಮಾ

Red One Movie Review: ಅಮೆಜಾನ್‌ ಪ್ರೈಮ್‌ ವಿಡಿಯೋ ಒಟಿಟಿಯಲ್ಲಿ ಬಿಡುಗಡೆಯಾದ ಹೊಸ ಮಕ್ಕಳ ಸಿನಿಮಾ "ರೆಡ್‌ ಒನ್‌". ನವೆಂಬರ್‌ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ಒಂದು ತಿಂಗಳೊಳಗೆ ಒಟಿಟಿಗೆ ಆಗಮಿಸಿದೆ. ಕ್ರಿಸ್ಮಸ್‌ ಹಬ್ಬ ಕೆಲವೇ ದಿನಗಳು ಇರುವಾಗ ಈ ಸಿನಿಮಾ ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ. ಮಕ್ಕಳಿಗೆ ಕ್ರಿಸ್ಮಸ್‌ ಹಬ್ಬದ ಖುಷಿ ಹೆಚ್ಚಿಸಲು ಈ ಸಿನಿಮಾ ಖಂಡಿತಾ ಸೂಕ್ತವಾಗಿದೆ. ಡ್ವೇನ್ ಜಾನ್ಸನ್ ಎಂಬ ನಟನನ್ನು ಮಕ್ಕಳು ಮಾತ್ರವಲ್ಲದೆ ದೊಡ್ಡವರೂ ಇಷ್ಟಪಡುವುದರಿಂದ ಆತನ ಅಭಿಮಾನಿಗಳಿಗೆ ಈ ಸಿನಿಮಾದಲ್ಲಿ ಸಾಕಷ್ಟು ಸಾಹಸ ದೃಶ್ಯಗಳು ಕಾದಿವೆ. ಮಕ್ಕಳು ಮಾತ್ರವಲ್ಲದೆ ದೊಡ್ಡವರೂ ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡಬಹುದು.

ಒಟಿಟಿ ಚಿತ್ರ ವಿಮರ್ಶೆ

ಸಿನಿಮಾದ ಹೆಸರು: ರೆಡ್‌ ಒನ್‌

ಭಾಷೆ: ಇಂಗ್ಲಿಷ್‌

ನಿರ್ದೇಶನ: ಜೇಕ್ ಕಸ್ಡಾನ್

ತಾರಾಗಣ: ಡ್ವೇನ್ ಜಾನ್ಸನ್, ಕ್ರಿಸ್ ಇವಾನ್ಸ್, ಲೂಸಿ ಲಿಯು, ಜೆಕೆ ಸಿಮನ್ಸ್ ಮುಂತಾದವರು

ಒಟಿಟಿ: ಅಮೆಜಾನ್‌ ಪ್ರೈಮ್‌ ವಿಡಿಯೋ

ರೆಡ್‌ ಒನ್‌ ಒಟಿಟಿ ಸಿನಿಮಾ ವಿಮರ್ಶೆ

ಇಂಗ್ಲಿಷ್‌ ಸಿನಿಮಾ ಇಷ್ಟಪಡುವವರಿಗೆ ಡ್ವೇನ್ ಜಾನ್ಸನ್ ನೆಚ್ಚಿನ ನಟ. ವಿಶೇಷವಾಗಿ ಸಾಹಸ ಸಿನಿಮಾಗಳಲ್ಲಿ ಈತನ ಪಾತ್ರ ಮೆಚ್ಚದವರಿಲ್ಲ. ಇತ್ತೀಚಿನ ಫಾಸ್ಟ್‌ಎಕ್ಸ್‌ನಿಂದ ಫ್ಯೂರಿಯಸ್‌ ಸರಣಿಗಳವರೆಗೆ ಈತನ ಸಿನಿಮಾಗಳನ್ನು ಎಲ್ಲರೂ ಇಷ್ಟಪಟ್ಟಿರಬಹುದು. ಮಕ್ಕಳು ಇಷ್ಟಪಡುವಂತಹ ಮೋನಾ, ಫಾಸ್ಟ್‌ ಆಂಡ್‌ ಫ್ಯೂರಿಯಸ್‌, ರಾಂಪೇಜ್‌, ಜುಮಾಂಜಿಯಂತಹ ಸಿನಿಮಾಗಳಲ್ಲಿ ಈತ ಕಾಣಿಸಿಕೊಂಡಿದ್ದಾನೆ. ಇದೇ ರೀತಿ ಡೆಡ್‌ಪೂಲ್ ಮತ್ತು ವೊಲ್ವೆರಿನ್‌ನಂತಹ ಸಿನಿಮಾಗಳಿಂದ ಜನಪ್ರಿಯತೆ ಪಡೆದಿರುವ ಕ್ರಿಸ್ ಇವಾನ್ಸ್ ಕೂಡ ಈ ಚಿತ್ರದಲ್ಲಿದ್ದಾನೆ. ವೆಸ್ಲಿ ಕಿಮ್ಮೆಲ್ ಎಂಬ ಬಾಲಕಿಯೂ ಇದ್ದಾಳೆ. ಜೆಲ್ಲಿ ಫಿಶ್‌, ಕ್ಯಾಬಿನ್‌ ಫಿವರ್‌ನಂತಹ ಸಿನಿಮಾಗಳನ್ನು ನೋಡಿರುವವರಿಗೆ ಈ ಬಾಲನಟಿಯ ಪರಿಚಯ ಇರಬಹುದು. ಹೀಗೆ, ಅಮೆರಿಕದ ಒಂದಿಷ್ಟು ಜನಪ್ರಿಯ ನಟರು, ನಟಿಯರನ್ನು ಹೊಂದಿರುವ ಈ ಸಿನಿಮಾದ ಹೇಗಿದೆ ನೋಡೋಣ.

ಸಾರೋಟು ಏರಿಬಂದ ಸಾಂತಾಕ್ಲಾಸ್‌

ನನಗೆ ಆರಂಭದಲ್ಲಿ ಖುಷಿ ನೀಡಿದ ದೃಶ್ಯ ಸಾರೋಟು ಏರಿಬಂದ ಸಾಂತಾಕ್ಲಾಸ್‌. ಇದೇನು ಸಾಮಾನ್ಯ ಸಾರೋಟು ಅಲ್ಲ. ಜಾರುಬಂಡಿಯಲ್ಲಿ ಸಾಮಾನ್ಯ ಹಿಮಸಾರಂಗಗಳ ಜತೆ ಸಾಗುವ ಸಾಂತಾಕ್ಲಾಸ್‌ ಇವನಲ್ಲ. ಒಂದು ಕಡೆ ವಿಮಾನಗಳು, ಇನ್ನೊಂದು ಕಡೆ ಅದೇ ರೀತಿ ಟೇಕಾಫ್‌ ಆಗುವ ಸಾಂತಾಕ್ಲಾಸ್‌ ಸಾರೋಟು ಈ ಸಿನಿಮಾದ ಹೈಲೈಟ್‌. ರನ್‌ವೇಯಲ್ಲಿ ಸಾಗಿ ಆಕಾಶಕ್ಕೆ ನೆಗೆಯುವ ಈ ಸಾರೋಟು ಮಕ್ಕಳಿಗೆ ಖಂಡಿತಾ ಖುಷಿ ನೀಡಬಹುದು. ಇದರಲ್ಲಿರುವ ಹಿಮಸಾರಂಗಗಳು ಅತ್ಯಧಿಕ ಶಕ್ತಿಶಾಲಿಗಳು. ತಮ್ಮ ಹಾರ್ಸ್‌ ಪವರ್‌ ಹೆಚ್ಚಿಸಿಕೊಳ್ಳುತ್ತ ಓಡುತ್ತಾ ಓಡುತ್ತಾ ಆಕಾಶದಲ್ಲಿ ನೆಗೆಯುವ ದೃಶ್ಯ ಚೆನ್ನಾಗಿದೆ. ಇದೇ ರೀತಿ ಈ ಸಾಂತಾಕ್ಲಾಸ್‌ಗೆ ಒಬ್ಬ ಬಾಡಿ ಗಾರ್ಡ್‌ ಇದ್ದಾನೆ. ಆತ ಬೇರೆ ಯಾರೂ ಅಲ್ಲ ಕ್ಯಾಲಮ್ ಡ್ರಿಫ್ಟ್ (ಡ್ವೇನ್ ಜಾನ್ಸನ್). ಕ್ರಿಸ್ಮಸ್‌ ಇವ್‌ಗೆ ಎರಡು ದಿನ ಇರುವಾಗ, ಎಲ್ಲರಿಗೂ ಗಿಫ್ಟ್‌ ಸಿಹಿತಿಂಡಿ ರೆಡಿಯಾಗುವ ಸಮಯದಲ್ಲಿ ಸಾಂತಾಕ್ಲಾಸ್‌ ಕಾಣೆಯಾಗುತ್ತಾನೆ. ಆತನನ್ನು ಹುಡುಕುವ ಕೆಲಸ ಡ್ವೇನ್‌ನದ್ದಾಗುತ್ತದೆ. ಇವೆಲ್ಲ ಅತ್ಯಾಧುನಿಕ ತಂತ್ರಜ್ಞಾನ, ಕಾಲ್ಪನಿಕ ವೈಜ್ಞಾನಿಕ ದೃಶ್ಯಗಳ ಬೆಂಬಲದೊಂದಿಗೆ ನಡೆಯುವುದರಿಂದ ಫ್ಯಾಂಟಸಿ ಸಿನಿಮಾವಾಗಿ ಖುಷಿ ನೀಡುತ್ತದೆ.

ಇಲ್ಲಿ ಇಡೀ ಜಗತ್ತಿಗೆ ಕ್ರಿಸ್ಮಸ್‌ ಇವ್‌ನವತ್ತು ಉಡುಗೊರೆ ತಲುಪಿಸುವುದು ಮಿಲಿಟರಿ ಕಾರ್ಯಾಚರಣೆಯಂತೆ ನಿಖರವಾದ ಕಾರ್ಯಾಚರಣೆಯಾಗಿದೆ. ಆದರೆ, ಸಾಂತಾಕ್ಲಾಸ್‌ ಕಿಡ್ನ್ಯಾಪ್‌ ಆದ ಬಳಿಕ ಆತನನ್ನು ಹುಡುಕುವುದು ದೊಡ್ಡ ಚಾಲೆಂಜ್‌ ಆಗುತ್ತದೆ. ಈ ಸಮಯದಲ್ಲಿ ಡ್ವೇನ್‌ ಜಾನ್ಸನ್‌ ಕೂಡ ನಿವೃತ್ತಿಗೆ ಸಿದ್ಧನಾಗಿರುತ್ತಾನೆ. ಇನ್ನೊಂದು ದಿನ ಕೆಲಸ ಮಾಡಿ ಆಮೇಲೆ ನಿವೃತ್ತಿಯಾಗುತ್ತೇನೆ ಎನ್ನುತ್ತಿದ್ದಾನೆ. ಆತ 540 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದಾನೆ. ಆತ ಕೆಲಸ ಬಿಡಲು ಕಾರಣ "ಜನರು ಕ್ರಿಸ್ಮಸ್‌ ಸಮಯದಲ್ಲಿ ಮೊದಲಿನಂತೆ ಇಲ್ಲ. ಕೆಟ್ಟವರಾಗಿದ್ದಾರೆ". ಇದೇ ಸಮಯದಲ್ಲಿ ಈ ರೀತಿಯ ಸಾಂತಾಕ್ಲಾಸ್‌ನನ್ನು ಕಿಡ್ನ್ಯಾಪ್‌ ಮಾಡಲಾಗುತ್ತದೆ.

ಬೌಂಟಿ ಹಂಟರ್ (ಮತ್ತು ಲೆವೆಲ್ 4 ನಾಟಿ ಲಿಸ್ಟರ್) ಜ್ಯಾಕ್ "ದಿ ವುಲ್ಫ್" ಒ'ಮ್ಯಾಲಿ (ಇವಾನ್ಸ್) ಈ ಚಿತ್ರದಲ್ಲಿ ಡ್ವೇನ್‌ ಜಾನ್ಸನ್‌ ಜತೆ ಇರುತ್ತಾನೆ. ಈತ ಅನಾಮಧೇಯ ಕ್ಲೈಂಟ್‌ಗಾಗಿ ಕೆಲಸ ಮಾಡುವಾಗ ಈತನಿಗೆ ತಿಳಿಯದಂತೆ ಸಾಂತಾಕ್ಲಾಸ್‌ (ರೆಡ್‌ ಒನ್‌)ನ ಸ್ಥಳದ ಮಾಹಿತಿ ಸೋರಿಕೆಯಾಗುತ್ತದೆ. ಗ್ರೈಲಾ ಕ್ರಿಸ್ಮಸ್ ಮಾಟಗಾತಿ (ಕೀರ್ನಾನ್ ಶಿಪ್ಕಾ) ಸಾಂತಾಕ್ಲಾಸ್‌ನನ್ನು ಕಿಡ್ನ್ಯಾಪ್‌ ಮಾಡಿ ಆತನ ಸಾರೋಟಿನಲ್ಲಿ ಇಡೀ ಜಗತ್ತಿಗೆ ಶಿಕ್ಷೆ ನೀಡಲು (ಪುಟ್ಟ ಗೋಳದೊಳಗೆ ಎಲ್ಲರನ್ನೂ ಕುಬ್ಜವಾಗಿಸುವಂತಹ) ಮುಂದಾಗುತ್ತಾಳೆ. ಹೀಗೆ ಈ ಸಿನಿಮಾದಲ್ಲಿ ಮಕ್ಕಳಿಗೆ ಖುಷಿ ನೀಡುವಂತಹ ಫ್ಯಾಂಟಿಸಿ ಕಥೆಯಿದೆ.

ನನಗೆ ಈ ಸಿನಿಮಾದಲ್ಲಿ ಆರಂಭದಲ್ಲಿ ಸಾರೋಟು ಟೇಕಾಫ್‌ ಆಗುವ ದೃಶ್ಯದ ಜತೆಗೆ ಕ್ಲೈಮ್ಯಾಕ್ಸ್‌ ದೃಶ್ಯ ತುಂಬಾ ಇಷ್ಟವಾಯಿತು. ಕೊನೆಗೆ ಸಾಂತಾಕ್ಲಾಸ್‌ ಸಾರೋಟಿನಲ್ಲಿ ಆಕಾಶದಲ್ಲಿ ಸಾಗುತ್ತ, ಮನೆಮನೆಯೊಳಗೆ ಇಳಿಯುತ್ತ ಉಡುಗೊರೆಯನ್ನು ಒಂದೇ ದಿನದಲ್ಲಿ ಡೆಲಿವರಿ ಮಾಡುವ ದೃಶ್ಯ ಖುಷಿ ನೀಡುತ್ತದೆ. ಈ ವರ್ಷ ಡ್ವೇನ್‌ ಜಾನ್ಸನ್‌ ನಟಿಸಿದ ರೆಡ್‌ ಒನ್‌ ತುಂಬಾ ಅದ್ಭುತ ಎನಿಸುವಂತಹ ಸಿನಿಮಾ ಅಲ್ಲದೆ ಇದ್ದರೂ ಕ್ರಿಸ್ಮಸ್‌ ಹಬ್ಬದ ಸಂಭ್ರಮ ಹೆಚ್ಚಿಸುವ ಗುಣಗಳಿಂದ ಇಷ್ಟವಾಗುತ್ತದೆ.ಈ ಕ್ರಿಸ್ಮಸ್‌ ಹಬ್ಬದ ಸಮಯದಲ್ಲಿ ಒಟಿಟಿಯಲ್ಲಿರುವ ಸಿನಿಮಾ ಒಂದು ಬಾರಿ ನೋಡಲು ಅಡ್ಡಿಯಿಲ್ಲ.

ಚಿತ್ರ ವಿಮರ್ಶೆ: ಪ್ರವೀಣ್‌ ಚಂದ್ರ ಪುತ್ತೂರು

Whats_app_banner