Cassandra Series: ಸ್ಮಾರ್ಟ್ ಮನೆಯೊಳಗೆ ಕ್ಯಾಸಂಡ್ರಾ ಎಂಬ ಎಐ ಯಂತ್ರ ಮಾಯಾವಿ, ಬೆನ್ನಹುರಿಯಲ್ಲಿ ನಡುಕ ಹುಟ್ಟಿಸೋ ವಿಭಿನ್ನ ಹಾರರ್ ಸರಣಿ
Cassandra 2025 Netflix Series Review: ನೆಟ್‌ಫ್ಲಿಕ್ಸ್‌ನಲ್ಲಿ ಕೆಲವು ವಾರಗಳ ಹಿಂದೆ ಬಿಡುಗಡೆಯಾದ ಕಸ್ಸಂದ್ರ ( ಕಸ್ಸಂಡ್ರಾ/ಕ್ಯಾಸಂಡ್ರಾ ಎಂದೂ ಓದಬಹುದು) ವೆಬ್‌ಸರಣಿಯು ವಿಭಿನ್ನ ಕಥೆಯನ್ನು ಹೊಂದಿದೆ. ಎಐ ರೋಬೋಟ್ (ಎಐ ಯಂತ್ರ ಮಾಯಾವಿ) ಒಂದು ಸ್ಮಾರ್ಟ್‌ಹೋಮ್‌ನೊಳಗೆ ಒಂದು ಕುಟುಂಬವನ್ನು ನಿಯಂತ್ರಿಸುವ ಭಯಾನಕ ಕಥಾನಕ ಇದಾಗಿದೆ.

Cassandra 2025 Netflix Series Review: ಜರ್ಮನಿಯ ಮೊದಲ ಸ್ಮಾರ್ಟ್ ಹೋಂ ಎಂದು ಖ್ಯಾತಿ ಪಡೆದ 1970ರಲ್ಲಿ ನಿರ್ಮಿಸಲಾದ ಈಗ ಯಾರೂ ವಾಸಿಸದ ಮನೆಗೆ ಕುಟುಂಬವೊಂದು ಬಾಡಿಗೆಗೆ ಬರುತ್ತದೆ. ಈ ಮನೆ ಸಂಪೂರ್ಣವಾಗಿ ಸ್ಮಾರ್ಟ್‌ಹೋಂ ಆಗಿದ್ದು, ಸ್ವಯಂಚಾಲಿತ ಫೀಚರ್‌ಗಳನ್ನು ಹೊಂದಿದೆ. ಅಲ್ಲಿ ಮುಚ್ಚಿಟ್ಟಿದ್ದ ಕಸ್ಸಂದ್ರ ( ಕಸ್ಸಂಡ್ರಾ/ಕ್ಯಾಸಂಡ್ರಾ ಎಂದೂ ಓದಬಹುದು) ಎಂಬ ರೋಬೋಟ್ ರೀತಿಯ (ತಲೆ ಟಿವಿಯಂತೆ ಇರುತ್ತದೆ, ಅದರಲ್ಲಿ ಮಹಿಳೆಯೊಬ್ಬಳ ಫೋಟೋ ಇದೆ, ಆಕೆ ಮನೆಯವರಲ್ಲಿ ಮಾತನಾಡುತ್ತಾಳೆ) ಎಐ ಮಾಯಾವಿಯನ್ನು ಕೊಂಚ ರಿಪೇರಿ ಮಾಡುತ್ತಾರೆ. ಇದರಿಂದ ಆ ಎಐ ಮಾಯಾವಿ ಚಾಲು ಆಗುತ್ತದೆ. ಎಲ್ಲರಿಗೂ ಮನೆಯಲ್ಲಿ ಒಂದು ಪರ್ಸನಲ್ ಅಸಿಸ್ಟೆಂಟ್ ಇರುವುದು ಖುಷಿ ಕೊಡುತ್ತದೆ. ಆದರೆ, ಒಂದು ದಿನದಲ್ಲಿಯೇ ಆ ಎಐ ನಿಗೂಢವಾಗಿ ವರ್ತಿಸಲು ಆರಂಭಿಸುತ್ತದೆ. ಆರಂಭದಲ್ಲಿ ಮನೆಯ ಮಹಿಳೆಗೆ ಮಾತ್ರ ಇದರ ಭಯಾನಕ ಮುಖ ಕಾಣಿಸುತ್ತದೆ. ಇತರರು ಯಾರೂ ಈಕೆಯ ಮಾತುಗಳನ್ನು ನಂಬಲು ರೆಡಿ ಇರುವುದಿಲ್ಲ. ಹೀಗೆ, ಕೆಲವೇ ಕೆಲವು ಸಂಚಿಕೆಗಳನ್ನು ಹೊಂದಿರುವ ಈ ವೆಬ್ ಸರಣಿಯು ಕುತೂಹಲಕಾರಿಯಾಗಿದೆ. ಇದರಲ್ಲಿ ಹಳೆಯ ಕಥೆ ಮತ್ತು ಈಗಿನ ಕಥೆ ಜತೆಜೊತೆಯಾಗಿ ಸಾಗುತ್ತದೆ.
ಈ ವೆಬ್ ಸರಣಿಯನ್ನು ಬೆಂಜಮಿನ್ ಗಟ್ಷೆ ನಿರ್ಮಿಸಿದ್ದಾರೆ. ಇದು 2025ರ ಜರ್ಮನ್ ಥ್ರಿಲ್ಲರ್ ವೆಬ್‌ಸರಣಿ. ಕಸ್ಸಂಡ್ರಾವು ಆರು ಕಂತುಗಳನ್ನು ಒಳಗೊಂಡಿದೆ. 1970ರ ದಶಕಕ್ಕೆ ಒಂದು ಫ್ಲ್ಯಾಷ್‌ಬ್ಯಾಕ್‌ನಲ್ಲಿ ಕಾರು ಅಪಘಾತವೊಂದನ್ನು ತೋರಿಸಿ ಈ ಸರಣಿ ಆರಭವಾಗುತ್ತದೆ. ಮತ್ತೊಂದು ಕಥೆ 2020ರ ದಶಕದ ಕಥೆಯಾಗಿದೆ. ಈ ಸ್ಮಾರ್ಟ್‌ಹೋಮ್‌ಗೆ ಸ್ಥಳಾಂತರಗೊಳ್ಳುವ ಪ್ರಿಲ್ ಕುಟುಂಬದ ಕಥೆಯನ್ನು ಹೊಂದಿದೆ. ಅಂದರೆ, ತಂದೆ ಡೇವಿಡ್ (ಮೈಕಲ್‌ಕ್ಲಾಮರ್) ಲೇಖಕ. ತಾಯಿ ಸಮೀರಾ ಕಲಾವಿದೆ. ಇವರ ಹದಿಯರೆಯದ ಮಗ ಫಿನ್. ಪುಟ್ಟ ಮಗಳು ಜುನೋ.. ಈ ಮನೆಗೆ ಎಂಟ್ರಿ ನೀಡುತ್ತಾರೆ. ಈ ಸ್ಮಾರ್ಟ್ ಹೋಮ್‌ನಲ್ಲಿ ಇವರಿಗೆ ಹೊಸಬಗೆಯ ತೊಂದರೆಗಳು ಎದುರಾಗುತ್ತವೆ.
ಕ್ಯಾಸಂಡ್ರಾ ಎಂಬ ಈ ರೋಬೋ ಎಲ್ಲಾ ಕೋಣೆಗಳಿಗೂ ಕನೆಕ್ಟ್ ಆಗಿರುತ್ತದೆ. ಈ ಮನೆಯಲ್ಲಿ ಹಲವು ಟಿವಿ ಪರದೆಗಳಲ್ಲಿ ಈಕೆಯ ಮುಖ ಕಾಣಿಸುತ್ತದೆ. ಬಾತ್‌ರೂಂನಲ್ಲಿಯೂ ಟಿವಿ ಪರದೆ ಇರುತ್ತದೆ. "ಎಲ್ಲೆಲ್ಲೂ ನೀನೇ.. ಎಲ್ಲೆಲ್ಲೂ ನೀನೇ" ಎನ್ನುವ ಪರಿಸ್ಥಿತಿ ಇರುತ್ತದೆ. ಮನೆಯಲ್ಲಿ ಇರುವವರಿಗೆ ಖಾಸಗಿತನ ಮರೀಚಿಕೆ. ಗಂಡಹೆಂಡತಿ ಜತೆಯಾಗಿ ಮಲಗಿದ್ದರೂ ಅಲ್ಲಿ ಟಿವಿ ಪರದೆಯಲ್ಲಿ ಕ್ಯಾಸಂಡ್ರಾ ನೋಡುತ್ತಾ ಇರುತ್ತಾಳೆ. ಆಕೆ ಅಡುಗೆ ಮಾಡುತ್ತಾಳೆ. ಇವರಿಗೆ ಹಾಡು ಹಾಡುತ್ತಾಳೆ. ಹಲವು ಕೆಲಸ ಮಾಡುತ್ತದೆ. ಈ ಕ್ಯಾಸಂಡ್ರಾ ಎಂಬ ಎಐ ಮನೆಯ ಪ್ರತಿಯೊಂದು ಅಂಶವನ್ನೂ ಕಂಟ್ರೋಲ್ ಮಾಡುತ್ತದೆ. ಆದರೆ, ಈಕೆ ಈ ಮನೆಯ ಜನರನ್ನೂ ನಿಯಂತ್ರಿಸಲು ಬಯಸಿದಾಗ "ಹಾರರ್" ಆರಂಭವಾಗುತ್ತದೆ. ಈ ಮನೆಯ ರಹಸ್ಯ ಕೊಠಡಿಗಳು ನಿಗೂಢತೆಯನ್ನು ಹೆಚ್ಚಿಸುತ್ತವೆ.
ಆರಂಭದಲ್ಲಿ ಎಲ್ಲರೂ ಕ್ಯಾಸಾಂಡ್ರಾ ಎನ್ನುವುದು ಕೇವಲ ಕಂಪ್ಯೂಟರ್ ಪ್ರೋಗ್ರಾಂ ಎಂದುಕೊಳ್ಳುತ್ತಾರೆ. ಆದರೆ, ನಿಜವಾಗಿಯೂ ಅದು ಕೇವಲ ಕಂಪ್ಯೂಟರ್ ಪ್ರೋಗ್ರಾಂ ಅಲ್ಲ. ಕ್ಯಾಸಂಡ್ರಾ ಎನ್ನುವುದು ಕೇವಲ ಎಐ ಅಲ್ಲ. ಅದರೊಳಗೆ ಒಬ್ಬರ ಮೆದುಳನ್ನು ತಂತ್ರಜ್ಞಾನದ ನೆರವಿನಿಂದ ಸೇರಿಸಲಾಗಿದೆ. ಒಬ್ಬಳು ಸತ್ತಮೇಲೂ ಈ ಎಐ ಮೂಲಕ ಜೀವಂತವಾಗಿದ್ದಾಳೆ. ಮೊದಲು ಈಕೆ ಸಮೀರಾಳನ್ನು ಟಾರ್ಗೆಟ್ ಮಾಡುತ್ತಾಳೆ. ಆಕೆಯನ್ನು ಮನೆಯಿಂದ ಓಡಿಸಿ ಡೇವಿಡ್ ಮತ್ತು ಮಕ್ಕಳ ಜತೆಗೆ ಹ್ಯಾಪಿ ಕುಟುಂಬದ ಕನಸು ಕಾಣುತ್ತಾಳೆ. ಈ ಎಐಯು ಪುಟಾಣಿ ಹುಡುಗಿಯ ಕುರಿತು ವಿಶೇಷ ಪ್ರೀತಿ ಹೊಂದಿದೆ. ಆದರೆ, ಮತ್ತೊಬ್ಬ ಹುಡುಗನ "ಲವ್"ಗೆ ಅಸಮಧಾನಗೊಳ್ಳುತ್ತದೆ.
ಹೀಗೆ, ಇದರ ಪ್ರತಿಯೊಂದು ಕಂತುಗಳು ಆಸಕ್ತಿದಾಯಕವಾಗುತ್ತದೆ. ಈ ಎಐನ ಕೆಲವೊಂದು ನಡೆಗಳು ಪ್ರೇಕ್ಷಕರ ಬೆನ್ನಹುರಿಯಲ್ಲಿ ನಡುಕ ಹುಟ್ಟಿಸುತ್ತದೆ. ಈಗ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಪ್ರವರ್ಧಮಾನಕ್ಕೆ ಬರುವ ಸಮಯದಲ್ಲಿ ಈ ಎಐ ವೆಬ್ ಸರಣಿ ಎಲ್ಲರಿಗೂ ಅರ್ಥವಾಗುವಂತೆ ಇದೆ. ಒಂದು ವಿಭಿನ್ನ ಹಾರರ್ ವೆಬ್ ಸರಣಿ ನೋಡಬೇಕೆಂದು ಬಯಸುವವರಿಗೆ ಈ ವೆಬ್ ಸರಣಿ ಇಷ್ಟವಾಗಬಹುದು. ನೆಟ್‌ಫ್ಲಿಕ್ಸ್‌ನಲ್ಲಿದೆ.
