ಕ್ರೈಂ ಥ್ರಿಲ್ಲರ್, ಸೋಶಿಯಲ್ ಕಮೆಂಟ್ರಿ ಎರಡಲ್ಲಿ ಯಾವುದು? ಗೊಂದಲ ಮೂಡಿಸಿದ ಅಡಾಲಸೆನ್ಸ್ ವೆಬ್‌ಸಿರೀಸ್; ಮಧು ವೈಎನ್ ಬರಹ
Adolescence Web Series: ನೆಟ್‌ಫ್ಲಿಕ್ಸ್ ಒಟಿಟಿ ವೇದಿಕೆಯಲ್ಲಿರುವ ಅಡಾಲಸೆನ್ಸ್ ವೆಬ್‌ಸರಣಿ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. 13 ವರ್ಷದ ಬಾಲಕನೊಬ್ಬನ ಕಥೆ ಆಧರಿಸಿದ ಈ ಸರಣಿಯ ಬಗ್ಗೆ ಮಧು ವೈಎನ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುವ ಕೆಲವು ವೆಬ್‌ಸರಣಿಗಳ ಕಥೆ ಸಿನಿಮಾಕ್ಕಿಂತಲೂ ಭಿನ್ನವಾಗಿ, ರೋಚಕವಾಗಿರುತ್ತವೆ. ಕೆಲವೊಂದು ವೆಬ್ ಸರಣಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆಗುತ್ತವೆ. ಸಾಮಾಜಿಕ ಸಂದೇಶ ಇರುವ ಸಿನಿಮಾಗಳು ಜನರ ಮನಸನ್ನು ತಲುಪುತ್ತವೆ. ಆದರೆ ಕೆಲವೊಂದು ಚರ್ಚೆಯಾದರೂ ಎಲ್ಲರಿಗೂ ಇಷ್ಟವಾಗುವುದು ಕಷ್ಟ. ಕೆಲವೊಂದು ವೆಬ್‌ಸರಣಿಗಳು ಏನಿದು, ಇದು ಯಾವ ಜಾನರ್ ಎಂದು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಇದೀಗ ಸದ್ಯ ಚರ್ಚೆಯಲ್ಲಿರುವ ನೆಟ್‌ಫ್ಲಿಕ್ಸ್‌ನ ಅಡಾಲಸೆನ್ಸ್ ವೆಬ್‌ಸರಣಿ ಬಗ್ಗೆ ಈ ರೀತಿಯ ಅಭಿಪ್ರಾಯ ಹುಟ್ಟುಹಾಕಿದ್ದಾರೆ ಲೇಖಕ ಮಧು ವೈಎನ್. ಅಡಾಲಸೆನ್ಸ್ ವೆಬ್‌ಸರಣಿ ಬಗ್ಗೆ ಅವರು ಹಾಕಿರುವ ಪೋಸ್ಟ್‌ನಲ್ಲಿರ ಯಥಾವತ್ತು ಬರಹ ಇಲ್ಲಿದೆ.
ಮಧು ವೈಎನ್ ಬರಹ
ನೆಟ್‌ಫ್ಲಿಕ್ಸ್‌ನ ‘ಅಡಾಲಸೆನ್ಸ್‘ ಎಲ್ರೂ ನೋಡಿ ನೋಡಿ ಅಂದಿದ್ದಕ್ಕೆ ದಿನಕ್ಕೆ ಹದಿನೈದು ನಿಮಿಷ ಅನ್ನಂಗೆ ಎರಡು ವಾರ ತಗೊಂಡು ನೋಡಿದೆ. ಏನ್ ಚೆನ್ನಾಗಿದೆ ಅದ್ರಲ್ಲಿ ಅಂತ ಅರ್ಥ ಆಗ್ಲಿಲ್ಲ. ಅದೇನೋ ಸಿಂಗಲ್ ಶಾಟ್ ಅಂತ. ನೋಡ್ವಾಗ ಆ ಕಾನ್ಷಿಯಸ್ ಬಂದ್ಬಿಟ್ರೆ ಕತೆ ಬಿಟ್ಟು ಹೆಂಗ್ ಮಾಡವ್ರೆ ಅಂತನೇ ನೋಡಂಗಾಗುತ್ತೆ.
ಆ ಕಪ್ಪು ಹುಡುಗಿ ಇನ್ನೊಬ್ಬ ಹುಡುಗನ್ನ ಯಾಕೆ ಹೊಡಿತಾಳೆ ಅಂತ ಗೊತ್ತಾಗ್ಲಿಲ್ಲ. ಪೊಲೀಸರ ಮೇಲೆ ಸುಮ್ ಸುಮ್ನೆ ಕತೆಗಾಗಿ ಎಗರಾಡಿದಳು ಅನ್ನಿಸ್ತು.
ಆ ಹುಡುಗನ ಪಾತ್ರ ನೋಡಿದ್ರೆ. ಅವನಿಗಾಗಿರೋ ಬುಲ್ಲೀಯಿಂಗಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗನಂಗೆ ಇದಾನೆ, ಕೊಲೆ ಮಾಡುವ ಹುಡುನಂಗೆ ಕಾಣಲ್ಲ ಅಥವಾ ಆ ಪಾತ್ರದಲ್ಲಿ ಅಷ್ಟು ಕ್ರೌರ್ಯ ಇಟ್ಟಿಲ್ಲ. ಅವನ ಜೊತೆ ಇದ್ದೋರೇ ಅವನಿಗಿಂತ ಒರಟಾಗಿ ಕ್ರೂರವಾಗಿ ಆಡ್ತಾರೆ.
ಉದ್ದಕ್ಕೂ ಪೇರೆಂಟ್ಸ್‌ದೇನೋ ತಪ್ಪಿರುತ್ತೆ ಅನ್ನುವಂತೆ ಸಸ್ಬೆನ್ಸು ಇಟ್ಟು ಕಡೇಲಿ ನೋಡಿದ್ರೆ ಅವರೂ ಅಮಾಯಕರೇ. ಅಂದ್ರೆ ತೀರಾ ಅಂಥಾ ಡಿಸ್ ಫಂಕ್ಷನಲ್ ಫ್ಯಾಮಿಲಿ ಏನಲ್ಲ. ಆ ಯಪ್ಪ ಹಾಗೇನು ಬಾರೀ ಟಾಕ್ಸಿಕ್ ಮನ್ಷ ಥರ ಕಾಣ್ಲಿಲ್ಲ.
ಆ ಸೈಕಾಲಜಿಸ್ಟ್ ಬರ್ತಾಳೆ. ಆ ಹುಡುಗನ್ನ ಅರ್ಥ ಮಾಡ್ಕೊಳೋದ್ಕಿಂತ ತನ್ನ ಬುದ್ವಂತಿಕೆ ತೋರಿಸಿ ಪಾಯಿಂಟ್ಸ್ ಸ್ಕೋರ್ ಮಾಡಿಕೊಳ್ಳುವುದೇ ಮುಖ್ಯ ಅನ್ನಂಗೆ ಆಡ್ತಾಳೆ. ಹಿಂಗ್ ದುರುಗುಟ್ಕೊಂಡು ನೋಡ್ತಾಳೆ ಅವನನ್ನ. ಎದ್ದೋಗ್ತಾಳೆ. ತಲೆ ಬಾಚ್ಕೊತಾಳೆ ಏನೋ ಕಂಡು ಹಿಡ್ಯೋಳಂಗೆ ಒಂದಷ್ಟೊತ್ ಕ್ಯಾಮೆರಾ ನೋಡ್ತಾಳೆ. ಒಳಗೆ ಬರ್ತಾಳೆ... ಬಂದ್ಬುಟ್ಟು ಪ್ರಶ್ನೆ ಕೇಳ್ತಾಳೆ, ನೀನು ಹದಿಮೂರು ವರ್ಷದ ಹುಡುಗ ಆಗಿ ಹುಡುಗಿ ಮುಟ್ಟಿದ್ದು ನಾರ್ಮಲ್ ಅನ್ಸುತ್ತಾ ಅಂತ. ಆ ವಯಸಿಗೆ ನಾರ್ಮಲ್ ಯಾವುದು ಅಬ್ನಾರ್ಮಲ್ ಯಾವುದು ಅಂತ ಅವನಿಗೆ ಹೇಗೆ ಗೊತ್ತಿರುತ್ತೆ? ಒಳ್ಳೆ ದೊಡ್ಡವರನ್ನ ಇಂಟರ್ವ್ಯೂ ಮಾಡಿದಂಗೆ ಮಾಡ್ತಾಳೆ.
ವಾಪಸ್ ಸಿಂಗಲ್ ಶಾಟ್‌ಗೆ ಬರೋಣ. ಅದು ಇರ್ಲಿಲ್ಲಾಂದ್ರೆ ಕೆಲವಾದರೂ ಸೀನುಗಳಲ್ಲಿ ಪಾತ್ರಗಳು ಸ್ವಲ್ಪ ಸಾವಧಾನದಿಂದ ವರ್ತಿಸೋ ಅವಕಾಶ ಇತ್ತಲ್ವ. ಇದ್ರಲ್ಲಿ ಎಲ್ರೂ ಅಡಿಲಿ ಬೆಂಕಿ ಬಿದ್ದವರಂಗೆ ಬಡ ಬಡ ಬಡ ಅತ್ತಿಂದಿಂತ್ತ ಒಂದೇ ಸಮನೆ ಓಡಾಡ್ತಿರ್ತಾರೆ. ಹಾಹ್ ಹೂಹ್ ಅಂತಿರ್ತಾರೆ. ಆ ಹುಡುಗನ ತಾಯಿ ಮಾತ್ರ ಸೊಲ್ಪ ಮೆಲ್ಲಗೆ ನಿಧಾನಕ್ಕೆ ಮಾತಾಡುವ ಅವಕಾಶ ಸಿಕ್ಕಿದೆ. ಆದ್ರೆ ಆ ಯಮ್ಮ ಏನೋ ಕಳ್ಕೊಂಡಿರೋಂಗಿದೆ ಏನು ಅಂತ ಸ್ಪಷ್ಟತೆ ಇಲ್ಲ. ಸುಮ್ ಸುಮ್ನೆ ಪಾಪದ ಹೆಂಗ್ಸು ಥರ ಕಾಣುತ್ತೆ.
ಏನೋ ಮಾಡಕ್ಕೋಗಿ ಏನೋ ಆಗಿದೆ ಅನ್ನಿಸ್ತಪ.
ಅದ್ಸರಿ ಮೊದಲ ಎಪಿಸೋಡಲ್ಲಿ ಆ ಸಣ್ಣ ಹುಡುಗನ್ನ ಹಿಡಿಯೋಕೆ ಪೋಲೀಸರು ಅದ್ಯಾಕೆ ಟೆರರಿಸ್ಟುಗಳನ್ನು ಹಿಡಿಯೋಕೆ ಸ್ಪೆಷಲ್ ಸ್ವ್ಕಾಡ್‌ಗಳು ಹೋದಂಗೆ ಇಷ್ಟು ದಪ್ಪ ದಪ್ಪ ಗನ್ ಹಿಡ್ಕೊಂಡು ಹೋಗ್ತಾರೆ?
ಒಂದೋ ಕ್ರೈಂ ಥ್ರಿಲ್ಲರ್ ಕತೆ ಮಾಡ್ತೀವಿ ಅಥವಾ ಕ್ರೈಂ ಹಿನ್ನೆಲೆ ಇಟ್ಕೊಂಡು ಸೋಶಿಯಲ್ ಕಮೆಂಟ್ರಿ ಕತೆ ಮಾಡ್ತೀವಿ ಅಂತ ಎರಡರಲ್ಲಿ ಒಂದು ಡಿಸೈಡ್ ಆಗ್ಬೇಕು. ಮೊದಲ ಎರಡು ಎಪಿಸೋಡುಗಳಲ್ಲಿ ಥ್ರಿಲ್ಲರ್ ಅನ್ನುವ ಭಾವನೆ ಬರಿಸಿ ಕಡೆಯ ಎರಡು ಎಪಿಸೋಡಿನಲ್ಲಿ ಕಮೆಂಟ್ರಿಗೆ ಇಳಿದು ನೋಡುಗರಿಗೆ ಗೊಂದಲ ಮಾಡಿದ್ರು ಅನ್ಸುತ್ತೆ.
ಏಪ್ರಿಲ್ 10ರಂದು ಮಧು ಫೇಸ್‌ಬುಕ್‌ನಲ್ಲಿ ಈ ಪೋಸ್ಟ್ ಹಾಕಿದ್ದರು. ಈಗಾಗಲೇ ಹಲವರು ಇವರ ಪೋಸ್ಟ್ ನೋಡಿದ್ದು, 60ಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ.
ಮಧು ಅವರ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳು
ಶೋಭಾ ರಮೇಶ್ ಅವರ ಕಾಮೆಂಟ್: ‘ಹೂಂ, ಕೊನೆಯ ಎಪಿಸೋಡ್ ಅಂತೂ ಎಳೆದ್ರು ಎಳೆದ್ರು ಎಳೆದ್ರೂ....ಉಫ್. ಎಲ್ಲದಕ್ಕಿಂತ ಇಷ್ಟವಾಗಿದ್ದು ಆ ಪೋಲೀಸರ ತಾಳ್ಮೆ, ಅಲ್ಲಿನ ಸಿಸ್ಟಮ್. ಇಂಜೆಕ್ಷನ್ ಹಾಕೋದಕ್ಕೂ ಮಾನಸಿಕವಾಗಿ ಎಷ್ಟು ತಯಾರಿ ಮಾಡಿದ್ರಲ್ಲ! ಆದ್ರೆ ಅವನ ತರ ಇಲ್ಲೇನಾದ್ರೂ "ನೋ ಕಮೆಂಟ್ ನೋ ಕಮೆಂಟ್" ಅಂದಿದ್ರೆ ಹೆಂಗೆ ಬಿದ್ದಿರೋದು. ಆಶ್ಚರ್ಯ ಅಂದ್ರೆ ಆ ಹುಡುಗ ಅಷ್ಟು ವಯಲೆಂಟ್ ಆಗಿದ್ದು ಯಾವ ಹಂತದಲ್ಲಿ!! ಮನೆಯ ವಾತಾವರಣ ಆ ತರ ಟಾಕ್ಸಿಕ್ ಅಂತೇನೂ ಅನ್ನಿಸ್ಲಿಲ್ಲ. ನಂತರದ ಅವನ ಬಿಹೇವಿಯರ್ ನೋಡಿದ್ರೆ spoilt brat ತರ ಖಂಡಿತಾ ಅನ್ನಿಸ್ಲಿಲ್ಲ. ಸೈಕಾಲಜಿಸ್ಟ್ ಜೊತೆ ಮಾತಾಡ್ವಾಗ ಸ್ವಲ್ಪ rude, arrogant ಆಗ್ತಿದಾನೆ ಅನ್ಸುತ್ತಷ್ಟೇ. ಅದು ಬಿಟ್ರೆ ಕೊಲೆ ಮಾಡುವ ಮಟ್ಟಕ್ಕೆ... ಉಹೂಂ.
ಅವನ ಅಪ್ಪ ಒಂದು ಕಡೆ "ಮಗುವಾಗಿದ್ದಾಗ ಸೈಕಲ್ ಕೇಳ್ದ ಸೈಕಲ್ ಕೊಡ್ಸಿದ್ವಿ. ಗೇಮ್ಸ್ ಬೇಕು ಅಂತ್ಕೇಳ್ದಾಗ ಅದೂ ಕೊಡ್ಸಿದ್ವಿ. ಕಂಪ್ಯೂಟರ್ ಬೇಕು ಅನ್ನೋ ಡಿಮ್ಯಾಂಡ್ ಬಂದಾಗ ನಾಲ್ಕು ಗೋಡೆಯ ಮಧ್ಯೆ ಸೇಫ್ ಆಗಿರ್ತಾನೆ ಅಂದ್ಕೊಂಡೆ. ಆದ್ರೆ ಅದೇ ನಾಲ್ಕು ಗೋಡೆಯ ಒಳಗೆ ನಾವು ಅವನನ್ನು ಗಮನಿಸದೇ ಹೋದ್ವಿ" ಅಂತೇನೊ ಹೇಳ್ತಾರಲ್ಲ, ಚಾಟಿ ಏಟಿನ ತರ ಇತ್ತು! ಸಾಮಾನ್ಯವಾಗಿ ನಾವೆಲ್ರೂ ಮಾಡೋ ತಪ್ಪು ಇದೇ ಏನೋ. We just think everything is fine, everyone is good!
ವಾಣಿ ಸುರೇಶ್ ಕೆ. ಅವರ ಕಾಮೆಂಟ್: ಜೇಮಿ ಯಾವುದೇ ಕೆಟ್ಟ ನಡವಳಿಕೆ ತೋರಿಸದ, ನಮ್ಮ ಸುತ್ತಮುತ್ತ ಕಾಣಸಿಗುವಂಥಾ ಒಬ್ಬ ಆರ್ಡಿನರಿ ಪಾಪದ ಹುಡುಗ. ಅಂಥಾ ಮಕ್ಕಳೂ ಕೊಲೆ ಮಾಡುವಷ್ಟು ಶಕ್ತರಿರುತ್ತಾರೆ ಎನ್ನುವ ಸಂದೇಶವನ್ನು ಸಿನೆಮಾ ತೋರಿಸ್ತು ನನಗೆ. ಕೊಲೆ ಮಾಡಿದ ಸಿಸಿಟಿವಿ ಫೂಟೇಜ್ ಸಿಕ್ಕರೂ ಅವನು ಗಿಲ್ಟಿ ಎಂದು ಒಪ್ಪಿಕೊಳ್ಳಲು ತಿಂಗಳುಗಟ್ಟಲೆ ಸಮಯ ತಗೊಳ್ತಾನೆ. ಅದನ್ನು ನೋಡಿ ಹುಡುಗ ಸಾಮಾನ್ಯದವನಲ್ಲ ಅನ್ನಿಸ್ತು.
ಆ ಹುಡುಗಿಯ ಪಾತ್ರ ಪ್ರೇಕ್ಷಕರನ್ನು ಡೈವರ್ಟ್ ಮಾಡಲು ರೂಪಿಸಿದ್ದು ಅನ್ನಿಸ್ತು. ಅಂದ ಹಾಗೆ ಕೊಲೆಯಾದ ಹುಡುಗಿಯ ಬಗ್ಗೆ ಸಹಾನುಭೂತಿ ಅಂತೂ ಕಾಣಲಿಲ್ಲ.
‘ಸಮಸ್ಯೆ ವಿಮರ್ಶೆಯಲ್ಲಿಯೇ ಇದೆ ! ಇದು ಡಾಕ್ಯುಮೆಂಟರಿ ತರಾ ಇದೆ. ಎಂಟರ್ಟೈನ್ಮೆಂಟ್ ತರಾ ಇಲ್ಲ. ಹಾಗಾಗಿ ಬೋರ್ ಎನಿಸಿದರೆ ಬೋರಿಂಗ್. ಸೀರಿಯಸ್ ಎನಿಸಿದರೆ ಎಕ್ಸ್ ಲೆಂಟ್. ಶಾಲಾಮಕ್ಕಳ "ಅಡಲಾಲ್ಸೆನ್ಸ್" ಹೊಸ ಸಮಸ್ಯೆ ಅಲ್ಲ‘ ಎಂದು ಸುರೇಶ್ ಮಹರ್ಷಿ ಎನ್ನುವವರು ಕಾಮೆಂಟ್ ಮಾಡಿದ್ದಾರೆ.
