ದಳಪತಿ ವಿಜಯ್ ನಟನೆಯ ನನ್ಬನ್ ಒಟಿಟಿಯಲ್ಲಿ ಬಿಡುಗಡೆ; ಈ ಆ್ಯಕ್ಷನ್ ಕಾಮಿಡಿ ಸಿನಿಮಾ ನೋಡಿದ್ರೆ 3 ಈಡಿಯಟ್ಸ್ ನೆನಪಾಗಬಹುದು
ದಳಪತಿ ವಿಜಯ್ ನಟನೆಯ ನನ್ಬನ್ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಆ್ಯಕ್ಷನ್ ಕಾಮಿಡಿ ಚಿತ್ರ ಅಮೆಜಾನ್ ಪ್ರೈಮ್ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮ್ ಆಗುತ್ತಿದೆ. ಈ ಸಿನಿಮಾ ನೋಡಿದ್ರೆ ನಿಮಗೆ 3 ಈಡಿಯಟ್ಸ್ ನೆನಪಿಗೆ ಬರಬಹುದು.

ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಹಾಗೂ ಇಲಿಯಾನಾ ಡಿಕ್ರೂಸ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಶಂಕರ್ ನಿರ್ದೇಶನದ ನನ್ಬನ್ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಥಿಯೇಟರ್‌ಗೆ ಬಂದು 13 ವರ್ಷಗಳ ನಂತರ ಈ ಸಿನಿಮಾ ಮತ್ತೊಂದು ಒಟಿಟಿ ವೇದಿಕೆಯಲ್ಲಿ ಪ್ರಸಾರ ಆರಂಭಿಸಿದೆ. ಇದಕ್ಕೂ ಮೊದಲು ನನ್ಬನ್ ಜಿಯೋಹಾಟ್‌ಸ್ಟಾರ್ (ಡಿಸ್ನಿ+ ಹಾಟ್‌ಸ್ಟಾರ್) ಒಟಿಟಿ ಪ್ಲಾಟ್‌ಫಾರ್ಮ್ ಅನ್ನು ಪ್ರವೇಶಿಸಿತು. 2012ರಲ್ಲಿ ಬಿಡುಗಡೆಯಾದ ಸಿನಿಮಾ ಇದೀಗ ಅಮೆಜಾನ್ ಪ್ರೈಮ್‌ನಲ್ಲಿ ಪ್ರಸಾರ ಆರಂಭಿಸಿದೆ. ಇದರಲ್ಲಿ ಜೀವ, ಶ್ರೀಕಾಂತ ಕೂಡ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು.
ಎಂಜಿನಿಯರಿಂಗ್ ಕಾಲೇಜು.. ಮೂವರು ಸ್ನೇಹಿತರು
ನನ್ಬನ್ ಚಿತ್ರವು ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ಮೂವರು ಸ್ನೇಹಿತರ ಸುತ್ತ ಸುತ್ತುತ್ತದೆ. ಕಾಲೇಜು ಸನ್ನಿವೇಶಗಳಿಂದ ತುಂಬಿರುವ ಈ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗದೇ ಇರದು. ಕಾಮಿಡಿಯ ಜೊತೆ ಭಾವನಾತ್ಮಕ ಸನ್ನಿವೇಶಗಳು ಚಿತ್ರದಲ್ಲಿದೆ. ‘3 ಈಡಿಯಟ್ಸ್‘ ಚಿತ್ರದ ಹಿಂದಿ ಆವೃತ್ತಿಯ ಕಥೆಯಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡದೆ ತಮಿಳಿಗೆ ತರಲಾಗಿತ್ತು. ಆದರೆ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹೇಳಿಕೊಳ್ಳುವ ಯಶಸ್ಸು ಗಳಿಸಲಿಲ್ಲ. ಇದು ತೆಲುಗಿನಲ್ಲಿಯೂ ಸ್ನೇಹಿತುಡು ಎಂಬ ಹೆಸರಿನಲ್ಲಿ ಬಿಡುಗಡೆಯಾಗಿತ್ತು.
ನನ್ಬನ್ ಚಿತ್ರದಲ್ಲಿ ದಳಪತಿ ವಿಜಯ್‌ಗೆ ಇಲಿಯಾನ ಜೋಡಿಯಾಗಿದ್ದರು. ಶ್ರೀಕಾಂತ್ ಮತ್ತು ಜೀವಾ ಸ್ನೇಹಿತರ ಪಾತ್ರಗಳನ್ನು ನಿರ್ವಹಿಸಿದರು. ಸತ್ಯರಾಜ್, ಸತ್ಯನ್, ಅನುಯಾ, ಟಿಎಂ ಕಾರ್ತಿಕ್, ಮನೋಬಾಲಾ ಮತ್ತು ಆಡುಕಳಂ ನರೇನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಹ್ಯಾರಿಸ್ ಜಯರಾಜ್ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರವನ್ನು ಜೆಮಿನಿ ಫಿಲ್ಮ್ ಸರ್ಕ್ಯೂಟ್ ಬ್ಯಾನರ್ ಅಡಿಯಲ್ಲಿ ಮನೋಹರ್ ಪ್ರಸಾದ್ ಮತ್ತು ರವಿಶಂಕರ್ ಪ್ರಸಾದ್ ನಿರ್ಮಿಸಿದ್ದರು.
ನಾಯಕನ ಆಯ್ಕೆಯಲ್ಲಿ ತಿರುವುಗಳು!
ದಳಪತಿ ವಿಜಯ್ ಮೊದಲು 2010 ರಲ್ಲಿ ನಾನ್ಬನ್ ಚಿತ್ರದಲ್ಲಿ ನಟಿಸಲು ಒಪ್ಪಿಗೆ ನೀಡಿದ್ದರು. ಆದರೆ ನಂತರ, ಅವರಿಗೆ ಡೇಟ್ ಹೊಂದಾಣಿಕೆ ಮಾಡಲು ಸಾಧ್ಯವಾಗದ ಕಾರಣ ಈ ಚಿತ್ರ ಮಾಡದಿರಲು ನಿರ್ಧಾರ ಮಾಡುತ್ತಾರೆ. ನಂತರ ನಿರ್ಮಾಪಕರು ಸೂರ್ಯನನ್ನು ನಾಯಕನನ್ನಾಗಿ ಮಾಡಲು ಚರ್ಚೆ ನಡೆಸುತ್ತಾರೆ. ಆದರೆ ಅದು ಸಾಧ್ಯವಾಗುವುದಿಲ್ಲ. ನಿರ್ಮಾಪಕರು ಮತ್ತೆ ವಿಜಯ್ ಅವರನ್ನು ಸಂಪರ್ಕಿಸಿದಾಗ, ಅವರು ಒಪ್ಪಿಕೊಳ್ಳುತ್ತಾರೆ. ಇದು ಆ್ಯಕ್ಷನ್ ಕಾಮಿಡಿ ಚಿತ್ರವಾದರೂ ಜನರ ಮನಸ್ಸಿಗೆ ಇಷ್ಟವಾಗುವಲ್ಲಿ ಸೋತಿತ್ತು.
ಕೊನೆಯ ಚಿತ್ರದ ಚಿತ್ರೀಕರಣ
ದಳಪತಿ ವಿಜಯ್ ಪ್ರಸ್ತುತ ಜಯನಾಯಗನ್ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ರಾಜಕೀಯ ರಂಗಕ್ಕೆ ಪ್ರವೇಶಿಸಿ, ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿರುವ ಅವರು ಇದು ತಮ್ಮ ಸಿನಿ ಜೀವನದ ಕೊನೆ ಚಿತ್ರ ಎಂದು ಫೋಷಣೆ ಮಾಡಿದ್ದರು. ಈ ಚಿತ್ರವನ್ನು ಎಚ್ ವಿನೋದ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರ ಜನವರಿ 9, 2026 ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ. ಇದೊದು ಪೊಲಿಟಿಕಲ್ ಆ್ಯಕ್ಷನ್ ಸಿನಿಮಾವಾಗಿದ್ದು, ವಿಜಯ್‌ಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಬಾಬಿ ಡಿಯೋಲ್, ಗೌತಮ್ ಮೆನನ್, ಪ್ರಕಾಶ್ ರಾಜ್, ಪ್ರಿಯಾಮಣಿ ಮತ್ತು ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.