ಒಟಿಟಿಗೆ ಬಂತು ಶರತ್ ಕುಮಾರ್ ಅಭಿನಯದ ದಿ ಸ್ಮೈಲಿ ಮ್ಯಾನ್ ಸಿನಿಮಾ: ನೆನಪಿನ ಶಕ್ತಿ ಕಳೆದುಕೊಳ್ಳುವ ತನಿಖಾ ಅಧಿಕಾರಿಯ ಕಥೆ ಇದು
ಹಿರಿಯ ನಟ ಶರತ್ ಕುಮಾರ್ ಅಭಿನಯದ 150ನೇ ಸಿನಿಮಾ ದಿ ಸ್ಮೈಲಿ ಮ್ಯಾನ್ ಆಹಾ ತಮಿಳು ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ನೆನಪಿನ ಶಕ್ತಿ ಕಳೆದುಕೊಳ್ಳುವ ತನಿಖಾ ಅಧಿಕಾರಿಯ ಕಥೆ ಹೊಂದಿರುವ ಸಿನಿಮಾವನ್ನು ಸಲಿಲ್ ದಾಸ್ ನಿರ್ಮಿಸಿದ್ದು ಶ್ಯಾಮ್ ಹಾಗೂ ಪ್ರವೀಣ್ ನಿರ್ದೇಶನ ಮಾಡಿದ್ದಾರೆ.

ಬಹುಭಾಷಾ ನಟ ಶರತ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ದಿ ಸ್ಮೈಲಿ ಮ್ಯಾನ್ ಕ್ರೈಮ್ ಥ್ರಿಲ್ಲರ್ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಸಿನಿಮಾ 2024 ಡಿಸೆಂಬರ್27 ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ಥಿಯೇಟರ್‌ನಲ್ಲಿ ತೆರೆ ಕಂಡ ಸರಿಯಾಗಿ 40 ದಿನಗಳ ನಂತರ ಇದೀಗ ಈ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸುತ್ತಿದೆ.
ಶರತ್ ಕುಮಾರ್ ಅಭಿನಯದ 150ನೇ ಸಿನಿಮಾ
ತಮಿಳು ಆಹಾ ಒಟಿಟಿಯಲ್ಲಿ ದಿ ಸ್ಮೈಲಿ ಮ್ಯಾನ್ ವೀಕ್ಷಣೆಗೆ ಲಭ್ಯವಿದೆ. ಇದು ಹಿರಿಯ ನಟ ಶರತ್ ಕುಮಾರ್ ಅವರ 150 ನೇ ಸಿನಿಮಾ ಅನ್ನೋದು ಬಹಳ ವಿಶೇಷ. ಈ ಚಿತ್ರದಲ್ಲಿ ನಟ ಶರತ್ ಕುಮಾರ್ ಆಲ್ಜೈಮರ್ ಕಾಯಿಲೆಯಿಂದ ಬಳಲುತ್ತಿರುವ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ತನಿಖಾ ಅಧಿಕಾರಿ ಚಿದಂಬರಂ ಮರೆವಿನ ಕಾಯಿಲೆಯಿಂದ ಬಳಲುತ್ತಿರುತ್ತಾನೆ. ಆದರೂ ಆತ ತನಗೆ ವಹಿಸಿರುವ ಕೆಲವನ್ನು ಹೇಗೆ ಮಾಡುತ್ತಾನೆ? ಸರಣಿ ಕೊಲೆಗಾರನನ್ನು ಹೇಗೆ ಕಂಡು ಹಿಡಿಯುತ್ತಾನೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ.
ನಾಯಕ ಚಿದಂಬರಂ, ಪೊಲೀಸ್ ಇಲಾಖೆಯಲ್ಲಿ ಉತ್ತಮ ಹೆಸರು ಹೊಂದಿರುವಂಥ ಅಧಿಕಾರಿ. ಅನೇಕ ಅಸಾಮಾನ್ಯ ಪ್ರಕರಣಗಳನ್ನು ಸುಲಭವಾಗಿ ಪರಿಹರಿಸುತ್ತಾನೆ. ಆದರೆ ಆಲ್ಜೈಮರ್ ಕಾಯಿಲೆಯು ಅವನ ಜೀವನವನ್ನು ಸಂಪೂರ್ಣವಾಗಿ ತಲೆಕೆಳಗಾಗಿ ಮಾಡುತ್ತದೆ. ಚಿದಂಬರಂ ಹಿಂದಿನದ್ದನ್ನೆಲ್ಲಾ ಮರೆಯುತ್ತಾ ಹೋಗುತ್ತಾನೆ. ಅದೇ ಸಮಯದಲ್ಲಿ ದಿ ಸ್ಮೈಲಿ ಮ್ಯಾನ್ ಹೆಸರಿನ ಸೀರಿಯಲ್ ಕಿಲ್ಲರ್ ಕೇಸ್ ಚಿದಂಬರಂಗೆ ದೊರೆಯುತ್ತದೆ. ಅವನನ್ನು ಹಿಡಿಯಲು ಚಿದಂಬರಂ ಏನು ಪ್ಲ್ಯಾನ್ ಮಾಡುತ್ತಾನೆ? ಸರಣಿ ಕೊಲೆಗಾರ ಚಿದಂಬರಂ ಕೈಗೆ ಸಿಗುತ್ತಾನಾ? ಎನ್ನುವುದು ಈ ಸಿನಿಮಾ ಕಥೆ.
ಸಲಿಲ್ ದಾಸ್ ನಿರ್ಮಾಣದ ದಿ ಸ್ಮೈಲಿ ಮ್ಯಾನ್
ದಿ ಸ್ಮೈಲಿ ಮ್ಯಾನ್ ಚಿತ್ರವನ್ನು ಸಲಿಲ್ ದಾಸ್ ನಿರ್ಮಿಸಿದ್ದು ಶ್ಯಾಮ್ ಹಾಗೂ ಪ್ರವೀಣ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಶರತ್ ಜೊತೆಗೆ ಶ್ರೀ ಕುಮಾರ್, ಸಿಜಾ ರೋಸ್ ಜಾರ್ಜ್ ಮಾರ್ಯನ್, ರಾಜ್‌ಕುಮಾರ್, ಕುಮಾರ್ ನಟರಾಜನ್, ಭೇಬಿ ಅಜಿಯಾ ಹಾಗೂ ಇನ್ನಿತರರು ನಟಿಸಿದ್ದಾರೆ. ಚಿತ್ರಕ್ಕೆ ಗವಾಸ್ಕರ್ ಅವಿನಾಶ್ ಸಂಗೀತ ನೀಡಿದ್ದಾರೆ.
ದಿ ಸ್ಮೈಲಿ ಮ್ಯಾನ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂಥಹ ಅನೇಕ ಸೀರಿಯಲ್ ಕಿಲ್ಲರ್ ಕಥೆಗಳು ಬಹಳಷ್ಟು ಬಂದಿವೆ, ಚಿತ್ರದಲ್ಲಿ ಹೊಸತು ಇಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರೆ ಇನ್ನೂ ಕೆಲವರು ಚಿತ್ರದ ಕಾನ್ಸೆಪ್ಟ್ ಚೆನ್ನಾಗಿದೆ, ತನಿಖಾಧಿಕಾರಿ ಪಾತ್ರದಲ್ಲಿ ಶರತ್ ಕುಮಾರ್ ಅದ್ಭುತವಾಗಿ ನಟಿಸಿದ್ದಾರೆ ಎಂದು ಕಾಮೆಂಟ್ಸ್ ಮಾಡುತ್ತಿದ್ದಾರೆ.
