ಭೂತಕಾಲಂ, ರೋಮಾಂಚಂ ಸೇರಿ ಒಟಿಟಿಯಲ್ಲಿ ಲಭ್ಯವಿರುವ ಟಾಪ್ 5 ಮಲಯಾಳಂ ಹಾರರ್ ಸಿನಿಮಾಗಳು ಇವು: ವೀಕೆಂಡ್‌ಗೆ ಸಿನಿಮಾ ಎಂಜಾಯ್ ಮಾಡಿ
ಇತ್ತೀಚಿನ ದಿನಗಳಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಂತೆ ಬಹಳಷ್ಟು ಮಂದಿ ಹಾರರ್ ಸಿನಿಮಾಗಳನ್ನು ನೋಡಲು ಇಷ್ಟಪಡುತ್ತಿದ್ದಾರೆ. ಅದರಲ್ಲೂ ಮಲಯಾಳಂ ಹಾರರ್ ಸಿನಿಮಾಗಳು ಬಹಳ ಫೇಮಸ್ ಆಗುತ್ತಿವೆ. ನೀವೂ ಕೂಡಾ ಹಾರರ್ ಸಿನಿಮಾಪ್ರಿಯರಾಗಿದ್ದಲ್ಲಿ ಒಟಿಟಿಯಲ್ಲಿ ಈ ಟಾಪ್ 5 ಹಾರರ್ ಚಿತ್ರಗಳನ್ನು ಮಿಸ್ ಮಾಡಬೇಡಿ.
ಮಲಯಾಳಂ ಚಿತ್ರರಂಗ ಸಾಕಷ್ಟು ಹಾರರ್ ಸಿನಿಮಾಗಳು ಬರುತ್ತಿವೆ. ಕೆಲವು ಹಾರರ್ ಸಿನಿಮಾಗಳಿಗೆ ಒಳ್ಳೆ ಪ್ರತಿಕ್ರಿಯೆ ಕೂಡಾ ದೊರೆತಿದೆ. ಅಮೆಜಾನ್ ಪ್ರೈಂ, ನೆಟ್‌ಫ್ಲಿಕ್ಸ್ ಸೇರಿದಂತೆ ಒಟಿಟಿಯಲ್ಲಿ ಕೂಡಾ ಬಹಳಷ್ಟು ಮಲಯಾಳಂ ಸಿನಿಮಾಗಳು ನೋಡಲು ಲಭ್ಯವಿದೆ. ಹಾರರ್ ಸಿನಿಪ್ರಿಯರು ಈ ಚಿತ್ರಗಳನ್ನು ಮಿಸ್ ಮಾಡಬೇಡಿ. ಯಾವ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಯಾವ ಮಲಯಾಳಂ ಸಿನಿಮಾಗಳು ಸ್ಟ್ರೀಮ್ ಆಗುತ್ತಿದೆ? ಇಲ್ಲಿದೆ ನೋಡಿ ವಿವರ.
ಇಜ್ರಾ
ಪೃಥ್ವಿರಾಜ್ ಸುಕುಮಾರನ್ ಅಭಿನಯದ ಇಜ್ರಾ ಫೆಬ್ರವರಿ 2017 ರಂದು ಥಿಯೇಟರ್‌ನಲ್ಲಿ ಬಿಡುಗಡೆಯಾಯಿತು. ಈ ಹಾರರ್ ಥ್ರಿಲ್ಲರ್ ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಹೊಸದಾಗಿ ಮದುವೆಯಾದ ದಂಪತಿ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗಿ ನೆಲೆಸಿದಾಗ, ಅಂಗಡಿಯೊಂದರಲ್ಲಿ ಪುರಾತನ ಪೆಟ್ಟಿಗೆಯೊಂದನ್ನು ಖರೀದಿಸುತ್ತಾರೆ. ಆ ಪೆಟ್ಟಿಗೆ ಮನೆಗೆ ಬಂದ ನಂತರ ವಿಚಿತ್ರ ಘಟನೆಗಳು ನಡೆಯುತ್ತದೆ. ಅವರು ಜೀವನದಲ್ಲಿ ಏನು ಕಷ್ಟ ಅನುಭವಿಸುತ್ತಾರೆ. ಆ ಭೂತದ ಕಾಟದಿಂದ ಹೇಗೆ ಹೊರ ಬರುತ್ತಾರೆ ಅನ್ನೋದು ಸಿನಿಮಾ ಕಥೆ. ಈ ಚಿತ್ರವನ್ನು ಜೈ. ಕೆ ನಿರ್ದೇಶಿಸಿದ್ದಾರೆ. ಇಜ್ರಾ ಸಿನಿಮಾ ಡಿಸ್ನಿ+ ಹಾಟ್‌ಸ್ಟಾರ್ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ಯೂಟ್ಯೂಬ್‌ನಲ್ಲಿ ಕೂಡಾ ಲಭ್ಯವಿದೆ.
ಭೂತಕಾಲಂ
ಭೂತಕಾಲಂ ಸಿನಿಮಾ ಸೋನಿಲಿವ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ 2022 ರಿಂದ ನೇರವಾಗಿ ಸ್ಟ್ರೀಮಿಂಗ್ ಆರಂಭಿಸಿದೆ. ರಾಹುಲ್ ಸದಾಶಿವನ್ ನಿರ್ದೇಶನದ ಈ ಸೂಪರ್ ನ್ಯಾಚುರಲ್ ಹಾರರ್ ಸಿನಿಮಾದಲ್ಲಿ ರೇವತಿ ಮತ್ತು ಶೇನ್ ನಿಗಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಮ್ಮ ಮಗ ವಾಸಿಸುವ ಮನೆಯಲ್ಲಿ ನಡೆಯುವ ಕಥೆಯನ್ನು ಹೊಂದಿದೆ. ಮಲಯಾಳಂ ಜೊತೆಗೆ ತೆಲುಗು, ಕನ್ನಡ ಮತ್ತು ತಮಿಳು ಭಾಷೆಗಳಲ್ಲೂ ವೀಕ್ಷಕರು ಭೂತಕಾಲಂ ಸಿನಿಮಾವನ್ನು ನೋಡಬಹುದು.
ಭ್ರಮಯುಗಂ
ಮಲಯಾಳಂ ಚಿತ್ರರಂಗದ ಮೆಗಾಸ್ಟಾರ್ ಎಂದೇ ಹೆಸರಾದ ಮುಮ್ಮಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಭ್ರಮಯುಗಂ ಸಿನಿಮಾ ಈ ವರ್ಷ 2024 ಫೆಬ್ರವರಿಯಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಚಿತ್ರವನ್ನು ರಾಹುಲ್ ಸದಾಶಿವನ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಸೋನಿಲಿವ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಸಿನಿಮಾ ಮಲಯಾಳಂ ಭಾಷೆ ಜೊತೆಗೆ ಹಿಂದಿ, ಕನ್ನಡ, ತಮಿಳು ಭಾಷೆಗಳಲ್ಲಿ ಲಭ್ಯವಿದೆ.
ರೋಮಾಂಚಂ
ಈ ಸಿನಿಮಾ ಸೆನ್ಸೇಷನಲ್ ಬ್ಲಾಕ್‌ಬಸ್ಟರ್ ಆಗಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಈ ಸಿನಿಮಾ ಚಿತ್ರಮಂದಿರದಲ್ಲಿ ರಿಲೀಸ್ ಆಗಿತ್ತು. ಚಿತ್ರದಲ್ಲಿ ಸೌಬಿನ್ ಶಾಹಿರ್, ಅರ್ಜುನ್ ಅಶೋಕನ್, ಸಜಿನ್ ಗೋಪು, ಸಿಜು ಸನ್ನಿ ಹಾಗೂ ಇನ್ನಿತರರು ನಟಿಸಿದ್ದಾರೆ. ಜೀತು ಮಾಧವನ್, ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ರೋಮಾಂಚಂ ಹಾರರ್ ಸಿನಿಮಾ ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಮಲಯಾಳಂ ಜೊತೆಗೆ ಹಿಂದಿ, ತೆಲುಗು ಎರಡೂ ಭಾಷೆಗಳಲ್ಲೂ ನೋಡಬಹುದು.
ನೀಲವೆಲಿಚಂ
ಕಳೆದ ವರ್ಷ ಏಪ್ರಿಲ್‌ನಲ್ಲಿ ಚಿತ್ರಮಂದಿರಗಳಲ್ಲಿ ತೆರೆ ಕಂಡಿದ್ದ ನೀಲವೆಲಿಚಂ ಚಿತ್ರದಲ್ಲಿ ಟೊವಿನೋ ಥಾಮಸ್, ರೀಮಾ ಕಲ್ಲಿಂಗಲ್, ಷೈನ್ ಟಾಮ್ ಚಾಕೊ, ರೋಷನ್ ಮ್ಯಾಥ್ಯೂ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಆಷಿಕ್ ಅಬೂ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ಬಿಡುಗಡೆ ಆದಾಗ ಪಾಸಿಟಿವ್ ಟಾಕ್ ದೊರೆತಿತ್ತು. ಒಂದು ಕಟ್ಟಡದ ಸುತ್ತ ಸುತ್ತುವ ರಹಸ್ಯದ ಕಥೆ ಸುತ್ತ ಸಿನಿಮಾ ಸಾಗಲಿದೆ. ನೀಲವೆಲಿಚಂ ಸಿನಿಮಾ ಅಮೆಜಾನ್ ಪ್ರೈಂ ವಿಡಿಯೋ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ತೆಲುಗು ಭಾಷೆಯಲ್ಲಿ ಭಾರ್ಗವಿ ನಿಲಯಂ ಹೆಸರಿನಲ್ಲಿ ಸ್ಟ್ರೀಮ್ ಆಗುತ್ತಿದೆ.
ಈ ವೀಕೆಂಡ್‌ನಲ್ಲಿ ನಿಮ್ಮ ಸ್ನೇಹಿತರೊಂದಿಗೆ ಈ ಹಾರರ್ ಸಿನಿಮಾಗಳನ್ನು ಎಂಜಾಯ್ ಮಾಡಿ