Chutney Sambar Review: ಹೇಗಿದೆ ಚಟ್ನಿ ಸಾಂಬಾರ್ ವೆಬ್ ಸರಣಿ? ಊಟಿ ಸಾಂಬಾರ್, ಚೆನ್ನೈ ಚಟ್ನಿ ರಹಸ್ಯದ ನಡುವೆ ಯೋಗಿಬಾಬು ರುಚಿಕರ ಅಡುಗೆ
Chutney Sambar Review: ಒಟಿಟಿಯಲ್ಲಿ ಕಳೆದ ವಾರ ಬಿಡುಗಡೆಯಾದ ಚಟ್ನಿ ಸಾಂಬಾರ್ ವೆಬ್ ಸರಣಿ ಹೇಗಿದೆ? ಈ ಸರಣಿಯ ಎಲ್ಲಾ ಸಂಚಿಕೆಗಳು ನೋಡಿಸಿಕೊಂಡು ಹೋಗುತ್ತದೆಯೇ? ಹಾಸ್ಯವಿದೆಯೇ? ಭಾವನಾತ್ಮಕವಾಗಿ ಕಾಡುತ್ತದೆಯೇ? ಏನಾದರೂ ಸಂದೇಶವಿದೆಯೇ? ಒಟ್ಟಾರೆ ಚಟ್ನಿ ಮತ್ತು ಸಾಂಬಾರ್ ರುಚಿಕರವಾಗಿರುವುದೇ? ಈ ಚಟ್ನಿ ಸಾಂಬಾರ್ ವಿಮರ್ಶೆ ಓದಿ.
Chutney Sambar OTT Web Series Review: ಚಟ್ನಿ ಸಾಂಬಾರ್ ಹೆಸರಿನ ವೆಬ್ ಸರಣಿಯೊಂದು ಓಟಿಟಿಗೆ ಬಂದು ವಾರ ಕಳೆದಿತ್ತು. ಯೋಗಿ ಬಾಬು ಇದ್ದಲ್ಲಿ ನಗುವಿಗೆ ಬರ ಇರೋದಿಲ್ಲ ಎನ್ನುವುದು ನನ್ನ ಹಳೆಯ ನಂಬಿಕೆ. ಒಟಿಟಿಯಲ್ಲಿ ಹೊಸ ಕನ್ನಡ ಸಿನಿಮಾ, ವೆಬ್ ಸರಣಿ ಯಾವುದೂ ಕಾಣಿಸದೆ ಇದ್ದಕಾರಣ, ಹಿಂದಿ, ಇಂಗ್ಲಿಷ್, ತೆಲುಗಿನಲ್ಲಿ ಬಿಡುಗಡೆಯಾದ ಆಸಕ್ತಿದಾಯಕ ಎನಿಸುವ ಕೆಲವೊಂದು ಸಿನಿಮಾಗಳನ್ನು ನೋಡಿಯಾದ ಕಾರಣ "ನೋಡೋಣ ಚಟ್ನಿ ಸಾಂಬಾರ್" ಎಂದು ಆನ್ ಮಾಡಿದೆ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಕನ್ನಡದಲ್ಲಿಯೇ ಈ ವೆಬ್ ಸರಣಿ ನೋಡಬಹುದು. ದಿನಕ್ಕೆ ಮೂರರಂತೆ ಎರಡೇ ದಿನಗಳಲ್ಲಿ ಈ ವೆಬ್ ಸರಣಿ ನೋಡಿಸಿಕೊಂಡು ಹೋಯ್ತು. ಕಳೆದ ವರ್ಷ ಊಟಿಗೆ ಪ್ರವಾಸ ಹೋಗಿದ್ದ ಕಾರಣ ಈ ವೆಬ್ ಸರಣಿ ನನಗೆ ಇನ್ನಷ್ಟು ಇಷ್ಟವಾಯ್ತು. ಹಾಗಂತ, ಇದು ಊಟಿಯ ಸಮಗ್ರ ದರ್ಶನ ಮಾಡಿಸೋದಿಲ್ಲ. ಈ ವೆಬ್ ಸರಣಿಯಲ್ಲಿ ಊಟಿಯ ಸೌಂದರ್ಯ ಕೊಂಚ ನೀರಸವಾಗಿ ಕಾಣಿಸುತ್ತದೆ. ಆದರೆ, ಚಟ್ನಿ ಸಾಂಬಾರ್ ನೀರಸವಾಗಿಲ್ಲ.
ವೆಬ್ ಸರಣಿ ವಿಮರ್ಶೆ
ವೆಬ್ ಸರಣಿ ಹೆಸರು: ಚಟ್ನಿ ಸಾಂಬಾರ್
ಭಾಷೆ: ಮೂಲ- ತಮಿಳು, ಕನ್ನಡ ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯ
ತಾರಾಗಣ: ಯೋಗಿ ಬಾಬು, ವಾನಿ ಭೋಜನ್, ಚಂದ್ರನ್, ನಿತಿನ್ ಸತ್ಯ ಮತ್ತು ಇತರರು.
ನಿರ್ದೇಶಕರು: ರಾಧಾ ಮೋಹನ್
ರೇಟಿಂಗ್: ⭐⭐⭐
ಚಟ್ನಿ ಸಾಂಬಾರ್ ವೆಬ್ ಸರಣಿ ಕಥೆಯೇನು?
ರತ್ನಸ್ವಾಮಿ ಎಂಬ ವ್ಯಕ್ತಿ ಊಟಿಯಲ್ಲಿ ಅಮುಧಾ ಕೆಫೆ ನಡೆಸುತ್ತಾನೆ. ಈ ಹೋಟೆಲ್‌ನ ಸಾಂಬಾರ್ ಸಿಕ್ಕಾಪಟ್ಟೆ ಫೇಮಸ್. ಆ ಸಾಂಬಾರ್‌ನ ರೆಸಿಪಿ ಬೇರೆ ಯಾವ ಹೋಟೆಲ್‌ನವರಿಗೂ ಗೊತ್ತಿಲ್ಲ. ಈ ರತ್ನಸ್ವಾಮಿ ತಾನು ಸಾಯುವ ಸಮಯದಲ್ಲಿ "ನಿನ್ನ ಅಮ್ಮನನ್ನು ಮದುವೆಯಾಗುವ ಮೊದಲು ನನಗೊಬ್ಬಳು ಚೆನ್ನೈನಲ್ಲಿ ಪ್ರಿಯತಮೆ ಇದ್ಲು. ಆಕೆಗೆ ಒಬ್ಬ ಮಗ ಇದ್ದಾನಂತೆ. ಆತನನ್ನು ಕರೆದುಕೊಂಡು ಬಾ" ಎಂದು ಭಾಷೆ ತೆಗೆದುಕೊಳ್ಳುತ್ತಾನೆ. ಅಪ್ಪನ ಆಸೆ ಈಡೇರಿಸಲೇಬೇಕೆಂದು ಚೆನ್ನೈಗೆ ಬಂದ ಕಾರ್ತಿಕ್‌ಗೆ ಆ ಮಗ ಸಿಗುತ್ತಾನೆ. ಸಚಿನ್ (ಯೋಗಿಬಾಬು) ರೋಡ್ ಸೈಡ್‌ನಲ್ಲಿ ತಳ್ಳುಗಾಡಿಯಲ್ಲಿ ಹೋಟೆಲ್ ನಡೆಸುತ್ತಾ ಇರುತ್ತಾನೆ. ಆತನ ಚಟ್ನಿ ತುಂಬಾ ಫೇಮಸ್. ಎಂಎಲ್‌ಎ ಕೂಡ ಈತನ ಬಾಲ್ಯ ಸ್ನೇಹಿತ. ಹುಟ್ಟುವ ಮೊದಲೇ ಅಮ್ಮನ ಬಿಟ್ಟು ಹೋದ ಅಪ್ಪನ ಮೇಲೆ ಅತೀವ ದ್ವೇಷ ಇಟ್ಟುಕೊಂಡಿರುವ ಈ ಸಚಿನ್‌ನನ್ನು ಊಟಿಗೆ ಕರೆದುಕೊಂಡು ಹೋಗುವ ಟಾಸ್ಕ್‌ನಲ್ಲಿ ಈತ ಯಶಸ್ವಿಯಾದರೂ, ಬಳಿಕ ಊಟಿಯಲ್ಲಿ ನಡೆಯುವ ಘಟನೆಗಳು "ನಗುವಿನೊಂದಿಗೆ ಒಂದಿಷ್ಟು ಭಾವನಾತ್ಮಕ"ವಾಗಿಯೂ ಇಷ್ಟವಾಗುತ್ತದೆ.
ಹೇಗಿದೆ ಚಟ್ನಿ ಸಾಂಬಾರ್?
ವೆಬ್ ಸರಣಿಯಾದ ಕಾರಣ ಚಟ್ನಿ ಮತ್ತು ಸಾಂಬಾರ್‌ನ ರುಚಿ ಪ್ರೇಕ್ಷಕರಿಗೆ ದೊರಕದೆ ಇದ್ದರೂ ತುಂಬಾ ರುಚಿಯಾಗಿರಬಹುದು ಎಂಬ ಕಲ್ಪನೆಯನ್ನು ಮೂಡಿಸುತ್ತದೆ. ಆರು ಸಂಚಿಕೆಗಳಲ್ಲಿ ಯಾವ ಸಂಚಿಕೆಗಳೂ ಬೋರ್ ಎಂದೆನಿಸುವುದಿಲ್ಲ. ಇನ್ನಷ್ಟು ಎಳೆಯೋಣ ಎಂದು ಸರಣಿಯನ್ನು ಎಳೆದೂ ಇಲ್ಲ. ಈ ಸೀರಿಸ್‌ನಲ್ಲಿ ಯೋಗಿ ಬಾಬು ಮಾತ್ರವಲ್ಲದೆ ಇರುವ ಬಹುತೇಕ ಎಲ್ಲಾ ಪಾತ್ರಗಳೂ ಇಷ್ಟವಾಗುತ್ತವೆ. ಸಚಿನ್ ಬಾಬು, ಸೋಫಿ, ಕಾರ್ತಿಕ್, ಇಲಾಂಗೊ, ಪೀಟರ್, ಅಮುತಾ, ತಂಬಿ, ರತ್ನಸ್ವಾಮಿ, ಜಯಲಕ್ಷ್ಮಿ, ಜಾನ್ಸಿ, ಅಪ್ಪು, ಸುಭಾ... ಹೀಗೆ ಕೆಲವೇ ಕೆಲವು ಪಾತ್ರಗಳು ಮಾತ್ರ ಈ ಸರಣಿಯಲ್ಲಿವೆ. ಯೋಗಿ ಬಾಬು ಇಲ್ಲಿ ಓವರ್ ಆಕ್ಟಿಂಗ್ ಮಾಡಿಲ್ಲ. ನಗುವಿನ ಜತೆ ತುಂಬಾ ಒಳ್ಳೆಯ ವ್ಯಕ್ತಿಯಾಗಿ ಇಷ್ಟವಾಗುತ್ತಾರೆ. ಒಂದು ಕಡೆ "ನನ್ನ ಕೈಯಲ್ಲೂ ಫೈಟ್ ಮಾಡಿಸಿದ್ರಲ್ಲ" ಎನ್ನುತ್ತಾ ಫೈಟಿಂಗ್ ಮಾಡುವ ದೃಶ್ಯವೂ ಇದೆ. ಸೋಫಿ ಪಾತ್ರವೂ ಇಷ್ಟವಾಗುತ್ತದೆ. ಕಾರ್ತಿಕ್ ಲವರ್ ಪಾತ್ರವೂ ಮುದ್ದಾಗಿದೆ.
ವೆಬ್ ಸರಣಿಯ ಕೊನೆಗೆ ಪ್ರೇಕ್ಷಕರಿಗೆ ಖಂಡಿತವಾಗಿಯೂ ಚಟ್ನಿ ಸಾಂಬಾರ್ ರೆಸಿಪಿಯ ರಹಸ್ಯ ತಿಳಿಯುವುದಿಲ್ಲ. ಆದರೆ, ರತ್ನಸ್ವಾಮಿಯು ಅಮುದಾಳನ್ನು ಬಿಟ್ಟು ಬೇರೆ ಯುವತಿಯನ್ನು ಮದುವೆಯಾದದ್ದು ಯಾಕೆ ಎಂಬ ರಹಸ್ಯ ತಿಳಿಯುತ್ತದೆಯೇ?
ಈ ವೆಬ್ ಸರಣಿಯಲ್ಲಿ ಮನುಷ್ಯ ಸಂಬಂಧಗಳ ಕುರಿತಾದ ಭಾವನಾತ್ಮಕ ಅಂಶವು ಇಷ್ಟವಾಗುತ್ತದೆ. ಅಪ್ಪನ ಬಗ್ಗೆ ಮಕ್ಕಳಲ್ಲಿ ಇರುವ ಒಳ್ಳೆಯ ಗುಣ, ಮತ್ತೊಬ್ಬ ಮಗನಲ್ಲಿ ಅಪ್ಪನ ಗುಣ ಕಾಣುವ ಇತರರು, ಹಣಕ್ಕಿಂತ ಒಳ್ಳೆಯತನ ಮುಖ್ಯ ಎನ್ನುವ ನಂಬಿಕೆ... ಕೌಟುಂಬಿಕ ಸಂಬಂಧಗಳ ಮಹತ್ವ, ಕುಟುಂಬದ ನಡುವಿನ ತಪ್ಪು ಗ್ರಹಿಕೆಗಳು, ಹೀಗೆ ಮನುಷ್ಯ ಸಂಬಂಧಗಳ ಕುರಿತು ಈ ಸರಣಿ ಸಾಕಷ್ಟು ಮಾತನಾಡುತ್ತದೆ. ಒಟ್ಟಾರೆ ನಗುನಗುತ್ತಾ ಒಂದು ವೆಬ್ ಸರಣಿ ನೋಡೋಣ ಎಂದುಕೊಳ್ಳುವವರಿಗೆ ಈ ವೆಬ್ ಸರಣಿ ಇಷ್ಟವಾಗುತ್ತದೆ.
ಊಟಿಯಲ್ಲಿ ಚಿರತೆಯೊಂದು ಇದೆ ಎಂಬ ಭಯ. ಯೋಗಿ ಬಾಬು ಗೊರಕೆ ನೋಡಿ ಈತನನ್ನು ಚಿರತೆ ಎಂದು ಅನುಮಾನಿಸುವುದು, ನನ್ನಮ್ಮ ನನ್ನನ್ನು ಕರಡಿಯ ಗೊರಕೆಯಂತೆ ಇದೆ ಎನ್ನುತ್ತಿದ್ದಳು ಎಂದು ಸ್ವಯಂ ಟೀಕೆ... ಬಾಡಿ ಶೇಮಿಂಗ್, ನೆಗೆಟಿವ್ ವಿಮರ್ಶೆಗೂ ಕೆಲವೊಂದು ಕಡೆ ಅವಕಾಶವಿದೆ. ಒಂದಿಷ್ಟು ನಗು, ಒಂದಿಷ್ಟು ಭಾವುಕತೆ, ಪ್ರೀತಿಯ ಒಂದು ಸರಳಕಥೆಯ ಹಾಸ್ಯ ಸರಣಿ ನೋಡಿ ಖುಷಿಪಡಲು ಬಯಸುವವರು ಈ ಸೀರಿಸ್‌ನ ಕೆಲವೇ ಕೆಲವು ನೆಗೆಟಿವ್ ಅಂಶಗಳಿಗೆ ಭೂತಕನ್ನಡಿ ಇಟ್ಟು ಅವಲೋಕಿಸುವ ಅಗತ್ಯವಿಲ್ಲ.
ಔಟ್ ಆಫ್ ದಿ ಬಾಕ್ಸ್: ಈ ವೆಬ್ ಸರಣಿಯಲ್ಲಿ ಒಬ್ಬ ಪುಟ್ಟ ಹುಡುಗನಿಗೆ ಟಾಯ್ಲೆಟ್‌ಗೆ ಹೋಗಿ ಮೂತ್ರ ಮಾಡಲು ಭಯ. ಗೆಳೆಯರು ಟಾಯ್ಲೆಟ್‌ನಲ್ಲಿ ಆನೆಕೊಂಡ ಇರುತ್ತದೆ ಎಂದು ಭಯಪಡಿಸಿದ್ದು ಅದಕ್ಕೆ ಕಾರಣ. ಎಲ್ಲರೂ ಊಟ ಮಾಡುತ್ತಿರುವಾಗ ಬಕೆಟ್ ತಂದು ಎಲ್ಲರ ಮುಂದೆಯೇ ಬಕೆಟ್‌ಗೆ ಸುಸು ಮಾಡುವ ಅಭ್ಯಾಸ ಆತನಿಗೆ. ಮಕ್ಕಳಲ್ಲಿ ಇರಬಹುದಾದ ಇಂತಹ ಹಲವು ಅಭ್ಯಾಸವನ್ನು ಬಿಡಿಸಲಾಗದು ಎಂದುಕೊಳ್ಳುವವರಿಗೆ ಉತ್ತರವೂ ಈ ಸರಣಿಯಲ್ಲಿದೆ. ಇದು ಚಿತ್ರದ ಒಂದು ಅತಿಸಣ್ಣ ಅಂಶ. ಆದರೆ, ನನಗೆ ತುಂಬಾ ಇಷ್ಟವಾಯಿತು.
ಸರಣಿ ಮುಗಿದಾಗ ಮನಸ್ಸಲ್ಲೊಂದು "ಖುಷಿ"ಯನ್ನು ಈ ವೆಬ್ ಸರಣಿ ಉಳಿಸುತ್ತದೆ.
- ವಿಮರ್ಶೆ: ಪ್ರವೀಣ್ ಚಂದ್ರ ಪುತ್ತೂರು
ಕನ್ನಡದಲ್ಲಿ ಸಿನಿಮಾ ವಿಮರ್ಶೆ, ವೆಬ್ ಸರಣಿ, ಬಿಡುಗಡೆಯಾಗಲಿರುವ ಹೊಸ ವೆಬ್ ಸರಣಿ, ಹೊಸ ಒಟಿಟಿ ಸಿನಿಮಾಗಳು, ಸೀರಿಯಲ್‌ಗಳ ಕಥೆ, ಸೀರಿಯಲ್ ಅಪ್‌ಡೇಟ್‌ಗಳಿಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡದ ಮನರಂಜನೆ ವಿಭಾಗಕ್ಕೆ ಪ್ರತಿದಿನ ಭೇಟಿ ನೀಡಲು ಮರೆಯದಿರಿ.