La Palma Review: ರೌದ್ರ ಲಾವಾರಸ, ರಕ್ಕಸ ಸುನಾಮಿ ನಡುವೆ ಬದುಕುಳಿಯುವ ಸಂಬಂಧ, ಹರೆಯದ ಲೆಸ್ಬಿಯನ್ ಸಾಂಗತ್ಯದ ಕಥೆ
La Palma Review: ನೆಟ್‌ಫ್ಲಿಕ್ಸ್‌ನಲ್ಲಿರುವ ಲಾ ಪಾಲ್ಮಾ ಎಂಬ ಕಿರು ವೆಬ್ ಸರಣಿಯು ಪ್ರಕೃತಿಯ ರುದ್ರ ನರ್ತನದ ಕಥೆ ಹೇಳುವುದರ ಜತೆಗೆ ಸಂಬಂಧಗಳ ಮಹತ್ವವನ್ನೂ ಸಾರುತ್ತದೆ. ರಕ್ಕಸ ಸುನಾಮಿ ಅಲೆಗಳು, ಬದುಕುಳಿಯುವ ಸವಾಲಿನ ನಡುವೆ ಲೆಸ್ಬಿಯನ್ ಸ್ಟೋರಿಯೂ ಇದರಲ್ಲಿದೆ.
La Palma Review: ನೆಟ್‌ಫ್ಲಿಕ್ಸ್‌ನಲ್ಲಿರುವ ಲಾ ಪಾಲ್ಮಾ ಎಂಬ ವೆಬ್ ಸರಣಿ ಲಾವಾರಸ, ಸುನಾಮಿಯ ನಡುವೆ ಬದುಕುಳಿಯುವ ಕಥೆ ಹೇಳುತ್ತದೆ. ಇಷ್ಟೇ ಆಗಿದ್ದರೆ ಅದು ಕೇವಲ ಡಾಕ್ಯುಮೆಂಟರಿಯಾಗುತ್ತಿತ್ತು. ಈ ನಾರ್ವೇ ವೆಬ್ ಸರಣಿಯಲ್ಲಿ ಸಂಬಂಧದ ಕಥೆ ಹೇಳಿರುವುದು ಆಪ್ತವಾಗಿದೆ. ಪಾಶ್ಚಿಮಾತ್ಯ ವೆಬ್ ಸರಣಿ, ಸಿನಿಮಾಗಳಲ್ಲಿ ಲೆಸ್ಬಿಯನ್, ಗೇ, ಮ್ಯಾಕ್ಸಿಸಂ ಥಿಯರಿಗಳನ್ನು ಬಲವಂತವಾಗಿ ತುರುಕಲಾಗುತ್ತಿದೆ ಎಂದು ಇತ್ತೀಚೆಗೆ ರೆಡ್ಡಿಟ್‌ನಲ್ಲಿ ಚರ್ಚೆಯೊಂದನ್ನು ಓದಿದ್ದೆ. ಸುನಾಮಿಯ ರೌದ್ರ ನರ್ತನವನ್ನು ನೋಡಲು ಈ ವೆಬ್ ಸರಣಿ ನೋಡಲು ಕುಳಿತವನಿಗೆ ಈ ಸೀರಿಸ್‌ನ ನಡುವೆ ಹದಿಹರೆಯದ ಇಬ್ಬರು ಹುಡುಗಿಯರ ಲೆಸ್ಬಿಯನ್ ಪ್ರೀತಿ ಅಚ್ಚರಿಗೊಳಿಸಿದ್ದು ಸುಳ್ಳಲ್ಲ. ಇನ್ನೂ ಹದಿನೆಂಟು ತುಂಬದ ಈ ಯುವತಿಯರು ಲಿಪ್‌ಲಾಕ್ ಮಾಡಿಕೊಂಡು ಚುಂಬಿಸಿದ್ದು (ಇಂಗ್ಲಿಷ್ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಇರುವಂತಹದ್ದು ಎಂದು ಕಡೆಗಣಿಸಬಹುದಿತ್ತು) ಮಾತ್ರವಲ್ಲ ಬೆಡ್‌ನಲ್ಲಿ ಸಾಂಗತ್ಯ ನಡೆಸುತ್ತಾರೆ. ಇವರಿಬ್ಬರ ಕಣ್ಣುಗಳಲ್ಲಿ ಕಾಮದ ಉತ್ಕಟತೆಗಿಂತ ಪ್ರೀತಿಯ ಉತ್ಕಟತೆಯನ್ನು ಸೆರೆ ಹಿಡಿದ ಪರಿ ಕಾಡುವಂತೆ ಇತ್ತು. ಇವರ ಈ ಲೆಸ್ಬಿಯನ್ ಪ್ರೀತಿಯನ್ನು ಅರ್ಥ ಮಾಡಿಕೊಂಡು ತಕ್ಷಣ ಇಟ್ಸ್ ಓಕೆ ಎನ್ನುವ ಪೇರೆಂಟ್ಸ್ ಕೂಡ ಅಚ್ಚರಿಗೆ ದೂಡುತ್ತಾರೆ.
ಈ ಸುನಾಮಿ ಪ್ರಾಕೃತಿಕ ವಿಕೋಪದ ಸಿನಿಮಾದಲ್ಲಿ ಲೆಸ್ಬಿಯನ್ ಕಥೆ ಮಾತ್ರ ಇರೋದಲ್ಲ. ಇದೊಂದು ಪುಟ್ಟ ಭಾಗವಷ್ಟೇ. ಇದು ಸಂಬಂಧ ಬೆಸೆಯುವ ಕಥೆಯಾಗಿ ಇಷ್ಟವಾಗುತ್ತದೆ. ಜೆನ್ನಿಫರ್ ಎಂಬ ಟೀಚರ್, ಆಕೆಯ ಪತಿ ಫ್ರೆಡ್ರಿಕ್‌ಗೆ ಇಬ್ಬರು ಮಕ್ಕಳು. 17 ವರ್ಷದ ಸಾರಾ ಮತ್ತು ಟೋಬಿಸ್. ಸಾರಾ ನಂತರ ಲೆಸ್ಬಿಯನ್ ಎನ್ನುವುದು ಬಹಿರಂಗವಾಗುತ್ತದೆ. ಟೋಬಿಸ್‌ಗೆ ಆಟಿಸಂ ಕಾಯಿಲೆ ಇದೆ. ಆದರೆ, ಈ ಸಿನಿಮಾದಲ್ಲಿ ಎಲ್ಲರನ್ನೂ ಸುರಕ್ಷಿತ ಸ್ಥಳಕ್ಕೆ ತಲುಪಿಸಲು ಈತನ ಪ್ರಮುಖ ಪಾತ್ರ ಇರುತ್ತದೆ. ಇವರೆಲ್ಲರೂ ವಾರ್ಷಿಕ ರಜೆಯಲ್ಲಿ ಲಾ ಪಾಲ್ಮಾಕ್ಕೆ ವೆಕೇಷನ್‌ಗೆ ಬಂದಿರುತ್ತಾರೆ. ಇದು ಚಂದದ ದ್ವೀಪ. ಆದರೆ, ಒಳಗೆ ಲಾವಾರಸವಿಟ್ಟುಕೊಂಡ ಬೆಟ್ಟ ಪಕ್ಕದಲ್ಲಿದೆ. ಲಾವಾರಸ ಉರಿದು ಬೆಟ್ಟ ಕುಸಿದು ಸಮುದ್ರದಲ್ಲಿ ದೊಡ್ಡ ಸುನಾಮಿ ಉಂಟಾಗುವ ಪ್ರಾಕೃತಿಕ ವಿಕೋಪದ ಕಥೆಯನ್ನು ಇದು ಹೊಂದಿದೆ.
ಜೆನ್ನಿಫರ್ ಮತ್ತು ಫ್ರೆಡ್ರಿಕ್ ನಡುವೆ ಒಂದು ಕ್ಷಣದಲ್ಲಿ ಸಂಬಂಧ ಹಾಳಾಗುತ್ತದೆ. ಜೆನ್ನಿಫರ್ ಯೋಗ ಇತ್ಯಾದಿಗಳಲ್ಲಿ ಕಾಲ ಕಳೆಯುತ್ತಾಳೆ. ರಜೆ ಕಳೆಯಲು ಬಂದ ಫೆಡ್ರಿಕ್‌ಗೆ ಜೆನ್ನಿಫರ್ ನನ್ನನ್ನು ಕಡೆಗಣಿಸುತ್ತಿದ್ದಾಳೆ ಎಂದೆನಿಸುತ್ತದೆ. ನಮ್ಮಿಬ್ಬರ ಸಂಬಂಧ ಉತ್ತಮಗೊಳ್ಳಲು ಫೆಡ್ರಿಕ್ ಪ್ರಯತ್ನಿಸುತ್ತಿಲ್ಲ ಎಂದು ಜೆನ್ನಿಫರ್ ಭಾವಿಸುತ್ತಾಳೆ. ಇದೇ ರೀತಿಯ ವಿಷಯಗಳಿಂದ ಇವರಿಬ್ಬರ ನಡುವೆ ದೊಡ್ಡ ಜಗಳವಾಗುತ್ತದೆ. ಫಾರಿನ್‌ನಲ್ಲಿ ಸಂಬಂಧಗಳು ಬೇಗ ದೂರವಾಗುತ್ತವೆ. ಮದುವೆ ಡಿವೋರ್ಸ್ ಎಲ್ಲಾ ಸ್ಪೀಡ್ ಆಗಿ ನಡೆಯುತ್ತವೆ ಎಂಬ ನಂಬಿಕೆ ಇದೆ. ಇಲ್ಲೂ ಇದೇ ರೀತಿ ಆಗುತ್ತದೆ, ಎಲ್ಲವೂ ಮುಗಿದು ಹೋಯ್ತು ಎಂದುಕೊಳ್ಳುವಷ್ಟರಲ್ಲಿ ಪ್ರಕೃತಿ ಇವರನ್ನು ಬೆಸೆಯುವ ಪರಿ ಇಷ್ಟವಾಗುತ್ತದೆ. ಹೀಗಾಗಿ, ಇದು ಕೇವಲ ಬದುಕುಳಿಯುವ ಕಥೆಯಲ್ಲ. ಸಂಬಂಧಗಳನ್ನು ಬದುಕುಳಿಸುವ ಕಥೆಯಂತೆಯೂ ಭಾಸವಾಗುತ್ತದೆ.
ಅಪ್ಪ ಮತ್ತು ಅಮ್ಮನ ನಡುವಿನ ಸಂಬಂಧ ಹದಗೆಡುವುದನ್ನು ಕಂಡು ಮಗಳು ಸಾರಾ ಅಲ್ಲಿಂದ ವಿಮಾನದ ಮೂಲಕ ಹೋಗಲು ಮುಂದಾಗುತ್ತಾಳೆ. "ನಮ್ಮಿಬ್ಬರ ಜಗಳದಿಂದ ಬೇಸೆತ್ತು ಆಕೆ ವಿಮಾನದಲ್ಲಿ ಹೋಗಿದ್ದಾಳೆ, ಆ ವಿಮಾನ ಲಾವಾರಸದ ಬೆಂಕಿಗೆ ಅಪಘಾತವಾಗಿದೆ, ನಮ್ಮ ಜಗಳದಿಂದಾಗಿ ಮಗಳು ಸತ್ತಿದ್ದಾಳೆ" ಎಂದುಕೊಂಡು ಫೆಡ್ರಿಕ್ ಮತ್ತು ಜೆನ್ನಿಫರ್ ಅಂದುಕೊಳ್ಳುತ್ತಾರೆ. ಆಕೆ ಬದುಕಿದ್ದಾಳೆಯೇ ಎಂದು ತಿಳಿಯಲು ಆಸ್ಪತ್ರೆಯಲ್ಲಿ ಇವರಿಬ್ಬರು ಪಡುವ ಯಾತನೆ ಹೃದಯ ವಿದ್ರಾವಕ. ಈ ಕ್ಷಣ ಇವರಿಬ್ಬರು ಮತ್ತಷ್ಟು ಹತ್ತಿರವಾಗುತ್ತಾರೆ.
ಈ ದ್ವೀಪದಲ್ಲಿ ಲಾ ಪಾಲ್ಮಾದ ಜಿಯೋಲಾಜಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಡಾಕ್ಟರೇಟ್ ಪದವಿ ಪಡೆಯುತ್ತಿರುವ ಮೇರಿ ಎಂಬ ವಿದ್ಯಾರ್ಥಿನಿ ಇದ್ದಾಳೆ. ಈ ಸರಣಿಯಲ್ಲಿ ಮೇರಿ ಮತ್ತು ಆಕೆಯ ಸಹೋದರನ ಬಾಂಧವ್ಯದ ಕಥೆಯೂ ಇದೆ. ಆಕೆಗೆ ಈ ದ್ವೀಪದಲ್ಲಿ ಜ್ವಾಲಾಮುಖಿಯ ಸುಳಿ ಇರುವುದು ತಿಳಿಯುತ್ತದೆ. ಆದರೆ, ಅಲವೆರೊ ಎಂಬ ಮತ್ತೊಬ್ಬ ವಿಜ್ಞಾನಿ ಇನ್ನಷ್ಟು ಡೇಟಾ ಬಯಸುತ್ತಾನೆ. ಹಿಂದೊಮ್ಮೆ ಆತ ಇದೇ ರೀತಿ ಸುನಾಮಿ ಎಚ್ಚರಿಕೆ ನೀಡಿ ಆ ದುರ್ಘಟನೆ ನಡೆಯದೆ ಇದ್ದದ್ದಕ್ಕೆ ಕೆಲಸ ಕಳೆದುಕೊಂಡಿದ್ದಾನೆ. ಮುಂದೆ ಈ ದ್ವೀಪ ಮಾತ್ರವಲ್ಲದೆ ಅಕ್ಕಪಕ್ಕದ ದ್ವೀಪಗಳು (ಪ್ರವಾಸಿಗರು ಹೆಚ್ಚು ಬರುವ) ಜನರ ಬದುಕುಳಿಯುವ ಪ್ರಶ್ನೆ ಉಂಟಾಗುತ್ತದೆ. ಇವರೆಲ್ಲರನ್ನು ಕಾಪಾಡುವ ಸರಕಾರದ ಪ್ರಯತ್ನ ತಡವಾಗುತ್ತದೆ. ಜೆನ್ನಿಫರ್, ಫೆಡ್ರಿಕ್, ಸಾರಾ, ಟೋಬಿಸ್ ಮುಂತಾದವರ ಬದುಕುಳಿಯುವ ಕಥೆಯಾಗಿ ನೋಡಿಸಿಕೊಂಡು ಹೋಗುತ್ತದೆ ಈ ವೆಬ್‌ಸರಣಿ.
ಈ ವೆಬ್ ಸರಣಿಯಲ್ಲಿ ಸುನಾಮಿಯಂತಹ ಪ್ರಾಕೃತಿಕ ವಿಕೋಪವನ್ನು ತೋರಿಸಿರುವ ರೀತಿ ರೋಚಕವಾಗಿದೆ. ಇದೇ ಸಮಯದಲ್ಲಿ ಫೀಲ್‌ಗುಡ್ ಎನಿಸುವಂತಹ ಕ್ಷಣಗಳು ಇವೆ. ಇಲ್ಲಿರುವ ಪಾತ್ರಗಳನ್ನು ಸಾಯಿಸಲು ನಿರ್ದೇಶಕರು ಇಷ್ಟಪಟ್ಟಂತೆ ಇಲ್ಲ. ಅಚ್ಚರಿ ಎನ್ನುವ ರೀತಿಯಲ್ಲಿ ವಿಮಾನ ಅಪಘಾತದಲ್ಲಿ ಅಥವಾ ಇನ್ಯಾವುದೋ ಕ್ಷಣದಲ್ಲಿ ಕೆಲವೊಂದು ಪಾತ್ರಗಳು ಬದುಕುತ್ತವೆ.. ಈ ವೆಬ್‌ಸರಣಿಯಲ್ಲಿ ಸುನಾಮಿಯ ಭಯಾನಕ ಅಲೆಗಳನ್ನು ಕಣ್ತುಂಬಿಕೊಳ್ಳಬಹುದು. ಉರಿವ ಲಾವಾರಸದ ಬೆಂಕಿಯನ್ನು ಕಾಣಬಹುದು. ಇದರೊಂದಿಗೆ ಸಂಬಂಧದ ಮಹತ್ವವನ್ನೂ ಅರ್ಥ ಮಾಡಿಕೊಳ್ಳಬಹುದು. ಕೇವಲ ನಾಲ್ಕೇ ನಾಲ್ಕು ಸಂಚಿಕೆ ಹೊಂದಿರುವ ಈ ವೆಬ್‌ಸರಣಿಯನ್ನು ರಜಾ ದಿನಗಳಲ್ಲಿ ಒಂದೇ ಗುಕ್ಕಿನಲ್ಲಿ ನೋಡಬಹುದು.
- ವೆಬ್ ಸರಣಿ ವಿಮರ್ಶೆ: ಪ್ರವೀಣ್ ಚಂದ್ರ ಪುತ್ತೂರು
_____
ವೆಬ್‌ಸರಣಿ ಹೆಸರು: ಲಾ ಪಾಲ್ಮಾ (ನಾರ್ವೆ)
ನಿರ್ಮಾಣ: ಮಾರ್ಟಿನ್ ಸುಂಡ್ಲ್ಯಾಂಡ್, ಲಾರ್ಸ್ ಗುಡ್ಮೆಸ್ಟಾಡ್, ಹೆರಾಲ್ಡ್ ರೋಸೆನ್ಲೋವ್ ಈಗ್
ಪಾತ್ರವರ್ಗ: ಆಂಡರ್ಸ್ ಬಾಸ್ಮೊ ಕ್ರಿಶ್ಚಿಯನ್ಸೆನ್, ಇಂಗ್ರಿಡ್ ಬೊಲ್ಸೊ ಬರ್ಡಾಲ್, ಅಲ್ಮಾ ಗುಂಥರ್, ಥಿಯಾ ಸೋಫಿ ಲೊಚ್ ನೆಸ್, ಬರ್ನಾರ್ಡ್ ಸ್ಟಾರ್ಮ್ ಲಾಗರ್, ಓಲಾಫುರ್ ಡಾರಿ ಓಲಾಫ್ಸನ್, ಜಾರ್ಜ್ ಡಿ ಜುವಾನ್, ರುತ್ ಲೆಕುನಾ, ಅರ್ಮಂಡ್ ಹಾರ್ಬೋ, ಜೆನ್ನಿ ಇವೆನ್ಸೆನ್, ಇಸೆಲಿನ್ ಥೋರ್ಬೊಲ್ಯಾಂಡ್
ಎಷ್ಟು ಎಪಿಸೋಡ್‌ಗಳು ಇವೆ?: 4
ಯಾವ ಒಟಿಟಿಯಲ್ಲಿ ನೋಡಬಹುದು?: ನೆಟ್‌ಫ್ಲಿಕ್ಸ್
_____