Citadel Honey Bunny Review: ಸರಳವಾಗಿ ಊಹಿಸಬಲ್ಲ ಕಥೆಯಲ್ಲಿ, ಆಕ್ಷನ್ ಅಬ್ಬರ! ನಿರೀಕ್ಷೆ ಗುರಿ ತಲುಪಿತೆ ಹನಿ ಬನ್ನಿ ವೆಬ್‌ಸಿರೀಸ್?
Citadel Honey Bunny Review: ಬಹುನಿರೀಕ್ಷಿತ ಒಟಿಟಿ ಶೋ ಸಿಟಾಡೆಲ್ ಹನಿ ಬನ್ನಿ ವೆಬ್‌ಸಿರೀಸ್ ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಗೂಢಚಾರಿ ಕಥೆಯ ಹಿನ್ನೆಲೆಯಲ್ಲಿ ಸಾಗುವ ಈ ವೆಬ್‌ಸಿರೀಸ್, ಆ ನಿರೀಕ್ಷೆ ಮಟ್ಟವನ್ನು ಮುಟ್ಟಲು ಕೊಂಚ ಹೆಣಗಾಡಿದೆ. ಸರಳವಾಗಿ ಊಹಿಸಬಲ್ಲ ಕಥೆಯಲ್ಲಿ, ಆಕ್ಷನ್ ಮಾತ್ರ ಅಬ್ಬರಿಸಿದೆ.
Citadel Honey Bunny Review: ಒಟಿಟಿ ವೀಕ್ಷಕರು ಕಾತರದಿಂದ ಕಾಯುತ್ತಿದ್ದ ಆಕ್ಷನ್- ಪ್ಯಾಕ್ಡ್ ವೆಬ್ ಸರಣಿ 'ಸಿಟಾಡೆಲ್: ಹನಿ ಬನ್ನಿ' ಗುರುವಾರ (ನವೆಂಬರ್ 7) ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಸಮಂತಾ ಮತ್ತು ವರುಣ್ ಧವನ್ ಅಭಿನಯದ ಈ ವೆಬ್ ಸೀರಿಸ್ ಹೇಗಿದೆ? ಎರಡು ವರ್ಷಗಳಿಂದ ಕೆರಿಯರ್‌ನಲ್ಲಿ ಒಳ್ಳೆಯ ಬ್ರೇಕ್‌ಗಾಗಿ ಕಾಯುತ್ತಿದ್ದ ಸಮಂತಾ ಅವರ ಕನಸು ಈ ಶೋ ಮೂಲಕ ನನಸಾಗಿದ್ಯಾ? ಬಾಲಿವುಡ್ ನಟ ವರುಣ್ ಧವನ್‌ಗೆ ಈ ವೆಬ್ ಸೀರೀಸ್ ಮೂಲಕ ಲಕ್ ಖುಲಾಯಿಸಿದೆಯೇ? ಇಬ್ಬರ ಕೆಮಿಸ್ಟ್ರಿ ವರ್ಕೌಟ್ ಆಗಿದೆಯೇ? ಇಲ್ಲಿದೆ ಸಿಟಾಡೆಲ್ ಹನಿ ಬನ್ನಿ ವೆಬ್ ಸೀರಿಸ್ ವಿಮರ್ಶೆ.
ಕಥೆ ಏನು?
ಸಿನಿಮಾಗಳಲ್ಲಿ ನಟಿಸುವ ಆಸೆಯಿಂದ ಮುಂಬೈಗೆ ಬಂದು ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಿರುತ್ತಾಳೆ ಹನಿ. ಬ್ಯಾಕ್ ಡಾನ್ಸರ್ ಆಗಿಯೂ ಕೆಲಸ ಮಾಡುತ್ತಿರುತ್ತಾಳೆ. ಇತ್ತ ಬನ್ನಿ (ವರುಣ್ ಧವನ್) ಸಿನಿಮಾಗಳಲ್ಲಿ ಸ್ಟಂಟ್ ಮ್ಯಾನ್. ಚಿತ್ರದ ಸೆಟ್‌ನಲ್ಲಿ ಇಬ್ಬರೂ ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ, ಬನ್ನಿ ಸ್ಟಂಟ್ ಮಾಸ್ಟರ್ ಮಾತ್ರವಲ್ಲದೇ ಬಾಬಾ ಅಲಿಯಾಸ್ ಗುರು (ಕೆಕೆ ಮೆನನ್) ಸ್ಥಾಪಿಸಿದ ಖಾಸಗಿ ಸಂಸ್ಥೆಯಲ್ಲಿ ಏಜೆಂಟ್ ಆಗಿ ಕೆಲಸ ಮಾಡುತ್ತಿರುತ್ತಾನೆ. ಅನಿರೀಕ್ಷಿತ ಸಂದರ್ಭಗಳಿಂದ ಸಿನಿಮಾ ಇಂಡಸ್ಟ್ರಿಯಿಂದ ಹೊರಗುಳಿದ ಹನಿ, ಬದುಕಿಗಾಗಿ ಏಜೆಂಟ್ ಆಗಿ ಬನ್ನಿ ಕೆಲಸ ಮಾಡುತ್ತಿರುವ ಕಂಪನಿಗೆ ಸೇರುತ್ತಾಳೆ.
ಕ್ಯಾಮರಾ ಮುಂದೆ ಮಾಡಲು ಸಾಧ್ಯವಾಗದ ಕೆಲಸವನ್ನು ನಟನೆಯ ಮೂಲಕ ನಿಜ ಜೀವನದಲ್ಲಿ ಮಾಡಲು ಬಂದಾಗ, ಆ ಕೆಲಸದಲ್ಲಿ ಖುಷಿ ಪಡೆಯುತ್ತಾಳೆ ಹನಿ. ಆದರೆ, ಕೊನೆಗೆ ಬನ್ನಿಯ ಇಡೀ ಗ್ಯಾಂಗ್ ಯಾವುದೋ ಏಜೆನ್ಸಿಗಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಯುತ್ತದೆ. ಇದು ಯಾವ ಏಜೆನ್ಸಿ? ಹೀಗೆ ಅಲ್ಲಿಂದ ಶುರುವಾಗುವ ಕಥೆ, ಅದಾದ ಮೇಲೆ ಏಪಿಸೋಡ್‌ನಿಂದ ಏಪಿಸೋಡ್‌ಗೆ ರೋಚಕತೆಯನ್ನು ಹಿಡಿದಿಟ್ಟುಕೊಳ್ಳುತ್ತಲೇ ಸಾಗುತ್ತದೆ. ಆಕ್ಷನ್ ಮೂಲಕವೇ ನೋಡಿಸಿಕೊಂಡು ಹೋಗುತ್ತದೆ.
ಹೇಗಿದೆ ಕಲಾವಿದರ ನಟನೆ?
ಆರು ಸಂಚಿಕೆಗಳ ಈ ವೆಬ್‌ಸಿರೀಸ್‌ನಲ್ಲಿ ನಿರ್ದೇಶಕರಾದ ರಾಜ್ ಮತ್ತು ಡಿಕೆ, ನೋಡುಗರನ್ನು ಹಿಡಿದಿಟ್ಟುಕೊಳ್ಳಲು, ಸಾಲು ಸಾಲು ತಿರುವುಗಳನ್ನು ಕೊಡುತ್ತಲೇ ಸಾಗಿದ್ದಾರೆ. ವೀಕ್ಷಕನ ಆಸಕ್ತಿ ಬೇರೆಡೆ ಜಾರದಂತೆ ಎಚ್ಚರಿಕೆ ವಹಿಸಿದ್ದಾರೆ. ಹನಿಯ ಮಗಳಾಗಿ ನಾಡಿಯಾ (ಕಾಶ್ವಿ ಮಜುಂದಾರ್) ಸಹಜ ಅಭಿನಯ ನೀಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಬಾಬಾನ ಏಜೆಂಟ್ ಟೀಮ್‌ನಿಂದ ತಪ್ಪಿಸಿಕೊಳ್ಳುವಾಗ ಆಕೆ ಮಾಡುವ ಪುಟ್ಟ ಸ್ಟಂಟ್‌ಗಳು ಅಚ್ಚರಿ ಮೂಡಿಸುತ್ತವೆ. ಇತ್ತ ಇಡೀ ಸರಣಿಯನ್ನು ತನ್ನ ಹೆಗಲ ಮೇಲೆ ಹೊತ್ತಿದ್ದಾರೆ ಸಮಂತಾ. ತಾಯಿಯಾಗಿ ತನ್ನ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿ, ಎಮೋಷನ್ಸ್ ಜೊತೆಗೆ ಆಕ್ಷನ್ ದೃಶ್ಯಗಳಲ್ಲಿ ಗಮನ ಸೆಳೆದಿದ್ದಾರೆ.
ಈ ಸಿರೀಸ್‌ನಲ್ಲಿ ನಟನೆಯ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ವರುಣ್ ಧವನ್‌ಗೆ ಅವಕಾಶ ಸಿಕ್ಕಿಲ್ಲ. ಅದರ ಬದಲು, ಸಾಹಸ ದೃಶ್ಯಗಳಲ್ಲಿ ಒಂದು ಕೈ ಮೇಲೆ ಎಂಬಂತೆ ರಗಡ್ ಆಗಿಯೇ ಫೈಟ್ ಮಾಡಿದ್ದಾರೆ. ಕೆಕೆ ಮೆನನ್, ಸಿಕಂದರ್ ಖೇರ್, ಸಾಕಿಬ್ ಸಲೀಂ, ಸಿಮ್ರಾನ್, ಶಿವಂಕಿತ್ ಪರಿಹಾರ್, ಸೋಹಮ್ ಮಜುಂದಾರ್ ಮತ್ತು ಇತರರು ಸಿಕ್ಕ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ವೆಬ್‌ಸಿರೀಸ್ ಸಮಯವನ್ನು ಕೊಂಚ ದೀರ್ಘವಾಗಿಸಲು, ಉದ್ದೇಶಪೂರ್ವಕವಾಗಿ ಕಥೆಯನ್ನು ಹಿಗ್ಗಿಸಿದಂತೆ ಭಾಸವಾಗುತ್ತದೆ. ಸಿರೀಸ್ ಮಧ್ಯದಲ್ಲಿ ಸಣ್ಣ ಪುಟ್ಟ ಟ್ವಿಸ್ಟ್‌ಗಳು, ಹಾಸ್ಯ ಮತ್ತು ಸಾಹಸ ದೃಶ್ಯಗಳ ಮೂಲಕ ನೋಡುಗರನ್ನು ಹಿಡಿದಿಡುವ ಪ್ರಯತ್ನವಾಗಿದೆ. ಆದರೆ. ಗೂಢಚಾರಿ ಕಥೆಯ ಹಿನ್ನೆಲೆಯಲ್ಲಿ ಸಾಗುವ ಈ ವೆಬ್‌ಸಿರೀಸ್, ಆ ನಿರೀಕ್ಷೆ ಮಟ್ಟವನ್ನು ಮುಟ್ಟಲು ಕೊಂಚ ಹೆಣಗಾಡಿದೆ. ಸರಳವಾಗಿ ಊಹಿಸಬಲ್ಲ ಕಥೆಯಲ್ಲಿ, ಆಕ್ಷನ್ ಮಾತ್ರ ಅಬ್ಬರಿಸಿದೆ!
ಅದೇ ರೀತಿ ಸಿನಿಮಾದಲ್ಲಿ ಸಮಂತಾ ಮತ್ತು ವರುಣ್ ಧವನ್ ಜೋಡಿಯು ಕೆಮಿಸ್ಟ್ರಿ, ರೊಮ್ಯಾಂಟಿಕ್ ದೃಶ್ಯಗಳು ಹೇಳಿಕೊಳ್ಳುವ ರೀತಿಯಲ್ಲಿ ಮೂಡಿಬಂದಿಲ್ಲ. ಇದೂ ಕೂಡ ವೀಕ್ಷಕರಿಗೆ ಕೊಂಚ ನಿರಾಸೆ ಮೂಡಿಸುವಂಥದ್ದು. ಬ್ಯಾಕ್ ಗ್ರೌಂಡ್ ಸ್ಕೋರ್ ಈ ವೆಬ್ ಸೀರೀಸ್‌ನ ಜೀವಾಳದಂತೆ ಕೆಲಸ ಮಾಡಿದೆ. ಪ್ರೊಡಕ್ಷನ್ ವ್ಯಾಲ್ಯೂ ಚೆನ್ನಾಗಿದೆ. ಖರ್ಚಿಗೆ ಹಿಂಜರಿಯದೆ ಅಷ್ಟೇ ರಿಚ್ ಆಗಿಯೇ ಈ ಸಿರೀಸ್ ನಿರ್ಮಾಣ ಮಾಡಲಾಗಿದೆ.
- ವೆಬ್ ಸರಣಿ: ಸಿಟಾಡೆಲ್: ಹನಿ ಬನ್ನಿ
- ಪಾತ್ರವರ್ಗ : ಸಮಂತಾ, ವರುಣ್ ಧವನ್, ಕಾಶ್ವಿ ಮಜುಂದಾರ್, ಕೆಕೆ ಮೆನನ್, ಸಿಕಂದರ್ ಖೇರ್, ಸಾಕಿಬ್ ಸಲೀಂ, ಸಿಮ್ರಾನ್, ಶಿವಂಕಿತ್ ಪರಿಹಾರ್, ಸೋಹಮ್ ಮಜುಂದಾರ್
- ನಿರ್ದೇಶಕರು: ರಾಜ್ ನಿಡಿಮೋರು, ಕೃಷ್ಣ ಡಿ.ಕೆ
- ಒಟಿಟಿ ವೇದಿಕೆ: ಅಮೆಜಾನ್ ಪ್ರೈಮ್ ವಿಡಿಯೋ
- ಒಟ್ಟು ಸಂಚಿಕೆಗಳು : 6
- ಪ್ರತಿ ಏಪಿಸೋಡ್‌ನ ಸಮಯ: 43 - 55 ನಿಮಿಷಗಳು