Paatal Lok Season 2 Teaser: ಕೀಟದ ಕಥೆ ಹೇಳಿ ಪಾತಾಳ ಲೋಕದ ಕರಾಳ ಸತ್ಯ ಬಿಚ್ಚಿಟ್ಟ ಜೈದೀಪ್ ಅಹ್ಲಾವತ್
ಹಿಂದಿಯ ಯಶಸ್ವಿ ವೆಬ್‌ಸಿರೀಸ್ ಪಾತಾಳ್ ಲೋಕ್ ಇದೀಗ ಸೀಸನ್ 2 ಮೂಲಕ ಆಗಮಿಸುತ್ತಿದೆ. ಇನ್ನೇನು ಜನವರಿ 17ರಂದು ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಇದೀಗ ಮೊದಲಾರ್ಥ ಈ ಸಿರೀಸ್‌ನ ಮೊದಲ ಟೀಸರ್ ಬಿಡುಗಡೆ ಆಗಿದೆ.
Paatal Lok Season 2 Teaser: ಭಾರತದಲ್ಲಿ ವೆಬ್‌ಸಿರೀಸ್‌ಗಳಿಗೂ ಸಾಕಷ್ಟು ವೀಕ್ಷಕರಿದ್ದಾರೆ. ಅಂಥ ಎಷ್ಟೋ ಸಿರೀಸ್‌ಗಳು ಈಗಾಗಲೇ ಒಟಿಟಿ ವೇದಿಕೆಗಳಲ್ಲಿ ಪ್ರಸಾರ ಕಂಡು ಹಿಟ್ ಪಟ್ಟಿ ಸೇರಿದ ಉದಾಹರಣೆಗಳಿವೆ. ಆ ಸಿರೀಸ್‌ಗಳ ಪೈಕಿ 2020ರಲ್ಲಿ ಒಟಿಟಿಗೆ ಬಂದಿದ್ದ ಪಾತಾಳ್ ಲೋಕ್ ಸಹ ಒಂದು. ಅಪಾರ ಮೆಚ್ಚುಗೆ ಪಡೆದ ಈ ಸಿರೀಸ್, ಸೀಸನ್ 2 ರೂಪದಲ್ಲಿ ಮತ್ತೆ ಆಗಮಿಸಲಿದೆ ಎಂದಾಗ ವೀಕ್ಷಕ ಬಳಗದಲ್ಲಿ ಕಾತರವಿತ್ತು. ಯಾವಾಗ, ಕಥೆ ಏನಿರಲಿದೆ ಎಂಬ ಕೌತುಕವಿತ್ತು. ಇದೀಗ ಅದೆಲ್ಲದಕ್ಕೂ ಉತ್ತರ ಸಿಕ್ಕಿದೆ. ಇನ್ನೇನು ಇದೇ ತಿಂಗಳಲ್ಲಿಯೇ ಈ ವೆಬ್‌ಸಿರೀಸ್ ಬಿಡುಗಡೆ ಆಗಲಿದೆ. ಅದಕ್ಕೂ ಮೊದಲು ಜ. 03ರಂದು ಇದರ ಮೊದಲ ಟೀಸರ್ ಬಿಡುಗಡೆ ಆಗಿದೆ.
ಪಾತಾಳ್ ಲೋಕ್ ವೆಬ್‌ಸಿರೀಸ್‌ನ ಎರಡನೇ ಸೀಸನ್‌ನ ಮೊದಲ ಟೀಸರ್ ಬಿಡುಗಡೆ ಆಗಿದೆ. ಟೀಸರ್‌ನಲ್ಲಿ ಬಾಲಿವುಡ್ ನಟ ಜೈದೀಪ್ ಅಹ್ಲಾವತ್, ಮಗದಷ್ಟು ಉಗ್ರವಾಗಿ ಕಂಡಿದ್ದಾರೆ. ಈ ಮೂಲಕ ಈ ಸೀಸನ್ ಅಷ್ಟೇ ಅಚ್ಚರಿಗಳಿಂದ ಕೂಡಿರಲಿದೆ ಎಂಬ ಸುಳಿವು ನೀಡಿದೆ. ಹಾಥಿರಾಮ್ ಚೌದರಿಯಾಗಿ ಲಿಫ್ಟ್‌ನಲ್ಲಿ ಕೂತು ಸೀಸನ್ 2ರ ಕಥೆಯನ್ನು ವಿವರಿಸಿದ್ದಾರೆ.
ಯಾವ ಒಟಿಟಿ, ಯಾವಾಗ ಪ್ರಸಾರ?
ಜೈದೀಪ್ ಅಹ್ಲಾವತ್ ಮುಖ್ಯಭೂಮಿಕೆಯ ಪಾತಾಳ್ ಲೋಕ 2 ವೆಬ್‌ಸಿರೀಸ್ ಜನವರಿ 17 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಪ್ರೈಮ್ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮೂಲಕ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ. 'ಪಿ ಫಾರ್ ಪಾರ್ಕಿಂಗ್ ಪಾತಾಳ್ ಲೋಕ್ ನ್ಯೂ ಸೀಸನ್, ಜನವರಿ 17' ಎಂದಿದೆ.
ಏನಿದೆ ಟೀಸರ್‌ನಲ್ಲಿ
"ಒಂದೂರಿನಲ್ಲಿ ಒಬ್ಬ ವ್ಯಕ್ತಿ ಇದ್ದ. ಆತನಿಗೆ ಕೀಟಗಳೆಂದರೆ ಅದೆನೋ ಹಿಂಸೆ. ಹೀಗಿರುವಾಗ ಅವನ ಮನೆಯಿಂದ ಒಂದು ಕೀಟ ಹೊರಬಂತು. ಆ ಕೀಟ ಅವನಿಗೆ ಕಡಿಯಿತು. ಕೊನೆಗೇ ಅದೇ ತನಗೆ ಕಡಿದ ಕೀಟವನ್ನು ಅವನೇ ಸಾಯಿಸಿದ. ಅದಾದ ಮೇಲೆ ಆತ ಹೀರೋ ಆದ. ಇಡೀ ಗ್ರಾಮ ಅವರನ್ನು ಹೀರೋ ಎಂಬಂತೆ ನೋಡಿತು. ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಅದೇ ರಾತ್ರಿ ತುಂಬು ಖುಷಿಯಲ್ಲಿಯೇ ಮಲಗಿದ. ಆತ ಮಲಗಿದ ಮಂಚದ ಕೆಳಗಿಂದ ಒಂದು, ನೂರು, ಸಾವಿರ, ಲಕ್ಷ, ಕೋಟಿ ಕೀಟಗಳು ಬಂದವು. ಒಂದು ಕೀಟವನ್ನು ಕೊಂದರೆ ಆಟ ಮುಗೀತು ಅಂತಾನಾ?ಪಾತಾಳ್ ಲೋಕವೂ ಹೀಗೇ ಇರುತ್ತೆ" ಎಂದು ಹಾಥಿರಾಮ್ ಚೌದರಿ ಪಾತ್ರಧಾರಿ ಜೈದೀಪ್ ಅಹ್ಲಾವತ್ ಕಥೆ ಹೇಳಿದ್ದಾರೆ.
ಟೀಸರ್ ನೋಡಿದವ್ರು ಏನಂದ್ರು?
ಕೀಟದ ಕಥೆ ಹೇಳುವ ಮೂಲಕ ಜೈದೀಪ್ ಅಹ್ಲಾವತ್, ಪಾತಾಳ್ ಲೋಕದಲ್ಲಿ ಇನ್ನೂ ಕೋಟ್ಯಂತರ ಕೀಟಗಳಿವೆ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ. ಇನ್ನೂ ಆಟ ಮುಗಿದಿಲ್ಲ ಎಂದು ಎಚ್ಚರಿಸಿದಂತಿದೆ. ಮೊದಲ ಸೀಸನ್ ಪಾತಾಳ್ ಲೋಕದಲ್ಲಿ ಕ್ರೈಂನ ವೈಭವೀಕರಣವಾಗಿತ್ತು. ಇದೀಗ ಅದಕ್ಕೂ ಮೀರಿದ ರಕ್ತಪಾತವಾಗಲಿದೆ ಎಂದೂ ಹೇಳಲಾಗುತ್ತಿದೆ. ಇನ್ನೇನು ಎರಡು ವಾರಗಳ ಬಳಿಕ ಅದೆಲ್ಲದಕ್ಕೂ ಅಮೆಜಾನ್ ಪ್ರೈಂ ಒಟಿಟಿಯಲ್ಲಿ ಉತ್ತರ ಸಿಗಲಿದೆ. ಈ ಸೀಸನ್‌ನಲ್ಲಿ ಜೈದೀಪ್ ಅಹ್ಲಾವತ್, ಗುಲ್ ಪನಾಗ್, ತಿಲೋತ್ತಮಾ ಶೋಮ್ ಮತ್ತು ಇಶ್ವಾಕ್ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.