ಪದ್ಮಭೂಷಣ ಪ್ರಶಸ್ತಿ ದೊರಕಿರುವ ಕುರಿತು ಅನಂತ್ ನಾಗ್ ಹೀಗಂದ್ರು; ರಿಷಬ್ ಶೆಟ್ಟಿ, ರಮೇಶ್ ಅರವಿಂದ್, ಚಿರಂಜೀವಿ ಪ್ರತಿಕ್ರಿಯೆ
ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆಯಾಗಿದೆ. ಇದು ಕನ್ನಡಿಗರ ಅಭಿಯಾನಕ್ಕೆ ದೊರಕಿದ ಪ್ರತಿಫಲ ಎಂದು ಅನಂತ್ ನಾಗ್ ಪ್ರತಿಕ್ರಿಯೆ ನೀಡಿದ್ದಾರೆ. ರಿಷಬ್ ಶೆಟ್ಟಿ, ಚಿರಂಜೀವಿ, ರಮೇಶ್ ಅರವಿಂದ್ ಸೇರಿದಂತೆ ಸಾಕಷ್ಟು ಜನರು ಹಿರಿಯ ನಟನಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆಯಾಗಿದೆ. ಈ ಕುರಿತು ಹಿರಿಯ ನಟ ಪ್ರತಿಕ್ರಿಯೆ ನೀಡಿದ್ದಾರೆ. "ಇದು ಖುಷಿ ತಂದಿದೆ. ಕನ್ನಡಿಗರು ಇದಕ್ಕಾಗಿ ಅಭಿಯಾನ ಮಾಡಿದ್ದರು. ಈ ಹಿಂದೆ ಪದ್ಮಭೂಷಣ ಪ್ರಶಸ್ತಿ ನೀಡುವ ರೀತಿ ಬೇರೆ ಇತ್ತು. ಮೂರು ವರ್ಷದ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದರಲ್ಲಿ ಸಾರ್ವಜನಿಕರು ಹೆಚ್ಚು ಪಾಲ್ಗೊಳ್ಳಬೇಕು ಎಂದು ಘೋಷಣೆ ಮಾಡಿದರು. ಆ ಘೋಷಣೆ ಬಂದ ನಂತರ ಕನ್ನಡಿಗರು ದೊಡ್ಡ ಪ್ರಮಾಣದಲ್ಲಿ ಅಭಿಯಾನ ನಡೆಸಿ ನನ್ನ ಹೆಸರು ಸೂಚಿಸಿದ್ದರು. ಯಾರೂ ತಮ್ಮ ತಮ್ಮ ಹೆಸರು ಸೂಚಿಸಿಲ್ಲ, ಅಷ್ಟೊಂದು ನಿಸ್ವಾರ್ಥಿಗಳು, ಕನ್ನಡಿಗರ ಪ್ರೀತಿ ದೊಡ್ಡದು. ಆ ವರ್ಷ ಪ್ರಶಸ್ತಿ ಬರಲಿಲ್ಲ. ಅದರ ನಂತರ ವರ್ಷವೂ ಇದೇ ರೀತಿ ಮಾಡಿದರು. ಮೂರು ವರ್ಷದಿಂದ ಸತತವಾಗಿ ಈ ರೀತಿಯ ಅಭಿಯಾನ ಮಾಡಿದ್ದಾರೆ. ನನಗೆ ಬಂತು ಅಥವಾ ಬರಲಿಲ್ಲ ಎಂಬ ಸುಖವೂ ಇಲ್ಲ ದುಃಖವೂ ಇಲ್ಲ. ಆದರೆ, ನನಗಾಗಿ ಅಭಿಯಾನ ಮಾಡಿದ ಕನ್ನಡಿಗರಿಗೆ ಖುಷಿಯಾಗುತ್ತದೆ ಎನ್ನುವುದು ನನಗೆ ಸಂತೋಷ ತಂದಿದೆ" ಎಂದು ಅನಂತ್ ನಾಗ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
"ಇದು ಕನ್ನಡಿಗರ ಪ್ರಯತ್ನದಿಂದ ಸಾಧ್ಯವಾಗಿದೆ. ನನಗೆ ಪದ್ಮಭೂಷಣ ಪ್ರಶಸ್ತಿ ಬರಬೇಕು ಎಂದು ಕನ್ನಡಿಗರು ಆಸೆ ಪಟ್ಟಿದ್ದರು. ದೊಡ್ಡಮಟ್ಟದಲ್ಲಿ ಅಭಿಯಾನ ನಡೆಸಿದರು. ನನಗೂ ಒಂದು ಪ್ರಶ್ನೆ ಇತ್ತು. ಇಷ್ಟೆಲ್ಲ ಪ್ರಯತ್ನ ಮಾಡ್ತಾ ಇದ್ದಾರೆ. ಸಾರ್ವಜನಿಕ ಭಾಗಿ ಇರಬೇಕು ಎಂದು ಮೋದಿ ಹೇಳಿದ್ದರು. ಆದರೆ, ಯಾಕೆ ಈ ನಿರ್ಲಕ್ಷ್ಯ ಎಂಬ ಪ್ರಶ್ನೆ ಮೂಡಿತ್ತು. ನನಗೆ ಪ್ರಶಸ್ತಿ ದೊರಕಲಿಲ್ಲ ಎಂದು ಬೇಸರವಲ್ಲ. ನನಗೆ ಸುಖವೂ ದುಃಖವೂ ಇಲ್ಲ. ನನಗೆ ಸಾರ್ವಜನಿಕ ಭಾಗಿತ್ವದಿಂದ ಪ್ರಶಸ್ತಿ ದೊರಕಿತ್ತು. ಕನ್ನಡಿಗರ ಅಭಿಯಾನಕ್ಕೆ ಯಶಸ್ಸು ದೊರಕಿತ್ತು. ಕನ್ನಡಿಗರ ಖುಷಿಯೇ ನನ್ನ ಖುಷಿ" ಎಂದು ಹಿರಿಯ ನಟ ಅನಂತ್ ನಾಗ್ ಹೇಳಿದ್ದಾರೆ.
ರಿಷಬ್ ಶೆಟ್ಟಿ ಪ್ರತಿಕ್ರಿಯೆ
ಹಿರಿಯ ನಟ ಅನಂತ್ ನಾಗ್‌ಗೆ ಪ್ರಶಸ್ತಿ ದೊರಕಿರುವ ಕುರಿತು ಕಾಂತಾರ ನಟ ರಿಷಬ್ ಶೆಟ್ಟಿ ಖುಷಿ ಪಟ್ಟಿದ್ದಾರೆ. "ಕನ್ನಡ ಚಿತ್ರರಂಗದ ರತ್ನ, ನಮ್ಮೆಲ್ಲರ ಪ್ರಿಯ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದ ಸುದ್ದಿ ಕೇಳಿ ಅಪಾರ ಸಂತೋಷವಾಯಿತು. ನಿಮ್ಮ ಕಲಾ ಸಾಧನೆ ಕನ್ನಡ ನಾಡಿನ ಕೀರ್ತಿಯನ್ನು ಹೆಚ್ಚಿಸಿದೆ. ನಿಮ್ಮ ಈ ಸಾಧನೆಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು" ಎಂದು ರಿಷಬ್ ಶೆಟ್ಟಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಮೇಶ್ ಅರವಿಂದ್ ಹೀಗಂದ್ರು
"ಶ್ರೀ ಅನಂತ್ ನಾಗ್‌ಗೆ ಪದ್ಮ ಭೂಷಣ್ ಪ್ರಶಸ್ತಿ ದೊರಕಿರುವ ಸುದ್ದಿ ಕೇಳಿ ಖುಷಿಯಾಯ್ತು. ಪದ್ಮ ಪ್ರಶಸ್ತಿ ಪಡೆದ ಎಲ್ಲರಿಗೂ ಅಭಿನಂದನೆಗಳು" ಎಂದು ರಮೇಶ್ ಅರವಿಂದ್ ಹೇಳಿದ್ದಾರೆ.
ಚಿರಂಜೀವಿ ಪ್ರತಿಕ್ರಿಯೆ
"ಡಾ.ಡಿ.ನಾಗೇಶ್ವರ ರೆಡ್ಡಿಯವರಿಗೆ ಅವರ ಅಪ್ರತಿಮ ಸೇವೆಗಾಗಿ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿ ಹಾಗೂ ಆತ್ಮೀಯ ಗೆಳೆಯರಾದ #ನಂದಮೂರಿ ಬಾಲಕೃಷ್ಣ, #ಅಜಿತ್‌ಕುಮಾರ್, ಶ್ರೀ ಅನಂತ್ ನಾಗ್, ಶೇಖರ್ ಕಪೂರ್ ಜೀ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಿರುವುದಕ್ಕೆ ಹೃತ್ಪೂರ್ವಕ ಅಭಿನಂದನೆಗಳು" ಎಂದು ಚಿರಂಜೀವಿ ಪೋಸ್ಟ್ ಮಾಡಿದ್ದಾರೆ.
