Padma Awards 2025: ಅನಂತ್‌ ನಾಗ್‌ಗೆ ಪದ್ಮಭೂಷಣ; ಉತ್ತಮರಿಗೆ ಎಲ್ಲವೂ ನಿಧಾನವಾಗೇ ಪ್ರಾಪ್ತವಾಗುತ್ತದೆ
ಕನ್ನಡ ಸುದ್ದಿ  /  ಮನರಂಜನೆ  /  Padma Awards 2025: ಅನಂತ್‌ ನಾಗ್‌ಗೆ ಪದ್ಮಭೂಷಣ; ಉತ್ತಮರಿಗೆ ಎಲ್ಲವೂ ನಿಧಾನವಾಗೇ ಪ್ರಾಪ್ತವಾಗುತ್ತದೆ

Padma Awards 2025: ಅನಂತ್‌ ನಾಗ್‌ಗೆ ಪದ್ಮಭೂಷಣ; ಉತ್ತಮರಿಗೆ ಎಲ್ಲವೂ ನಿಧಾನವಾಗೇ ಪ್ರಾಪ್ತವಾಗುತ್ತದೆ

ಅನಂತನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಹುಡುಕಿಕೊಂಡು ಬಂದಿದೆ. ನಿಜ ಹೇಳಬೇಕೆಂದರೆ ಇದು ಯಾವತ್ತೂ ಅವರಿಗೆ ನೀಡಬೇಕಿತ್ತು. ಒಳ್ಳೆಯದು, ಒಳ್ಳೆತನಕ್ಕೆ, ಉತ್ತಮರಿಗೆ ಎಲ್ಲವೂ ನಿಧಾನವಾಗೇ ಪ್ರಾಪ್ತವಾಗುತ್ತದೆ. ತಡವಾಗಿಯಾದರೂ ಸರಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಂದಾಯವಾದದ್ದು ನನಗಂತೂ ಖುಷಿ ನೀಡಿದೆ. -ರಂಗಸ್ವಾಮಿ ಮೂಕನಹಳ್ಳಿ ಬರಹ

ಅನಂತ್‌ ನಾಗ್‌ಗೆ ಪದ್ಮಭೂಷಣ; ರಂಗಸ್ವಾಮಿ ಮೂಕನಹಳ್ಳಿ ಬರಹ
ಅನಂತ್‌ ನಾಗ್‌ಗೆ ಪದ್ಮಭೂಷಣ; ರಂಗಸ್ವಾಮಿ ಮೂಕನಹಳ್ಳಿ ಬರಹ (Twitter)

Padma Awards 2025: ಸ್ಯಾಂಡಲ್‌ವುಡ್‌ನ ಹಿರಿಯ ನಟ ಅನಂತ್‌ ನಾಗ್‌ ಅವರಿಗೆ ಕೇಂದ್ರ ಸರ್ಕಾರದಿಂದ ಪದ್ಮಭೂಷಣ ಘೋಷಣೆಯಾಗಿದೆ. ಈ ಬೆನ್ನಲ್ಲೇ ಕರುನಾಡಿನ ಸಿನಿಮಾ ಪ್ರೇಮಿಗಳು, ಅವರ ಅಭಿಮಾನಿಗಳು ಈ ಪ್ರಶಸ್ತಿ ಘೋಷಣೆ ಆಗಿದ್ದಕ್ಕೆ ಸಂಭ್ರಮಿಸುತ್ತಿದ್ದಾರೆ. ಪರಭಾಷೆಯ ಕಲಾವಿದರಿಂದಲೂ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಪ್ರಶಸ್ತಿ ಬಂದಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅನಂತ್‌ ನಾಗ್‌, "ಇದು ಕನ್ನಡಿಗರ ಪ್ರಯತ್ನದಿಂದ ಸಾಧ್ಯವಾಗಿದೆ. ನನಗೆ ಪದ್ಮಭೂಷಣ ಪ್ರಶಸ್ತಿ ಬರಬೇಕು ಎಂದು ಕನ್ನಡಿಗರು ಆಸೆ ಪಟ್ಟಿದ್ದರು. ಅಭಿಯಾನ ನಡೆಸಿದ್ದರು. ಆ ಅಭಿಯಾನಕ್ಕೆ ಈಗ ಯಶಸ್ಸು ಸಿಕ್ಕಿದೆ. ಕನ್ನಡಿಗರ ಖುಷಿಯೇ ನನ್ನ ಖುಷಿ" ಎಂದಿದ್ದರು ಅನಂತ್‌‌ ನಾಗ್.

ಈಗ ಇದೇ ಅನಂತ್‌ ನಾಗ್‌ ಅವರಿಗೆ ಕೇಂದ್ರ ಸರ್ಕಾರದ ಅತ್ಯುತ್ತಮ ಗೌರವಗಳಲ್ಲಿ ಒಂದಾದ ಪದ್ಮಭೂಷಣ ಘೋಷಣೆ ಆಗುತ್ತಿದ್ದಂತೆ, ಖ್ಯಾತ ಬರಹಗಾರ ರಂಗಸ್ವಾಮಿ ಮೂಕನಹಳ್ಳಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ತಮ್ಮ ಬಾಲ್ಯದ ದಿನಗಳ ಬಗ್ಗೆ ಬರೆದುಕೊಂಡಿದ್ದಾರೆ.

ರಂಗಸ್ವಾಮಿ ಮೂಕನಹಳ್ಳಿ ಬರಹ

ಬೆಂಕಿಯ ಬಲೆ ಚಿತ್ರವನ್ನು ನೋಡಿದಾಗ ನನಗೆ ಎಂಟು ವರ್ಷ. ಆ ಚಿತ್ರದಲ್ಲಿ ಅನಂತನಾಗ್ ಮತ್ತು ಲಕ್ಷ್ಮಿ ಗೆ ನೊರೆಂಟು ಕಷ್ಟ. ಒಂದರ ಮೇಲೊಂದು ನಿಲ್ಲದ ಸಂಕಷ್ಟ. ನಾನು ಜೀವನದಲ್ಲಿ ಅಷ್ಟು ಅತ್ತಿರುವುದು ಅದೇ ಮೊದಲಿರಬೇಕು. ಕೊನೆಯೂ ಹೌದು! ಚಿತ್ರ ನೆನಪಿರುವುದು ಎರಡು ಕಾರಣಕ್ಕೆ, ಒಂದು ಬಿಸಿಲಾದರೇನು ಮಳೆಯಾದರೇನು ಜೊತೆಯಾಗಿ ನಾನು ಇಲ್ಲವೇನು? ನೀ ನನ್ನ ಜೀವ ಎಂದಿಗೂ ..... ಎನ್ನುವ ಹಾಡು. ಎರಡು ಸಿನಿಮಾ ಪೂರ್ತಿ ಅತ್ತಿದ್ದು! ಇಂದಿಗೂ ಇದು ನನ್ನ ಟಾಪ್ ಫೆವರೇಟ್ ಹಾಡು.

ಚಂದನದ ಗೊಂಬೆ ಚಿತ್ರದ ಆಕಾಶದಿಂದ ಧರೆಗಿಳಿದ ರಂಭೆ, ಆಕಾಶದಿಂದ ಧರೆಗಿಳಿದ ರಂಭೆ,ಇವಳೇ ಇವಳೇ ಚಂದನದ ಗೂಂಬೆ ಎನ್ನುವ ಹಾಡು ಕೇಳಿದಾಗ ನಾನಿನ್ನು ನಾಲ್ಕು ವರ್ಷದ ಕೂಸು , ಆಮೇಲೆ ಕೂಡ ಆ ಹಾಡು ನೂರಾರು ಬಾರಿ ಕೇಳಿದ ಕಾರಣ ಆ ಹಾಡು ನೆನಪಲ್ಲಿ ಉಳಿದಿದೆ. ಉಳಿದಂತೆ ಆ ಚಿತ್ರ ನೋಡಿದ ನೆನಪಿಲ್ಲ.

ಇನ್ನು ಬಯಲುದಾರಿ ಚಲನಚಿತ್ರ ಬಂದಾಗ ನನಗೆ ಕೇವಲ ಒಂದು ವರ್ಷ . ಚಿತ್ರ ನೋಡಿಲ್ಲ. ಆದರೆ ಅದರಲ್ಲಿನ ಎಲ್ಲಿರುವೆ ಮನವ ಕಾಡುವ ರೂಪಸಿಯೇ ಹಾಡು ಇಂದಿಗೂ ನನಗಿಷ್ಟ . ಅಂದಿನ ದಿನದಲ್ಲಿ ಆ ಹಾಡಿಗೆ ಹೆಲಿಕ್ಯಾಪ್ಟರ್ ಬಳಸಿದ್ದರು ಎನ್ನುವುದು ಬಹಳ ಸದ್ದು, ಸುದ್ದಿ ಮಾಡಿತ್ತು. ಇನ್ನು ಮಿಂಚಿನ ಓಟದ ಬೆಳ್ಳಿ ಮೋಡ ಹತ್ತುತ್ತಾ ಹಾಡು ಇಂದಿಗೂ ಅದೇ ಮೋಡಿ ಮಾಡುವ ತಾಕತ್ತು ಹೊಂದಿದೆ.

ಡ್ಯಾನ್ಸ್ ಬಾರದ, ಆರೆಂಟು ಪ್ಯಾಕ್ ದೇಹ ಹೊಂದಿರದ, ಸಾಮಾನ್ಯರಲ್ಲಿ ಸಾಮಾನ್ಯನಂತೆ, ಪಕ್ಕದ ಮನೆ ಹುಡುಗ , ನಮ್ಮವನು ಎನ್ನುವ ಫೀಲಿಂಗ್ ಕೊಟ್ಟದ್ದು ಅನಂತನಾಗ್ ಎನ್ನುವ ನಟ, ವ್ಯಕ್ತಿ. ನಾನು ವ್ಯಕ್ತಿ ಪೂಜಕನಲ್ಲ. ಅದರಲ್ಲೂ ಸಿನಿಮಾ ನಟರು ಎಂದರೆ ಮಾರುದೂರ. ಆದರೆ ಅದೇಕೋ ಗೊತ್ತಿಲ್ಲ ಶಂಕರನಾಗ್ ಮತ್ತು ಅನಂತನಾಗ್ ಅವರನ್ನು ಕಂಡರೆ ವಿಶೇಷ ಗೌರವ. ಅಬ್ಬರದ ಹೊಡೆದಾಟ, ವಿಶೇಷ ಮ್ಯಾನರಿಸಂ ಇಲ್ಲದೆ, ಸರಳಾತೀಸರಳ ವ್ಯಕ್ತಿಯೂ ತನ್ನ ಸಹಜ ನಟನೆಯಿಂದ ಪ್ರೇಕ್ಷಕರ ಮನಸ್ಸನ್ನು ಗೆಲ್ಲಬಹುದು ಎನ್ನುವುದನ್ನು ತೋರಿಸಿದ್ದು ಅನಂತನಾಗ್.

ಅನಂತನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಹುಡುಕಿಕೊಂಡು ಬಂದಿದೆ. ನಿಜ ಹೇಳಬೇಕೆಂದರೆ ಇದು ಯಾವತ್ತೂ ಅವರಿಗೆ ನೀಡಬೇಕಿತ್ತು. ಒಳ್ಳೆಯದು, ಒಳ್ಳೆತನಕ್ಕೆ, ಉತ್ತಮರಿಗೆ ಎಲ್ಲವೂ ನಿಧಾನವಾಗೇ ಪ್ರಾಪ್ತವಾಗುತ್ತದೆ. ತಡವಾಗಿಯಾದರೂ ಸರಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಂದಾಯವಾದದ್ದು ನನಗಂತೂ ಖುಷಿ ನೀಡಿದೆ. ಬಾಲ್ಯದ ಮುಗ್ದ ದಿನಗಳಲ್ಲಿ ನಮಗೇನೂ ತಿಳಿಯುತ್ತಿರಲಿಲ್ಲ. ಅಂತಹ ಎಳೆಯ ಮನಸ್ಸಿನ ಮೇಲೆ ಇನ್ನಿಲ್ಲದ ಪ್ರಭಾವ ಬೀರಿದ್ದ ವ್ಯಕ್ತಿ ಅನಂತನಾಗ್. ಇವತ್ತು ಶಂಕರ್ ಇರಬೇಕಿತ್ತು ಮತ್ತು ಆತನಿಗೂ ಪದ್ಮ ಪ್ರಶಸ್ತಿ ಸಿಕ್ಕಿರಬೇಕಿತ್ತು.

Whats_app_banner