CSP ಪಾತ್ರದಲ್ಲಿ ಮತ್ತೆ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರಾ ಟಿ ಎನ್ ಸೀತಾರಾಮ್? ಪರಮೇಶ್ವರ್ ಗುಂಡ್ಕಲ್ ನೇತೃತ್ವದಲ್ಲಿ ಹೊಸ ಧಾರಾವಾಹಿ
ಟಿ ಎನ್ ಸೀತಾರಾಮ್ ಹಾಗೂ ಪರಮೇಶ್ವರ್ ಗುಂಡ್ಕಲ್ ಇವರಿಬ್ಬರ ಜೋಡಿ ಹೊಸ ಧಾರಾವಾಹಿಯೊಂದನ್ನು ಸೃಷ್ಟಿಸಲಿದೆ. ಈ ಕುರಿತು ಟಿ ಎಸ್ ಸೀತಾರಾಮ್ ಅವರ ಫೇಸ್ಬುಕ್ ಪೋಸ್ಟೊಂದು ವೈರಲ್ ಆಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಟಿ ಎನ್ ಸೀತಾರಾಮ್ ಅವರ ಧಾರಾವಾಹಿಯನ್ನು ನೋಡಲು ಜನರು ಕಾತದಿಂದ ಕಾಯುತ್ತಿರುತ್ತಾರೆ. ಯಾಕೆಂದರೆ ಜನರಿಗೆ ಅವರು ಈ ಹಿಂದೆ ಮಾಡಿದ ಧಾರಾವಾಹಿಗಳು ತುಂಬಾ ಇಷ್ಟವಾಗಿದೆ. ಅವರನ್ನು ಲಾಯರ್ ಆಗಿ ನೋಡಲು ಎಷ್ಟೋ ಜನ ಇಷ್ಟಪಡುತ್ತಾರೆ. ಮುಕ್ತ, ಮುಕ್ತ ಧಾರಾವಾಹಿಗಳ ಸಿರೀಸ್ ಎಷ್ಟೋ ಜನರ ಮನಸಿನಲ್ಲಿ ಇನ್ನೂ ಸಹ ಅಚ್ಚೊತ್ತಿದೆ. ಅವರ ಮಾತು, ಅವರ ಅಭಿನಯ ಹಾಗೂ ಕಥೆಯಲ್ಲಿನ ಗಟ್ಟಿತನ ಅವರನ್ನು ಜನರು ಇಷ್ಟಪಡುವಂತೆ ಮಾಡಿದೆ. ಆದರೆ ಇತ್ತೀಚಿನ ಧಾರಾವಾಹಿಗಳಲ್ಲಿ ಅವರ ಧಾರಾವಾಹಿಯಲ್ಲಿದ್ದಷ್ಟು ಸತ್ವ ಇಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದರು. ಅವರನ್ನು ಮತ್ತೆ ಕಿರುತೆರೆಯಲ್ಲಿ ಕಾಣಬೇಕು ಎಂಬ ಹಂಬಲ ಸಾಕಷ್ಟು ಜನಕ್ಕಿತ್ತು.
ಇದೀಗ ಆ ಕನಸು ನನಸಾಗುವ ಹಂತದಲ್ಲಿದೆ ಎಂಬ ಸೂಚನೆ ಸಿಕ್ಕಿದೆ. ಯಾಕೆಂದರೆ ಸಾಮಾಜಿಕ ಜಾಲತಾಣದಲ್ಲಿ ಟಿ ಎಸ್ ಸೀತಾರಾಮ್ ಅವರು ಹಾಕಿದ ಒಂದು ಪೋಸ್ಟ್ ವೈರಲ್ ಆಗುತ್ತಿದೆ. ಪರಮೇಶ್ವರ್ ಗುಂಡ್ಕಲ್ ಅವರು ಕೆಲವು ದಿನಗಳ ಹಿಂದೆ ಫೋನ್ ಮಾಡಿ ನನ್ನದೇ ಆದ ಧಾರಾವಾಹಿಯನ್ನು ಪ್ರಾರಂಭಿಸುತ್ತಿದ್ದೇನೆ.. ನೀವು ಒಂದು ಪಾತ್ರವನ್ನು ನಿರ್ವಹಿಸಬೇಕು ಎಂದು ಹೇಳಿದ್ದರಂತೆ. ಕಥೆ ಯಾವುದು? ಪಾತ್ರ ಹೇಗಿರುತ್ತದೆ ಎಂದೆಲ್ಲ ಪ್ರಶ್ನೆ ಮಾಡಿದ್ದರಂತೆ.
ಆಗ ಅವರು ಉತ್ತರಿಸಿದ ಪ್ರಕಾರ ನ್ಯಾಯಾಲಯದ ಕಥೆ, ನಿಮ್ಮದು CSP ಎಂದಿದ್ದರಂತೆ. ಒಂದು ಕ್ಷಣ ನನ್ನ ಮನಸ್ಸು ಆಕಾಶದಲ್ಲಿ ಹಾರಿ ಹಿಂತಿರುಗಿದಂತಾಗಿತ್ತು ಎಂದು ಅವರು ಬರೆದುಕೊಂಡಿದ್ದಾರೆ.
ಇಲ್ಲಿದೆ ಟಿ ಎನ್ ಸೀತಾರಾನ್ ಅವರ ಫೇಸ್ಬುಕ್ ಪೋಸ್ಟ್ ವಿವರ
ಪ್ರೀತಿಯ ಗೆಳೆಯ ಕಲರ್ಸ್ ಮುಖ್ಯ ರಾದ ಪರಮ್ ಕೆಲದಿನಗಳ ಹಿಂದೆ ಫೋನ್ ಮಾಡಿ ನನ್ನ ಸ್ವಂತ ಧಾರಾವಾಹಿ ಶುರು ಮಾಡುತ್ತಿದ್ದೇನೆ..ನೀವು ಪಾತ್ರ ಮಾಡಬೇಕು ಎಂದರು..
ಏನು ಕಥೆ, ಏನು ಪಾತ್ರ ಎಂದೆ
ಕೋರ್ಟ್ ಕಥೆ.
ನಿಮ್ಮದು ಸಿ.ಎಸ್.ಪಿ. .ಪಾತ್ರ ಎಂದರು
ಒಂದು ಕ್ಷಣ ನನ್ನ ಮನಸ್ಸು ಆಕಾಶದಲ್ಲಿ ಹಾರಿ ವಾಪಸ್ ಬಂತಃ.
ನನ್ನ ಇಷ್ಟದ ಪಾತ್ರ, ತಿಂಗಳಗೊಮ್ಮೆ ಕನಸಿನಲ್ಲಿ ಬರುವ ಪಾತ್ರ.ಎರಡು ತಿಂಗಳಿಗೊಮ್ಮೆ ಕನಸಿನಲ್ಲಿ ಪಾಟೀಸವಾಲು ಬರುತ್ತದೆ
ಅರ್ಧ ಸೆಕೆಂಡಿನಲ್ಲಿ ಹೂ ಎಂದೆ
ಮೊನ್ನೆ ಗುರುವಾರ ಪ್ರೊಮೋ ಶೂಟಿಂಗ್ ಆಗಿಯೇ ಹೋಯಿತು.
ಎಷ್ಟು ದಿನ ಬರುತ್ತಾರೆ ಎಂದು ಗೊತ್ತಿಲ್ಲ.
ಕೆಲವು ದಿನವಾದರೂ ಸೀ.ಎಸ್.ಪಿ ನಿಮ್ಮ ಮುಂದೆ ಬರುತ್ತಾನೆ
ಈ ಸಂಗತಿ ಇಷ್ಟ ವಾದರೆ ಹೇಳಿ
ಅಭಿಮಾನಿಗಳ ಸಂತಸ
ಈ ಪೋಸ್ಟ್‌ಗೆ ಸಾಕಷ್ಟು ಜನ ಪಾಸಿಟಿವ್ ಕಾಮೆಂಟ್ ಮಾಡಿದ್ದಾರೆ
ಸೂಪರ್ ಸರ್ ಮತ್ತೆ ನಿಮ್ಮ ಸಿ ಎಸ್ ಪಿ ಆಗಿ ನಿಮ್ಮ ವಾದ ನೋಡಲು ಕಾತುರದಿಂದ ಕಾಯ್ತಾ ಇದ್ದೀವಿ ತುಂಬಾ ಸಂತೋಷದ ವಿಷಯ ಎಂದು ಬಿ. ಎಸ್ ಮಂಜುಳಾ ಕಾಮೆಂಟ್ ಮಾಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಚಾನೆಲ್ ಈ ವರೆಗೂ ಅಧಿಕೃತ ಘೋಷಣೆ ಮಾಡಿಲ್ಲ.