ಕನ್ನಡ ಸುದ್ದಿ  /  Entertainment  /  Person Death In Udupi Who Brought Injunction Order For Daiva Kola

Cinematic story in Udupi: ನೇಮೋತ್ಸವಕ್ಕೆ ತಡೆಯಾಜ್ಞೆ ತಂದ ವ್ಯಕ್ತಿ ಹಠಾತ್‌ ನಿಧನ..ಇದು ರಿಯಲ್‌ 'ಕಾಂತಾರ', ದೈವದ ಶಿಕ್ಷೆ ಎಂದ ಜನರು

ನೇಮೋತ್ಸವ ನಡೆಸಬಾರದು ಎಂದು ಪ್ರಕಾಶ್‌ ಶೆಟ್ಟಿ ಹಾಗೂ ಜಯ ಪೂಜಾರಿ ಒಟ್ಟಿಗೆ ಸೇರಿ ನ್ಯಾಯಾಲಯದಿಂದ ಸ್ಟೇ ತರುತ್ತಾರೆ. ಆದರೆ ತಡೆಯಾಜ್ಞೆ ತಂದ ಮರು ದಿನವೇ ತಂಬಿಲ ಸೇವೆ ನಡೆಯುವಾಗ ದೈವಸ್ಥಾನದ ಎದುರೇ ಜಯ ಪೂಜಾರಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.

 ಜಯ ಪೂಜಾರಿ
ಜಯ ಪೂಜಾರಿ

ನಿಜ ಜೀವನದಲ್ಲಿ ನಡೆಯುವ ಎಷ್ಟೋ ಘಟನೆಗಳು ಸಿನಿಮಾ ಕಥೆಗೆ ಸ್ಫೂರ್ತಿಯಾಗಿದೆ. ಆದರೆ ಎಷ್ಟೋ ಬಾರಿ ಸಿನಿಮೀಯ ಶೈಲಿಯಲ್ಲಿ ಕೆಲವೊಂದು ಘಟನೆಗಳು ಕೆಲವರ ನಿಜ ಜೀವನದಲ್ಲಿ ನಡೆದಿದೆ. ಇದೀಗ 'ಕಾಂತಾರ' ಚಿತ್ರದ ಮಾದರಿಯಂತೆ ನೇಮೋತ್ಸವದ ವಿಚಾರವಾಗಿ ಕೋರ್ಟ್‌ಗೆ ಹೋದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

'ಕಾಂತಾರ' ಚಿತ್ರದಲ್ಲಿ, ನೆಮ್ಮದಿ ಹುಡುಕುತ್ತಾ ಹೊರಡುವ ರಾಜನೊಬ್ಬ, ಕಾಡಿನ ಜನರಿಗೆ ತನ್ನ ಭೂಮಿಯನ್ನು ನೀಡಿ, ಅದಕ್ಕೆ ಪ್ರತಿಯಾಗಿ ಅವರ ದೈವವನ್ನು ತನ್ನೊಂದಿಗೆ ಕರೆದೊಯ್ಯುತ್ತಾನೆ. ಆದರೆ ಕಾಲಾನಂತರದಲ್ಲಿ ರಾಜನ ವಂಶದವರು ಭೂಮಿಯನ್ನು ಜನರಿಂದ ವಾಪಸ್‌ ಪಡೆಯಲು ಪ್ರಯತ್ನಿಸುತ್ತಾರೆ. ದೈವ ಕೋಲ ನಡೆಯುವಾಗ ರಾಜನ ವಂಶಜ, ನಮ್ಮ ಭೂಮಿಯನ್ನು ವಾಪಸ್‌ ಕೊಡಿಸುವಂತೆ ದೈವದ ಬಳಿ ಕೇಳುತ್ತಾನೆ. ಆಗ ದೈವ, ನಾನು ನಿನ್ನ ಜಾಗವನ್ನು ವಾಪಸ್‌ ಕೊಡಿಸುತ್ತೇನೆ, ಆದರೆ ಇದುವರೆಗೂ ನಾನು ನಿನಗೆ ನೀಡಿದ ನೆಮ್ಮದಿಯನ್ನು ವಾಪಸ್‌ ಕೊಡಲು ಸಾಧ್ಯವೇ? ಎಂದು ಕೇಳುತ್ತದೆ. ಇದಕ್ಕೆ ಉತ್ತರಿಸುವ ಆತ, ನಿನ್ನ ಕೈಲಾಗದಿದ್ದರೆ ನಾನು ಕೋರ್ಟಿಗೆ ಹೋಗುತ್ತೇನೆ ಎನ್ನುತ್ತಾನೆ. ''ಕೋರ್ಟಿಗೆ ಹೋದರೆ ಮೆಟ್ಟಿಲಲ್ಲಿ ನಿನ್ನ ತೀರ್ಮಾನ ಮಾಡುತ್ತೇನೆ'' ಎಂದು ದೈವ ಹೇಳುತ್ತದೆ. ದೈವದ ಮಾತನ್ನು ಮೀರಿ, ನ್ಯಾಯಾಲಯದ ಮೊರೆ ಹೋಗುವ ವ್ಯಕ್ತಿ ಕೋರ್ಟ್‌ ಮೆಟ್ಟಿಲಿನ ಬಳಿ ರಕ್ತಕಾರಿ ಸಾವನ್ನಪ್ಪುತ್ತಾನೆ. ಇದೀಗ ಇಂತದ್ದೇ ಒಂದು ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಪಡುಬಿದ್ರೆಯ ಪಡುಹಿತ್ಲು ಎಂಬ ಗ್ರಾಮದ ಜಯ ಪೂಜಾರಿ ಎಂಬುವವರೇ ಸಾವನ್ನಪ್ಪಿರುವ ವ್ಯಕ್ತಿ. ಪ್ರತಿ ವರ್ಷ ಇಲ್ಲಿನ ದೈವಸ್ಥಾನದಲ್ಲಿ ನೇಮೋತ್ಸವ ನಡೆಯುತ್ತದೆ. ಈ ದೈವಸ್ಥಾನದ ಆಡಳಿತ ನೋಡಿಕೊಳ್ಳಲು ನೇಮಿಸಿರುವ ಸಮಿತಿಗೆ ಪ್ರಕಾಶ್‌ ಶೆಟ್ಟಿ ಎಂಬುವವರು ಅಧ್ಯಕ್ಷರಾಗಿದ್ದರು. ಆದರೆ ಇತ್ತೀಚೆಗೆ ಸಮಿತಿ ಬದಲಾಗಿ ಪ್ರಕಾಶ್‌ ಶೆಟ್ಟಿ ಕೂಡಾ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಆದರೆ ಅಧಿಕಾರದ ಆಸೆಯಿಂದ ಪ್ರಕಾಶ್‌ ಶೆಟ್ಟಿ, ಪ್ರತ್ಯೇಕ ಟ್ರಸ್ಟ್‌ ರಚಿಸಿ ಜಯ ಪೂಜಾರಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ, ದೈವಸ್ಥಾನದ ಸಮಿತಿ ಮೇಲೆ ಹಕ್ಕು ಚಲಾಯಿಸುವ ಯತ್ನ ಮಾಡುತ್ತಾರೆ. ಆದರೆ ದೈವಸ್ಥಾನ ಸಮಿತಿ ಎಂದಿನಂತೆ ಈ ಬಾರಿ ಕೂಡಾ ನೇಮೋತ್ಸವ ನಡೆಸಲು ನಿರ್ಧರಿಸುತ್ತದೆ. ಈ ನೇಮೋತ್ಸವ ನಡೆಸಬಾರದು ಎಂದು ಪ್ರಕಾಶ್‌ ಶೆಟ್ಟಿ ಹಾಗೂ ಜಯ ಪೂಜಾರಿ ಜೊತೆ ಸೇರಿ ನ್ಯಾಯಾಲಯದಿಂದ ಸ್ಟೇ ತರುತ್ತಾರೆ. ಆದರೆ ತಡೆಯಾಜ್ಞೆ ತಂದ ಮರು ದಿನವೇ ತಂಬಿಲ ಸೇವೆ ನಡೆಯುವಾಗ ದೈವಸ್ಥಾನದ ಎದುರೇ ಜಯ ಪೂಜಾರಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.

ಪ್ರಕಾಶ್‌ ಶೆಟ್ಟಿ ದೈವನರ್ತಕರಿಗೂ ಕಿರುಕುಳ ನೀಡುತ್ತಿದ್ದರು ಎಂದು ಕೆಲವರು ದೂರು ನೀಡಿದ್ದಾರೆ. ಡಿಸೆಂಬರ್‌ 23ರಂದು ಸ್ಟೇ ತಂದಿದ್ದ ಜಯ ಪೂಜಾರಿ, ಡಿಸೆಂಬರ್‌ 24ರಂದು ನಿಧನರಾಗಿದ್ದಾರೆ. ಈ ಹಿನ್ನೆಲೆ ಜನವರಿ 7 ರಂದು ನಡೆಯಬೇಕಿದ್ದ ದೈವಕೋಲವನ್ನು ಜನವರಿ 13ರಂದು ಮುಂದೂಡಲಾಗಿದೆ. ಜಯ ಪೂಜಾರಿ ನಿಧನದ ಸುದ್ದಿ ತಿಳಿದು ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಇದು ಕಾಕತಾಳಿಯ, ಜಯ ಪೂಜಾರಿ ನಿಧನಕ್ಕೂ ದೈವಕ್ಕೂ ಲಿಂಕ್‌ ಮಾಡುವುದು ಬೇಡ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರೆ ಇನ್ನೂ ಕೆಲವರು ನೇಮೋತ್ಸವಕ್ಕೆ ಅಡ್ಡಿಪಡಿಸಿದ್ದಕ್ಕೆ ದೈವ ನೀಡಿರುವ ಶಿಕ್ಷೆ ಇದು ಎನ್ನುತ್ತಿದ್ದಾರೆ.

IPL_Entry_Point

ವಿಭಾಗ