ಕನ್ನಡ ಸುದ್ದಿ  /  Entertainment  /  Pili Tulu Movie Going To Release On February 10th

Pili Movie Release Date: ಫೆಬ್ರವರಿ 10ಕ್ಕೆ ತೆರೆಗೆ ಬರ್ತಿದೆ ತುಳುನಾಡಿನ ಸಂಸ್ಕೃತಿ, ಆಚರಣೆಯನ್ನು ಬಿಂಬಿಸುವ 'ಪಿಲಿ' ಸಿನಿಮಾ

ತುಳುನಾಡಿನ ಸಂಸ್ಕೃತಿ, ಆಚರಣೆ ಮತ್ತು ನಂಬಿಕೆಗಳನ್ನು ತೋರಿಸಲಾಗಿದೆ. ಕರಾವಳಿಯಲ್ಲಿ ಹುಲಿ ಕುಣಿತ ಬಹಳ ಫೇಮಸ್‌. ಈ ಆಚರಣೆಗೆ ಬಹಳ ಗೌರವ ಹಾಗೂ ಇತಿಹಾಸ ಇದೆ. ಆದರೆ ಅದರ ಗೌರವಕ್ಕೆ ಧಕ್ಕೆ ಬಂದಾಗ ಹಾಗೂ ಆಚರಣೆಯಲ್ಲಿ ದೋಷವುಂಟಾದಾಗ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ

ಫೆಬ್ರವರಿ 10 ರಂದು ತೆರೆಗೆ ಬರಲಿರುವ  'ಪಿಲಿ' ಸಿನಿಮಾ
ಫೆಬ್ರವರಿ 10 ರಂದು ತೆರೆಗೆ ಬರಲಿರುವ 'ಪಿಲಿ' ಸಿನಿಮಾ

ಎನ್.ಎನ್.ಎಮ್. ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿ ಆತ್ಮಾನಂದ ರೈ ನಿರ್ಮಿಸಿರುವ 'ಪಿಲಿ' ತುಳು ಸಿನಿಮಾ ಇದೇ ಶುಕ್ರವಾರ ತೆರೆ ಕಾಣುತ್ತಿದೆ. ಚಿತ್ರತಂಡ ತಮ್ಮ ಸಿನಿಮಾ ಬಗ್ಗೆ ಮಾಹಿತಿ ನೀಡಲು ಮಂಗಳೂರಿನಲ್ಲಿ ಪ್ರೆಸ್‌ ಮೀಟ್‌ ಆಯೋಜಿಸಿತ್ತು. ಚಿತ್ರತಂಡದ ಬಹುತೇಕ ಎಲ್ಲಾ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

'ಪಿಲಿ' ಚಿತ್ರಕ್ಕೆ ಮಯೂರ್‌ ಆರ್.‌ ಶೆಟ್ಟಿ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಜೊತೆಗೆ ಚಿತ್ರದ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಇದಕ್ಕೂ ಮುನ್ನ ಮಯೂರ್‌ ಶೆಟ್ಟಿ 'ಮೈ ನೇಮ್‌ ಇಸ್‌ ಅಣ್ಣಪ್ಪ' ಚಿತ್ರವನ್ನು ನಿರ್ದೇಶಿಸಿದ್ದಾರೆ. ಜೊತೆಗೆ ಎಕ್ಕಸಕ, ಪಿಲಿಬೈಲ್ ಯಮುನಕ್ಕ ಸೇರಿದಂತೆ ಹಲವಾರು ತುಳು ಹಾಗೂ ಕನ್ನಡ ಸಿನಿಮಾಗಳಲ್ಲಿ

ಸಹ ನಿರ್ದೇಶಕರಾಗಿ, ಛಾಯಾಗ್ರಾಹಕರಾಗಿ, ಚಿತ್ರ ಸಾಹಿತಿಯಾಗಿ ಕೂಡಾ ಹೆಸರು ಮಾಡಿದ್ದಾರೆ. ಯುವ ನಟ ಭರತ್‌ ಭಂಡಾರಿ 'ಪಿಲಿ' ಚಿತ್ರಕ್ಕೆ ಕಥೆ ಬರೆದು ನಾಯಕನಾಗಿ ಕೂಡಾ ಆಕ್ಟ್‌ ಮಾಡಿದ್ದಾರೆ. ಭರತ್ ರಾಮ್ ರೈ ಈ ಚಿತ್ರಕ್ಕೆ ಸಹ-ನಿರ್ಮಾಕರಾಗಿದ್ದಾರೆ.

''ನಮ್ಮ ಚಿತ್ರದಲ್ಲಿ ತುಳುನಾಡಿನ ಸಂಸ್ಕೃತಿ, ಆಚರಣೆ ಮತ್ತು ನಂಬಿಕೆಗಳನ್ನು ತೋರಿಸಲಾಗಿದೆ. ಕರಾವಳಿಯಲ್ಲಿ ಹುಲಿ ಕುಣಿತ ಬಹಳ ಫೇಮಸ್‌. ಈ ಆಚರಣೆಗೆ ಬಹಳ ಗೌರವ ಹಾಗೂ ಇತಿಹಾಸ ಇದೆ. ಆದರೆ ಅದರ ಗೌರವಕ್ಕೆ ಧಕ್ಕೆ ಬಂದಾಗ ಹಾಗೂ ಆಚರಣೆಯಲ್ಲಿ ದೋಷವುಂಟಾದಾಗ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ'' ಎಂದು ಚಿತ್ರತಂಡ ಮಾಹಿತಿ ನೀಡಿದೆ. ಚಿತ್ರದಲ್ಲಿ ವಿಜಯ್‌ಕುಮಾರ್ ಕೊಡಿಯಾಲ್‌ ಬೈಲ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾಯಕ ಭರತ್ ಭಂಡಾರಿ ಜೊತೆಗೆ ಸ್ವಾತಿ ಶೆಟ್ಟಿ, ತ್ರಿಷಾ ಶೆಟ್ಟಿ, ಕೃತಿ ಶೆಟ್ಟಿ, ನವೀನ್ ಡಿ. ಪಡೀಲ್, ಅರವಿಂದ್‌ ಬೋಳಾರ್, ಭೋಜರಾಜ ವಾಮಂಜೂರು, ವಿಸ್ಮಯ ವಿನಾಯಕ್, ಸ್ವರಾಜ್ ಶೆಟ್ಟಿ, ಸಂತೋಷ್ ಶೆಟ್ಟಿ, ರೂಪ ಡಿ ಶೆಟ್ಟಿ, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್‌ ಶೆಟ್ಟಿ ಮಾಣಿಬೆಟ್ಟು, ದೀಪಕ್ ರೈ ಪಾಣಾಜೆ, ಚೇತನ್ ರೈ ಮಾಣಿ ಸೇರಿದಂತೆ ಹೆಸರಾಂತ ಕಲಾವಿದರು ನಟಿಸಿದ್ದಾರೆ.

ಪ್ರೆಸ್‌ ಮೀಟ್‌ನಲ್ಲಿ 'ಪಿಲಿ'  ಚಿತ್ರತಂಡ
ಪ್ರೆಸ್‌ ಮೀಟ್‌ನಲ್ಲಿ 'ಪಿಲಿ' ಚಿತ್ರತಂಡ

ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಮಯೂರ್ ಆರ್. ಶೆಟ್ಟಿ, ಡಿ.ಬಿ.ಸಿ ಶೇಖರ್ ಮತ್ತು ಕೆ.ಕೆ. ಪೇಜಾವರ್ ಬರೆದಿರುವ ಸಾಹಿತ್ಯಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಗಣೇಶ್ ನೀರ್ಚಾಲ್ ಅವರ ಸಂಕಲನ ಈ ಚಿತ್ರಕ್ಕಿದೆ. ಚಿತ್ರಕ್ಕೆ ಸಂದೇಶ್ ಬಿಜೈ ಸಂಭಾಷಣೆ ಬರೆದಿದ್ದು, ನಿರ್ದೇಶನ ತಂಡದಲ್ಲಿ ತ್ರಿಶೂಲ್ ಶೆಟ್ಟಿ, ಸಂದೇಶ್ ಬಿಜೈ ಮುಂತಾದವರು ಇದ್ದಾರೆ. ಪ್ರಚಾರ ಕಲೆ, ವಿನ್ಯಾಸ ದೇವಿ ರೈ ಅವರದ್ಧಾಗಿದೆ. ತುಳುನಾಡಿನ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಸೇರಿದಂತೆ ಮಂಗಳೂರಿನ ಸುತ್ತಮುತ್ತಲಿನ ಸುಂದರ ಪ್ರದೇಶಗಳಲ್ಲಿ 'ಪಿಲಿ' ಚಿತ್ರೀಕರಣ ನಡೆದಿದ್ದು ಸಿನಿಮಾ ಬಹಳ ಸುಂದರವಾಗಿ ಮೂಡಿ ಬಂದಿದೆ ಎಂದು ಚಿತ್ರತಂಡ ಹೇಳಿದೆ. ಫೆಬ್ರವರಿ 10 ರಂದು ಚಿತ್ರ ತೆರೆ ಕಾಣುತ್ತಿದೆ.

ಇತ್ತೀಚೆಗೆ ದುಬೈನಲ್ಲಿ 'ಪಿಲಿ' ಪ್ರೀಮಿಯರ್‌ ಶೋ ಏರ್ಪಡಿಸಲಾಗಿತ್ತು. ನಟ, ಬಿಗ್‌ ಬಾಸ್‌ 9 ವಿನ್ನರ್‌ ರೂಪೇಶ್‌ ಶೆಟ್ಟಿ, ಕಬಡ್ಡಿ ಆಟಗಾರ ಪ್ರಶಾಂತ್‌ ರೈ ಹಾಗೂ ಇನ್ನಿತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಿನಿಮಾ ನೋಡಿದವರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಭಾಗ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ