Mollywood OTT Movies: ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿರುವ ಟಾಪ್ 5 ಮಲಯಾಳಂ ಸಿನಿಮಾಗಳು; ಎಲ್ಲವೂ ಒಂದಕ್ಕಿಂತ ಒಂದು ಬೆಸ್ಟ್
Top 5 Malayalam Films: ಅಮೆಜಾನ್ ಪ್ರೈಂ, ನೆಟ್‌ಫ್ಲಿಕ್ಸ್ ಮತ್ತು ಸೋನಿ ಲೈವ್ ಒಟಿಟಿ ವೇದಿಕೆಗಳಲ್ಲಿ ಟಾಪ್ 5 ಮಲಯಾಳಂ ಸಿನಿಮಾಗಳು ಟ್ರೆಂಡಿಂಗ್‌ನಲ್ಲಿವೆ. ಆ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

Mollywood OTT Movies: ಒಟಿಟಿಯಲ್ಲಿ ಮಲಯಾಳಂ ಸಿನಿಮಾ ಹುಡುಕುತ್ತಿದ್ದೀರಾ? ಕಳೆದ ಎರಡ್ಮೂರು ವಾರಗಳಿಂದ ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿರುವ ಟಾಪ್ 5 ಸಿನಿಮಾಗಳ ವಿವರ ಇಲ್ಲಿದೆ. ಕ್ರೈಂ ಥ್ರಿಲ್ಲರ್ ಸಿನಿಮಾದಿಂದ ಹಿಡಿದು, ಫ್ಯಾಮಿಲಿ ಡ್ರಾಮಾ, ಕಾಮಿಡಿ ಜತೆಗೆ ಸಸ್ಪೆನ್ಸ್ ಸಿನಿಮಾಗಳೂ ಸ್ಟ್ರೀಮಿಂಗ್ ಆರಂಭಿಸಿವೆ. ಚಿತ್ರಮಂದಿರಗಳಲ್ಲಿ ಹಿಟ್ ಪಟ್ಟ ಪಡೆದು, ಒಟಿಟಿಯಲ್ಲಿಯೂ ಕಮಾಲ್ ಮಾಡುತ್ತಿವೆ ಈ ಸಿನಿಮಾಗಳು.
- ಆಫೀಸರ್ ಆನ್ ಡ್ಯೂಟಿ
ಆಫೀಸರ್ ಆನ್ ಡ್ಯೂಟಿ ಅನ್ನೋ ಚೊಚ್ಚಲ ಸಿನಿಮಾ ಮೂಲಕವೇ ನಿರ್ದೇಶಕ ಜಿತು ಅಶ್ರಫ್ ಗಮನ ಸೆಳೆದಿದ್ದಾರೆ. ಈ ಸಿನಿಮಾ ಮೂಲಕ ದಕ್ಷ ಪೊಲೀಸ್ ಆಫೀಸರ್ ಕಥೆಯನ್ನು ಅಷ್ಟೇ ರೋಚಕವಾಗಿ ಕಟ್ಟಿಕೊಟ್ಟಿದ್ದಾರೆ ಜಿತು. ಆಕ್ಷನ್ ಜತೆಗೆ ಥ್ರಿಲ್ಲಿಂಗ್ ಎಳೆಯ ಈ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು, ಇದೀಗ ಒಟಿಟಿಯಲ್ಲಿಯೂ ಕಮಾಲ್ ಮಾಡುತ್ತಿದೆ. ಕುಂಚಾಕೋ ಬೋಬನ್ ಮತ್ತು ಪ್ರಿಯಾಮಣಿ ಮುಖ್ಯಭೂಮಿಕೆಯಲ್ಲಿನ ಈ ಸಿನಿಮಾ ಸದ್ಯ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿದೆ. ಕನ್ನಡದಲ್ಲಿಯೂ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.
- ಪೊನ್ಮನ್
ಮಾಲಿವುಡ್ ನಿರ್ದೇಶಕ ಮತ್ತು ನಟ ಬಾಸಿಲ್ ಜೋಸೆಫ್ ಅಭಿನಯದ ಪೊನ್ಮನ್ ಸಿನಿಮಾ ಸದ್ಯ ಜಿಯೋ ಹಾಟ್‌ಸ್ಟಾರ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ, ಹಿಟ್ ಪಟ್ಟಿಗೆ ಸೇರಿದ ಈ ಸಿನಿಮಾದಲ್ಲಿ ಬಾಸಿಲ್ ಜೋಸೆಫ್ ಅವರ ನಟನೆಯೇ ಹೈಲೈಟ್. ಮಲಯಾಳಂನ ಈ ಡಾರ್ಕ್ ಕಾಮಿಡಿ ಸಿನಿಮಾ ಕನ್ನಡದ ಜತೆಗೆ ತೆಲುಗು, ಹಿಂದಿ, ತಮಿಳು ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಜೋತೀಶ್ ಸಂತೋಷ್ ನಿರ್ದೇಶನ ಮಾಡಿದ್ದಾರೆ.
- ನಾರಾಯಣಂಟೆ ಮೂನ್ನನ್ಮಕ್ಕಲ್
ಶರಣ್ ವೇಣುಗೋಪಾಲ್ ನಿರ್ದೇಶನದ ಚೊಚ್ಚಲ ಚಿತ್ರ ನಾರಾಯಣಂಟೆ ಮೂನ್ನನ್ಮಕ್ಕಲ್ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಈ ನಡುವೆ ಒಟಿಟಿಯಲ್ಲಿಯೂ ಅದೇ ಖದರ್ ಮುಂದುವರಿಸಿದೆ. ಸದ್ಯ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿರುವ ಈ ಸಿನಿಮಾದಲ್ಲಿ ಜೊಜು ಜಾರ್ಜ್, ಸೂರಜ್ ವೆಂಜ್ರಮೂಡು ಮುಖ್ಯಭೂಮಿಕೆಯಲ್ಲಿದ್ದಾರೆ. ಫೆಬ್ರವರಿ 7ರಂದು ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಈಗ ಕನ್ನಡದಲ್ಲಿಯೂ ಈ ಸಿನಿಮಾ ನೋಡಬಹುದು.
- ಒರು ಜಾತಿ ಜಾತಕಂ
ಮಲಯಾಳಂ ಹಾಸ್ಯ ಚಿತ್ರ ಒರು ಜಾತಿ ಜಾತಕಂ 30ರ ಪ್ರಾಯದ ವ್ಯಕ್ತಿಯೊಬ್ಬನ ಮದುವೆ ಹಿನ್ನೆಲೆಯಲ್ಲಿ ಸಾಗುವ ಸಿನಿಮಾ. ಎಂ. ಮೋಹನನ್ ನಿರ್ದೇಶಿಸಿದ ಮತ್ತು ವಿನೀತ್ ಶ್ರೀನಿವಾಸನ್, ನಿಖಿಲಾ ವಿಮಲ್ ನಟಿಸಿರುವ ಈ ಚಿತ್ರವು ಜನವರಿ 31 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಅದಾದ ಬಳಿಕ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಸದ್ಯ ಟಾಪ್ ಟ್ರೆಂಡಿಂಗ್ ಮಲಯಾಳಂ ಸಿನಿಮಾಗಳಲ್ಲಿ ಈ ಚಿತ್ರವೂ ಸ್ಥಾನ ಪಡೆದಿದೆ. ಕನ್ನಡದಲ್ಲಿಯೂ ಈ ಚಿತ್ರ ವೀಕ್ಷಣೆಗೆ ಲಭ್ಯವಿದೆ.
- ರೇಖಾಚಿತ್ರಂ
ಜೋಫಿನ್ ಟಿ. ಚಾಕೊ ನಿರ್ದೇಶಿಸಿದ ಮತ್ತು ಆಸಿಫ್ ಅಲಿ, ಅನಸ್ವರ ರಾಜನ್ ನಟಿಸಿದ ಮಲಯಾಳಂ ಥ್ರಿಲ್ಲರ್ ರೇಖಾಚಿತ್ರಂ ಸೋನಿಲೈವ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದ್ದು, ಇನ್ನೂ ಟ್ರೆಂಡಿಂಗ್‌ನಲ್ಲಿದೆ. ಸಸ್ಪೆನ್ಸ್ ಜತೆಗೆ ಸೀಟ್ ಎಡ್ಜ್ ಥ್ರಿಲ್ಲರ್ ಜಾನರ್‌ನ ಈ ಸಿನಿಮಾ, ಚಿತ್ರಮಂದಿರಗಳಲ್ಲಿ ಗೆದ್ದು, ಒಟಿಟಿಯಲ್ಲಿಯೂ ಮೋಡಿ ಮಾಡುತ್ತಿದೆ. ಕನ್ನಡದಲ್ಲಿಯೂ ಈ ಸಿನಿಮಾ ವೀಕ್ಷಣೆ ಮಾಡಬಹುದು.
