ಅಂದು ಯಶ್‌ಗಾಗಿ ಮಾಡಿದ್ದ ಕಥೆ ಇದೀಗ ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಶುರು; ಸೆಟ್ಟೇರಿತು ʻಪವರ್ ಸ್ಟಾರ್ ಧರೆಗೆ ದೊಡ್ಡವನುʼ
ನಟ ಯಶ್‌ಗಾಗಿ ಬರೆದ ಸಿನಿಮಾ ಕಥೆಯೊಂದು ಇದೀಗ ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಹೊಸರೂಪದೊಂದಿದೆ ಸೆಟ್ಟೇರಿದೆ. ನಿರ್ದೇಶಕ ಸೂರ್ಯ, ನೇತ್ರದಾನದ ಮಹತ್ವ ಸಾರುವ ಕಥೆಯ ಜತೆಗೆ ಆಗಮಿಸಿದ್ದಾರೆ. ಇಲ್ಲಿದೆ ಈ ಚಿತ್ರದ ಕುರಿತ ಮಾಹಿತಿ.

Power Star Dharege Doddavanu: 2014ರಲ್ಲಿ ನಿರ್ದೇಶಕರು ಮಾಡಿಟ್ಟುಕೊಂಡಿದ್ದ ಕಥೆಯನ್ನು ನಟ ಯಶ್‌ಗೆ ಹೇಳಿದ್ದರು. ಆದರೆ, ಆವತ್ತು ಅದು ಕಾರಣಾಂತರಗಳಿಂದ ಮುಂದುವರಿಯಲಿಲ್ಲ. ಇದೀಗ ದಶಕದ ಹಿಂದಿನ ಕಥೆಯನ್ನೇ ಮತ್ತೆ ಬೇರೆ ರೂಪದಲ್ಲಿ ತೆರೆಮೇಲೆ ತರಲು ಸಿದ್ಧರಾಗಿದ್ದಾರೆ ನಿರ್ದೇಶಕ ಸೂರ್ಯ. ಈ ಚಿತ್ರಕ್ಕೆ ʻಪವರ್ ಸ್ಟಾರ್ ಧರೆಗೆ ದೊಡ್ಡವನುʼ ಎಂಬ ಶೀರ್ಷಿಕೆ ಇಡಲಾಗಿದ್ದು, ಪುನೀತ್ ರಾಜ್‌ಕುಮಾರ್ ಅವರ ಆಶಯವನ್ನು ಆಧರಿಸಿ ಈ ಸಿನಿಮಾ ಸೆಟ್ಟೇರಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಈ ಚಿತ್ರದ ಮುಹೂರ್ತ ನೆರವೇರಿದೆ.
ಯಶ್‌ಗೆ ಬರೆದ ಕಥೆ ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಹೇಗೆ ಬದಲಾಯ್ತು ಎಂಬುದನ್ನು ನಿರ್ದೇಶಕ ಸೂರ್ಯ ಹೇಳಿಕೊಂಡಿದ್ದಾರೆ. "ಇದೊಂದು ಸ್ಪೂರ್ತಿದಾಯಕ ಕಥೆ. ನಾನು ಸುಮಾರು 15 ಚಿತ್ರಗಳಲ್ಲಿ ಸಹಾಯಕ ಹಾಗೂ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಇದು ನನ್ನ ಮೊದಲ ಪೂರ್ಣ ಪ್ರಮಾಣದ ನಿರ್ದೇಶನದ ಚಿತ್ರ. ನಾನು ಈ ಹಿಂದೆ 2014ರಲ್ಲಿ ನಟ ಯಶ್ ರವರಿಗೆ ಮಾಡಿದಂತಹ ಕಥೆ ಇದು. ಆಗಲೇ 50 ಲಕ್ಷ ಖರ್ಚು ಮಾಡಿ ಗ್ರಾಫಿಕ್ಸ್ ಮೂಲಕ ಟೀಸರ್ ಮಾಡಿದ್ವಿ. ಆದರೆ ಬೇರೆ ಬೇರೆ ಕಾರಣಗಳಿಂದ ಚಿತ್ರ ಆರಂಭಗೊಳ್ಳಲಿಲ್ಲ. ಆ ಕಥೆಯನ್ನು ಇಟ್ಟುಕೊಂಡು ಒಂದಷ್ಟು ಬದಲಾವಣೆ ಜೊತೆಗೆ ಈಗ ಚಿತ್ರವನ್ನು ಆರಂಭಿಸಿದ್ದೇವೆʼ ಎನ್ನುತ್ತಾರೆ ಸೂರ್ಯ.
ಮುಂದುವರಿದು ಮಾತನಾಡುವ ಅವರು, "ಈ ʻಪವರ್ ಸ್ಟಾರ್ ಧರೆಗೆ ದೊಡ್ಡವನುʼ ಎಂಬ ಟೈಟಲ್ ಇಟ್ಟಾಗ ಫಿಲಂ ಚೇಂಬರ್‌ನಿಂದ ಕರೆ ಬಂದಿತ್ತು. ಈ ಟೈಟಲ್ ಬಳಸಿಕೊಳ್ಳುವುದಕ್ಕೆ ಚಿತ್ರದ ಸಾರಾಂಶ ಕೊಡಿ ಎಂದಿದ್ದರು. ಅದರಂತೆ ನಾವು ಅವರು ಕೇಳಿದ್ದನ್ನ ಕೊಟ್ಟಿದ್ದೇವೆ. ಒಪ್ಪಿಗೆ ಸೂಚಿಸಿ ಅನುಮತಿ ನೀಡಿದ್ದಾರೆ. ಆಗಲೇ ನನಗೆ ಅನಿಸಿತ್ತು ಈ ಚಿತ್ರ ಬೇರೆಯದೇ ರೂಪ ಪಡೆಯುತ್ತೆ ಅಂತ. ಕಣ್ಣಿಲ್ಲದ ಮಗುವಿಗೆ ದೃಷ್ಟಿ ಬಂದಾಗ ಆಕೆಯ ಆಸೆ ನೆರವೇರಿಸಿಕೊಳ್ಳಲು ಮುಂದಾಗುವಂತಹ ಕಥೆಯನ್ನು ಒಳಗೊಂಡ ಅಭಿಮಾನದ ಚಿತ್ರ ಇದಾಗಲಿದೆ. ಈ ಚಿತ್ರದಲ್ಲಿ ಶಿಲ್ಪಿಯ ಪಾತ್ರ ಬಹಳ ಮಹತ್ವವಾದದ್ದು. ಹಾಗಾಗಿ ಒಂದು ಶಿಲೆ ಕೆತ್ತನೆ ವಿಚಾರವಾಗಿ ಅಯೋಧ್ಯೆಯ ಬಾಲರಾಮನ ವಿಗ್ರಹ ಕೆತ್ತಿದಂತಹ ಮೈಸೂರಿನ ಶಿಲ್ಪಿ ಯೋಗಿರಾಜ್ ಅವರನ್ನು ಭೇಟಿ ಮಾಡುವ ಪ್ರಯತ್ನ ನಡೆಯುತ್ತಿದೆ" ಎಂದರು.
ಅಕ್ಟೋಬರ್ 29ರಂದು ತೆರೆಗೆ
"ಈ ಚಿತ್ರದಲ್ಲಿ ವಿಶೇಷ ತಂತ್ರಜ್ಞಾನದ ಮೂಲಕ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಪರದೆಯ ಮೇಲೆ ಕಾಣಲಿದ್ದಾರೆ. ʻಪವರ್ ಸ್ಟಾರ್ ಧರೆಗೆ ದೊಡ್ಡವನುʼ ಎಂಬ ಟೈಟಲ್ ಅಭಿಮಾನಿಗಳ ಹೃದಯ ಗೆಲ್ಲುವಂತಹ ಸಾರಾಂಶ ಬೆಸೆದುಕೊಂಡಿದೆ. ಈಗಾಗಲೇ ಈ ಚಿತ್ರದ ಗ್ರಾಫಿಕ್ಸ್ ಕೆಲಸ ಬಹುತೇಕ ಪೂರ್ಣಗೊಂಡಿದೆ. ಮಾತಿನ ಭಾಗ ಹಾಗೂ ಹಾಡಿನ ಭಾಗ ಚಿತ್ರೀಕರಣ ಮಾಡಬೇಕಿದೆ. ಇದೇ ವರ್ಷದ ಅಕ್ಟೋಬರ್ 29 ಈ ಸಿನಿಮಾ ಬಿಡುಗಡೆ ಮಾಡಲಿದ್ದೇವೆ ಎಂದರು.
ಸರಿಗಮಪ ರಿಯಾಲಿಟಿ ಶೋ ಮೂಲಕ ಮನೆಮಾತಾಗಿ ಖ್ಯಾತಿ ಪಡೆದಂತ ಪುಟಾಣಿ ಜ್ಞಾನ ಗುರುರಾಜ್, ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಯುವ ರಂಗಭೂಮಿ ಪ್ರತಿಭೆ ಪಾಳ್ಯ ಸಿದ್ದಿ ವಿಲಾಸ್, ಹಿರಿಯ ನಟ ಸುಚೇಂದ್ರ ಪ್ರಸಾದ್ ಸೇರಿ ಇನ್ನೂ ಹತ್ತಾರು ಕಲಾವಿದರು ಈ ಸಿನಿಮಾದಲ್ಲಿ ಇರಲಿದ್ದಾರೆ. ವಿಜಯ್ ಭಾಸ್ಕರ್ ಅವರ ಛಾಯಾಗ್ರಾಹಣ ಈ ಚಿತ್ರಕ್ಕಿದೆ. ಅನುಶ್ರೀ ಶ್ರೀಧರ್ ಮೂರ್ತಿ ಅವರ ಸಂಗೀತ, ಸಿದ್ದೇಶ್ ಹಿರೇಮಠ ಗ್ರಾಫಿಕ್ಸ್ ಜವಾಬ್ದಾರಿ ಹೊತ್ತಿದ್ದಾರೆ.
ವಿಭಾಗ