ಒಂದೇ ಚಿತ್ರದಲ್ಲಿ ಅಭಿನಯಿಸಲಿದ್ದಾರಾ ಪ್ರಭಾಸ್ ಮತ್ತು ರಿಷಭ್ ಶೆಟ್ಟಿ? ಸಿನಿ ಅಂಗಳದಲ್ಲಿ ಹೀಗೊಂದು ಹೊಸ ಸುದ್ದಿ
ತೆಲುಗು ನಟ ಪ್ರಭಾಸ್ ಜೊತೆ ರಿಷಬ್ ಕೈ ಜೋಡಿಸಲಿದ್ದಾರೆ. ಇಬ್ಬರೂ ಒಟ್ಟಾಗಿ ಒಂದು ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಹೀಗಿರುವಾಗ ಅಭಿನಯದ ಹೊರತಾಗಿ ರಿಷಬ್ ಪ್ರಭಾಸ್ ಸಿನಿಮಾಕ್ಕೆ ಬೇರೊಂದು ರೀತಿಯಲ್ಲಿ ಸಹಕರಿಸಲಿದ್ದಾರಂತೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ಗಮನಿಸಿ.
ತೆಲುಗು ನಟ ಪ್ರಭಾಸ್ ಮತ್ತು ಕನ್ನಡದ ರಿಷಭ್ ಶೆಟ್ಟಿ ಇಬ್ಬರೂ ಪ್ಯಾನ್ ಇಂಡಿಯಾ ಹೀರೋಗಳಾಗಿ ಹೊರಹೊಮ್ಮಿದ್ದಾರೆ. ಇಬ್ಬರೂ ತಮ್ಮ ತಮ್ಮ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗಲೇ ಇಬ್ಬರೂ ಒಟ್ಟಿಗೆ ಕೆಲಸ ಮಾಡುವ ಸುದ್ದಿಯೊಂದು ಕೇಳಿ ಬರುತ್ತಿದೆ. ಹೌದು, ಪ್ರಭಾಸ್ ಮತ್ತು ರಿಷಭ್ ಶೆಟ್ಟಿ ಇಬ್ಬರೂ ಜೊತೆಯಾಗಿ ಕೆಲಸ ಮಾಡುವ ಸುದ್ದಿಯೊಂದು ಸದ್ದು ಮಾಡುತ್ತಿದೆ. ಹಾಗಂತ ಇಬ್ಬರೂ ಒಟ್ಟಿಗೆ ನಟಿಸುತ್ತಿಲ್ಲ. ಅದರ ಬದಲು ಪ್ರಭಾಸ್ ಅಭಿನಯದ ಚಿತ್ರಕ್ಕೆ ರಿಷಭ್ ಶೆಟ್ಟಿ ಕಥೆ, ಚಿತ್ರಕಥೆ ರಚಿಸಲಿದ್ದಾರಂತೆ.
ಏನಿದು ಹೊಸ ಸುದ್ದಿ?
ಹೊಂಬಾಳೆ ಫಿಲಂಸ್ ಸಂಸ್ಥೆಯು ಪ್ರಭಾಸ್ ಜೊತೆಗೆ ಮೂರು ಸಿನಿಮಾಗಳನ್ನು ನಿರ್ಮಿಸುತ್ತಿರುವ ಸುದ್ದಿ ಗೊತ್ತೇ ಇದೆ. ಈಗಾಗಲೇ ಮೊದಲ ಹಂತವಾಗಿ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ‘ಸಲಾರ್ 2’ ಚಿತ್ರ ತಯಾರಾಗುತ್ತಿದೆ. ಇನ್ನೆರಡು ಚಿತ್ರಗಳಿಗೆ ಸೂಕ್ತ ಕಥೆ ಮತ್ತು ನಿರ್ದೇಶಕರ ಹುಡುಕಾಟ ನಡೆದಿದ್ದು, ಈ ಪೈಕಿ ರಿಷಭ್ ಶೆಟ್ಟಿಗೂ ಒಂದು ಕಥೆಯನ್ನು ಮಾಡಿಕೊಡಿ ಎಂದು ಹೊಂಬಾಳೆ ಫಿಲಂಸ್‍ನ ವಿಜಯ್ ಕಿರಗಂದೂರು ಹೇಳಿದ್ದಾರಂತೆ.
ವಿಜಯ್ ಕಿರಗಂದೂರು ಮತ್ತು ರಿಷಭ್ ಶೆಟ್ಟಿ ಒಳ್ಳೆಯ ಗೆಳೆಯರಾಗಿ ಗುರುತಿಸಿಕೊಂಡವರು. ಹೊಂಬಾಳೆ ಫಿಲಂಸ್‍ಗೆ ರಿಷಭ್ ಶೆಟ್ಟಿ, ‘ಕಾಂತಾರ’ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರ ದೊಡ್ಡ ಯಶಸ್ಸು ಕಾಣುವುದರ ಜೊತೆಗೆ 400 ಕೋಟಿ ರೂ. ಗಳಿಕೆ ಮಾಡಿತ್ತು. ಈ ಚಿತ್ರ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಯಶಸ್ಸು ಕಾಣುವುದರ ಜೊತೆಗೆ, ಅದರ ಮುಂದಿನ ಭಾಗವೂ ಬರುತ್ತಿದೆ. ಸುಮಾರು 100 ಕೋಟಿ ವೆಚ್ಚದಲ್ಲಿ ‘ಕಾಂತಾರ – ಅಧ್ಯಾಯ 1’ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.
ಪ್ರಭಾಸ್ ನಟನೆಯ ಚಿತ್ರಕ್ಕೆ ಕಥೆ ಬರೆಯಲಿದ್ದಾರಾ ರಿಷಭ್?
ಕಥೆಗಾರ ಮತ್ತು ನಿರ್ದೇಶಕರಾಗಿರುವ ರಿಷಭ್ ಶೆಟ್ಟಿಗೆ, ಪ್ರಭಾಸ್‍ಗೆ ಒಂದು ಚಿತ್ರ ಮಾಡಿಕೊಡುವಂತೆ ವಿಜಯ್ ಕಿರಗಂದೂರು ಹೇಳಿದ್ದಾರಂತೆ. ಇದಕ್ಕೆ ರಿಷಭ್ ಸಹ ಸಮ್ಮತಿ ಸೂಚಿಸಿದ್ದು ಕಥೆ-ಚಿತ್ರಕಥೆ ಮಾಡಿಕೊಡುವುದಾಗಿ ಹೇಳಿದ್ದಾರಂತೆ. ಆದರೆ, ಸದ್ಯಕ್ಕೆ ಬೇರೆ ಚಿತ್ರಗಳಲ್ಲಿ ನಟಿಸುತ್ತಿರುವುದರಿಂದ ಆ ಚಿತ್ರದಲ್ಲಿ ನಟಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರಂತೆ.
ಪ್ರಭಾಸ್ ಸದ್ಯ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟರಾಗಿದ್ದು, ‘ರಾಜಾ ಸಾಬ್’, ‘ಸ್ಪಿರಿಟ್’, ‘ಕಲ್ಕಿ 2’, ‘ಸಲಾರ್ 2’ ಮತ್ತು ‘ಫೌಜಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಇನ್ನು, ‘ಕಾಂತಾರ – ಅಧ್ಯಾಯ 1’ ಚಿತ್ರವಲ್ಲದೆ, ‘ಜೈ ಹನುಮಾನ್’ ಮತ್ತು ‘ದಿ ಪ್ರೈಡ್ ಆಫ್ ಭಾರತ್ - ಛತ್ರಪತಿ ಶಿವಾಜಿ ಮಹಾರಾಜ್’ ಎಂಬ ಎರಡು ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ರಿಷಭ್ ಶೆಟ್ಟಿ ನಟಿಸುತ್ತಿದ್ದಾರೆ.
ರಿಷಭ್ ಶೆಟ್ಟಿ ಅಭಿನಯದ ಮೂರು ಚಿತ್ರಗಳು ಮುಂದಿನ ಮೂರು ವರ್ಷಗಳಲ್ಲಿ ಬಿಡುಗಡೆಯಾಗಲಿದೆ. ಈ ಪೈಕಿ ‘ಕಾಂತಾರ – ಅಧ್ಯಾಯ 1’ ಚಿತ್ರವು 2025ರ ಅಕ್ಟೋಬರ್ 02ರಂದು ಬಿಡುಗಡೆಯಾಗದರೆ, ‘ಜೈ ಹನುಮಾನ್’ ಚಿತ್ರವು 2026ರಲ್ಲಿ ಬಿಡುಗಡೆಯಾಗಲಿದೆ. 2027ರಲ್ಲಿ ‘ದಿ ಪ್ರೈಡ್ ಆಫ್ ಭಾರತ್ - ಛತ್ರಪತಿ ಶಿವಾಜಿ ಮಹಾರಾಜ್’ ತೆರೆಗೆ ಬರಲಿದೆ.