Adipurush Trailer: ಪ್ರಭಾಸ್ ಅಭಿನಯದ ಆದಿಪುರುಷ್ ಟ್ರೇಲರ್ ಬಿಡುಗಡೆ; ಎಲ್ಲಾ ಓಕೆ ರಾಮಾಯಣದಲ್ಲಿ ಕಿಂಗ್‌ಕಾಂಗ್ ಏಕೆ ಎಂದ ಸಿನಿಪ್ರಿಯರು
ಈ ಟ್ರೇಲರ್‌ನಲ್ಲಿ ನಿಜಕ್ಕೂ ಮ್ಯಾಜಿಕ್ ಇದೆ, ಟ್ರೇಲರ್ ನೋಡುತ್ತಿದ್ದರೆ ಗೂಸ್ ಬಂಪ್ಸ್ ಬರುತ್ತಿದೆ, ಮುಂದಿನ ತಿಂಗಳು ಸಿನಿಮಾ ನೋಡಲು ಕಾಯುತ್ತಿದ್ದೇವೆ, ಬಾಹುಬಲಿ ಚಿತ್ರಕ್ಕಿಂತ ಈ ಸಿನಿಮಾ ದೊಡ್ಡ ಹಿಟ್ ಆಗಲಿದೆ ಎಂದು ಪ್ರಭಾಸ್ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಆದಿಪುರುಷ್' ಟ್ರೇಲರ್ ಬಿಡುಗಡೆ ಆಗಿದೆ. ಮಂಗಳವಾರ ಚಿತ್ರತಂಡ ಅದ್ಧೂರಿ ಕಾರ್ಯಕ್ರಮ ಏರ್ಪಡಿಸಿ ಟ್ರೇಲರ್ ಬಿಡುಗಡೆ ಮಾಡಿದೆ. ಪ್ರಭಾಸ್, ಕೃತಿ ಸನನ್, ನಿರ್ದೇಶಕ ಓಂ ರೌತ್ ಸೇರಿದಂತೆ ಚಿತ್ರತಂಡದ ಅನೇಕರು ಈ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಹಾಜರಿದ್ದರು. ಟೀ ಸೀರೀಸ್ ತನ್ನ ಯೂಟ್ಯೂಬ್‌ನಲ್ಲಿ ಟ್ರೇಲರ್ ಬಿಡುಗಡೆ ಮಾಡಿದೆ.
ಟ್ರೇಲರ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಕಳೆದ ವರ್ಷ ತೆರೆ ಕಂಡ ಟೀಸರ್‌ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಟೀಸರ್ ಗ್ರಾಫಿಕ್ಸ್ ಚೆನ್ನಾಗಿದೆ ಆದರೆ ಪಾತ್ರಧಾರಿಗಳನ್ನು ತೋರಿಸಿರುವ ರೀತಿ ಚೆನ್ನಾಗಿಲ್ಲ ಎಂದು ಎಲ್ಲರೂ ವಿರೋಧ ವ್ಯಕ್ತಪಡಿಸಿದ್ದರು. ರಾಮಾಯಣ ಒಂದು ಐತಿಹಾಸಿಕ ಮಹಾಕಾವ್ಯ. ಆದರೆ ಟೀಸರ್‌ನಲ್ಲಿ ಶ್ರೀರಾಮ, ಸೀತೆ, ರಾವಣ ಹಾಗೂ ವಾನರ ಸೇನೆಯನ್ನು ತೋರಿಸಿರುವ ರೀತಿ ಚೆನ್ನಾಗಿಲ್ಲ ಎಂದು ಅನೇಕರು ಬೇಸರ ವ್ಯಕ್ತಪಡಿಸಿದ್ದರು. ಚಿತ್ರವನ್ನು ಬ್ಯಾನ್ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಕೂಡಾ ನಡೆದಿತ್ತು. ಇದೀಗ ಚಿತ್ರತಂಡ ತನ್ನ ತಪ್ಪನ್ನು ಸರಿಪಡಿಸಿಕೊಂಡು ಮತ್ತೆ ಟ್ರೇಲರ್ ತೆರೆಗೆ ತಂದಿದೆ. ಟ್ರೇಲರ್‌ಗೆ ಕೂಡಾ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟ್ರೇಲರ್ ಬಿಡುಗಡೆ ಆಗಿ 1 ಗಂಟೆ ಅವಧಿಯಲ್ಲೇ 3 ಮಿಲಿಯನ್‌ಗೂ ಹೆಚ್ಚು ವ್ಯೂವ್ಸ್ ಪಡೆದುಕೊಂಡಿದೆ. 43 ಸಾವಿರಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ.
ಪ್ರಭಾಸ್ ಅಭಿಮಾನಿಗಳು ಏನಂದ್ರು?
ಹಿನ್ನೆಲೆ ಮ್ಯೂಸಿಕ್ ಬಹಳ ಚೆನ್ನಾಗಿದೆ, ಇದು ಸಿನಿಮಾ ಅಲ್ಲ, ಇದೊಂದು ಇತಿಹಾಸ, ಆದಿಪುರುಷ್ ಒಂದು ಸಿನಿಮಾ ಮಾತ್ರವಲ್ಲ, ವಿಶ್ವದ ಮಿಲಿಯನ್‌ಗಟ್ಟಲೆ ಜನರ ಭಾವುಕತೆ, ಈ ಟ್ರೇಲರ್‌ನಲ್ಲಿ ನಿಜಕ್ಕೂ ಮ್ಯಾಜಿಕ್ ಇದೆ, ಟ್ರೇಲರ್ ನೋಡುತ್ತಿದ್ದರೆ ಗೂಸ್ ಬಂಪ್ಸ್ ಬರುತ್ತಿದೆ, ಮುಂದಿನ ತಿಂಗಳು ಸಿನಿಮಾ ನೋಡಲು ಕಾಯುತ್ತಿದ್ದೇವೆ, ಬಾಹುಬಲಿ ಚಿತ್ರಕ್ಕಿಂತ ಈ ಸಿನಿಮಾ ದೊಡ್ಡ ಹಿಟ್ ಆಗಲಿದೆ ಎಂದು ಪ್ರಭಾಸ್ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ನೆಗೆಟಿವ್ ಪ್ರತಿಕ್ರಿಯೆ
ಟೀಸರ್‌ಗೂ ಟ್ರೇಲರ್‌ಗೂ ಅಲ್ಪ ಸ್ವಲ್ಪ ಬದಲಾವಣೆ ಆಗಿದೆ ಅಷ್ಟೇ, ಪ್ರಭಾಸ್ ಧ್ವನಿ ಇನ್ನಷ್ಟು ಖಡಕ್ ಆಗಿರಬೇಕಿತ್ತು. ಗ್ರಾಫಿಕ್ಸ್ ಇನ್ನೂ ಚೆನ್ನಾಗಿ ಮಾಡಬಹುದಿತ್ತು, ರಾಮ, ಸೀತೆ, ಲಕ್ಷ್ಮಣ ಹಾಗೂ ಇನ್ನಿತರ ಪಾತ್ರಧಾರಿಗಳ ಹಣೆ ಮೇಲೆ ತಿಲಕ ಇದ್ದೂ ಇಲ್ಲದಂತಿದೆ. ರಾಮಾಯಣದಲ್ಲಿ ಕಿಂಗ್‌ಕಾಂಗ್ ಏಕೆ ಬೇಕಿತ್ತು? ಎಂದು ಇನ್ನೂ ಕೆಲವರು ನೆಗೆಟಿಪ್ ರೆಸ್ಪಾನ್ಸ್ ಮಾಡಿದ್ದಾರೆ.
'ಆದಿಪುರುಷ್' ಸಿನಿಮಾದಲ್ಲಿ ಪ್ರಭಾಸ್ ರಾಮನಾಗಿ ನಟಿಸಿದ್ದಾರೆ. ಕೃತಿ ಸನನ್ ಜಾನಕಿ ದೇವಿಯಾಗಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ರಾವಣಾಸುರನಾಗಿ ಕಾಣಿಸಿಕೊಳ್ಳಲಿದ್ದಾರೆ. 3ಡಿ ಮೋಷನ್ ಕ್ಯಾಪ್ಚರ್ ತಂತ್ರಜ್ಞಾನದೊಂದಿಗೆ ತಯಾರಾಗಿರುವ ಸಿನಿಮಾ ಜೂನ್ 16 ಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ. ಟಿ ಸೀರೀಸ್ ಫಿಲ್ಮ್ಸ್ ನಿರ್ಮಾಣದ ಈ ಚಿತ್ರವನ್ನು ಓಂ ರಾವುತ್ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಅಜಯ್-ಅತುಲ್, ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. 700 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿರುವ ಈ ಸಿನಿಮಾ ಚಿತ್ರಮಂದಿರದಲ್ಲಿ ಯಾವ ರೀತಿ ಮೋಡಿ ಮಾಡಲಿದೆ ಅನ್ನೋದು ಜೂನ್ 16 ರಂದು ತಿಳಿಯಲಿದೆ.