Prakash Raj on Industry: ‘ನನ್ನ ಜತೆ ನಟಿಸಲು ಯಾರೂ ಒಪ್ತಿಲ್ಲ, ಆದ್ರೆ, ನಾನು ಅದೆಲ್ಲವನ್ನು ಕಳೆದುಕೊಳ್ಳುವಷ್ಟು ಬಲಶಾಲಿ’; ಪ್ರಕಾಶ್ ರೈ
ನಿಜಕ್ಕೂ ನನ್ನ ನಿಲುವು ಮತ್ತು ದೃಷ್ಟಿಕೋನ, ನಾನು ಮಾಡುವ ಕೆಲಸದ ಮೇಲೆ ಪರಿಣಾಮ ಬೀರುತ್ತಿದೆ. ಅದ್ಯಾವ ಮಟ್ಟಿಗೆ ಎಂದರೆ, ಕೆಲವರು ನನ್ನೊಟ್ಟಿಗೆ ಕೆಲಸ ಮಾಡಲು ಹಿಂದೇಟು ಹಾಕುತ್ತಾರೆ.
ಬಹುಭಾಷಾ ನಟ ಪ್ರಕಾಶ್ ರೈ (Prakash Rai) ಒಂದೇ ಚಿತ್ರರಂಗಕ್ಕೆ ಸೀಮಿತರಾದವರಲ್ಲ. ಕನ್ನಡದಿಂದ ಶುರುವಾದ ಅವರ ಸಿನಿಮಾ ಪ್ರಯಾಣ ಸದ್ಯ ದಕ್ಷಿಣ ಮತ್ತು ಉತ್ತರದಲ್ಲಿಯೂ ಹರಡಿದೆ. ವಿಸ್ತಾರವಾಗಿದೆ. ಸಿನಿಮಾ ಜತೆಗೆ ಸದಾ ರಾಜಕೀಯ ವಿಚಾರವಾಗಿಯೂ ಪ್ರಕಾಶ್ ರೈ ಸುದ್ದಿಯಲ್ಲಿರುತ್ತಾರೆ.
ಟ್ರೆಂಡಿಂಗ್ ಸುದ್ದಿ
ತಮ್ಮ ರಾಜಕೀಯ ನಿಲುವುಗಳಿಂದ ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಕುಟುಕುವ ಪ್ರಕಾಶ್ ರೈ, ಈ ಹಿಂದಿನ ಕೆಲ ವರ್ಷಗಳಲ್ಲಿ ಚಿತ್ರರಂಗದಲ್ಲಿ ಬಿಜಿಯಾಗಿದ್ದಷ್ಟು ಈಗಿಲ್ಲ. ಅದಕ್ಕೆ ಕಾರಣ ಮತ್ತದೇ ರಾಜಕೀಯ! ಈ ವಿಚಾರವನ್ನು ಸ್ವತಃ ಅವರೇ Hindustan Times ಜತೆಗೆ ಮಾತನಾಡಿದ್ದಾರೆ. ವೈಯಕ್ತಿಕ ನಿಲುವುಗಳು ಸಿನಿಮಾ ಕ್ಷೇತ್ರದಲ್ಲಿ ಹೇಗೆ ತೊಡಕಾಗಿದೆ ಎಂಬುದನ್ನು ಹೇಳಿಕೊಂಡಿದ್ದಾರೆ.
ವೃತ್ತಿಗೆ ವೈಯಕ್ತಿಕ ನಿಲುವುಗಳು ಅಡ್ಡಿ..
ತಮ್ಮ ರಾಜಕೀಯ ನಿಲುವು ಮತ್ತು ದೃಷ್ಟಿಕೋನಗಳು ತಮ್ಮ ಕೆಲಸದ ಮೇಲೆ ಬೀರುವ ಪ್ರಭಾವದ ಬಗ್ಗೆ ಪ್ರಕಾಶ್ ರೈ ಮಾತನಾಡಿದ್ದಾರೆ. “ನಿಜಕ್ಕೂ ನನ್ನ ನಿಲುವು ಮತ್ತು ದೃಷ್ಟಿಕೋನ, ನಾನು ಮಾಡುವ ಕೆಲಸದ ಮೇಲೆ ಪರಿಣಾಮ ಬೀರುತ್ತಿದೆ. ಅದ್ಯಾವ ಮಟ್ಟಿಗೆ ಎಂದರೆ, ಕೆಲವರು ನನ್ನೊಟ್ಟಿಗೆ ಕೆಲಸ ಮಾಡಲು ಹಿಂದೇಟು ಹಾಕುತ್ತಾರೆ. ಅದು ಅವರಿಗೆ ಬೇಕಾಗಿಲ್ಲ. ನನ್ನ ಜತೆ ಕೆಲಸ ಮಾಡಿದರೆ, ಜನ ಅವರನ್ನು ತಿರಸ್ಕರಿಸುತ್ತಾರೆಂಬ ಭಯ ಅವರಲ್ಲಿ ಶುರುವಾಗಿದೆ. ಆದರೆ, ಇದೆಲ್ಲವನ್ನು ಕಳೆದುಕೊಳ್ಳುವಷ್ಟು ಬಲಶಾಲಿ ಮತ್ತು ಶ್ರೀಮಂತ ನಾನು" ಎಂದೂ ಹೇಳಿಕೊಂಡಿದ್ದಾರೆ.
ನನಗೆ ಆ ಬಗ್ಗೆ ಯಾವುದೇ ವಿಷಾದವಿಲ್ಲ..
"ಈ ಬದಲಾವಣೆಗೆ ನನಗೆ ಯಾವುದೇ ವಿಷಾದವಿಲ್ಲ. ಈ ನನ್ನ ಪ್ರಶ್ನಿಸುವ ಪರಂಪರೆ ಹೀಗೆ ಮುಂದುವರಿಯಬೇಕೆಂಬ ಮನಸ್ಥಿತಿಯವನು ನಾನು. ಅದು ತೆರೆ ಮೇಲಿನ ಕೆಲಸಕ್ಕಿಂತ ಹೆಚ್ಚಾಗಿರಬೇಕೆಂದು ನಾನು ಬಯಸುತ್ತೇನೆ. ನನಗೆ ಯಾರೆಂದು ತಿಳಿದಿದೆ. ಒಂದು ವೇಳೆ ನಾನು ನನ್ನ ಧ್ವನಿ ಎತ್ತದ್ದಿದ್ದರೆ, ನಾನೀಗ ಒಳ್ಳೆಯ ನಟ ಎನಿಸಿಕೊಳ್ಳುತ್ತಿದ್ದೆ ಹೊರತು, ನಾನು ಯಾರು ಎಂಬ ಕಾರಣಕ್ಕಾಗಿ ಅಲ್ಲ. ನಾನು ಇದನ್ನು ನಿಭಾಯಿಸಬಲ್ಲೆ" ಎಂದಿದ್ದಾರೆ ಪ್ರಕಾಶ್.
ಕೆಲ ನಟರು ನನ್ನನ್ನು ಈಗಲೂ ಮಾತನಾಡಿಸುವುದಿಲ್ಲ..
"ಹಲವು ಹಿರಿಯ ಸ್ಟಾರ್ ನಟರು ನನ್ನನ್ನು ಈಗಲೂ ಮಾತನಾಡಿಸುವುದಿಲ್ಲ. ಕೆಲವರು ಮೌನವಾಗಿಯೇ ಇರುತ್ತಾರೆ. ಹಾಗಂತ ನಾನು ಅವರನ್ನು ದೂಷಿಸುವುದಿಲ್ಲ" ಎಂದೂ ಪ್ರಕಾಶ್ ರೈ ಹೇಳಿಕೊಂಡಿದ್ದಾರೆ. ಅಂದಹಾಗೆ, ಮುಖಬೀರ್ ವೆಬ್ ಸರಣಿಯಲ್ಲಿ ಪ್ರಕಾಶ್ ರೈ ನಟಿಸಿದ್ದಾರೆ. Zee5 ನಲ್ಲಿ ಕಳೆದ ಶುಕ್ರವಾರದಿಂದ ಈ ಸರಣಿ ಸ್ಟ್ರೀಮಿಂಗ್ ಶುರುವಾಗಿದ್ದು, ಅದರ ಪ್ರಚಾರದ ಸಲುವಾಗಿಯೇ ಮುಂಬೈಗೆ ಆಗಮಿಸಿದ್ದರು.