Kannada News  /  Entertainment  /  Prime Minister Narendra Modi Australia Sydney Visit Mangalore Girl Ready To Welcome With Kantara Movie Song Dance Rsm
ಪ್ರಧಾನಿ ಮೋದಿ ಸ್ವಾಗತಕ್ಕೆ ಆಸ್ಟ್ರೇಲಿಯಾದಲ್ಲಿ ಸಿದ್ಧತೆ
ಪ್ರಧಾನಿ ಮೋದಿ ಸ್ವಾಗತಕ್ಕೆ ಆಸ್ಟ್ರೇಲಿಯಾದಲ್ಲಿ ಸಿದ್ಧತೆ

Narendra Modi: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಕಾಂತಾರ ಹಾಡಿನ ನೃತ್ಯ: ತಂಡದಲ್ಲಿ ಮಂಗಳೂರಿನ ಯುವತಿ

23 May 2023, 12:42 ISTRakshitha Sowmya
23 May 2023, 12:42 IST

ಅನಿಶಾ ಪೂಜಾರಿ, ನಾಲ್ಕನೇ ವಯಸ್ಸಿಗೆ ಭರತನಾಟ್ಯ ಕಲಿಯಲು ಆರಂಭಿಸಿ, ನಂತರ ವಿದ್ವಾನ್ ಪ್ರೇಮನಾಥ ಮಾಸ್ಟರ್ ಬಳಿ ಹೆಚ್ಚಿನ ಶಿಕ್ಷಣ ಪಡೆದರು. ರಾಜ್ಯ ಹೊರ ರಾಜ್ಯಗಳಲ್ಲೂ ನಾಟ್ಯ ಪ್ರದರ್ಶನ ಮಾಡಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಮದುವೆ ಆದ ನಂತರ ಪತಿ ಹಾಗೂ ಮಗುವಿನೊಂದಿಗೆ ಸಿಡ್ನಿಯಲ್ಲಿ ನೆಲೆಸಿದ್ದಾರೆ.

ಮಂಗಳೂರು: ಸಿಂಗಾರ ಸಿರಿಯೇ, ವರಾಹ ರೂಪಂ, ವಾ ಪುರುಲೊಯ ಸೇರಿದಂತೆ 'ಕಾಂತಾರ' ಚಿತ್ರದ ಹಾಡುಗಳು ಎಲ್ಲರಿಗೂ ಬಹಳ ಇಷ್ಟ. ಈ ಹಾಡುಗಳನ್ನಂತೂ ಬಹುತೇಕ ಎಲ್ಲಾ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದೀಗ ಆಸ್ಟ್ರೇಲಿಯಾ ತೆರಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಅಲ್ಲಿನ ಭಾರತೀಯರು ಕೂಡಾ ಕಾಂತಾರ ಚಿತ್ರದ ಹಾಡುಗಳನ್ನು ಬಳಸಿಕೊಳ್ಳುತ್ತಿದ್ದಾರೆ.

ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಸಿಡ್ನಿಯ Indian Australian Diaspora Foundation (IADF) ಭರದಿಂದ ಸಿದ್ಧತೆ ನಡೆಸುತ್ತಿದೆ. 20,000 ಕ್ಕೂ ಅಧಿಕ ಜನರು ವೀಕ್ಷಿಸಲಿರುವ ಈ ಕಾರ್ಯಕ್ರಮಕ್ಕೆ ಮೋದಿ ಆಗಮಿಸಲಿದ್ದು ನೃತ್ಯದ ಮೂಲಕ ಸ್ವಾಗತ ಕೋರುವ ಕಾರ್ಯಕ್ರಮ ಆಯೋಜಿಸಲಾಗಿದೆ. ವಿದುಷಿ ಪಲ್ಲವಿ ಭಾಗವತ್‌ ಅವರು ತಮ್ಮ ನಾಟ್ಯೋಕ್ತಿ ನೃತ್ಯ ಸಂಸ್ಥೆಯ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲ್ಲಿದ್ದಾರೆ. ಅವರ ತಂಡದಲ್ಲಿ ಮಂಗಳೂರು ಮೂಲದ ಬಿಜೈ ಕಾಪಿಕಾಡು ಮೂಲದ ಅನಿಶಾ ಪೂಜಾರಿ ಎಂಬ ಯುವತಿ ಕೂಡಾ ಇದ್ದಾರೆ.

ಮಗಳ ಬಗ್ಗೆ ಹೆಮ್ಮೆ ಎಂದ ಅನಿಶಾ ತಂದೆ

ಈ ಬಗ್ಗೆ ಅನಿಶಾ ಪೂಜಾರಿ ತಂದೆ ಪದ್ಮನಾಭ ಮಾತನಾಡಿ, ''ಮಗಳು ಅನಿಶಾ ಕಳೆದ 6 ವರ್ಷಗಳಿಂದ ಸಿಡ್ನಿಯಲ್ಲಿ ವಾಸ ಮಾಡುತ್ತಿದ್ದಾಳೆ. ಅನಿಶಾಗೆ ಬಾಲ್ಯದಿಂದಲೂ ನೃತ್ಯದಲ್ಲಿ ಬಹಳ ಆಸಕ್ತಿ. 4 ವರ್ಷದವಳಿದ್ದಾಗಿನಿಂದ ವಿವಿಧ ನೃತ್ಯ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾ ಬಂದಿದ್ದಾಳೆ. ತಮ್ಮ ಗುರುಗಳಾದ ಪ್ರೇಮನಾಥ್ ಅವರ ಮೂಲಕ ದೇಶದ ವಿವಿಧ ನಗರಗಳಿಗೆ ತೆರಳಿ ನೃತ್ಯ ಪ್ರದರ್ಶನ ಮಾಡಿದ್ದಾಳೆ. ಸಿಡ್ನಿಯಲ್ಲಿರುವ ಮಗಳಿಗೆ ಪ್ರಧಾನಮಂತ್ರಿ ಅವರನ್ನು ಸ್ವಾಗತಿಸುವ ಕಾರ್ಯಕ್ರಮದಲ್ಲಿ ನೃತ್ಯ ಮಾಡುವ ಅವಕಾಶ ಸಿಕ್ಕಿದೆ. ಗುರುಗಳಾದ ಪಲ್ಲವಿ ಮಾರ್ಗದರ್ಶನದಲ್ಲಿ ಈ ನೃತ್ಯ ಮಾಡುತ್ತಿದ್ದಾರೆ. ನಮ್ಮ ದೇಶದ ಪ್ರಧಾನಮಂತ್ರಿ ಮತ್ತು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಮುಂದೆ ನೃತ್ಯ ಮಾಡುವುದು ಸಾಮಾನ್ಯ ವಿಚಾರವಲ್ಲ. ಮಗಳ ಸಾಧನೆ ಖುಷಿ ತಂದಿದೆ'' ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ಸಿಡ್ನಿ ಡ್ಯಾನ್ಸ್‌ ಗ್ರೂಪ್
ಸಿಡ್ನಿ ಡ್ಯಾನ್ಸ್‌ ಗ್ರೂಪ್

ಅನಿಶಾ ಪೂಜಾರಿ, ನಾಲ್ಕನೇ ವಯಸ್ಸಿಗೆ ಭರತನಾಟ್ಯ ಕಲಿಯಲು ಆರಂಭಿಸಿ, ನಂತರ ವಿದ್ವಾನ್ ಪ್ರೇಮನಾಥ ಮಾಸ್ಟರ್ ಬಳಿ ಹೆಚ್ಚಿನ ಶಿಕ್ಷಣ ಪಡೆದರು. ರಾಜ್ಯ ಹೊರ ರಾಜ್ಯಗಳಲ್ಲೂ ನಾಟ್ಯ ಪ್ರದರ್ಶನ ಮಾಡಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಮದುವೆ ಆದ ನಂತರ ಪತಿ ಹಾಗೂ ಮಗುವಿನೊಂದಿಗೆ ಸಿಡ್ನಿಯಲ್ಲಿ ನೆಲೆಸಿದ್ದಾರೆ. ಆ ಬಳಿಕವೂ ತಮ್ಮ ನೃತ್ಯ ಕಲಿಕೆಯನ್ನು ಮುಂದುವರಿಸಿದ್ದಾರೆ.

ಉಡುಪಿಯ ಪಲ್ಲವಿ ಭಾಗವತ್‌ ನೃತ್ಯ ತಂಡ

ಉಡುಪಿ ಕುಂದಾಪುರ ಮೂಲದ ವಿದುಷಿ ಪಲ್ಲವಿ ಭಾಗವತ್, ಶ್ರೀ ನಾಟ್ಯ ನಿಲಯಮ್‌ ಮಂಜೇಶ್ವರ್ ಹಾಗೂ ಕರ್ನಾಟಕ ಕಲಾಶ್ರೀ ವಿದುಷಿ ಕಮಲಾ ಭಟ್ ಬಳಿ ಭರತನಾಟ್ಯ ವಿದ್ವತ್ ಪೂರೈಸಿದ್ದಾರೆ. ವೃತ್ತಿಯಲ್ಲಿ ಅವರು ಐಟಿ ಉದ್ಯೋಗಿ. ಅನೇಕ ವರ್ಷಗಳಿಂದ ಸಿಡ್ನಿಯಲ್ಲಿ ನೆಲೆಸಿರುವ ಅವರು, ಅನೇಕ ಪ್ರತಿಭೆಗಳಿಗೆ ಭರತನಾಟ್ಯ ತರಬೇತಿ ನೀಡುತ್ತಾ ಬಂದಿದ್ದಾರೆ. ಕರ್ನಾಟಕದ ಸ್ಥಳೀಯ ಸಂಸ್ಕೃತಿ, ಜಾನಪದ ನೃತ್ಯ ಹಾಗೂ ಯಕ್ಷಗಾನದ ಸೊಬಗನ್ನು ಅನಾವರಣ ಮಾಡಿರುವ 'ಕಾಂತಾರ' ಚಿತ್ರದ ಹಾಡಿನ ನೃತ್ಯದಲ್ಲಿ ಉಡುಪಿ , ಮಂಗಳೂರು ಸೇರಿದಂತೆ ದೇಶ ಹಾಗೂ ಅಂತಾರಾಷ್ಟ್ರೀಯ ಕಲಾವಿದರ ತಂಡ ಪಾಲ್ಗೊಳ್ಳಲಿದೆ.

ಮೇ 23ರಂದು ಪ್ರಧಾನಿ ಮೋದಿಯವರು ಆಸ್ಟ್ರೇಲಿಯಾಗೆ ತೆರಳಲಿದ್ದು ಅಲ್ಲಿನ ಪ್ರಧಾನಿ ಆಂಥೋನಿ ಆಲ್ಬನೀಸ್ ಅವರೊಂದಿಗೆ ಸಿಡ್ನಿಯಲ್ಲಿ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಈ ಸಭೆಯ ಬಳಿಕ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಲ್ಲವಿ ಹಾಗೂ ತಂಡದ ನಾಟ್ಯ ಪ್ರದರ್ಶನ ಇದೆ.

ವರದಿ- ಹರೀಶ ಮಾಂಬಾಡಿ, ಮಂಗಳೂರು