Sudeep Pandey: ನಟ ಸುದೀಪ್ ಪಾಂಡೆ ಹೃದಯಾಘಾತದಿಂದ ನಿಧನ; ಕಂಬನಿ ಮಿಡಿದ ಅಭಿಮಾನಿಗಳು
Sudeep Pandey: ಭೋಜ್‌ಪುರಿ ನಟ ಸುದೀಪ್ ಪಾಂಡೆ ನಿನ್ನೆ (ಜನವರಿ 15)ರಂದು ನಿಧನರಾಗಿದ್ದಾರೆ. ಹೃದಯಾಘಾತದಿಂದ ಅವರು ತಮ್ಮ ಶೂಟಿಂಗ್ ಸಮಯದಲ್ಲೇ ನಿಧನರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಹೆಚ್ಚಿನ ಮಾಹಿತಿ ಇಲ್ಲಿದೆ ಗಮನಿಸಿ.

ಭೋಜ್‌ಪುರಿ ನಟ ಸುದೀಪ್ ಪಾಂಡೆ ಜನವರಿ 15 ರಂದು ಮುಂಬೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿವಿಧ ಭೋಜ್‌ಪುರಿ ಚಲನಚಿತ್ರಗಳಲ್ಲಿನ ಪಾತ್ರಗಳಲ್ಲಿ ಅಭಿನಯಿಸಿ ಹೆಸರು ಮಾಡಿದ್ದ ನಟ ಸುದೀಪ್ ಜನವರಿ 15ರಂದು ಬೆಳಿಗ್ಗೆ 11ಗಂಟೆಗೆ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಅವರ ಅಕಾಲಿಕ ಮರಣವು ಅವರ ಅಭಿಮಾನಿಗಳು ಮತ್ತು ಚಿತ್ರರಂಗಕ್ಕೆ ಆಘಾತ ಉಂಟುಮಾಡಿದೆ. ಬಹಿನಿಯಾ, ಪ್ಯಾರ್ ಮೇ, ಬಲ್ವಾ ಮತ್ತು ಧಾರ್ತಿಯಂತಹ ಚಿತ್ರಗಳಲ್ಲಿ ಇವರು ಅಭಿನಯಿಸಿದ್ದರು.
ನಟ ಸುದೀಪ್ ಪಾಂಡೆ ನಿಧನ
ಭೋಜ್‌ಪುರಿ ಚಲನಚಿತ್ರೋದ್ಯಮದಲ್ಲಿ ಛಾಪು ಮೂಡಿಸಿದ್ದ ನಟ ಸುದೀಪ್ ಪಾಂಡೆ ನಿಧನದ ಬಗ್ಗೆ ಅವರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವರು ನಿಧನರಾಗಬಾರದಿತ್ತು ಎಂದು ಹೇಳುತ್ತಿದ್ದಾರೆ. ಸುದೀಪ್ ಪಾಂಡೆ ಅವರ ಆಪ್ತ ಸ್ನೇಹಿತರೊಬ್ಬರು ಹೇಳಿದ ಪ್ರಕಾರ ಚಿತ್ರರಂಗದಲ್ಲಿ ಅವಕಾಶ ಪಡೆದುಕೊಳ್ಳಲು ಸುದೀಪ್ ಪಾಂಡೆ ಹೆಣಗಾಡುತ್ತಿದ್ದರು, ನಟ ಸುದೀಪ್ ಪಾಂಡೆಗೆ ಸವಾಲುಗಳಿತ್ತು ಎಂದಿದ್ದಾರೆ.
ನಟ ಸುದೀಪ್ ಪಾಂಡೆ ವಿಕ್ಟರ್ ಎಂಬ ಶೀರ್ಷಿಕೆಯ ಹಿಂದಿ ಚಲನಚಿತ್ರದಲ್ಲಿ ನಟಿಸಿದ್ದರು, ಆದರೆ ಆ ಚಿತ್ರ ಅಷ್ಟು ಹಿಟ್ ಆಗಲಿಲ್ಲ. ಬಾಕ್ಸ್ ಆಫಿಸ್‌ನಲ್ಲಿ ತೀವ್ರ ನಷ್ಟ ಅನುಭವಿಸುವಂತಾಗಿತ್ತು. ಹೀಗೆ ಅವರು ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಿದ್ದರಂತೆ. ಎಲ್ಲ ಸವಾಲುಗಳನ್ನು ಮೀರಿಸಿಯೂ ಬದುಕ ಛಲ ಅವರಲ್ಲಿತ್ತು, ಆದರೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಅವರ ಸ್ನೇಹಿತರೊಬ್ಬರು ಹೇಳಿಕೊಂಡಿದ್ದಾರೆ ಈ ಬಗ್ಗೆ ಮನಿ ಕಂಟ್ರೋಲ್ ವರದಿ ಮಾಡಿದೆ.
ಕಂಬನಿ ಮಿಡಿದ ಅಭಿಮಾನಿಗಳು
2019 ರಲ್ಲಿ, ಅವರು ಹಿಂದಿ ಚಲನಚಿತ್ರ 'ವಿ ಫಾರ್ ವಿಕ್ಟರ್' ನಲ್ಲಿ ಕಾಣಿಸಿಕೊಂಡರು. ಇತ್ತೀಚೆಗಷ್ಟೇ ಪರೋ ಪಟ್ನಾ ವಾಲಿ ಎರಡನೇ ಭಾಗದ ಚಿತ್ರೀಕರಣ ಆರಂಭಿಸಿದ್ದರು. ಆದರೆ ಅಚಾನಕ್ ಆಗಿ ಅವರು ನಿಧನರಾಗಿದ್ದು ಹಲವರಿಗೆ ನೋವುಂಟಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಸಾವಿಗೆ ಸಂತಾಪ ಸೂಚಿಸಲಾಗುತ್ತಿದೆ. ಅವರ ಅಭಿಮಾನಿಗಳಿಗೆ ಶಾಕ್ ಆಗಿದೆ. ಈ ಕುರಿತು ANI ಮಾಹಿತಿ ನೀಡಿದೆ. ನಟ ನಟಿಸುವಾಗಲೇ ಹೃದಯಾಘಾತ ಆಗಿದೆ ಎನ್ನಲಾಗಿದೆ. ಜಿಮ್ನಲ್ಲಿ ನಿತ್ಯವೂ ವರ್ಕೌಟ್ ಮಾಡುತ್ತಿದ್ದರು ಎಂದೂ ಹೇಳಲಾಗುತ್ತಿದೆ. ಆದರೆ ಯಾವುದೇ ಅಧಿಕೃತ ಮಾಹಿತಿ ಈ ಬಗ್ಗೆ ಲಭ್ಯವಾಗಿಲ್ಲ. ಸುದೀಪ್ ಸಾವಿನ ಬಗ್ಗೆ ಕುಟುಂಬದಿಂದ ಅಧಿಕೃತ ಹೇಳಿಕೆಯನ್ನು ನಿರೀಕ್ಷಿಸಲಾಗುತ್ತಿದೆ.

ವಿಭಾಗ