ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳ ಪ್ರಚಾರ: ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಪ್ರಣೀತಾ ಸೇರಿದಂತೆ 25 ನಟ, ನಟಿಯರ ವಿರುದ್ಧ ದೂರು ದಾಖಲು
ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿರುವ, ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಇಂತಹ ಆ್ಯಪ್‌ಗಳಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹಿಸಿದ್ದಕ್ಕಾಗಿ ತೆಲುಗಿನ 25 ನಟರು ಮತ್ತು ಇನ್‌ಫ್ಲೂಯೆನ್ಸರ್‌ಗಳ ವಿರುದ್ಧ ದೂರು ದಾಖಲಿಸಲಾಗಿದೆ.

ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿರುವ, ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಇಂತಹ ಆ್ಯಪ್‌ಗಳಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹಿಸಿದ್ದಕ್ಕಾಗಿ ತೆಲುಗಿನ 25 ನಟರು ಮತ್ತು ಇನ್‌ಫ್ಲೂಯೆನ್ಸರ್‌ಗಳ ವಿರುದ್ಧ ದೂರು ದಾಖಲಿಸಲಾಗಿದೆ. ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ಮಂಚು ಲಕ್ಷ್ಮಿ, ಪ್ರಣೀತಾ, ನಿಧಿ ಅಗರ್ವಾಲ್ ಮತ್ತು ಅನನ್ಯಾ ನಾಗೆಲ್ಲಾ ಸೇರಿದಂತೆ ಟಾಲಿವುಡ್‌ನ ಹಲವು ನಟಿಯರು ಮತ್ತು ನಟರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಆರೋಪಿಗಳಲ್ಲಿ ಕೆಲವು ಟೆಲಿವಿಷನ್ ನಿರೂಪಕರು ಮತ್ತು ಸಾಮಾಜಿಕ ಮಾಧ್ಯಮ ಇನ್‌ಫ್ಲೂಯೆನ್ಸರ್‌ಗಳೂ ಸೇರಿದ್ದಾರೆ. ಮಿಯಾಪುರದ ನಿವಾಸಿ ಪಿ.ಎಂ. ಫಣೀಂದ್ರ ಶರ್ಮಾ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತೆಲಂಗಾಣ ಗೇಮಿಂಗ್ ಕಾಯ್ದೆ, ಬಿಎನ್ಎಸ್ ಮತ್ತು ಐಟಿ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಸೇರಿದಂತೆ 11 ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳ ವಿರುದ್ಧ ಇದೇ ರೀತಿಯ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈ ಪ್ರಕರಣ ದಾಖಲಾದ ಕೆಲವೇ ದಿನಗಳಲ್ಲಿ ತೆಲುಗು ಚಿತ್ರರಂಗದ ಪ್ರಮುಖ ತಾರೆಯರ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ. ಅಕ್ರಮ ಬೆಟ್ಟಿಂಗ್ ವೇದಿಕೆಗಳನ್ನು ಉತ್ತೇಜಿಸುವ ನಟರು, ಸೆಲೆಬ್ರಿಟಿಗಳು ಮತ್ತು ಇನ್‌ಫ್ಲೂಯೆನ್ಸರ್‌ಗಳ ವಿರುದ್ಧ ಸಾರ್ವಜನಿಕರ ದೂರುಗಳು ಹೆಚ್ಚಾಗುತ್ತಿವೆ.
ಜಂಗ್ಲೀ ರಮ್ಮಿ ಪ್ರಚಾರ ಮಾಡಿರುವ ರಾಣಾ ದಗ್ಗುಬಾಟಿ ಮತ್ತು ಪ್ರಕಾಶ್ ರಾಜ್ ಅವರನ್ನು ಆರೋಪಿ 1 ಮತ್ತು ಆರೋಪಿ 2 ಎಂದು ಆರೋಪಿಸಲಾಗಿದೆ. ಇವರು ಪಾಪ್-ಅಪ್ ಜಾಹೀರಾತುಗಳ ಮೂಲಕ ಜಂಗ್ಲೀ ರಮ್ಮಿ ಪ್ರಚಾರ ಮಾಡಿದ್ದಾರೆ. ವಿಜಯ್ ದೇವರಕೊಂಡ ಅವರು ಎ23 ರಮ್ಮಿ, ಮಂಚು ಲಕ್ಷ್ಮಿ ಯೋಲೊ247, ಪ್ರಣೀತಾ ಫೇರ್‌ಪ್ಲೇ ಲೈವ್ ಮತ್ತು ನಿಧಿ ಅಗರ್ವಾಲ್ ಜೀತ್ ವಿನ್ ಬೆಟ್ಟಿಂಗ್ ಆಪ್‌ಗಳನ್ನು ಪ್ರಚಾರ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾವೆಲ್ಲ ಸೆಕ್ಷನ್‌ನಡಿ ಪ್ರಕರಣ ದಾಖಲು
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318(4) [ವಂಚನೆ], ಮತ್ತು 112 (ಸಣ್ಣ ಸಂಘಟಿತ ಅಪರಾಧ), 49 (ಪ್ರೇರಣೆ), ತೆಲಂಗಾಣ ರಾಜ್ಯ ಗೇಮಿಂಗ್ ಕಾಯ್ದೆ (ಟಿಎಸ್‌ಜಿಎ) ಸೆಕ್ಷನ್ 3, 3(A) ಮತ್ತು 4 (ಕಾಮನ್ ಗೇಮಿಂಗ್ ಹೌಸ್); ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ ಸೆಕ್ಷನ್ 66(ಡಿ) (ಕಂಪ್ಯೂಟರ್ ಸಂಪನ್ಮೂಲವನ್ನು ಬಳಸಿಕೊಂಡು ವಂಚಿಸುವುದು) ಮುಂತಾದ ಸೆಕ್ಷನ್‌ಗಳಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
