Puneeth Idol in Telugu actor office: ಖ್ಯಾತ ತೆಲುಗು ನಟನ ಕಚೇರಿಯಲ್ಲಿ ಪುನೀತ್ ಪ್ರತಿಮೆ...ವಿಶೇಷ ಪೋಸ್ಟ್ ಹಂಚಿಕೊಂಡ ನಟ
ತಮಿಳು, ತೆಲುಗು, ಮಲಯಾಳಂನ ಅನೇಕ ಕಾರ್ಯಕ್ರಮಗಳಲ್ಲಿ ಕೂಡಾ ಪುನೀತ್ ಅವರನ್ನು ಸ್ಮರಿಸಲಾಗಿದೆ. ವಿಶೇಷ ಎಂದರೆ ತೆಲುಗು ನಟ ರಾಣಾ ದಗ್ಗುಬಾಟಿ ತಮ್ಮ ಕಚೇರಿಗೆ ಪುನೀತ್ ರಾಜ್‌ಕುಮಾರ್ ಅವರ ಪ್ರತಿಮೆಯನ್ನು ತಂದು ತಮ್ಮ ಟೇಬಲ್ ಮೇಲೆ ಪ್ರತಿಷ್ಠಾಪಿಸಿದ್ದಾರೆ.
ಪುನೀತ್ ರಾಜ್‌ಕುಮಾರ್ ನಿಧನರಾಗಿ ಇದೇ ಅಕ್ಟೋಬರ್ 29ಕ್ಕೆ ಒಂದು ವರ್ಷ ತುಂಬಲಿದೆ. ಒಂದು ವರ್ಷವಲ್ಲ, ಒಂದು ಯುಗವಾದರೂ ಅಪ್ಪು ನೆನಪು ಅಭಿಮಾನಿಗಳಲ್ಲಿ ಮಾಸುವುದೇ ಇಲ್ಲ. ಅವರ ನೆನಪುಗಳು ಎಂದಿಗೂ ಚಿರಾಯು. ನಟನೆ, ಡ್ಯಾನ್ಸ್, ತಮ್ಮ ಸರಳತೆ ಮಾತ್ರವಲ್ಲದೆ ಮುಗ್ಧ ನಗುವಿನಿಂದಲೇ ಕೋಟ್ಯಂತರ ಹೃದಯಗಳನ್ನು ಗೆದ್ದ ಪುನೀತ್ ರಾಜ್‌ಕುಮಾರ್ ಎಂದರೆ ಪುಟ್ಟ ಮಕ್ಕಳಿಗೂ ಬಹಳ ಇಷ್ಟ.
ಪುನೀತ್ ರಾಜ್‌ಕುಮಾರ್ ಕನ್ನಡದಲ್ಲಿ ಮಾತ್ರವಲ್ಲ, ಪರಭಾಷೆ ನಟರೊಂದಿಗೆ ಕೂಡಾ ಉತ್ತಮ ಬಾಂಧವ್ಯ ಹೊಂದಿದ್ದರು. ಪುನೀತ್ ರಾಜ್‌ಕುಮಾರ್ ನಿಧನರಾದಾಗ ನಟ ಚಿರಂಜೀವಿ, ಪುತ್ರ ರಾಮ್ ಚರಣ್, ಹಿರಿಯ ನಟ ಬಾಲಕೃಷ್ಣ, ಶ್ರೀಕಾಂತ್, ಆಲಿ, ಜ್ಯೂನಿಯರ್ ಎನ್‌ಟಿಆರ್, ವಿಕ್ಟರಿ ವೆಂಕಟೇಶ್, ರಾಣಾ ದಗ್ಗುಬಾಟಿ, ತಮಿಳಿನ ವಿಶಾಲ್, ಪ್ರಭುದೇವ ಸೇರಿದಂತೆ ಪರಭಾಷೆಯ ಅನೇಕ ನಟರು ಆಗಮಿಸಿದ್ದರು. ಪುನೀತ್ ಅಗಲಿಕೆಗೆ ಎಲ್ಲರೂ ಕಂಬನಿ ಮಿಡಿದಿದ್ದರು.
ಪುನೀತ್ ನಿಧನರಾದ ನಂತರ ಕನ್ನಡ ಚಿತ್ರರಂಗದ ಯಾವುದೇ ಕಾರ್ಯಕ್ರಮವಿರಲಿ ಅಲ್ಲಿ ಪುನೀತ್ ಅವರನ್ನು ಸ್ಮರಿಸುವ ಮೂಲಕವೇ ಕಾರ್ಯಕ್ರಮ ಆರಂಭವಾಗುತ್ತಿದೆ. ತಮಿಳು, ತೆಲುಗು, ಮಲಯಾಳಂನ ಅನೇಕ ಕಾರ್ಯಕ್ರಮಗಳಲ್ಲಿ ಕೂಡಾ ಪುನೀತ್ ಅವರನ್ನು ಸ್ಮರಿಸಲಾಗಿದೆ. ವಿಶೇಷ ಎಂದರೆ ತೆಲುಗು ನಟ ರಾಣಾ ದಗ್ಗುಬಾಟಿ ತಮ್ಮ ಕಚೇರಿಗೆ ಪುನೀತ್ ರಾಜ್‌ಕುಮಾರ್ ಅವರ ಪ್ರತಿಮೆಯನ್ನು ತಂದು ತಮ್ಮ ಟೇಬಲ್ ಮೇಲೆ ಪ್ರತಿಷ್ಠಾಪಿಸಿದ್ದಾರೆ. ಈ ಸುದ್ದಿಯನ್ನು ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಸ್ವತ: ರಾಣಾ ದಗ್ಗುಬಾಟಿ ಹೇಳಿಕೊಂಡಿದ್ದಾರೆ.
ಪುನೀತ್ ಪ್ರತಿಮೆಯ ಫೋಟೋವನ್ನು ಹಂಚಿಕೊಂಡಿರುವ ರಾಣಾ ದಗ್ಗುಬಾಟಿ, ''ಇಂದು ನನ್ನ ಕಚೇರಿಗೆ ಬಹಳ ಸುಂದರವಾದ ನೆನಪೊಂದು ಬಂದಿದೆ. ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೆನೆ ಫ್ರೆಂಡ್'' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಮಗೆ ಪುನೀತ್ ರಾಜ್‌ಕುಮಾರ್ ಬಗ್ಗೆ ಎಷ್ಟು ಗೌರವ ಇದೆ ಎಂಬುದನ್ನು ತೋರಿಸಿದ್ದಾರೆ. ರಾಣಾ ದಗ್ಗುಬಾಟಿಯ ಈ ಪೋಸ್ಟ್ ನೋಡಿ, ನೆಟಿಜನ್ಸ್ ರಾಣಾ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ಅಕ್ಟೋಬರ್ 28 ರಂದು ಗಂಧದ ಗುಡಿ ತೆರೆಗೆ
ಪುನೀತ್ ಅವರ ಕನಸಿನ ಕೂಸು ಗಂಧದ ಗುಡಿ ಅಕ್ಟೋಬರ್ 28 ರಂದು ತೆರೆ ಕಾಣುತ್ತಿದೆ. ಪಿಆರ್‌ಕೆ ಸಂಸ್ಥೆಯು, ಗಣೇಶ ಚತುರ್ಥಿಯ ವಿಶೇಷದಂದು 'ಗಂಧದಗುಡಿ' ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡಿತ್ತು. ಈ ಪೋಸ್ಟರ್‌ನಲ್ಲಿ ಪುನೀತ್, ಆನೆಯ ಮುಂದೆ ನಗುತ್ತಾ ನಿಂತಿದ್ದಾರೆ. ಇದು ಡಾಕ್ಯುಮೆಂಟ್ರಿ ಅಲ್ಲ ಎಂದು ತಯಾರಕರೇ ಹೇಳಿಕೊಂಡಿದ್ದು, 'ಗಂಧದಗುಡಿ ' ವಿಭಿನ್ನ ಸಿನಿಮಾ ನೋಡಲು ಫ್ಯಾನ್ಸ್ ಎದುರು ನೋಡುತ್ತಿದ್ದಾರೆ. 'ಗಂಧದಗುಡಿ' ಪ್ರಕೃತಿ ಹಾಗೂ ಸಾಹಸಮಯ ಸಿನಿಮಾ. ಕರ್ನಾಟಕದ ವನ್ಯಜೀವಿ ಸಂಪತ್ತನ್ನು ಈ ಚಿತ್ರದಲ್ಲಿ ಅದ್ಭುತವಾಗಿ ಸೆರೆ ಹಿಡಿಯಲಾಗಿದೆ. ಅಮೋಘವರ್ಷ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.