Puneeth Rajkumar: ಒಂದೇ ಕಡೆ ಪುನೀತ್, ತಾರಕರತ್ನ ಫೋಟೋ.. ಜ್ಯೂ. ಎನ್‌ಟಿಆರ್ ಮನಸ್ಸು ಚಿನ್ನ ಎಂದ ಅಭಿಮಾನಿಗಳು
ಒಂದೇ ಕಡೆ ತಾರಕರತ್ನ ಹಾಗೂ ಪುನೀತ್ ರಾಜ್‌ಕುಮಾರ್ ಫೋಟೋ ನೋಡಿದ ಅಭಿಮಾನಿಗಳು ಭಾವುಕರಾಗಿದ್ದಾರೆ. ಇದು ನಿಜಕ್ಕೂ ಅಪರೂಪದ ದೃಶ್ಯ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಜ್ಯೂ. ಎನ್‌ಟಿಆರ್ ತಮ್ಮ ಕಚೇರಿಯಲ್ಲಿ ಅಪ್ಪು ಫೋಟೋ ಇರಿಸಿದ್ದು ವೈರಲ್ ಆಗಿತ್ತು.
ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿದಾಗಿನಿಂದ ಬಹಳಷ್ಟು ಅಭಿಮಾನಿಗಳು ಅವರ ಫೋಟೋವನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡಿದ್ಧಾರೆ. ಜನ ಸಾಮಾನ್ಯರು ಮಾತ್ರವಲ್ಲ ಸೆಲೆಬ್ರಿಟಿಗಳು ಅಪ್ಪು ಫೋಟೋ, ಅವರ ಪ್ರತಿಮೆಯನ್ನು ತಮ್ಮ ಮನೆಯಲ್ಲಿರಿಸಿಕೊಂಡಿದ್ದಾರೆ. ಈ ಮೂಲಕ ತಮ್ಮ ಮೆಚ್ಚಿನ ನಟನನ್ನು ದೇವರಂತೆ ಆರಾಧಿಸುತ್ತಿದ್ದಾರೆ.
ಅಪ್ಪುಗೆ ಆತ್ಮೀಯರಾಗಿದ್ದ ಜ್ಯೂನಿಯರ್ ಎನ್‌ಟಿಆರ್ ಕೂಡಾ ತಮ್ಮ ಆಫೀಸಿನಲ್ಲಿ ಪುನೀತ್ ಫೋಟೋ ಇಟ್ಟಿದ್ದರು. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಜ್ಯೂನಿಯರ್ ಎನ್‌ಟಿಆರ್, ಅಪ್ಪು ಫೋಟೋ ಬಳಿ ಇತ್ತೀಚೆಗೆ ನಿಧನರಾದ ತಮ್ಮ ಸೋದರಸಂಬಂಧಿ ತಾರಕರತ್ನ ಅವರ ಫೋಟೋ ಇರಿಸಿದ್ದಾರೆ. ಕಳೆದ ತಿಂಗಳು ಪಾದಯಾತ್ರೆ ವೇಳೆ ಹೃದಯಾಘಾತವಾಗಿ 23 ದಿನಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ತಾರಕರತ್ನ ಆರೋಗ್ಯ ಸುಧಾರಿಸಲಿಲ್ಲ. ಫೆಬ್ರವರಿ 18 ರಂದು ಅವರು ನಾರಾಯಣ ಹೃದಯಾಲಯದಲ್ಲಿ ಕೊನೆಯುಸಿರೆಳೆದಿದ್ದರು.
ಇದೀಗ ಒಂದೇ ಕಡೆ ತಾರಕರತ್ನ ಹಾಗೂ ಪುನೀತ್ ರಾಜ್‌ಕುಮಾರ್ ಫೋಟೋ ನೋಡಿದ ಅಭಿಮಾನಿಗಳು ಭಾವುಕರಾಗಿದ್ದಾರೆ. ಇದು ನಿಜಕ್ಕೂ ಅಪರೂಪದ ದೃಶ್ಯ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಜ್ಯೂ. ಎನ್‌ಟಿಆರ್ ತಮ್ಮ ಕಚೇರಿಯಲ್ಲಿ ಅಪ್ಪು ಫೋಟೋ ಇರಿಸಿದ್ದು ವೈರಲ್ ಆಗಿತ್ತು. ಆಗ ಕೂಡಾ ನೆಟಿಜನ್ಸ್ ಎನ್‌ಟಿಆರ್ ಅವರನ್ನು ಹೊಗಳಿದ್ದರು. ಪುನೀತ್ ರಾಜ್‌ಕುಮಾರ್ ಹಾಗೂ ಜ್ಯೂ. ಎನ್‌ಟಿಆರ್ ಮೊದಲಿನಿಂದಲೂ ಆತ್ಮೀಯರು. ಚಕ್ರವ್ಯೂಹ ಚಿತ್ರಕ್ಕಾಗಿ ಜ್ಯೂ. ಎನ್‌ಟಿಆರ್, ಗೆಳೆಯ ಗೆಳೆಯ..ಹಾಡನ್ನು ಹಾಡಿದ್ದರು. ಆದರೆ ಅಪ್ಪು ನಿಧನರಾದಾಗ ನಾನು ಇನ್ನೆಂದೂ ಯಾವ ವೇದಿಕೆ ಮೇಲೆ ಕೂಡಾ ಈ ಹಾಡು ಹಾಡುವುದಿಲ್ಲ ಎಂದು ಘೋಷಿಸಿದ್ದರು. ಪುನೀತ್ ನಿಧನರಾದಾಗ ಎಲ್ಲಾ ಕೆಲಸವನ್ನು ಬದಿಗೊತ್ತಿ ಬೆಂಗಳೂರಿಗೆ ಬಂದು ಪುನೀತ್ ಅಂತಿಮ ದರ್ಶನ ಪಡೆದು ಕಣ್ಣೀರಿಟ್ಟಿದ್ದರು.
ರಾಣಾ ದಗ್ಗುಬಾಟಿ ಕಚೇರಿಯಲ್ಲೂ ಅಪ್ಪು ಪ್ರತಿಮೆ
ಪುನೀತ್ ನಿಧನರಾದ ನಂತರ ಕನ್ನಡ ಚಿತ್ರರಂಗದ ಯಾವುದೇ ಕಾರ್ಯಕ್ರಮವಿರಲಿ ಅಲ್ಲಿ ಪುನೀತ್ ಅವರನ್ನು ಸ್ಮರಿಸುವ ಮೂಲಕವೇ ಕಾರ್ಯಕ್ರಮ ಆರಂಭವಾಗುತ್ತಿದೆ. ತಮಿಳು, ತೆಲುಗು, ಮಲಯಾಳಂನ ಅನೇಕ ಕಾರ್ಯಕ್ರಮಗಳಲ್ಲಿ ಕೂಡಾ ಪುನೀತ್ ಅವರನ್ನು ಸ್ಮರಿಸಲಾಗಿದೆ. ಯಾವುದೇ ಸಿನಿಮಾ ಟೈಟಲ್ ಕಾರ್ಡ್ ಇರಲಿ ಅಲ್ಲಿ ಅಪ್ಪು ಫೋಟೋಗೆ ಮೊದಲ ಸ್ಥಾನ ನೀಡಲಾಗುತ್ತಿದೆ. ತೆಲುಗು ನಟ ರಾಣಾ ದಗ್ಗುಬಾಟಿ ಕೂಡಾ ತಮ್ಮ ಕಚೇರಿಯ ಟೇಬಲ್ ಮೇಲೆ ಪುನೀತ್ ರಾಜ್‌ಕುಮಾರ್ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದಾರೆ. ಕಳೆದ ವರ್ಷ ಈ ಸುದ್ದಿಯನ್ನು ರಾಣಾ ದಗ್ಗುಬಾಟಿ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದರು. ''ಇಂದು ನನ್ನ ಕಚೇರಿಗೆ ಬಹಳ ಸುಂದರವಾದ ನೆನಪೊಂದು ಬಂದಿದೆ. ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಫ್ರೆಂಡ್'' ಎಂದು ಬರೆದುಕೊಂಡಿದ್ದರು.
ತಾರಕರತ್ನ ಮಹಾಕರ್ಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜ್ಯೂ. ಎನ್‌ಟಿಆರ್
ಫೆಬ್ರವರಿ 18 ರಂದು ನಿಧನರಾದ ನಂದಮೂರಿ ತಾರಕರತ್ನ ಅವರ ಮಹಾಕರ್ಮ ಕಾರ್ಯಕ್ರಮ ಫೆಬ್ರವರಿ 2 ರಂದು ಹೈದರಾಬಾದ್‌ನಲ್ಲಿ ಏರ್ಪಡಿಸಲಾಗಿತ್ತು. ನಂದಮೂರಿ ಬಾಲಕೃಷ್ಣ, ಜ್ಯೂನಿಯರ್ ಎನ್‌ಟಿಆರ್, ಕಲ್ಯಾಣ್ ರಾಮ್ ಹಾಗೂ ಇನ್ನಿತರರು ಭಾಗವಹಿಸಿದ್ದರು. ಜೊತೆಗೆ ತೆಲುಗು ದೇಶಂ ಪಕ್ಷದ ಮುಖ್ಯಸ್ಥ, ಮಾಜಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ರಾವುಳ ಚಂದ್ರಶೇಖರ ರೆಡ್ಡಿ, ಅಯ್ಯಣ್ಣ ಪತ್ರುಡು, ಮಾಗಂಟಿಬಾಬು ಹಾಗೂ ಇನ್ನಿತರರು ಭಾಗವಹಿಸಿದ್ದರು.