Puneeth Rajkumar: ಪುನೀತ್‌ ರಾಜ್‌ಕುಮಾರ್‌ ಪುಣ್ಯಸ್ಮರಣೆಗೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಗಂಧದ ಗುಡಿ ಸಾಕ್ಷ್ಯಚಿತ್ರ
ಕನ್ನಡ ಸುದ್ದಿ  /  ಮನರಂಜನೆ  /  Puneeth Rajkumar: ಪುನೀತ್‌ ರಾಜ್‌ಕುಮಾರ್‌ ಪುಣ್ಯಸ್ಮರಣೆಗೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಗಂಧದ ಗುಡಿ ಸಾಕ್ಷ್ಯಚಿತ್ರ

Puneeth Rajkumar: ಪುನೀತ್‌ ರಾಜ್‌ಕುಮಾರ್‌ ಪುಣ್ಯಸ್ಮರಣೆಗೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಗಂಧದ ಗುಡಿ ಸಾಕ್ಷ್ಯಚಿತ್ರ

Gandhada Gudi: ಕರ್ನಾಟಕ ರತ್ನ, ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಕನಸಿನ ಪ್ರಾಜೆಕ್ಟ್‌ ಗಂಧದ ಗುಡಿ ಸಾಕ್ಷ್ಯಚಿತ್ರ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಯಶಸ್ಸು ಕಂಡಿದೆ. ಒಟಿಟಿಯಲ್ಲೂ ಮೆಚ್ಚುಗೆ ಪಡೆದಿದೆ. ಈಗ ಇದೇ ಸಾಕ್ಷ್ಯಚಿತ್ರ ಕಿರುತೆರೆಗೆ ಆಗಮಿಸುತ್ತಿದೆ.

Puneeth Rajkumar: ಪುನೀತ್‌ ರಾಜ್‌ಕುಮಾರ್‌ ಎರಡನೇ ಪುಣ್ಯಸ್ಮರಣೆಗೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಗಂಧದ ಗುಡಿ ಸಾಕ್ಷ್ಯಚಿತ್ರ
Puneeth Rajkumar: ಪುನೀತ್‌ ರಾಜ್‌ಕುಮಾರ್‌ ಎರಡನೇ ಪುಣ್ಯಸ್ಮರಣೆಗೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಗಂಧದ ಗುಡಿ ಸಾಕ್ಷ್ಯಚಿತ್ರ

Gandhada Gudi Television Premiere: ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಪುನೀತ್‌ ಆಗಿಯೇ ಕಾಣಿಸಿಕೊಂಡ, ಮೊದಲ ಸಾಕ್ಷ್ಯಚಿತ್ರ ‘ಗಂಧದ ಗುಡಿ’ (Gandhada Gudi). ಕಳೆದ ವರ್ಷದ ಅಕ್ಟೋಬರ್‌ 28ರಂದು ಅಂದರೆ, ಪುನೀತ್‌ ಮೊದಲ ಪುಣ್ಯಸ್ಮರಣೆ ನಿಮಿತ್ತ ಈ ಚಿತ್ರ ಬಿಡುಗಡೆ ಆಗಿತ್ತು. ನಿರ್ದೇಶಕ ಅಮೋಘ ವರ್ಷ ಅವರ ನಿರ್ದೇಶನಕ್ಕೂ ಮೆಚ್ಚುಗೆ ಸಿಕ್ಕಿತ್ತು. ಅದಾದ ಬಳಿಕ ಅಮೆಜಾನ್‌ ಪ್ರೈಂ ಒಟಿಟಿಯಲ್ಲಿಯೂ ಸ್ಟ್ರೀಮ್‌ ಆಗಿ ಯಶಸ್ಸು ಪಡೆದುಕೊಂಡಿತ್ತು. ಇದೀಗ ಇದೇ ಸಾಕ್ಷ್ಯಚಿತ್ರ ಕಿರುತೆರೆಗೆ ಆಗಮಿಸುತ್ತಿದೆ.

ಹೌದು, ಕರ್ನಾಟಕದ ಕಾನನ ಪರಿಚಯಿಸುವ ಮೂಲಕ ಹೊಸ ಸಾಹಸಕ್ಕೆ ಕೈ ಹಾಕಿ, ಅಷ್ಟೇ ನೈಜವಾಗಿ ಅದನ್ನು ನಾಡಿನ ಜನತೆಗೆ ಅಪ್ಪು ಅರ್ಪಿಸಿದ್ದರು. ಆ ‘ಗಂಧದಗುಡಿ’ ಕಂಡ ಇಡೀ ಕರುನಾಡು ಸಲಾಮ್‌ ಹೊಡೆದಿತ್ತು. ಅವರ ಅನುಪಸ್ಥಿತಿಯಲ್ಲಿಯೇ ಅಭಿಮಾನಿಗಳು ಈ ಚಿತ್ರವನ್ನು ಅಪ್ಪಿ ಒಪ್ಪಿದ್ದರು. ಅಭಿಮಾನಿಗಳು ಮಾತ್ರವಲ್ಲ ಸ್ಯಾಂಡಲ್‌ವುಡ್‌ನ ಸಿನಿಮಾ ಸ್ನೇಹಿತರು, ಆಪ್ತರು ಸಹ ಚಿತ್ರದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಸರಣಿ ಪೋಸ್ಟ್‌ ಸಹ ಹಂಚಿಕೊಂಡಿದ್ದರು.

ಈಗ ಅವರ ಎರಡನೇ ಪುಣ್ಯ ಸ್ಮರಣೆಗೆ ಇನ್ನೊಂದು ದಿನ ಮಾತ್ರ ಬಾಕಿ ಇದೆ. ಕಳೆದ ವರ್ಷ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿದ್ದ ಗಂಧದ ಗುಡಿ, ಇದೀಗ ಮನೆ ಮನೆಗೂ ತಲುಪುತ್ತಿದೆ. ಜೀ ಕನ್ನಡ ಈ ಚಿತ್ರವನ್ನು ವರ್ಲ್ಡ್ ಟೆಲಿವಿಷನ್ ‍ಪ್ರೀಮಿಯರ್ ಮಾಡಲು ಸಜ್ಜಾಗಿದೆ.

ಮೂರು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಪುನೀತ್ ರಾಜ್ ಕುಮಾರ್ ಹಲವಾರು ಹಿಟ್‌ ಸಿನೆಮಾಗಳನ್ನು ನೀಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಅಪ್ಪು, ಬಾಲನಟನಾಗಿ 12 ಚಿತ್ರಗಳಲ್ಲಿ ನಟಿಸಿದ್ದರು. ಬೆಟ್ಟದ ಹೂವು ಚಿತ್ರಕ್ಕಾಗಿ ಇವರಿಗೆ ಅತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿ ಕೂಡ ದೊರೆತಿದೆ. ತದನಂತರ ಮೊದಲ ಬಾರಿಗೆ ನಟನಾಗಿ ಅಪ್ಪು ಚಿತ್ರದಲ್ಲಿ ನಾಯಕನಾಗಿ ನಟಿಸಿದರು. ಅಲ್ಲಿಂದ ಸ್ಟಾರ್‌ ನಟನಾಗಿ ಮುಂದುವರಿದರು. ಕೇವಲ ನಟನಾಗಿ ಮಾತ್ರವಲ್ಲದೆ, ಗಾಯಕನಾಗಿ, ದೂರದರ್ಶನ ನಿರೂಪಕನಾಗಿ, ನಿರ್ಮಾಪಕರಾಗಿಯೂ ಸಿನಿಮಾಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ.

ಆದರೆ, ಇದೇ ಅಪ್ಪು 2021ರ ಅಕ್ಟೋಬರ್‌ 29ರಂದು ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾದರು. ನಿಧನಕ್ಕೂ ಮುನ್ನ ಅವರು ಗಂಧದ ಗುಡಿ ಸಾಕ್ಷ್ಯಚಿತ್ರದಲ್ಲೂ ಪುನೀತ್‌ ಆಗಿಯೇ ಕಾಣಿಸಿಕೊಂಡಿದ್ದರು. ಕಳೆದ ವರ್ಷದ ಅ.28ರಂದು ತೆರೆಗೆ ಬಂದ ಈ ಚಿತ್ರ ಇದೀಗ ಜೀ ಕನ್ನಡದ ಮೂಲಕ ಕಿರುತೆರೆಗೆ ಲಗ್ಗೆಯಿಡುತ್ತಿದೆ. ಗಂಧದಗುಡಿ ಇದೊಂದು ಡಾಕ್ಯುಮೆಂಟರಿ ಸಿನಿಮಾ. ಪಿಆರ್‌ಕೆ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿದೆ. ಈ ಗಂಧದ ಗುಡಿ ಭಾನುವಾರ ಸಂಜೆ 5 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.

Whats_app_banner