ಕನ್ನಡ ಸುದ್ದಿ  /  Entertainment  /  Puneeth Rajkumar: Puneeth's Name Will Shine In The Sky; Big Little Company Paid Tribute By Naming The Star Puneeth Rajkumar

ಆಕಾಶದಲ್ಲಿ ಹೊಳೆಯಲಿದೆ ಪುನೀತ್‌ ಹೆಸರು; ನಕ್ಷತ್ರಕ್ಕೆ ಪುನೀತ್‌ ರಾಜ್‌ಕುಮಾರ್‌ ಹೆಸರಿಡುವ ಮೂಲಕ ಗೌರವ ಸಲ್ಲಿಸಿದ ಬಿಗ್ ಲಿಟ್ಲ್ ಕಂಪನಿ

Puneeth Rajkumar: ʼಬಿಗ್‌ ಲಿಟ್ಲ್‌ʼ ಕಂಪನಿ ಆಕಾಶದಲ್ಲಿರುವ ನಕ್ಷತ್ರವೊಂದಕ್ಕೆ ಪುನೀತ್‌ ರಾಜ್‌ಕುಮಾರ್‌ ಅವರ ಹೆಸರು ಇರಿಸುವ ಮೂಲಕ ಗೌರವ ಸಲ್ಲಿಸಿದೆ. ಈ ಕುರಿತು ವಿಡಿಯೊವೊಂದನ್ನು ಮಾಡಿದ್ದು, ಅದನ್ನು ನಟ ವಿಕ್ರಮ್‌ ರವಿಚಂದ್ರನ್‌ ಬಿಡುಗಡೆ ಮಾಡಿದ್ದಾರೆ.

ಪುನೀತ್‌ ರಾಜ್‌ಕುಮಾರ್‌
ಪುನೀತ್‌ ರಾಜ್‌ಕುಮಾರ್‌

ಕಳೆದ ಎರಡು ದಿನಗಳ ಹಿಂದೆ (ಮಾರ್ಚ್‌ 17) ದಿವಂಗತ ನಟ ಪುನೀತ್‌ ರಾಜಕುಮಾರ್‌ ಅವರ ಹುಟ್ಟುಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗಿತ್ತು. ಪುನೀತ್‌ ಹುಟ್ಟುಹಬ್ಬದ ಪ್ರಯುಕ್ತ ಗಂಧದಗುಡಿ ಸಿನಿಮಾ ಒಟಿಟಿ ಸ್ಟ್ರೀಮಿಂಗ್‌, ಯುವರತ್ನ ಸಿನಿಮಾ ಮರು ಬಿಡುಗಡೆ, ನರ್ತಕಿ ಚಿತ್ರಮಂದಿರದ ಬಳಿ ಬೃಹತ್‌ ಕಟೌಟ್‌, ಪುನೀತ್‌ಗಾಗಿ ಕಥಾ ಗಾನಂ ವಿಶೇಷ ಗೀತೆ, ಕಬ್ಜ ಬಿಡುಗಡೆ, ಅಭಿಮಾನಿಯೊಬ್ಬರು ತಯಾರಿಸಿದ ಪುನೀತ್‌ ಪ್ರತಿಮೆ ಅನಾವರಣ ಹೀಗೆ ಹಲವು ರೀತಿಯಿಂದ ಪುನೀತ್‌ಗೆ ಗೌರವ ಸಲ್ಲಿಸಲಾಗಿತ್ತು.

ಇದೀಗ ʼಬಿಗ್‌ ಲಿಟ್ಲ್‌ʼ ಹೆಸರಿನ ಕಂಪನಿ ಪುನೀತ್‌ ಹುಟ್ಟುಹಬ್ಬದಂದು ಆಕಾಶದಲ್ಲಿರುವ ನಕ್ಷತ್ರವೊಂದಕ್ಕೆ ಪುನೀತ್‌ ಹೆಸರು ಇರಿಸುವ ಮೂಲಕ ಗೌರವ ಸಲ್ಲಿಸಿದೆ. ಈ ಪ್ರಯುಕ್ತ ವಿಡಿಯೊವೊಂದನ್ನು ಬಿಡುಗಡೆ ಮಾಡಿದೆ. ನಟ ವಿಕ್ರಮ್‌ ರವಿಚಂದ್ರನ್‌ ಈ ವಿಡಿಯೊವನ್ನು ಬಿಡುಗಡೆ ಮಾಡುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

ವಿಡಿಯೊ ಬಿಡುಗಡೆ ಮಾಡಿ ಮಾತನಾಡಿದ ವಿಕ್ರಮ್ ರವಿಚಂದ್ರನ್ ʼಪುನೀತ್‌ ಅವರಿಗೆ ಸಂಬಂಧಿಸಿದ ಯಾವುದೇ ವಿಚಾರದಲ್ಲಿ ತೊಡಗಿಸಿಕೊಳ್ಳಲು ನನಗೆ ಬಹಳ ಸಂತೋಷವಾಗುತ್ತದೆ. ನಾನು ಚಿಕ್ಕಂದಿನಿಂದಲೂ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದೇನೆ. ಸಿನಿಮಾದ ಆಚೆಗಿನ ಅವರ ಜೀವನ ಜಗತ್ತಿಗೇ ಸ್ಫೂರ್ತಿ. ಅವರಿಗಾಗಿ ಮಾಡುತ್ತಿರುವ ಒಂದೊಳ್ಳೆ ಕೆಲಸದಲ್ಲಿ ನಾನು ಭಾಗಿಯಾಗಿರುವುದು ನನಗೆ ತುಂಬಾ ಖುಷಿ ಕೊಟ್ಟಿದೆʼ ಎಂದು ಸಂತಸ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ

ಈ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಬಿಗ್‌ ಲಿಟ್ಲ್‌ ಕಂಪನಿ ವಿಕ್ರಮ್‌ ರವಿಚಂದ್ರನ್‌ ಅವರನ್ನು ಟ್ಯಾಗ್‌ ಮಾಡಿದೆ. ಮಾತ್ರವಲ್ಲ ʼನಮ್ಮ ನಡುವೆ ತನ್ನ ನಿಷ್ಕಲ್ಮಷ ನಗುವಿನಿಂದಲೇ ಮಿಂಚಿದ್ದ ತಾರೆಯೊಂದು, ಇನ್ನು ಮುಂದೆ ಆಕಾಶದಲ್ಲಿ ಹೊಳೆಯಲಿದೆ. ಕೋಟ್ಯಾಂತರ ನಕ್ಷತ್ರಗಳಲ್ಲಿ ಒಂದು ನಕ್ಷತ್ರಕ್ಕೆ ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ಇಡಲಾಗಿದೆʼ ಎಂದು ಶೀರ್ಷಿಕೆ ಬರೆದುಕೊಂಡಿದೆ. ಇದಕ್ಕೆ ಸಾವಿರಾರು ಮಂದಿ ಲೈಕ್‌, ಕಮೆಂಟ್‌ ಮಾಡಿದ್ದಾರೆ.

ಬಿಗ್ ಲಿಟ್ಲ್ ಕಂಪನಿ ಸಂಸ್ಥಾಪಕಿ ಕಾವ್ಯ ಶಂಕರೇಗೌಡ ಮಾತನಾಡಿ ʼಪುನೀತ್ ರಾಜ್‌ಕುಮಾರ್ ಎಲ್ಲರಿಗೂ ಸ್ಫೂರ್ತಿ. ಬಿಗ್ ಲಿಟ್ಲ್ ಕಂಪನಿ ಅವರಿಂದ ತುಂಬಾ ಕಲಿತಿದೆ. ಅವರನ್ನು ವೈಯಕ್ತಿಕವಾಗಿ ಬಲ್ಲೆ, ನನ್ನಂತ ಸಾಮಾನ್ಯ ವ್ಯಕ್ತಿಗಳು ಸೂಪರ್ ಸ್ಟಾರ್‌ಗಳ ಬಗ್ಗೆ ಹೊಂದಿರುವ ಅಭಿಪ್ರಾಯವನ್ನು ಅವರು ಬದಲಿಸಿದ್ದರು. ನಕ್ಷತ್ರಗಳು ನಮ್ಮ ಮಾರ್ಗದರ್ಶಿ ಶಕ್ತಿಯಾಗಿರುತ್ತೆ ಎಂಬ ಕಲ್ಪನೆಯಡಿ ನಮ್ಮ ಈ ಪರಿಕಲ್ಪನೆ ಮೂಡಿ ಬಂದಿದೆ. ನಮ್ಮ ಪ್ರೀತಿಪಾತ್ರರು ದೂರವಾದಾಗ ನಕ್ಷತ್ರಗಳಾಗುತ್ತಾರೆ ಎಂಬುದು ಹಿಂದಿನಿಂದಲೂ ಇರುವ ನಂಬಿಕೆ. ಅಪ್ಪು ಸರ್ ನಮಗೆಲ್ಲರಿಗೂ ಸ್ಟಾರ್ ಆಗಿದ್ದವರು. ಅವರ ಹೆಸರಲ್ಲಿ ಒಂದು ನಕ್ಷತ್ರ ಇರಬೇಕೆಂದು ನಮ್ಮ ಬಯಕೆ. ನಮ್ಮೆಲ್ಲರ ಅತ್ಯುತ್ತಮ ಸ್ಫೂರ್ತಿಯ ಶಕ್ತಿಗೆ, ಇದು ನಮ್ಮ ಚಿಕ್ಕ ಕೊಡುಗೆʼ ಎಂದಿದ್ದಾರೆ.

ಅಪ್ಪು ಅವರಿಗೆ ಗೌರವ ಸಲ್ಲಿಸುವ ಈ ವಿಡಿಯೊ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಖತ್‌ ವೈರಲ್‌ ಆಗಿದ್ದು, ಮಾತ್ರವಲ್ಲ ಹಲವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಈ ಸಿನಿಮಾ ಸುದ್ದಿಗಳನ್ನೂ ಓದಿ

‘ಕಾಂತಾರ’ ಚಿತ್ರದಿಂದ ಮತ್ತೊಂದು ಸಾಹಸ; ವಿದೇಶದ ಈ ಎರಡು ಭಾಷೆಗಳಿಗೂ ಡಬ್‌.. ಶೀಘ್ರದಲ್ಲಿ ಚಿತ್ರಮಂದಿರದಲ್ಲಿ ರಿಲೀಸ್

ಎಲ್ಲೆಡೆಯಿಂದ ಮೆಚ್ಚುಗೆ ಪಡೆದ ‘ಕಾಂತಾರ’ ಸಿನಿಮಾ ಇದೀಗ ವಿದೇಶದ ಹಲವು ಭಾಷೆಗಳಿಗೆ ಡಬ್‌ ಆಗುತ್ತಿದೆ. ಈ ವಿಚಾರವನ್ನು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ. ಇತ್ತೀಚಿನ ಕೆಲ ದಿನಗಳಿಂದ ‘ಕಾಂತಾರ’ ಸಿನಿಮಾ ಸರಣಿ ಸುದ್ದಿಯಲ್ಲಿದೆ. ವಿಶ್ವಸಂಸ್ಥೆಯಲ್ಲಿಯೂ ಈ ಚಿತ್ರ ಸದ್ದು ಮಾಡಿದೆ.

Urigowda Nanjegowda: 'ಉರಿಗೌಡ- ನಂಜೇಗೌಡ' ಚಿತ್ರಕ್ಕೆ ನಿರ್ದೇಶಕರು ಫಿಕ್ಸ್, ಫಸ್ಟ್‌ ಲುಕ್‌ ರಿಲೀಸ್‌, ಮುಹೂರ್ತಕ್ಕೂ ದಿನಾಂಕ ನಿಕ್ಕಿ..

ಬಿಜೆಪಿ ರಾಜಕಾರಣಿಗಳಾದ ಆರ್‌. ಅಶೋಕ್‌, ಸಿಟಿ ರವಿ, ಮುನಿರತ್ನ ಮತ್ತು ಸಿ.ಎನ್‌ ಅಶ್ವತ್ಥ ನಾರಾಯಣ್‌ ಸಾರಥ್ಯದಲ್ಲಿ ನಿರ್ಮಾಣವಾಗುತ್ತಿರುವ 'ಉರಿಗೌಡ- ನಂಜೇಗೌಡ' ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಆಗಿದೆ.

IPL_Entry_Point

ವಿಭಾಗ