ಬಾಕ್ಸ್ ಆಫೀಸ್‌ನಲ್ಲಿ ಪುಷ್ಪ 2 ಕಲೆಕ್ಷನ್ ಮಹೋತ್ಸವ! ಮೊದಲ ದಿನವೇ ಹಲವು ದಾಖಲೆಗಳು ಪೀಸ್ ಪೀಸ್, ಹೀಗಿದೆ ಗಳಿಕೆ ವಿವರ
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ 2 ಸಿನಿಮಾ ಡಿ. 5ರಂದು ವಿಶ್ವದಾದ್ಯಂತ ಬಿಡುಗಡೆ ಆಗಿದೆ. ದೊಡ್ಡ ಮಟ್ಟದಲ್ಲಿ ತೆರೆಕಂಡ ಈ ಸಿನಿಮಾ ಕಲೆಕ್ಷನ್ ವಿಚಾರದಲ್ಲಿಯೂ ಮೋಡಿ ಮಾಡುತ್ತಿದೆ. ಈ ಹಿಂದಿನ ಹಲವು ಸಿನಿಮಾಗಳ ದಾಖಲೆಗಳು ಚಿಂದಿಯಾಗಿವೆ. ಹೊಸ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ. ಹಾಗಾದರೆ, ಪುಷ್ಪ 2 ಚಿತ್ರದ ಮೊದಲ ದಿನದ ಗಳಿಕೆ ಎಷ್ಟು?
Pushpa 2 Box Office Day 1 Collection: ಈ ವರ್ಷಾಂತ್ಯದ ಬಹುನಿರೀಕ್ಷಿತ ಸಿನಿಮಾ ಎಂಬ ವಿಶೇಷಣದ ಜತೆಗೆ ಅದ್ಧೂರಿಯಾಗಿಯೇ ಬಿಡುಗಡೆ ಆಗಿತ್ತು ಪುಷ್ಪ 2 ಸಿನಿಮಾ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಸೇರಿ ಬಹುತಾರಾಗಣದ ಈ ಸಿನಿಮಾ, ಡಿಸೆಂಬರ್ 5ರಂದು ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಿತ್ತು. ಮುಂಗಡ ಟಿಕೆಟ್ ಬುಕಿಂಗ್‌ನಿಂದಲೇ ಅಬ್ಬರಿಸಿದ್ದ ಪುಷ್ಪ 2 ಸಿನಿಮಾ ಮೊದಲ ದಿನ ಎಷ್ಟು ಗಳಿಕೆ ಮಾಡಬಹುದು? ಎಂಬ ಲೆಕ್ಕಾಚಾರವೂ ಜೋರಾಗಿತ್ತು. ಅದರಂತೆ, ಈಗ ಆ ಅಂಕಿ ಅಂಶ ಹೊರಬಿದ್ದಿದೆ. ಈ ಮೂಲಕ ಹೊಸ ದಾಖಲೆಯೊಂದನ್ನು ಪುಷ್ಪರಾಜ್ ತನ್ನದಾಗಿಸಿಕೊಂಡಿದ್ದಾನೆ.
ಭಾರತದಲ್ಲಿ ಪುಷ್ಪ ಗಳಿಸಿದ್ದು ಎಷ್ಟು?
ಬಾಕ್ಸ್ ಆಫೀಸ್ ಟ್ರ್ಯಾಕರ್ sacnilk ಮಾಹಿತಿಯ ಪ್ರಕಾರ, ಪುಷ್ಪ 2 ಮೊದಲ ದಿನದ ಭಾರತದಲ್ಲಿ 165 ಕೋಟಿ ಗಳಿಕೆ ಕಂಡಿದೆ. ತೆಲುಗಿನಲ್ಲಿ ಒಂದು ದಿನ ಮುಂಚಿತವಾಗಿಯೇ ಈ ಸಿನಿಮಾ ಬಿಡುಗಡೆಯಾಗಿದ್ದರಿಂದ, ಆವತ್ತು 10.1 ಕೋಟಿ ಕಲೆಕ್ಷನ್ ಮಾಡಿದೆ. ಅಲ್ಲಿಗೆ ಮೊದಲ ದಿನ ಭಾರತದಲ್ಲಿ 175 ಕೋಟಿ ಕಲೆಕ್ಷನ್ ಮಾಡಿದಂತಾಗಿದೆ ಪುಷ್ಪ 2. ಭಾಷಾವಾರು ನೋಡುವುದಾದರೆ, ತೆಲುಗಿನಲ್ಲಿ 95.1 ಕೋಟಿ, ಹಿಂದಿಯಲ್ಲಿ 67 ಕೋಟಿ, ತಮಿಳಿನಲ್ಲಿ 7 ಕೋಟಿ, ಕನ್ನಡದಲ್ಲಿ 1 ಕೋಟಿ ಮತ್ತು ಮಲಯಾಳಂನಲ್ಲಿ 5 ಕೋಟಿ ಕಲೆಕ್ಷನ್ ಹರಿದು ಬಂದಿದೆ ಎಂದು ವರದಿ ಮಾಡಿದೆ.
ವಿಶ್ವದಾದ್ಯಂತ 300 ಕೋಟಿ
ವಿಶ್ವದಾದ್ಯಂತ ಪುಷ್ಪ 2 ಚಿತ್ರದ ಮೊದಲ ದಿನದ ಗಳಕೆ ಎಷ್ಟು ಎಂಬ ಮಾಹಿತಿ ಇನ್ನಷ್ಟೇ ಅಧಿಕೃತವಾಗಿ ಬಿಡುಗಡೆ ಆಗಬೇಕಿದೆ. ವಿದೇಶದಲ್ಲಿಯೂ ಈ ಸಿನಿಮಾದ ಮುಂಗಡ ಬುಕಿಂಗ್ ಜೋರಾಗಿಯೇ ಇತ್ತು. ಯುಎಸ್ ಮತ್ತು ಇತರ ಉತ್ತರ ಅಮೆರಿಕಾದ ಭಾಗಗಳಲ್ಲಿ ಹೆಚ್ಚು ಟಿಕೆಟ್‌ಗಳು ಬಿಕರಿಯಾಗಿದ್ದವು. ಇದೆಲ್ಲವನ್ನು ಲೆಕ್ಕಹಾಕಿದರೆ, ವಿದೇಶದಿಂದ ದೊಡ್ಡ ಮೊತ್ತವೇ ಹರಿದು ಬರಲಿದೆ ಎನ್ನಲಾಗುತ್ತಿದೆ. Sacnilk ಪ್ರಕಾರ, ಪುಷ್ಪ 2 ನ ವಿಶ್ವಾದ್ಯಂತ ಮೊದಲ ದಿನ 300 ಕೋಟಿ ಗಳಿಕೆ ಕಾಣಲಿದೆ, ಭಾರತೀಯ ಸಿನಿಮಾಗಳಲ್ಲಿ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ ಎಂದಿದೆ.
ಹಿಂದಿಯ ಜವಾನ್ ದಾಖಲೆ ಉಡೀಸ್..
ಟ್ರೇಡ್ ಅನಾಲಿಸ್ಟ್ ಮನೋಬಾಲಾ ವಿಜಯಬಾಲನ್ ಪುಷ್ಪ 2 ಕಲೆಕ್ಷನ್ ವಿಚಾರದ ಬಗ್ಗೆ ಟ್ವಿಟ್‌ವೊಂದನ್ನು ಶೇರ್ ಮಾಡಿದ್ದಾರೆ. ಟಾಲಿವುಡ್ ಬಾಲಿವುಡ್ ಅನ್ನು ಹಿಂದಿಕ್ಕಿದೆ ಎಂದು ಬರೆದುಕೊಂಡಿರುವ ಅವರು, "ಪುಷ್ಪ 2 ಚಿತ್ರದ ಹಿಂದಿ ಆವೃತ್ತಿಯು ಶಾರುಖ್ ಖಾನ್ ಅವರ ಜವಾನ್ ಚಿತ್ರದ ಮೊದಲ ದಿನದ (ಹಿಂದಿ ವರ್ಷನ್) ಬಾಕ್ಸ್ ಆಫೀಸ್ ಅನ್ನು ದಾಟಿ ಮುಂದೆ ಸಾಗಿದೆ. ಜವಾನ್ 65.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ" ಎಂದಿದ್ದಾರೆ. ಪುಷ್ಪ 2 ಸಿನಿಮಾ ಹಿಂದಿ ಭಾಷೆಯೊಂದರಲ್ಲಿಯೇ ಸಾರ್ವಕಾಲಿಕ ದೊಡ್ಡ ಓಪನರ್ ಎನಿಸಿಕೊಂಡಿದೆ. ಒಟ್ಟು ಕಲೆಕ್ಷನ್ 80 ರಿಂದ 85 ಕೋಟಿ ಗಳಿಕೆ ಕಂಡಿದೆ ಎಂದು ಹೇಳಲಾಗುತ್ತಿದೆ.
ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ ಸರಿಸುಮಾರು 400ರಿಂದ 500 ಕೋಟಿ ಬಜೆಟ್‌ನಲ್ಲಿ ಪುಷ್ಪ 2 ದಿ ರೂಲ್ ಸಿನಿಮಾ ನಿರ್ಮಾಣವಾಗಿದೆ. ಸುಕುಮಾರ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಇನ್ನುಳಿದಂತೆ ಫಹಾದ್ ಫಾಸಿಲ್, ಜಗಪತಿ ಬಾಬು, ಅನಸೂಯಾ ಭಾರದ್ವಾಜ್, ರಾವ್ ರಮೇಶ್, ಧನಂಜಯ್ ಚಿತ್ರದಲ್ಲಿದ್ದಾರೆ.