ಜೈಭೀಮ್‌ನಂತಹ ಜನಮನ್ನಣೆಯ ಚಿತ್ರಕ್ಕೆ ಸಿಗದ ರಾಷ್ಟ್ರೀಯ ಪುರಸ್ಕಾರ ಪುಷ್ಪ-2 ಚಿತ್ರದ ಹೀರೋಗೆ ಸಿಕ್ಕಿರುವ ಸಂದೇಶವೇನು: ತೆಲಂಗಾಣ ಸಚಿವೆ ಪ್ರಶ್ನೆ
ಕನ್ನಡ ಸುದ್ದಿ  /  ಮನರಂಜನೆ  /  ಜೈಭೀಮ್‌ನಂತಹ ಜನಮನ್ನಣೆಯ ಚಿತ್ರಕ್ಕೆ ಸಿಗದ ರಾಷ್ಟ್ರೀಯ ಪುರಸ್ಕಾರ ಪುಷ್ಪ-2 ಚಿತ್ರದ ಹೀರೋಗೆ ಸಿಕ್ಕಿರುವ ಸಂದೇಶವೇನು: ತೆಲಂಗಾಣ ಸಚಿವೆ ಪ್ರಶ್ನೆ

ಜೈಭೀಮ್‌ನಂತಹ ಜನಮನ್ನಣೆಯ ಚಿತ್ರಕ್ಕೆ ಸಿಗದ ರಾಷ್ಟ್ರೀಯ ಪುರಸ್ಕಾರ ಪುಷ್ಪ-2 ಚಿತ್ರದ ಹೀರೋಗೆ ಸಿಕ್ಕಿರುವ ಸಂದೇಶವೇನು: ತೆಲಂಗಾಣ ಸಚಿವೆ ಪ್ರಶ್ನೆ

ತೆಲಂಗಾಣದ ಚಿತ್ರರಂಗದಲ್ಲಿನ ತಲ್ಲಣ ನಿಂತಿಲ್ಲ. ನಟ ಅಲ್ಲು ಅರ್ಜುನ್‌ ಬಂಧನ, ಬಿಡುಗಡೆ ನಂತರ ಹೇಳಿಕೆಗಳು ಮುಂದುವರಿದಿವೆ. ತೆಲಂಗಾಣ ಸಚಿವೆ ಸೀತಕ್ಕ ಅವರು ನಟ ಅಲ್ಲು ಅರ್ಜುನ್‌ ವಿರುದ್ದ ಹಾಗೂ ಪರೋಕ್ಷವಾಗಿ ಕೇಂದ್ರ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ.

ತೆಲಂಗಾಣ ಸಚಿವೆ ಸೀತಕ್ಕ ನಟ ಅಲ್ಲು ಅರ್ಜುನ್‌ ಮೇಲೆ ಅಸಮಾಧಾನ ಹೊರ ಹಾಕಿದ್ದಾರೆ.
ತೆಲಂಗಾಣ ಸಚಿವೆ ಸೀತಕ್ಕ ನಟ ಅಲ್ಲು ಅರ್ಜುನ್‌ ಮೇಲೆ ಅಸಮಾಧಾನ ಹೊರ ಹಾಕಿದ್ದಾರೆ.

ಹೈದ್ರಾಬಾದ್‌: ಬಲವಾದ ಮೌಲ್ಯಗಳನ್ನು ಹೊಂದಿರುವ ಚಲನಚಿತ್ರಗಳು ಸಮಾಜಕ್ಕೆ ಉತ್ತಮ ಮಾರ್ಗದರ್ಶನ ಮಾಡುತ್ತವೆ ಎಂದು ನಾವೆಲ್ಲಾ ನಂಬಿದ್ದೇವೆ. ಆದರೆ ಕಳ್ಳ ಸಾಗಣೆಯ ಮಹತ್ವವನ್ನು ಸಾರುವ, ಅಂತಹ ಚಿತ್ರವನ್ನು ವೀಕ್ಷಿಸಲು ಹೋದ ಅಭಿಮಾನಿಗಳು ಕಾಲ್ತುಳಿತಕ್ಕೆ ಸಿಲುಕಿ ಜೀವ ಕಳೆದುಕೊಳ್ಳುತ್ತಾರೆ. ಕಳ್ಳ ಸಾಗಣೆ ಮಾಡಿ ಸ್ಮಗ್ಲಿಂಗ್‌ನಲ್ಲಿ ನಿರತನಾದ ವ್ಯಕ್ತಿ ಹಾಗೂ ಅಂತಹ ಹಿನ್ನೆಲೆಯನ್ನು ಬಿಂಬಿಸಿದ ಚಿತ್ರದ ನಾಯಕನಿಗೆ ನೀವು ರಾಷ್ಟ್ರೀಯ ಪುರಸ್ಕಾರ ನೀಡುತ್ತೀರಿ. ಕಳ್ಳಸಾಗಾಣಿಕೆದಾರನನ್ನು ವೈಭವೀಕರಿಸುವ ಪುಷ್ಪ-2 ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ನೀಡಿರುವುದು ಎಷ್ಟು ಸರಿ ಎನ್ನುವುದು ತಿಳಿಯುತ್ತಿಲ್ಲ. ಸಾಮಾಜಿಕ ಸಂದೇಶ ನೀಡುವ ತಮಿಳಿನ ಜೈ ಭೀಮ್ ಚಿತ್ರಕ್ಕೆ ಮನ್ನಣೆ ನೀಡದಿರುವುದನ್ನು ನಾವು ಏನೆಂದು ತಿಳಿಯಬೇಕು.

ಇದು ತೆಲಂಗಾಣ ಸರ್ಕಾರದ ಸಚಿವೆ ದಾಸರಿ ಅನಸೂಯ ಸೀತಕ್ಕ ಪ್ರಶ್ನೆ.

ಅಲ್ಲು ಅರ್ಜುನ್‌ ಅವರ ಬಂಧನ ನಂತರದ ಬೆಳವಣಿಗೆಗಳ ಕುರಿತು ಮಾತನಾಡಿದ ಸಚಿವೆ, ಈಗಾಗಲೇ ಪುಷ್ಪ -2 ಚಿತ್ರದ ಬಿಡುಗಡೆ ವೇಳೆ ಭಾರೀ ಅನಾಹುತ ಆಗಿದೆ. ಆನಂತರ ಜವಾಬ್ದಾರಿ ಸ್ಥಾನದಲ್ಲಿರುವ ನಟ ಅಲ್ಲು ಅರ್ಜುನ್‌ ಕಾಲ್ತುಳಿತಕ್ಕೆ ಒಳಗಾದವರ ಕುಟುಂಬಕ್ಕೆ ಸಾಂತ್ವನ ಹೇಳಿಲ್ಲ. ಮನೆಗಳಿಗೂ ಹೋಗಿಲ್ಲ. ಇದು ದುರದೃಷ್ಟಕರ. ಇಂತಹ ಸನ್ನಿವೇಶದಲ್ಲಿ ಅಭಿಮಾನಿಗಳು ನಟನಿಗೆ ಬೆಂಬಲ ನೀಡುತ್ತಿರುವುದು ಬೇಸರದಾಯಕ. ಸಾರ್ವಜನಿಕ ಬದುಕಿನಲ್ಲಿ ಇರುವವರ ಜವಾಬ್ದಾರಿ ಹೊಂದಿರಬೇಕು ಎಂದು ಸೀತಕ್ಕ ಹೇಳಿದರು.

ಪುಷ್ಪ -2 ದಂತಹ ಚಿತ್ರ ರಕ್ತಚಂದನದ ಕಳ್ಳ ಸಾಗಣೆಯ ಹಿನ್ನೆಲೆಯನ್ನು ಹೊಂದಿದೆ. ಇಡೀ ಚಿತ್ರದಲ್ಲಿ ನಾಯಕ ಕಳ್ಳಸಾಗಣೆ ನೆಪದಲ್ಲಿ ಅದರ ಮಹತ್ವ ಸಾರುವ ಪ್ರಯತ್ನವನ್ನು ಮಾಡಿದ್ದಾರೆ. ಇಂತಹ ವೈಭವೀಕರಣ ನಿಜಕ್ಕೂ ಸಮಾಜಕ್ಕೆ ಮಾರಕವೇ. ಇಂತಹ ಚಿತ್ರವನ್ನು ವೀಕ್ಷಿಸಲು ಬಂದ ಅಭಿಮಾನಿಗಳು ತೊಂದರೆಗೆ ಸಿಲುಕಿದ್ದಾರೆ. ಸೆಲೆಬ್ರಿಟಿಗಳಾದವರು ಇಂತಹ ಸೂಕ್ಷ್ಮಗಳನ್ನು ಗಮನಿಸಬೇಕು. ಸಮಾಜಕ್ಕೆ ಸಂದೇಶ ನೀಡುವ ಚಿತ್ರಗಳನ್ನು ನೀಡುವ ಜತೆಗೆ ಅವರಿಂದಾಗಿಯೇ ತೊಂದರೆಗೆ ಸಿಲುಕಿದವರ ನೆರವಿಗೂ ಧಾವಿಸುವುದಿಲ್ಲ ಎನ್ನುವುದು ಎಷ್ಟು ಸರಿ ಎನ್ನುವುದು ಪ್ರಶ್ನೆ.

ಕಾನೂನಿನ ಅಡಿಯಲ್ಲಿ ಎಲ್ಲರೂ ಶಿಕ್ಷೆಯನ್ನು ಅನುಭವಿಸಲೇಬೇಕು. ಇದರ ನಡುವೆಯೂ ಸಾಮಾಜಿಕ ಹೊಣೆಗಾರಿಕೆ ಎನ್ನುವುದು ಎಲ್ಲರಿಗೂ ಇದ್ದೇ ಇರುತ್ತದೆ. ಅದನ್ನು ಯಾವಾಗಲೂ ಮರೆಯಬಾರದು. ಸಂತ್ರಸ್ತೆಯ ಕುಟುಂಬದೊಂದಿಗೆ ಚಿತ್ರರಂಗ ನಿಂತು ನ್ಯಾಯ ದೊರಕಿಸಿಕೊಡಬೇಕು ಎಂದು ಹೇಳಿದರು.

ಕೆಲವೊಮ್ಮೆ ಇಂತಹ ಚಿತ್ರಗಳಿಗೆ ರಾಷ್ಟ್ರೀಯ ಪುರಸ್ಕಾರ ನೀಡಲಾಗುತ್ತದೆ. ಅದೇ ಸಾಮಾಜಿಕ ಸಂದೇಶ ಸಾರಿದ ತಮಿಳಿನಲ್ಲಿ ಸೂರ್ಯ ಅಭಿನಯದ ಚಿತ್ರ ಜೈ ಭೀಮ್. ಅಲ್ಲಿ ಅವರು ಹಿಂದುಳಿದ ಕುಟುಂಬಕ್ಕೆ ನ್ಯಾಯಕ್ಕಾಗಿ ಹೋರಾಡುವ ವಕೀಲರಾಗಿ ನಟಿಸಿದ್ದಾರೆ. ಅದು ಎಷ್ಟು ಪರಿಣಾಮ ಬೀರಿದೆ. ಆ ಚಿತ್ರಕ್ಕೆ ಹಾಗೂ ನಟನೆಗೆ ರಾಷ್ಟ್ರೀಯ ಪುರಸ್ಕಾರ ಸಿಗುವುದಿಲ್ಲ ಎನ್ನುವುದನ್ನು ಹೇಗೆ ನಾವು ವ್ಯಾಖ್ಯಾನಿಸಬೇಕು ಎಂಬುದು ಸೀತಕ್ಕ ಪ್ರಶ್ನೆ.

ಡಿಸೆಂಬರ್ 4ರಂದು ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದಲ್ಲಿ ‘ಪುಷ್ಪ 2’ ಸಿನಿಮಾ ಪ್ರದರ್ಶನದ ಸಮಯದಲ್ಲಿ ಕಾಲ್ತುಳಿತ ಸಂಭವಿಸಿದೆ. ಈ ಘಟನೆಯಲ್ಲಿ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದರು. ಅವರ ಮಗ ಶ್ರೀತೇಜ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ರೇವತಿ ಕುಟುಂಬಕ್ಕೆ ಪುಷ್ಪ ಚಿತ್ರತಂಡ 2 ಕೋಟಿ ರೂಪಾಯಿ ಪರಿಹಾರ ಘೋಷಿಸಿದೆ. ನಾಯಕ ಅಲ್ಲು ಅರ್ಜುನ್ 1 ಕೋಟಿ, ನಿರ್ದೇಶಕ ಸುಕುಮಾರ್ 50 ಲಕ್ಷ ಮತ್ತು ಮೈತ್ರಿ ಮೂವಿ ಮೇಕರ್ಸ್ 50 ಲಕ್ಷ ರೂ. ನೀಡಲು ಮುಂದಾಗಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀತೇಜ್ ಅವರನ್ನು ಅಲ್ಲು ಅರವಿಂದ್ ಭೇಟಿ ಮಾಡಿದ್ದಾರೆ. ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷ ದಿಲ್ ರಾಜು ಅವರಿಗೆ 2 ಕೋಟಿ ರೂ.ಗಳ ಚೆಕ್ ಹಸ್ತಾಂತರಿಸಿದ್ದೇನೆ ಎಂದು ಅಲ್ಲು ಅರವಿಂದ್ ಹೇಳಿದ್ದಾರೆ. ಈ ಮೂಲಕ ಸಚಿವೆ ಕಟು ಟೀಕೆ ಬಳಿಕ ಅರ್ಲು ಅರ್ಜುನ್‌ ಹಾಗೂ ಅವರ ಅಭಿಮಾನಿಗಳು ಸಂತ್ರಸ್ತೆ ಕುಟುಂಬಕ್ಕೆ ನೆರವಾಗಿದ್ದಾರೆ.

Whats_app_banner