OTT Updates: ಫೆಬ್ರವರಿಯಲ್ಲಿ ಸಾಲು ಸಾಲ ಸಿನಿಮಾ ಒಟಿಟಿಗೆ; ಪುಷ್ಪ 2, ಗೇಮ್ ಚೇಂಜರ್ ಹಾಗೂ ಇನ್ನೂ ಹಲವು
OTT Updates: ಫೆಬ್ರವರಿಯಲ್ಲಿ ಸಾಲು ಸಾಲು ಸಿನಿಮಾಗಳು ಒಟಿಟಿಗೆ ಪ್ರವೇಶಿಸಲಿವೆ. ತೆರೆಯ ಮೇಲೆ ಹಿಟ್ ಆದ ಸಿನಿಮಾಗಳು ಒಟಿಟಿಯಲ್ಲೂ ಸದ್ದು ಮಾಡುವ ಸಾಧ್ಯತೆ ಇದೆ. ಪುಷ್ಪ 2, ಗೇಮ್ ಚೇಂಜರ್, ಡಾಕು ಮಹರಾಜ್ ಹಾಗೂ ಇನ್ನೂ ಹಲವು ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.

OTT Updates February: 2024ರ ಅಂತ್ಯದಲ್ಲಿ ಬಿಡುಗಡೆಯಾದ ಕೆಲ ಚಿತ್ರಗಳು ಒಟಿಟಿ ಪ್ರವೇಶಿಸಲು ಸಿದ್ಧವಾಗಿವೆ. ಜನವರಿ ತಿಂಗಳಿನಲ್ಲಿ ಕೆಲವು ಸಣ್ಣ ಸಿನಿಮಾಗಳು ಮಾತ್ರ ಒಟಿಟಿಯಲ್ಲಿ ಬಿಡುಗಡೆಯಾಗಿದ್ದವು. ಆದರೆ, ಈ ತಿಂಗಳಿನಲ್ಲಿ ಅಂದರೆ ಫೆಬ್ರವರಿಯಲ್ಲಿ ಬಿಗ್ ಬಜೆಟ್ ಸಿನಿಮಾಗಳನ್ನೂ ಸಹ ನೀವು ಒಟಿಟಿಯಲ್ಲಿ ವೀಕ್ಷಿಸಬಹುದು. ಆ ಸಿನಿಮಾಗಳು ಯಾವವು? ಎಂಬುದನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ. ಬ್ಲಾಕ್ಬಸ್ಟರ್ ಸಿನಿಮಾ ‘ಪುಷ್ಪ 2 ದಿ ರೂಲ್’ ಸೇರಿದಂತೆ ಸಂಕ್ರಾಂತಿ ಸಮಯದಲ್ಲಿ ಬಿಡುಗಡೆಯಾದ ಚಿತ್ರಗಳೂ ಸಹ ಮುಂದಿನ ತಿಂಗಳು ಒಟಿಟಿಗೆ ಪಾದಾರ್ಪಣೆ ಮಾಡಲಿವೆ.
ಪುಷ್ಪ 2: ದಿ ರೂಲ್
ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಅಭಿನಯದ ಬಿಗ್ ಬಜೆಟ್ ಸಿನಿಮಾ ‘ಪುಷ್ಪ 2: ದಿ ರೂಲ್’ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ಹಲವು ದಾಖಲೆಗಳನ್ನು ನಿರ್ಮಿಸಿದೆ. ಸುಕುಮಾರ್ ನಿರ್ದೇಶನದ ಈ ಚಿತ್ರವು ಕಳೆದ ವರ್ಷ ಡಿಸೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಈಗಾಗಲೇ ಸ್ಟ್ರೀಮಿಂಗ್ ಹಕ್ಕನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ. ಫೆಬ್ರವರಿ ಮೊದಲ ವಾರದಲ್ಲಿ ಈ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.
ಗೇಮ್ ಚೇಂಜರ್
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ‘ಗೇಮ್ ಚೇಂಜರ್ ’ ಜನವರಿ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಶಂಕರ್ ನಿರ್ದೇಶನದ ಈ ಬಿಗ್ ಬಜೆಟ್ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. 'ಗೇಮ್ ಚೇಂಜರ್' ಒಂದು ಆಕ್ಷನ್ ಸಿನಿಮಾ ಆಗಿದ್ದು ಜನರ ನಿರೀಕ್ಷೆಯನ್ನು ಪೂರೈಸುವಲ್ಲಿ ಅಷ್ಟು ಯಶಸ್ವಿಯಾಗಿಲ್ಲ. ಇದುವರೆಗೆ ಬಿಡುಗಡೆಯ ದಿನಾಂಕದ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯೂ ಲಭ್ಯವಾಗಿಲ್ಲ.
ಸಂಕ್ರಾಂತಿ ವಸ್ತುನ್ನಂ
ನಿರೀಕ್ಷೆಯನ್ನೂ ಮೀರಿ ಉತ್ತಮ ಕಲೆಕ್ಷನ್ ಮಾಡಿದ ಸಿನಿಮಾ 'ಸಂಕ್ರಾಂತಿ ವಸ್ತುನ್ನಂ' ವಿಕ್ಟರಿ ವೆಂಕಟೇಶ್ ಅಭಿನಯದ ಈ ಸಿನಿಮಾ ಸಾಕಷ್ಟು ಸದ್ದು ಮಾಡಿದೆ. ಜನವರಿ 14ರಂದು ಈ ಸಿನಿಮಾ ಬಿಡುಗಡೆಯಾಗಿದ್ದು ವೀಕ್ಷಕರು ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ಅನಿಲ್ ರವಿಪುಡಿ ನಿರ್ದೇಶನದ ಈ ಸಿನಿಮಾ ಕುಟುಂಬದವರೆಲ್ಲ ಒಟ್ಟಾಗಿ ಕುಳಿತು ನೋಡಬಹುದಾದ ಸಿನಿಮಾ ಆಗಿದೆ. ಜೀ5 ಒಟಿಟಿಯಲ್ಲಿ ಈ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ. ಈಗಾಗಲೇ ಒಟಿಟಿ ಹಕ್ಕನ್ನು ತನ್ನದಾಗಿಸಿಕೊಂಡಿದೆ.
ಡಾಕು ಮಹರಾಜ್
ನಂದಮೂರಿ ಬಾಲಕೃಷ್ಣ ಅಭಿನಯದ ಸಿನಿಮಾ ‘ಡಾಕು ಮಹರಾಜ್’ ಜನವರಿ 12ರಂದು ಥಿಯೇಟರ್‍ಗಳಲ್ಲಿ ಬಿಡುಗಡೆಯಾಗಿದೆ. 130 ಕೋಟಿಗಿಂತಲೂ ಅಧಿಕ ಸಂಪಾದನೆ ಮಾಡಿದೆ. ಈ ಸಿನಿಮಾವನ್ನು ಬಾಬಿ ಕೊಲ್ಲಿ ನಿರ್ದೇಶಿಸಿದ್ದಾರೆ. ಈ ಸಿನಿಮಾ ಫೆಬ್ರವರಿಯಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಸಿನಿಮಾದ "ದಬಿಡಿ ದಿಬಿಡಿ' ಹಾಡು ಬಹಳ ವೈರಲ್ ಆಗಿತ್ತು. ನಟ ಬಾಲಕೃಷ್ಣ ಈ ಹಾಡಿಗಾಗಿ ಮಾಡಿದ ನೃತ್ಯದಿಂದ ತುಂಬಾ ಟೀಕೆಗೊಳಪಟ್ಟಿದ್ದರು.
ಕೋಬಾಲಿ ಸಿನಿಮಾ
'ಕೋಬಾಲಿ' ಒಂದು ರಿವೇಂಜ್ ಆಕ್ಷನ್ ಥ್ರಿಲ್ಲರ್ ಸಿನಿಮಾ. ಈ ಸಿನಿಮಾ ಕೂಡ ಫೆಬ್ರವರಿಯಲ್ಲಿ ಒಟಿಟಿಗೆ ಪ್ರವೇಶಿಸಲಿದೆ. ಫೆಬ್ರವರಿ 4ರಂದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‍ನಲ್ಲಿ ಪ್ರಸಾರವಾಗಲಿದೆ. ಈ ಸಿನಿಮಾದಲ್ಲಿ ರವಿಪ್ರಕಾಶ್, ಶ್ಯಾಮಲಾ, ರಾಕಿ ಸಿಂಗ್ ಮತ್ತು ವೆಂಕಟ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾವನ್ನು ರೇವಂತ್ ಲೇವಕ ನಿರ್ದೇಶಿಸಿದ್ದಾರೆ.
