Pushpa 2 OTT: ಈ ವಿಚಾರದಲ್ಲಿ ಮತ್ತೆ ಕನ್ನಡಿಗರನ್ನು ಕಡೆಗಣಿಸಿದ ನೆಟ್‌ಫ್ಲಿಕ್ಸ್, ಪುಷ್ಪ 2 ದಿ ರೂಲ್ ಚಿತ್ರತಂಡ! ಹೀಗಿದೆ ಕಾರಣ
ಪುಷ್ಪ 2 ದಿ ರೂಲ್ ಇದೀಗ ಒಟಿಟಿಗೆ ಪ್ರವೇಶಿಸಿದೆ. ಮೂಲ ತೆಲುಗು ಜತೆಗೆ ತಮಿಳು, ಮಲಯಾಳಂ ಮತ್ತು ಹಿಂದಿ ಅವತರಣಿ ಮಾತ್ರ ವೀಕ್ಷಣೆಗೆ ಲಭ್ಯವಿದೆ. ಆದರೆ, ಕನ್ನಡ ಅವತರಣಿಕೆ ಮಾತ್ರ ಇನ್ನೂ ಬಿಡುಗಡೆ ಆಗಿಲ್ಲ.

Pushpa 2 OTT: ಪುಷ್ಪ 2 ಇದೀಗ ಒಟಿಟಿ ಅನ್ನೋ ಬೃಹತ್ ಪುರವನ್ನು ಪ್ರವೇಶಿಸಿದೆ. ಮೂಲ ತೆಲುಗು ಜತೆಗೆ ತಮಿಳು, ಮಲಯಾಳಂ ಮತ್ತು ಹಿಂದಿ ಅವತರಣಿಕೆ ಮಾತ್ರ ವೀಕ್ಷಣೆಗೆ ಲಭ್ಯವಿದೆ. ಆದರೆ, ಕನ್ನಡ ಅವತರಣಿಕೆಗೆ ಮಾತ್ರ ಇನ್ನೂ ಬಿಡುಗಡೆ ಆಗಿಲ್ಲ. ಈ ಮೂಲಕ ಮತ್ತೆ ಪುಷ್ಪ ತಂಡ ಮತ್ತು ನೆಟ್‌ಫ್ಲಿಕ್ಸ್ ಸಂಸ್ಥೆ ಕನ್ನಡ, ಕನ್ನಡಿಗರನ್ನು ಕಡೆಗಣಿಸಿತೇ ಎಂಬ ಚರ್ಚೆ ಇದೀಗ ಶುರುವಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡ ನೆಟ್‌ಫ್ಲಿಕ್ಸ್ ಸಂಸ್ಥೆ, ಶೀಘ್ರದಲ್ಲಿ ಕನ್ನಡ ಅವತರಣಿಗೆ ವೀಕ್ಷಣೆಗೆ ಸಿಗಲಿದೆ ಎಂದಿದೆ. ಆದರೆ, ಇದರ ಹಿಂದಿನ ಉದ್ದೇಶ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನೆಟ್‌ಫ್ಲಿಕ್ಸ್‌ನ ಈ ನಿರ್ಧಾರಕ್ಕೆ ಸದ್ಯ ಕರುನಾಡಿನಲ್ಲಿ ಅಸಮಾಧಾನದ ಹೊಗೆ ಏಳುತ್ತಿದೆ. ಕೆಲವರು, ಕನ್ನಡ ಅವತರಣಿಕೆಗೆ ಪಟ್ಟು ಹಿಡಿದರೆ, ಇನ್ನು ಕೆಲವರು ಟೀಕೆಗಳನ್ನು ಮುಂದುವರಿಸಿದ್ದಾರೆ.
ಕಳೆದ ವರ್ಷದ ಬಹುನಿರೀಕ್ಷಿತ ಪುಷ್ಪ 2; ದಿ ರೂಲ್ ಸಿನಿಮಾ ಟಾಲಿವುಡ್ ಮಾತ್ರವಲ್ಲದೆ, ಭಾರತೀಯ ಚಿತ್ರರಂಗದಲ್ಲಿಯೇ ಹೊಸ ದಾಖಲೆ ಬರೆದಿದೆ. ಕಲೆಕ್ಷನ್ ವಿಚಾರದಲ್ಲಿ ಸಾವಿರಾರು ಕೋಟಿ ಬಾಚಿಕೊಂಡ ಈ ಸಿನಿಮಾ, ಈಗ ಅಂದುಕೊಂಡಂತೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 60 ಪ್ಲಸ್ ದಿನದ ಬಳಿಕ ಒಟಿಟಿ ಪ್ರವೇಶಿಸಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಮುಖ್ಯಭೂಮಿಕೆಯಲ್ಲಿ ನಟಿಸಿದ ಈ ಸಿನಿಮಾವನ್ನು ಸುಕುಮಾರ್ ನಿರ್ದೇಶಿಸಿದರೆ, ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಾಣ ಮಾಡಿತ್ತು.
ಕಲೆಕ್ಷನ್‌ನಲ್ಲಿ ದಾಖಲೆ
ಪುಷ್ಪ 2 ಈಗಾಗಲೇ ಸಾಕಷ್ಟು ದಾಖಲೆಗಳನ್ನು ಸೃಷ್ಟಿಸಿದೆ. ಈ ಸಿನಿಮಾ ಹಿಂದಿಯಲ್ಲಿ 800 ಕೋಟಿ ರೂ.ಗಳ ಕಲೆಕ್ಷನ್ ಮಾಡಿದ್ದೇ ದೊಡ್ಡ ಇತಿಹಾಸ. ಬಾಲಿವುಡ್ ನಲ್ಲಿ ಸಾರ್ವಕಾಲಿಕ ದಾಖಲೆಯಲ್ಲಿ ಇದೂ ಒಂದಾಗಿದೆ. ಹಿಂದಿಯಲ್ಲಿಯೇ ಅಲ್ಲಿನ ಯಾವುದೇ ನಟ ಇಷ್ಟೊಂದು ಕಲೆಕ್ಷನ್ ಗಡಿ ಮುಟ್ಟಿದ ಉದಾಹರಣೆ ಇಲ್ಲ. ಒಟ್ಟಾರೆ ಕಲೆಕ್ಷನ್ ನೋಡುವುದಾದರೆ, ಪುಷ್ಪ 2 ಸಿನಿಮಾ ಈಗಾಗಲೇ 1,830 ಕೋಟಿ ರೂ.ಗಳ ಒಟ್ಟು ಮೊತ್ತವನ್ನು ದಾಟಿದೆ. ಬಾಹುಬಲಿ 2 ಮತ್ತು ಆರ್‌ಆರ್‌ಆರ್ ಚಿತ್ರದ ಗಳಿಕೆಯನ್ನು ಹಿಂದಿಕ್ಕಿ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೊರ ಹೊಮ್ಮಿದೆ ಪುಷ್ಪ 2.
ಒಟಿಟಿಗೆ ಆಗಮಿಸಿದ ಪುಷ್ಪ 2
ಕಳೆದ ವರ್ಷ ಡಿಸೆಂಬರ್ 5 ರಂದು ಪುಷ್ಪ 2 ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇದೀಗ 65 ದಿನಗಳ ಕಾಲ ಥಿಯೇಟರ್ ರನ್ ಮುಗಿಸಿ ಒಟಿಟಿಗೆ ಆಗಮಿಸಿದೆ. ಇಂದು ಮಧ್ಯರಾತ್ರಿಯಿಂದಲೇ ಪುಷ್ಪ 2 ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಪುಷ್ಪ 2 ರೂಲ್ ಚಿತ್ರವನ್ನು ಒಟಿಟಿಯಲ್ಲಿ ವೀಕ್ಷಿಸಬಹುದು. ಒಟಿಟಿಯಲ್ಲಿ ಪುಷ್ಪ 2 ಸಿನಿಮಾ, ಬರೋಬ್ಬರಿ 3 ಗಂಟೆ 44 ನಿಮಿಷಗಳ ರನ್ ಟೈಮ್‌ನೊಂದಿಗೆ ಸ್ಟ್ರೀಮಿಂಗ್ ಆಗುತ್ತಿದೆ.
ದಾಖಲೆ ಮೊತ್ತಕ್ಕೆ ಒಟಿಟಿ ಹಕ್ಕುಗಳು ಸೇಲ್!
ಪುಷ್ಪ 2 ನ ಒಟಿಟಿ ಹಕ್ಕುಗಳನ್ನು ನೆಟ್‌ಪ್ಲಿಕ್ಸ್ ಸಂಸ್ಥೆ ಭಾರಿ ಬೆಲೆಗೆ ಖರೀದಿಸಿದೆ. ಅಮೆಜಾನ್ ಒಟಿಟಿಯಿಂದ ತೀವ್ರ ಸ್ಪರ್ಧೆಯ ಹೊರತಾಗಿಯೂ, ಪುಷ್ಪ 2 ಚಿತ್ರದ ಒಟಿಟಿ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಸಂಸ್ಥೆ ಬರೋಬ್ಬರಿ 270 ಕೋಟಿ ರೂ.ಗೆ ಪಡೆದುಕೊಂಡಿದೆ ಎನ್ನಲಾಗುತ್ತಿದೆ. ಅಮೆಜಾನ್ ಪ್ರೈಮ್ ವಿಡಿಯೋ 2021ರಲ್ಲಿ ಪುಷ್ಪ: ದಿ ರೈಸ್ ಚಿತ್ರದ ಒಟಿಟಿ ಹಕ್ಕುಗಳನ್ನು ಪಡೆದಿತ್ತು. ಇದೀಗ ಇವೆರಡರ ಸ್ಪರ್ಧೆಯಲ್ಲಿ ಪಾರ್ಟ್ 2 ನೆಟ್‌ಫ್ಲಿಕ್ಸ್ ಪಾಲಾಗಿದೆ.
ಪುಷ್ಪ 2 ಚಿತ್ರದಲ್ಲಿ ಅಲ್ಲು ಅರ್ಜುನ್‌ಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿದ್ದಾರೆ. ಶ್ರೀಲೀಲಾ ಐಟಂ ಹಾಡಿನಲ್ಲಿ ಬಳುಕಿದರೆ, ಫಹಾದ್ ಫಾಸಿಲ್, ರಾವ್ ರಮೇಶ್, ಜಗಪತಿ ಬಾಬು, ಅನಸೂಯಾ, ಸುನಿಲ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಮತ್ತು ಬಂಗಾಳಿ ಭಾಷೆಗಳಲ್ಲಿ ಬಿಡುಗಡೆಯಾದ ಪುಷ್ಪ 2 ಸಿನಿಮಾ ಎಲ್ಲ ಭಾಷೆಗಳಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಪುಷ್ಪ 2 ಕಲೆಕ್ಷನ್ ತೆಲುಗುಗಿಂತ ಹಿಂದಿಯಲ್ಲಿ ಅಧಿಕ.
