Allu Arjun: ಬಂಧನದ ಭೀತಿಯಿಂದ ಪಾರಾದ ಪುಷ್ಪ ನಟ; ಅಲ್ಲು ಅರ್ಜುನ್‌ಗೆ ರೆಗ್ಯೂಲರ್ ಬೇಲ್ ಮಂಜೂರು
ಬಂಧನದ ಭೀತಿಯಿಂದ ಪಾರಾದ ಪುಷ್ಪ ನಟ ಅಲ್ಲು ಅರ್ಜುನ್‌ಗೆ ರೆಗ್ಯೂಲರ್ ಬೇಲ್ ದೊರೆತಿದೆ. ಡಿಸೆಂಬರ್ 4 ರಂದು ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತ ಉಂಟಾಗಿತ್ತು. ಅಂದು ನಡೆದ ದುರ್ಘಟನೆಗೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಬಂಧನವಾಗಿತ್ತು.
Allu Arjun: ಡಿಸೆಂಬರ್ 4 ರಂದು ಸಂಧ್ಯಾ ಥಿಯೇಟರ್‌ನಲ್ಲಿ ಪುಷ್ಪ 2 ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿತ್ತು. ಅದೇ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತರಾಗಿದ್ದರು. ಇದೇ ಕೇಸ್‌ನಲ್ಲಿ ನಟ ಅಲ್ಲು ಅರ್ಜುನ್ ಅವರನ್ನು ಡಿಸೆಂಬರ್ 13ರಂದು ಬಂಧಿಸಲಾಗಿತ್ತು. ಒಂದು ರಾತ್ರಿ ಜೈಲಿನಲ್ಲಿ ಕಳೆದಿದ್ದ ಅವರನ್ನು 4ವಾರಗಳ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ ಈಗ ಅಲ್ಲು ಅರ್ಜುನ್ ಹಾಗೂ ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ದೊರೆತಿದೆ.
ನಾಲ್ಕು ವಾರಗಳ ಕಾಲ ಮಾತ್ರ ಸಿಕ್ಕಿದ್ದ ಮಧ್ಯಂತರ ಜಾಮೀನಿನಲ್ಲಿ ಅಲ್ಲು ಅರ್ಜುನ್ ಹೊರಗಿದ್ದರು. ಆದರೆ ಈಗ ಅವರಿಗೆ ರೆಗ್ಯೂಲರ್ ಜಾಮೀನು ಸಿಕ್ಕಿದೆ. ಇಂದು (ಜನವರಿ 3) ಹೈದರಾಬಾದ್‌ನ ನಾಂಪಲ್ಲಿ ನ್ಯಾಯಾಲಯವು ಅಲ್ಲು ಅರ್ಜುನ್‌ಗೆ ರೆಗ್ಯೂಲರ್ ಜಾಮೀನು ನೀಡಿದೆ. ತಲಾ 50,000 ರೂ.ಗಳ ಎರಡು ಶ್ಯೂರಿಟಿಗಳನ್ನು ಒದಗಿಸುವಂತೆ ಸೂಚನೆ ನೀಡಿದೆ. ಎರಡನೇ ಹೆಚ್ಚುವರಿ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಧೀಶರು ಭಾನುವಾರ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಸೂಚಿಸಿದ್ದಾರೆ ಎಂದು ಅಲ್ಲು ಅರ್ಜುನ್ ಪರ ವಕೀಲ ಅಶೋಕ್ ರೆಡ್ಡಿ ತಿಳಿಸಿದ್ದಾರೆ.
ಬಂಧಿಸಿದ್ದು ಯಾಕೆ?
ಅರ್ಜುನ್ ಅವರನ್ನು ನೋಡಲು ಥಿಯೇಟರ್‌ನಲ್ಲಿ ಭಾರಿ ಜನಸಮೂಹ ಜಮಾಯಿಸಿದ ಕಾರಣದಿಂದಲೇ ಮಹಿಳೆ ಮೃತಳಾಗಿದ್ದಾಳೆ ಎಂಬ ಆರೋಪದಡಿ ಬಂಧನವಾಗಿತ್ತು. ಅಲ್ಲು ಅರ್ಜುನ್ ಬಂದ ಕಾರಣದಿಂದಾಗಿ ಅಲ್ಲಿ ಕಾಲ್ತುಳಿತ ಉಂಟಾಗಿತ್ತು ಎಂಬುದು ಅವರನ್ನು ಬಂಧಿಸಲು ನೀಡಿದ ಕಾರಣವಾಗಿತ್ತು. ಯಾವುದೇ ಮುಂಜಾಗ್ರತಾ ಕ್ರಮವನ್ನು ಅನುಸರಿಸದೇ ಅಲ್ಲು ಅರ್ಜುನ್ ಬರಬಾರದಿತ್ತು ಎಂದು ಹೇಳಲಾಗಿತ್ತು. ಡಿಸೆಂಬರ್ 21 ರಂದು ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕೂಡ ಅಲ್ಲು ಅರ್ಜುನ್ ಆ ರೀತಿ ಮಾಡಿರುವುದರ ವಿರುದ್ಧವಾಗಿ ಮಾತನಾಡಿದ್ದರು. ಹೀಗೆ ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಎಸಿಪಿ ರಮೇಶ್ ಕುಮಾರ್ ನೇತೃತ್ವದ ಹಿರಿಯ ಪೊಲೀಸ್ ಅಧಿಕಾರಿಗಳು ಅಲ್ಲು ಅರ್ಜುನ್ ಅವರನ್ನು ಅವರ ವಕೀಲರೊಂದಿಗೆ ಪ್ರತ್ಯೇಕ ಕೋಣೆಗೆ ಕರೆದೊಯ್ದು ಪ್ರಶ್ನೆಗಳನ್ನು ಕೇಳಿದ್ದರು.