ಡಾ. ರಾಜ್‌ಕುಮಾರ್ ಹೊರತುಪಡಿಸಿ, ಕನ್ನಡದ ಬೇರಾವ ನಟರಿಗೂ ದಕ್ಕದ ಈ ಶ್ರೇಯ ಈಗ ಅಲ್ಲು ಅರ್ಜುನ್ ಮುಡಿಗೆ! ಏನದು?
Dr Rajkumar: ಅಲ್ಲು ಅರ್ಜುನ್ ನಾಯಕನಾಗಿ ನಟಿಸಿರುವ ಪುಷ್ಪ 2 ಸಿನಿಮಾ ಈಗಾಗಲೇ ದೊಡ್ಡ ಮಟ್ಟದ ಹೈಪ್ ಸೃಷ್ಟಿಸಿದೆ. ಡಿಸೆಂಬರ್ 5ರಂದು ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವ ಈ ಸಿನಿಮಾ, ಕರ್ನಾಟಕದಲ್ಲಿಯೂ ಕ್ರೇಜ್ ಸೃಷ್ಟಿಸಿಕೊಂಡಿದೆ. ಜತೆಗೆ ಈ ಹಿಂದಿನ ಅಣ್ಣಾವ್ರ ದಾಖಲೆಯೊಂದನ್ನೂ ಈ ಸಿನಿಮಾ ಮುರಿದಿದೆ.
Pushpa 2 The Rule: ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಚಿತ್ರವು ಇದೇ ಡಿಸೆಂಬರ್ 05ರಂದು ಜಗತ್ತಿನಾದ್ಯಂತ ಆರು ಭಾಷೆಗಳಲ್ಲಿ 12 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಕರ್ನಾಟಕದಲ್ಲೇ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು, ಈ ಪೈಕಿ ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದ ಮೂರು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಆಗುತ್ತಿರುವುದು ವಿಶೇಷ.
ಹೌದು, ಮೆಜೆಸ್ಟಿಕ್‍ನ ಅನುಪಮ, ತ್ರಿವೇಣಿ ಮತ್ತು ಸಂತೋಷ್ ಚಿತ್ರಮಂದಿರಗಳಲ್ಲಿ ‘ಪುಷ್ಪ 2’ ಬಿಡುಗಡೆಯಾಗುತ್ತಿದೆ. 100 ಮೀಟರ್ ಅಳತೆಯಲ್ಲಿ ಈ ಮೂರು ಚಿತ್ರಮಂದಿರಗಳಿದ್ದು, ಈ ಮೂರೂ ಚಿತ್ರಮಂದಿರಗಳಲ್ಲಿ ‘ಪುಷ್ಪ 2’ ಚಿತ್ರದ ಬೇರೆ ಭಾಷೆಯ ಅವತರಣಿಕೆಗಳು ಬಿಡುಗಡೆಯಾಗುತ್ತಿವೆ. ಇದರ ಜೊತೆಗೆ ಭೂಮಿಕಾ ಚಿತ್ರಮಂದಿರದಲ್ಲೂ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಅಣ್ಣಾವ್ರ ದಾಖಲೆ ಮುರಿದ ಅಲ್ಲು ಅರ್ಜುನ್
ಮೆಜೆಸ್ಟಿಕ್ ಪ್ರದೇಶದ ಎರಡು ಚಿತ್ರಮಂದಿರಗಳಲ್ಲಿ ಒಂದೇ ಚಿತ್ರ ಬಿಡುಗಡೆ ಆಗುವುದು ಹೊಸದೇನಲ್ಲ. ಇದಕ್ಕೂ ಮೊದಲು ಡಾ. ರಾಜಕುಮಾರ್ ಅಭಿನಯದ ಚಿತ್ರಗಳೇ ಎರಡೆರೆಡು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ದಾಖಲೆಗಳಿವೆ. ಆದರೆ, ತೆಲುಗು ಚಿತ್ರವೊಂದು ಬೆಂಗಳೂರಿನ ಒಂದೇ ರಸ್ತೆಯ ಮೂರು ಪ್ರಮುಖ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿರುವುದು ಇದೇ ಮೊದಲು.
ಹೊರ ರಾಜ್ಯಗಳಲ್ಲಿ ಬುಕಿಂಗ್ ಶುರು
ಇನ್ನು, ‘ಪುಷ್ಪ 2’ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್, ಶುಕ್ರವಾರ ನಾಲ್ಕು ರಾಜ್ಯಗಳಲ್ಲಿ ಶುರುವಾಗಿದೆ. ಕೇರಳ, ಗುಜರಾತ್, ಪಂಜಾಬ್ ಮತ್ತು ದೆಹಲಿಯಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು, ದೇಶದ ಮಿಕ್ಕ ರಾಜ್ಯಗಳಲ್ಲಿ ಇನ್ನಷ್ಟೇ ಶುರುವಾಗಬೇಕಿದೆ. ಈ ಪೈಕಿ ಕೇರಳದಲ್ಲಿ ಮೊದಲ ದಿನದ ಟಿಕೆಟ್‍ಗಳು ಶೇ 60ರಷ್ಟು ಖಾಲಿಯಾಗಿವೆ ಎಂದು ಹೇಳಲಾಗಿದೆ. ದೆಹಲಿ ಎರಡನೇ ಸ್ಥಾನದಲ್ಲಿದ್ದು ಶೇ. 30ರಷ್ಟು ಟಿಕೆಟ್‍ಗಳು ಮಾರಾಟವಾಗಿವೆಯಂತೆ.
ಶೀಘ್ರದಲ್ಲಿ ಕರ್ನಾಟಕದಲ್ಲಿ ಅಡ್ವಾನ್ಸ್ ಬುಕಿಂಗ್ ಶುರು
ಇನ್ನು, ಬೆಂಗಳೂರಿನಲ್ಲಿ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಇನ್ನೂ ಪ್ರಾರಂಭವಾಗಿಲ್ಲ. ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಸದ್ಯದಲ್ಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಪರಭಾಷೆಯ ಚಿತ್ರಗಳು ರಾಜ್ಯದಲ್ಲಿ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದವು. ‘ಪುಷ್ಪ 2’ ಚಿತ್ರವು 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಲಾಗಿದ್ದು, ಈ ಪೈಕಿ ಬೆಂಗಳೂರಿನಲ್ಲಿ ಮೊದಲ ದಿನ 1300ಕ್ಕೂ ಹೆಚ್ಚು ಪ್ರದರ್ಶನಗಳು ಏರ್ಪಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಧನಂಜಯ್, ಫಹಾದ್ ಫಾಸಿಲ್, ಸುನೀಲ್, ಅನುಸೂಯ ಭಾರದ್ವಾಜ್ ಮುಂತಾದವರು ನಟಿಸಿದ್ದು, ಶ್ರೀಲೀಲಾ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಚಿತ್ರಕ್ಕೆ ಸುಕುಮಾರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಿದೆ.
ಸಾವಿರ ಕೋಟಿ ಸರದಾರ
ಗಳಿಕೆ ವಿಚಾರದಲ್ಲಿ ‘ಪುಷ್ಪ 2’ ಚಿತ್ರವು ಬಿಡುಗಡೆಗೂ ಮೊದಲೇ 1000 ಕೋಟಿ ಕ್ಲಬ್ ಸೇರಿದೆ. ಚಿತ್ರದ ವಿತರಣೆ, ಡಿಜಿಟಲ್, ಸ್ಯಾಟಲೈಟ್ ಹಕ್ಕುಗಳಿಂದ 1000 ಕೋಟಿ ರೂ. ಗಳಿಸಿದೆ ಎಂದು ಹೇಳಲಾಗಿದೆ. ಈ ಪೈಕಿ ವಿತರಣೆ ಹಕ್ಕುಗಳಿಂದ ಚಿತ್ರಕ್ಕೆ 640 ಕೋಟಿ ರೂ. ಬಂದರೆ, ಬೇರೆ ಹಕ್ಕುಗಳಿಂದ 425 ಕೋಟಿ ರೂ. ಗಳಿಕೆ ಎಂದು ಹೇಳಲಾಗುತ್ತಿದೆ. ಈ ಪೈಕಿ, ಚಿತ್ರದ ಡಿಜಿಟಲ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ 275 ಕೋಟಿ ರೂ.ಗಳಿಗೆ ಪಡೆದರೆ, ಸ್ಯಾಟಲೈಟ್ ಹಕ್ಕುಗಳು 85 ಕೋಟಿ ರೂ.ಗಳಿಗೆ ಮಾರಾಟವಾಗಿದೆಯಂತೆ. ಸಂಗೀತದ ಹಕ್ಕುಗಳು ದಾಖಲೆಯ 65 ಕೋಟಿ ರೂ.ಗಳಿಗೆ ಮಾರಾಟವಾಗಿದೆ ಎಂಬ ಸುದ್ದಿ ಇದೆ. ಇವೆಲ್ಲವನ್ನೂ ಒಟ್ಟುಗೂಡಿಸಿದರೆ, ಚಿತ್ರ ಬಿಡುಗಡೆಗೂ ಮೊದಲೇ 1000 ಕೋಟಿ ರೂ. ಕ್ಲಬ್‍ಗೆ ಸೇರ್ಪಡೆಯಾಗಿದೆ.
ವರದಿ: ಚೇತನ್ ನಾಡಿಗೇರ್