ಉಪೇಂದ್ರ ಅವರಿಂದ ಸಾಕಷ್ಟು ಕದ್ದಿದ್ದೇನೆ ಎಂದ ‘ಪುಷ್ಪ’ ನಿರ್ದೇಶಕ ಸುಕುಮಾರ್
‘ನಾನೇನಾದರೂ ಉಪೇಂದ್ರ ಅವರ ತರಹ ಕಲ್ಟ್ ಸಿನಿಮಾಗಳನ್ನು ನಿರ್ದೇಶಿಸಿದ್ದರೆ, ಇಷ್ಟೊತ್ತಿಗೆ ಸಂತೋಷದಿಂದ ರಿಟೈರ್ ಆಗಿರುತ್ತಿದ್ದೆ’ ಎಂದು ‘ಪುಷ್ಪ’ ಖ್ಯಾತಿಯ ನಿರ್ದೇಶಕ ಸುಕುಮಾರ್ ಹೇಳಿಕೊಂಡಿದ್ದಾರೆ.

‘ನಾನೇನಾದರೂ ಉಪೇಂದ್ರ ಅವರ ತರಹ ಕಲ್ಟ್ ಸಿನಿಮಾಗಳನ್ನು ನಿರ್ದೇಶಿಸಿದ್ದರೆ, ಇಷ್ಟೊತ್ತಿಗೆ ಸಂತೋಷದಿಂದ ರಿಟೈರ್ ಆಗಿರುತ್ತಿದ್ದೆ’ ಎಂದು ‘ಪುಷ್ಪ’ ಖ್ಯಾತಿಯ ನಿರ್ದೇಶಕ ಸುಕುಮಾರ್ ಹೇಳಿಕೊಂಡಿದ್ದಾರೆ.
ಹೈದರಾಬಾದ್‍ನಲ್ಲಿ ಇತ್ತೀಚೆಗೆ ಅರ್ಜುನ್ ಸರ್ಜಾ ನಿರ್ದೇಶನದ ‘ಸೀತಾ ಪಯಣಂ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಸಮಾರಂಭಕ್ಕೆ ನಟ ಉಪೇಂದ್ರ ಮತ್ತು ಸುಕುಮಾರ್ ಇಬ್ಬರೂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸುಕುಮಾರ್, ಉಪೇಂದ್ರ ಕುರಿತು ಬಹಳ ಒಳ್ಳೆಯ ಮಾತುಗಳನ್ನಾಡಿದ್ದಾರೆ.
‘ಇಡೀ ದೇಶದಲ್ಲಿ ಉಪೇಂದ್ರರ ತರಹ ಇನ್ನೊಬ್ಬ ವಿಲಕ್ಷಣ ನಿರ್ದೇಶಕ ಸಿಗುವುದಿಲ್ಲ. ಒಬ್ಬ ನಿರ್ದೇಶಕ ‘ಎ’, ‘ಓಂ’ ಮತ್ತು ‘ಉಪೇಂದ್ರ’ರಂತಹ ಚಿತ್ರಗಳನ್ನು ಮಾಡಿದ್ದರೆ ಅವರು ರಿಟೈರ್ ಆಗಬಹುದಿತ್ತು. ನಾನೇನಾದರೂ ಅಂತಹ ಸಿನಿಮಾಗಳನ್ನು ನಿರ್ದೇಶಿಸಿದ್ದರೆ, ಖಂಡಿತಾ ರಿಟೈರ್ ಆಗುತ್ತಿದ್ದೆ. ಅಂತಹ ಕಲ್ಟ್ ಚಿತ್ರಗಳವು. ಪ್ರತಿಯೊಬ್ಬ ನಿರ್ದೇಶಕರೂ ಅವರಿಂದ ಪ್ರೇರಣೆಗೊಂಡಿದ್ದಾರೆ. ಇವತ್ತು ನನ್ನ ಚಿತ್ರಗಳ ಚಿತ್ರಗಳೇನಾದರೂ ವಿಭಿನ್ನವಾಗಿದ್ದರೆ, ಅದಕ್ಕೆ ಉಪೇಂದ್ರರ ಚಿತ್ರಗಳೇ ಪ್ರೇರಣೆ. ನಾನು ಆ ಮೂರು ಚಿತ್ರಗಳಿಂದ ಬಹಳ ಪ್ರಭಾವಗೊಂಡಿದ್ದೇನೆ. ಅಲ್ಲಿಂದ ಸಾಕಷ್ಟು ವಿಷಯಗಳನ್ನು ಕದ್ದಿದ್ದೇನೆ’ ಎಂದರು.
ಸುಕುಮಾರ್ ಮಾತುಗಳಿಗೆ ಪ್ರತಿಕ್ರಿಯಿಸಿದ ಉಪೇಂದ್ರ, ‘ನಾನೊಬ್ಬನೇ ಅಲ್ಲ, ಬಹಳಷ್ಟು ನಿರ್ದೇಶಕರು ಸುಕುಮಾರ್ ಅವರ ಅಭಿಮಾನಿಗಳು. ಒಂದು ಕಥೆಯನ್ನು ವಿಭಿನ್ನವಾಗಿ ಕಮರ್ಷಿಯಲ್ ಆಗಿ ಹೇಗೆ ಮಾಡಬೇಕು ಎಂದು ತೋರಿಸಿಕೊಟ್ಟವರು ಅವರು’ ಎಂದರು.
ಇನ್ನು, ಈ ಸಂದರ್ಭದಲ್ಲಿ ಅರ್ಜುನ್ ಸರ್ಜಾ ಕುರಿತು ಮಾತನಾಡಿದ ಉಪೇಂದ್ರ, ‘ನಾನು ಶಾಲೆಯಲ್ಲಿದ್ದಾಗಲೇ ಅರ್ಜುನ್ ಸರ್ಜಾ ಅವರು ಕರ್ನಾಟಕದಲ್ಲಿ ‘ಆ್ಯಕ್ಷನ್ ಕಿಂಗ್’ ಎಂದು ಜನಪ್ರಿಯರಾಗಿದ್ದರು. ಕರಾಟೆಗೆ ಬಹಳ ಜನಪ್ರಿಯರಾಗಿದ್ದರು. ಭಾರತದಲ್ಲಿ ಬ್ರೂಸ್ ಲೀ ಇದ್ದಂತೆ. ಎರಡ್ಮೂರು ಚಿತ್ರಗಳು ಹಿಟ್ ಆಗಿ, ಒಂದು ವರ್ಷ ಸುದ್ದಿಯೇ ಇರಲಿಲ್ಲ. ಅವರು ತಮಿಳಿನಲ್ಲಿ ದೊಡ್ಡ ಆ್ಯಕ್ಷನ್ ಸ್ಟಾರ್ ಆಗಿದ್ದರು. ಆಗಲೇ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದರು. ನಾನು ಕಾಲೇಜಿನಲ್ಲಿದ್ದಾಗಲೇ, ನನಗೆ ಸಂಭಾಷಣೆ ಬರೆಯುವುದಕ್ಕೆ ಅವರು ಆಫರ್ ಕೊಟ್ಟಿದ್ದರು. ನನಗೆ ಅವರು ದೊಡ್ಡ ಪ್ರೇರಣೆಯಾದವರು. ಅವರ ಜೊತೆಗೆ ಈ ವೇದಿಕೆ ಹಂಚಿಕೊಳ್ಳುತ್ತಿರುವುದಕ್ಕೆ ನನಗೆ ಬಹಳ ಹೆಮ್ಮೆ ಆಗುತ್ತಿದೆ. ನನಗೆ ಅಂಥದ್ದೊಂದು ಅವಕಾಶವನ್ನು ನೀಡಿದ್ದಾರೆ. ಅದೇ ರೀತಿ ನನ್ನ ಅಣ್ಣನ ಮಗನಿಗೆ ಈ ಚಿತ್ರದಲ್ಲಿ ನಾಯಕನಾಗುವ ಅವಕಾಶ ನೀಡಿದ್ದಾರೆ’ ಎಂದರು.
‘ಸೀತಾ ಪಯಣಂ’ ಚಿತ್ರದಲ್‍ಲಿ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ನಾಯಕನಾಗಿ ಆಭಿನಯಿಸಿದ್ದು, ಅವರಿಗೆ ನಾಯಕಿಯಾಗಿ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವು ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.
‘ಸೀತಾ ಪಯಣ’ ಚಿತ್ರವನ್ನು ಅರ್ಜುನ್ ಸರ್ಜಾ ನಿರ್ದೇಶಿಸುತ್ತಿರುವುದಷ್ಟೇ ಅಲ್ಲ, ತಮ್ಮ ಶ್ರೀ ರಾಮ್ ಫಿಲಂಸ್ ಇಂಟರ್‍ನ್ಯಾಷನಲ್ ಸಂಸ್ಥೆಯಡಿ ನಿರ್ಮಾಣವನ್ನೂ ಮಾಡುತ್ತಿದ್ದಾರೆ.