ಪರಭಾಷೆ ಚಿತ್ರೋದ್ಯಮದವರಿಗೂ ಪುಟ್ಟಣ್ಣ ಕಣಗಾಲ್‌ ಎಂದರೆ ಬೆರಗು! ಬೇರೆ ಭಾಷೆಗಳಿಗೆ ರಿಮೇಕ್‌ ಆದ ಅವರ ಸಿನಿಮಾಗಳು ಒಂದೆರಡಲ್ಲ; ಸಿನಿಸ್ಮೃತಿ ಅಂಕಣ
ಕನ್ನಡ ಸುದ್ದಿ  /  ಮನರಂಜನೆ  /  ಪರಭಾಷೆ ಚಿತ್ರೋದ್ಯಮದವರಿಗೂ ಪುಟ್ಟಣ್ಣ ಕಣಗಾಲ್‌ ಎಂದರೆ ಬೆರಗು! ಬೇರೆ ಭಾಷೆಗಳಿಗೆ ರಿಮೇಕ್‌ ಆದ ಅವರ ಸಿನಿಮಾಗಳು ಒಂದೆರಡಲ್ಲ; ಸಿನಿಸ್ಮೃತಿ ಅಂಕಣ

ಪರಭಾಷೆ ಚಿತ್ರೋದ್ಯಮದವರಿಗೂ ಪುಟ್ಟಣ್ಣ ಕಣಗಾಲ್‌ ಎಂದರೆ ಬೆರಗು! ಬೇರೆ ಭಾಷೆಗಳಿಗೆ ರಿಮೇಕ್‌ ಆದ ಅವರ ಸಿನಿಮಾಗಳು ಒಂದೆರಡಲ್ಲ; ಸಿನಿಸ್ಮೃತಿ ಅಂಕಣ

ಬೇರೆ ಭಾಷೆಗಳ ನಿರ್ದೇಶಕರು, ಪುಟ್ಟಣ್ಣ ಕಣಗಾಲ್‌ ಅವರ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅವರಿಂದ ಸ್ಫೂರ್ತಿಗೊಂಡು ಚಿತ್ರ ನಿರ್ದೇಶಿಸುತ್ತಿದ್ದರು. ಅದರಂತೆ ಪುಟ್ಟಣ್ಣ ಅವರ ಹಲವು ಚಿತ್ರಗಳು ಬೇರೆ ಭಾಷೆಗಳಿಗೆ ರಿಮೇಕ್‍ ಆಗಿವೆ. ಯಾವ ಚಿತ್ರ, ಯಾವ ಭಾಷೆಗೆ ರಿಮೇಕ್ ಆಗಿದೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ.‌ -ಚೇತನ್‌ ನಾಡಿಗೇರ್ ಸಿನಿಸ್ಮೃತಿ ಅಂಕಣ

ಪರಭಾಷೆ ಚಿತ್ರೋದ್ಯಮದವರಿಗೂ ಪುಟ್ಟಣ್ಣ ಕಣಗಾಲ್‌ ಎಂದರೆ ಬೆರಗು! ಬೇರೆ ಭಾಷೆಗಳಿಗೆ ರಿಮೇಕ್‌ ಆದ ಅವರ ಸಿನಿಮಾಗಳು ಒಂದೆರಡಲ್ಲ; ಸಿನಿಸ್ಮೃತಿ ಅಂಕಣ
ಪರಭಾಷೆ ಚಿತ್ರೋದ್ಯಮದವರಿಗೂ ಪುಟ್ಟಣ್ಣ ಕಣಗಾಲ್‌ ಎಂದರೆ ಬೆರಗು! ಬೇರೆ ಭಾಷೆಗಳಿಗೆ ರಿಮೇಕ್‌ ಆದ ಅವರ ಸಿನಿಮಾಗಳು ಒಂದೆರಡಲ್ಲ; ಸಿನಿಸ್ಮೃತಿ ಅಂಕಣ

Director Puttanna Kanagal Birth Anniversary: ಇಂದು (ಡಿ. 1) ಕನ್ನಡದ ಧೀಮಂತ ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್‍ ಅವರ ಹುಟ್ಟುಹಬ್ಬ. ಪುಟ್ಟಣ್ಣನವರ ಚಿತ್ರಗಳು ಬರೀ ಕನ್ನಡ ಚಿತ್ರರಂಗದಲ್ಲಷ್ಟೇ, ಭಾರತೀಯ ಚಿತ್ರರಂಗದಲ್ಲಿಯೇ ಜನಪ್ರಿಯ. ಬೇರೆ ಭಾಷೆಗಳ ಜನಪ್ರಿಯ ನಿರ್ದೇಶಕರು, ಪುಟ್ಟಣ್ಣನವರ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅವರಿಂದ ಸ್ಫೂರ್ತಿಗೊಂಡು ಚಿತ್ರ ನಿರ್ದೇಶಿಸುತ್ತಿದ್ದರು. ಅದಕ್ಕೆ ಸರಿಯಾಗಿ ಪುಟ್ಟಣ್ಣ ನಿರ್ದೇಶನದ ಹಲವು ಚಿತ್ರಗಳು ಬೇರೆ ಭಾಷೆಗಳಿಗೆ ರಿಮೇಕ್‍ ಆಗಿವೆ. ಯಾವ ಚಿತ್ರ, ಯಾವ ಭಾಷೆಗೆ ರಿಮೇಕ್‌ ಆಗಿದೆ ಎಂಬುದರ ಕುರಿತು ಒಂದು ಅವಲೋಕನ.

ಒಂದು ಕಾಲಕ್ಕೆ ಪುಟ್ಟಣ್ಣ ಕಣಗಾಲ್‍ ಚಿತ್ರಗಳೆಂದರೆ ಬರೀ ರಾಜ್ಯದಲ್ಲಷ್ಟೇ ಅಲ್ಲದೆ, ಬೇರೆ ರಾಜ್ಯಗಳಲ್ಲೂ ಒಂದು ಸಂಚಲನ ಇರುತ್ತಿತ್ತು. ಪುಟ್ಟಣ್ಣ ನಿರ್ದೇಶನದ ಚಿತ್ರಗಳನ್ನು ನೋಡುವುದಕ್ಕೆ ಮದರಾಸಿನಿಂದ ಬೆಂಗಳೂರಿಗೆ ಬರುತ್ತಿದ್ದುದಾಗಿ ಕೆ. ಬಾಲಚಂದರ್, ಕಮಲ್ ಹಾಸನ್‍ ಮುಂತಾದವರು ಹೇಳಿಕೊಂಡಿದ್ದಾರೆ. ಇಲ್ಲಿ ಯಶಸ್ವಿಯಾದ ಅವರ ಚಿತ್ರಗಳು, ಬೇರೆ ಭಾಷೆಗಳಿಗೆ ರೀಮೇಕ್‍ ಆದ ಹಲವು ಉದಾಹರಣೆಗಳಿವೆ. ಬಹುಶಃ ಕನ್ನಡ ನಿರ್ದೇಶಕರ ಪೈಕಿ, ಪುಟ್ಟಣ್ಣ ಕಣಗಾಲ್ ಮತ್ತು ಅವರ ಗುರು ಬಿ.ಆರ್. ಪಂತುಲು ನಿರ್ದೇಶನದ ಚಿತ್ರಗಳು ಅತೀ ಹೆಚ್ಚು ಬೇರೆ ಭಾಷೆಗಳಿಗೆ ರೀಮೇಕ್ ಆಗಿವೆ. ಅದರಲ್ಲೂ ಪಂತುಲು ಅವರು ಸ್ವತಃ ನಿರ್ಮಾಪಕರಾಗಿದ್ದರಿಂದ, ಕನ್ನಡದಲ್ಲಿ ಯಶಸ್ವಿಯಾದ ತಮ್ಮ ಚಿತ್ರಗಳನ್ನು ತಾವೇ ತಮ್ಮ ಪದ್ಮಿನಿ ಪಿಕ್ಚರ್ಸ್ ಮೂಲಕ ಬೇರೆ ಭಾಷೆಗಳಲ್ಲಿ ನಿರ್ಮಿಸಿ- ನಿರ್ದೇಶಿಸುತ್ತಿದ್ದರು. ಪುಟ್ಟಣ್ಣನವರ ವಿಷಯ ಹಾಗಲ್ಲ. ತಮ್ಮ ಕೆಲವು ಜನಪ್ರಿಯ ಚಿತ್ರಗಳನ್ನು ಅವರೇ ಬೇರೆ ಭಾಷೆಗಳಲ್ಲಿ ನಿರ್ಮಿಸಿದರೆ, ಇನ್ನೂ ಕೆಲವು ಚಿತ್ರಗಳನ್ನು ಬೇರೆಯವರು ನಿರ್ದೇಶನ ಮಾಡಿದ್ದಾರೆ.

ಮೊದಲ ಚಿತ್ರ ‘ಬೆಳ್ಳಿ ಮೋಡ’ ಎರಡು ಭಾಷೆಗಳಿಗೆ ರೀಮೇಕ್‍

ಪುಟ್ಟಣ್ಣನವರ ಅತೀ ಮುಖ್ಯವಾದ ಮತ್ತು ಜನಪ್ರಿಯ ಚಿತ್ರಗಳಲ್ಲಿ ಒಂದಾದ ಚಿತ್ರವೆಂದರೆ, ಅದು ಅವರ ಮೊದಲ ನಿರ್ದೇಶನದ ‘ಬೆಳ್ಳಿ ಮೋಡ’. ತ್ರಿವೇಣಿ ವಿರಚಿತ ಕಾದಂಬರಿಯನ್ನಾಧರಿಸಿದ ಈ ಚಿತ್ರದಲ್ಲಿ ಕಲ್ಪನಾ, ಕಲ್ಯಾಣ್‍ ಕುಮಾರ್ ಮುಂತಾದವರು ನಟಿಸಿದ್ದರು. 1967ರಲ್ಲಿ ಬಿಡುಗಡೆಯಾದ ಈ ಚಿತ್ರ ಸಾಕಷ್ಟು ಯಶಸ್ವಿಯಾಗಿ, ಮಲಯಾಳಂನಲ್ಲಿ ‘ಸ್ವಪ್ನಭೂಮಿ’ ಹೆಸರಿನಲ್ಲಿ ಮತ್ತು ತೆಲುಗಿನಲ್ಲಿ ‘ಪಲಮನಸುಲು’ ಎಂಬ ಹೆಸರಿನಲ್ಲಿ ರೀಮೇಕ್‍ ಆಗಿತ್ತು. ಈ ಎರಡೂ ಚಿತ್ರಗಳನ್ನು ಅವರೇ ನಿರ್ದೇಶನ ಮಾಡಿದ್ದರು.

ಕಲ್ಪನಾ ಮಾಡಿದ ಪಾತ್ರಗಳಲ್ಲಿ ವಾಣಿಶ್ರೀ

‘ಬೆಳ್ಳಿ ಮೋಡ’ ಚಿತ್ರದ ನಂತರ ಕಲ್ಪನಾ ಅಭಿನಯದಲ್ಲಿ ಪುಟ್ಟಣ್ಣ ನಿರ್ದೇಶನ ಇನ್ನೊಂದು ಚಿತ್ರ ‘ಕಪ್ಪು ಬಿಳುಪು’. ಆರ್ಯಾಂಭ ಪಟ್ಟಾಭಿ ಅವರ ಕಾದಂಬರಿಯನ್ನಾಧರಿಸಿದ ಈ ಚಿತ್ರದಲ್ಲಿ ಕಲ್ಪನಾ ದ್ವಿಪಾತ್ರಗಳಲ್ಲಿ ಅಭಿನಯಿಸಿದ್ದರು. ಈ ಚಿತ್ರ ಸಹ ತಮಿಳು ಮತ್ತು ತೆಲುಗಿಗೆ ರೀಮೇಕ್‍ ಆಗಿತ್ತು. ತಮಿಳಿನಲ್ಲಿ ‘ಇರುಳುಂ ಓಲಿಯುಂ’ ಹೆಸರಿನಲ್ಲಿ ಮತ್ತು ತೆಲುಗಿನಲ್ಲಿ‘ಇದ್ದರು ಅಮ್ಮಾಯಿಲು’ ಹೆಸರಿನಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. ಎರಡೂ ಚಿತ್ರಗಳನ್ನು ಪುಟ್ಟಣ್ಣ ಕಣಗಾಲ್‍ ಅವರೇ ನಿರ್ದೇಶನ ಮಾಡಿದ್ದರು ಮತ್ತು ಎರಡೂ ಚಿತ್ರಗಳಲ್ಲಿ ವಾಣಿಶ್ರೀ ನಾಯಕಿಯಾಗಿ ಅಭಿನಯಿಸಿದ್ದರು.

ಪರಭಾಷೆಗಳಿಗೆ ರಿಮೇಕ್‌ ಆದ ಪುಟ್ಟಣ್ಣ ಕಣಗಾಲ್‌ ಅವರ ಸಿನಿಮಾಗಳಿವು
ಪರಭಾಷೆಗಳಿಗೆ ರಿಮೇಕ್‌ ಆದ ಪುಟ್ಟಣ್ಣ ಕಣಗಾಲ್‌ ಅವರ ಸಿನಿಮಾಗಳಿವು

ಎರಡು ಚಿತ್ರಗಳು ಮೂರ್ಮೂರು ಭಾಷೆಗಳಲ್ಲಿ ನಿರ್ಮಾಣ

ಈ ಎರಡೂ ಚಿತ್ರಗಳು ಎರಡೆರಡು ಭಾಷೆಗಳಿಗೆ ರೀಮೇಕ್‍ ಆದರೆ, ‘ಗೆಜ್ಜೆ ಪೂಜೆ’ ಚಿತ್ರವಂತೂ ಮೂರು ಭಾಷೆಗಳಿಗೆ ರೀಮೇಕ್‍ ಆಗಿತ್ತು. ಎಂ.ಕೆ. ಇಂದಿರಾ ಅವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದ ಚಿತ್ರದಲ್ಲಿ ಕಲ್ಪನಾ ಅವರೇ ನಟಿಸಿದ್ದರು. ಈ ಚಿತ್ರವು ತೆಲುಗಿಗೆ ‘ಕಲ್ಯಾಣ ಮಂಟಪಂ’, ತಮಿಳಿನಲ್ಲಿ ‘ತಾಳಿಯ ಸಲಂಗೈಯ್ಯ’ ಮತ್ತು ಹಿಂದಿಯಲ್ಲಿ ‘ಆಹಿಸ್ತಾ ಆಹಿಸ್ತಾ’ ಹೆಸರಿನಲ್ಲಿ ರೀಮೇಕ್‍ ಆಗಿತ್ತು. ಮೂರೂ ಚಿತ್ರಗಳನ್ನು ಈ ಬಾರಿ ಆಯಾ ಭಾಷೆಯ ಜನಪ್ರಿಯ ನಿರ್ದೇಶಕರು ನಿರ್ದೇಶನ ಮಾಡಿದ್ದರು. ಕಲ್ಪನಾ ಮಾಡಿದ ಪಾತ್ರಗಳನ್ನು ಕ್ರಮವಾಗಿ ಕಾಂಚನಾ, ವಾಣಿಶ್ರೀ ಮತ್ತು ಪದ್ಮಿನಿ ಕೊಲ್ಹಾಪುರಿ ನಿರ್ವಹಿಸಿದ್ದರು.

ರಿಷಿ ಕಪೂರ್ ಅವರನ್ನು ಚಿತ್ರದುರ್ಗಕ್ಕೆ ಕರೆತಂದ ಪುಟ್ಟಣ್ಣ

‘ಗೆಜ್ಜೆ ಪೂಜೆ’ ತರಹವೇ ಮೂರು ಭಾಷೆಗಳಿಗೆ ರೀಮೇಕ್‍ ಆದ ಇನ್ನೊಂದು ಚಿತ್ರವೆಂದರೆ ಅದು ‘ನಾಗರಹಾವು’. ತ.ರಾ.ಸು ಅವರ ‘ನಾಗರಹಾವು’, ‘ಒಂದು ಗಂಡು ಎರಡು ಹೆಣ್ಣು’ ಮತ್ತು ‘ಸರ್ಪ ಮತ್ಸರ’ ಎಂಬ ಮೂರು ಕಾದಂಬರಿಗಳನ್ನು ಜಂಟಿಯಾಗಿ ಆಧರಿಸಿದ ಈ ಚಿತ್ರ, ಕನ್ನಡದಲ್ಲಿ ದೊಡ್ಡ ಯಶಸ್ಸು ಕಾಣುವುದರ ಜೊತೆಗೆ, ಚಿತ್ರದಲ್ಲಿ ನಟಿಸಿದ ವಿಷ್ಣುವರ್ಧನ್, ಆರತಿ, ಅಂಬರೀಶ್‍ ಮುಂತಾದವರಿಗೆ ದೊಡ್ಡ ಬ್ರೇಕ್‍ ನೀಡುವುದರ ಜೊತೆಗೆ ಹಿಂದಿ, ತೆಲುಗು ಮತ್ತು ತಮಿಳಿಗೆ ರೀಮೇಕ್ ಆಗಿತ್ತು. ಈ ಪೈಕಿ ಹಿಂದಿಯ ‘ಜಹ್ರೀಲಾ ಇನ್ಸಾನ್‍’ ಚಿತ್ರವನ್ನು ಪುಟ್ಟಣ್ಣನವರೇ ನಿರ್ದೇಶನ ಮಾಡಿದ್ದರು. ರಿಷಿ ಕಪೂರ್‍, ಮೌಸಮಿ ಚಟರ್ಜಿ ಮುಂತಾದವರು ನಟಿಸಿದ್ದ ಈ ಚಿತ್ರದ ಚಿತ್ರೀಕರಣ ಸಹ ಚಿತ್ರದುರ್ಗದಲ್ಲೇ ಆಗಿದ್ದು ವಿಶೇಷ. ಇದಲ್ಲದೆ, ತೆಲುಗಿನಲ್ಲಿ ‘ಕೊಡೆ ನಾಗು’ ಮತ್ತು ತಮಿಳಿನಲ್ಲಿ ‘ರಾಜ ನಾಗಂ’ ಹೆಸರಿನಲ್ಲಿ ‘ನಾಗರಹಾವು’ ಬಿಡುಗಡೆಯಾಗಿತ್ತು.

ಪರಭಾಷೆಗಳಿಗೆ ರಿಮೇಕ್‌ ಆದ ಪುಟ್ಟಣ್ಣ ಕಣಗಾಲ್‌ ಅವರ ಸಿನಿಮಾಗಳಿವು
ಪರಭಾಷೆಗಳಿಗೆ ರಿಮೇಕ್‌ ಆದ ಪುಟ್ಟಣ್ಣ ಕಣಗಾಲ್‌ ಅವರ ಸಿನಿಮಾಗಳಿವು

ಪರಭಾಷೆಗಳಿಗೆ ರೀಮೇಕ್‍, ಡಬ್‍ ಆದ ಇನ್ನೊಂದಿಷ್ಟು ಚಿತ್ರಗಳು

ನಂತರದ ವರ್ಷಗಳಲ್ಲಿ ಬಿಡುಡೆಯಾದ ಪುಟ್ಟಣ್ಣ ಕಣಗಾಲ್‍ ನಿರ್ದೇಶನದ ‘ಕರುಳಿನ ಕರೆ’ ಮತ್ತು ‘ಶರಪಂಜರ’ ಚಿತ್ರಗಳು ತೆಲುಗಿನಲ್ಲಿ ರೀಮೇಕ್‍ ಆಗಿ ಬಿಡುಗಡೆಯಾಗಿವೆ. ‘ಕರುಳಿನ ಕರೆ’ ಚಿತ್ರವು ‘ಪೆದ್ದ ಕೊಡುಕು’ ಹೆಸರಿನಲ್ಲಿ ತೆಲುಗಿಗೆ ಹೋದರೆ, ‘ಶರಪಂಜರ’ ಚಿತ್ರವು ‘ಕೃಷ್ಣವೇಣಿ’ ಹೆಸರಿನಲ್ಲಿ ರೀಮೇಕ್‍ ಆಗಿತ್ತು. ‘ಪಡುವಾರಳ್ಳಿ ಪಾಂಡವರು’ ಚಿತ್ರವು ಹಿಂದಿಗೆ ‘ಹಮ್‍ ಪಾಂಚ್‍’ ಹೆಸರಿನಲ್ಲಿ ರೀಮೇಕ್ ಆದರೆ, ‘ಮಾನಸ ಸರೋವರ’ ಚಿತ್ರವು ‘ಅಮಾಯಕ ಚಕ್ರವರ್ತಿ’ ಎಂಬ ಹೆಸರಿನಲ್ಲಿ ತೆಲುಗಿನಲ್ಲಿ ಬಿಡುಗಡೆಯಾಗಿದೆ. ಕನ್ನಡದಲ್ಲಿ ಶ್ರೀನಾಥ್‍ ನಿರ್ವಹಿಸಿದ್ದ ಪಾತ್ರವನ್ನು ತೆಲುಗಿನಲ್ಲಿ ಚಂದ್ರಮೋಹನ್‍ ನಿರ್ವಹಿಸಿದ್ದರು. ಇದಲ್ಲದೆ, ಪುಟ್ಟಣ್ಣ ನಿರ್ದೇಶನದ ‘ಫಲಿತಾಂಶ’, ‘ಎಡಕಲ್ಲು ಗುಡ್ಡದ ಮೇಲೆ’ ಮುಂತಾದ ಚಿತ್ರಗಳು ಹಿಂದಿ, ತೆಲುಗು ಭಾಷೆಗಳಿಗೆ ಡಬ್‍ ಆಗಿ ಬಿಡುಗಡೆಯಾಗಿವೆ.

ನಿರ್ದೇಶಕರ ಸಂಘದಿಂದ ಪುಟ್ಟಣ್ಣ ಹುಟ್ಟುಹಬ್ಬ ಆಚರಣೆ

ಇನ್ನು, ಪುಟ್ಟಣ್ಣ ಕಣಗಾಲ್‍ ಅವರ ಹುಟ್ಟುಹಬ್ಬವನ್ನು ದೊಡ್ಡ ಮಟ್ಟದಲ್ಲಿ ಆಚರಿಸುವುದಕ್ಕೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಮುಂದಾಗಿದೆ. 1984ರಲ್ಲಿ ಸಂಘವನ್ನು ಹುಟ್ಟುಹಾಕಿದವರು ಪುಟ್ಟಣ್ಣ ಕಣಗಾಲ್‍. ಅವರ ನೆನಪಿನಲ್ಲಿ ಇಂದು (ಡಿ 1) ಕೊಂಡಜ್ಜಿ ಬಸಪ್ಪ ಸಭಾವನದಲ್ಲಿ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಸಂಘದ ಸದಸ್ಯರು ಮತ್ತು ಅವರ ಕುಟುಂಬವರ್ಗದವರಿಗೆ ಉಚಿತ ಆರೋಗ್ಯ ಸಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಆ ನಂತರ ಸಭಾ ಕಾರ್ಯಕ್ರಮ ನಡೆಯಲಿದೆ. ಮಿಕ್ಕಂತೆ ರಾಜ್ಯದ್ಯಂತ ಪುಟ್ಟಣ್ಣ ನೆನಪಿನಲ್ಲಿ ಒಂದಿಷ್ಟು ಕಾರ್ಯಕ್ರಮಗಳು ನಡೆಯಲಿವೆ.

ಪರಭಾಷೆಗಳಿಗೆ ರಿಮೇಕ್‌ ಆದ ಪುಟ್ಟಣ್ಣ ಕಣಗಾಲ್‌ ಅವರ ಸಿನಿಮಾಗಳಿವು
ಪರಭಾಷೆಗಳಿಗೆ ರಿಮೇಕ್‌ ಆದ ಪುಟ್ಟಣ್ಣ ಕಣಗಾಲ್‌ ಅವರ ಸಿನಿಮಾಗಳಿವು

ಚೇತನ್ ನಾಡಿಗೇರ್ ಪರಿಚಯ

ಕಳೆದ ಎರಡು ದಶಕಗಳಿಂದ ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡುತ್ತಿರುವ ಚೇತನ್‍ ನಾಡಿಗೇರ್, ‘ಉದಯವಾಣಿ’, ‘ರೂಪತಾರಾ’, ‘ಕನ್ನಡ ಪ್ರಭ’, ‘ವಿಜಯವಾಣಿ’ ಮತ್ತು ‘ವಿಜಯ ಕರ್ನಾಟಕ’ ಪತ್ರಿಕೆಗಳಲ್ಲಿ ಸಿನಿಮಾ ವರದಿಗಾರರಾಗಿ, ವಿಮರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ರಮೇಶ್‍ ಅರವಿಂದ್‍ ಅವರ ‘ಖುಷಿಯಿಂದ ರಮೇಶ್‍’ ಪುಸ್ತಕದ ನಿರೂಪಣೆ ಮಾಡುವುದರ ಜೊತೆಗೆ, ಭಾರತೀಯ ಚಿತ್ರರಂಗದ ಹಲವು ಹೆಗ್ಗಳಿಕೆ ಮತ್ತು ದಾಖಲೆಗಳನ್ನು ಸಾರುವ ‘ಸ್ಕ್ರೀನ್‍ ಶಾಟ್‍ - ದಾಖಲಾಗದ ದಾಖಲೆಗಳು’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಸದ್ಯ ಸ್ವತಂತ್ರ ಪರ್ತಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ ಅವರು 'ಹಿಂದೂಸ್ಥಾನ್‍ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ‘ಸಿನಿಸ್ಮೃತಿ’ ಅಂಕಣದ ಮೂಲಕ ಮನರಂಜನಾ ಕ್ಷೇತ್ರದ ಹಲವು ವಿಷಯಗಳನ್ನು ಹಂಚಿಕೊಳ್ಳಲಿದ್ದಾರೆ.

Whats_app_banner