ರಜನಿಕಾಂತ್ ಅಭಿನಯದ ‘ಕಬಾಲಿ’ ಸಿನಿಮಾ ನಿರ್ಮಾಪಕ ಆತ್ಮಹತ್ಯೆ; ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿಟ್ಟ ಕೆ ಪಿ ಚೌಧರಿ
ತೆಲುಗು ಚಲನಚಿತ್ರ ನಿರ್ಮಾಪಕ ಕೆ.ಪಿ. ಚೌಧರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಸಾವಿಗೆ ತಾನೇ ಕಾರಣ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಜನಿಕಾಂತ್ ಅಭಿನಯದ ‘ಕಬಾಲಿ’ ಸಿನಿಮಾದ ನಿರ್ಮಾಪಕರಾಗಿದ್ದ ಇವರು ಖಿನ್ನತೆಯಿಂದ ತಾನು ಬಳಲುತ್ತಿದ್ದೆ ಎಂದು ಪತ್ರದಲ್ಲಿ ಬರೆದಿದ್ದಾರೆ.

KP Choudhary: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಬಾಲಿ' ಚಿತ್ರದ ನಿರ್ಮಾಪಕ ಕೆ.ಪಿ. ಚೌಧರಿ ನಿಧನರಾಗಿದ್ದಾರೆ. ಆರ್ಥಿಕ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ನಿರ್ಮಾಪಕ ಸುಂಕರ ಕೃಷ್ಣ ಪ್ರಸಾದ್ ಚೌಧರಿ ಎಂದೂ ಕರೆಯಲ್ಪಡುವ ಅವರು ಗೋವಾದ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದರು. ಅದೇ ಬಾಡಿಗೆ ಮನೆಯಲ್ಲಿ ಅವರ ಶವ ಸಿಕ್ಕಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತನ್ನ ಸಾವಿಗೆ ತಾನೇ ಕಾರಣ ಎಂದ ನಿರ್ಮಾಪಕ
ಕೆಪಿ ಚೌಧರಿ ಗೋವಾದ ಬಾಡಿಗೆ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಚಲನಚಿತ್ರ ವ್ಯವಹಾರಕ್ಕೆ ಪ್ರವೇಶಿಸಿದ ನಂತರವೂ ಗಮನಾರ್ಹ ಆರ್ಥಿಕ ಹಿನ್ನಡೆ ಅನುಭವಿಸಿದ ಕಾರಣ ಅವರು ಮಾದಕ ಮಾದಕವಸ್ತು ವ್ಯಾಪಾರದಲ್ಲಿ ಭಾಗಿಯಾಗಿದ್ದರು ಎಂಬ ಆರೋಪವಿದೆ. “ತನ್ನ ಸಾವಿಗೆ ತಾನೇ ಕಾರಣ. ಈ ಸಾವಿಗೆ ಯಾರನ್ನೂ ಹೊಣೆ ಮಾಡಬಾರದು. ನಾನು ಖಿನ್ನತೆಯಿಂದ ಬಳಲುತ್ತಿದ್ದೆ" ಎಂದು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನವೇ ಒಂದು ಪತ್ರದಲ್ಲಿ ಬರೆದಿಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ತಮಿಳುನಾಡಿನಲ್ಲಿ ವಾಸಿಸುತ್ತಿರುವ ತನ್ನ ತಾಯಿಗೆ ಶವವನ್ನು ಹಸ್ತಾಂತರಿಸಲು ತಿಳಿಸಿದ್ದಾರೆ ಎಂಬುದನ್ನೂ ಸಹ ಪೊಲೀಸರು ತಿಳಿಸಿದ್ದಾರೆ ಎಂದು ಟೈಮ್ಸ್ ಆಪ್ ಇಂಡಿಯಾ ವರದಿ ಮಾಡಿದೆ.
ಕೃಷ್ಣ ಪ್ರಸಾದ್ ಚೌಧರಿ ಕುಟುಂಬ ಗೋವಾಕ್ಕೆ ಬಂದ ನಂತರ ಅವರ ಮರಣೋತ್ತರ ಪರೀಕ್ಷೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ. ಗೋವಾದ ಬಾಂಬೋಲಿಮ್ ಆಸ್ಪತ್ರೆಗೆ ಮೃತರ ದೇಹವನ್ನು ತೆಗೆದುಕೊಂಡು ಹೋಗಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಕಬಾಲಿ ಸಿನಿಮಾದ ನಿರ್ಮಾಪಕ ಕೆ ಪಿ ಚೌಧರಿ
ಇವರು ಕೈ ಹಾಕಿದ ಸಿನಿಮಾಗಳು ಯಶಸ್ಸು ಕಾಣದೆ ನಷ್ಟ ಅನುಭವಿಸಿ ಹಣ ಕಳೆದುಕೊಂಡಿದ್ದರು. ಕಬಾಲಿ ಸಿನಿಮಾದಲ್ಲಿ ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ ಈ ಚಿತ್ರದಲ್ಲಿ ವಿನ್ಸ್ಟನ್ ಚಾವೊ, ರಾಧಿಕಾ ಆಪ್ಟೆ, ಸಾಯಿ ಧನ್ಸಿಕಾ, ಕಿಶೋರ್, ದಿನೇಶ್ ರವಿ, ಕಲೈಯರಸನ್, ಜಾನ್ ವಿಜಯ್, ರೋಸ್ಯಾಮ್ ನಾರ್, ನಾಸರ್ ಮತ್ತು ಇನ್ನೂ ಅನೇಕರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪರಿಣಿತ ಕಲಾವಿದರ ತಂಡವೇ ಕೆಲಸ ಮಾಡಿದ್ದ ಈ ಸಿನಿಮಾಕ್ಕೆ ಕೆಪಿ ಚೌಧರಿ ಹಣ ಹಾಕಿದ್ದರು. ಇದಲ್ಲದೆ, ಕೆಪಿ ಚೌಧರಿ ಅವರು ಗಬ್ಬರ್ ಸಿಂಗ್, ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು ಸಿನಿಮಾಗಳಿಗೂ ನಿರ್ಮಾಪಕರಾಗಿದ್ದರು.
ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.
